ಅತೀ ಸಣ್ಣ, ಸಣ್ಣ, ಮತ್ತು ಮಧ್ಯಮ ಉದ್ಯಮಗಳ (ಎಂ ಎಸ್ ಎಂ ಇ) ಹಾಗು ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಇಂದು ಬೆಂಗಳೂರಿನ ಐ.ಸಿ.ಎ.ಆರ್. ನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಶಾಖೆಯಲ್ಲಿ ಆಯೋಜಿಸಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ – 20ನೇ ಕಂತು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ವೇಳೆ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು, ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅತಿ ಸಣ್ಣ ಮತ್ತು ಸಣ್ಣ ರೈತರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ನೆರವಾಗಲು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದರು. ಪ್ರತಿವರ್ಷ ಯೋಜನೆಯಡಿ ಆರು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ಇದರಿಂದ ರೈತರು ಬಿತ್ತನೆ ಬೀಜ ಖರೀದಿಸಲು ಹಾಗು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಕಳೆದ ಒಂದು ದಶಕದಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿಕರಿಗೆ ಅಗತ್ಯವಿರುವ ಸಂಶೋಧನೆ ಹಾಗು ಅನ್ವೇಷಣೆಗೆ ಒತ್ತು ನೀಡಲಾಗಿದೆ. ದೇಶಾದ್ಯಂತ ಎಲ್ಲರಿಗೂ ಕೃಷಿ ಉಪಕರಣಗಳನ್ನು ಒದಗಿಸಲು ಕೃಷಿ ಉಪಕರಣ ಬ್ಯಾಂಕುಗಳನ್ನು ಸ್ಥಾಪಿಸಲಾಗಿದ್ದು ಇದರಿಂದ ಸಣ್ಣ ಹಾಗು ಅತಿ ಸಣ್ಣ ಇಡುವಳಿದಾರರಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು. ರೈತರು ತಾವು ಬೆಳೆದ ಬೆಳೆಗಳನ್ನು ಕೃಷಿ ಉತ್ಪನ್ನಗಳನ್ನಾಗಿ ಮೌಲ್ಯವರ್ಧಿತಗೊಳಿಸ ಬೇಕು. ಇದರಿಂದ ರೈತರು ಹೆಚ್ಚಿನ ಲಾಭಗಳಿಸಬಹುದು. ಆರ್ಥಿಕವಾಗಿ ಸಫಲರಾಗಲು ಸಾಧ್ಯ ಎಂದು ಹೇಳಿದರು. ಕೃಷಿಕರಿಗೆ ಹೆಚ್ಚಿನ ತಂತ್ರಜ್ಞಾನ ಹಾಗು ಸೌಲಭ್ಯಗಳನ್ನು ನೀಡಿದಾಗ ಮಾತ್ರ ರೈತರು ಮತ್ತಷ್ಟು ಅಭ್ಯುದಯ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೆಲಸ ಮಾಡುತ್ತಿದೆ. ರೈತರು ಸಹಜ ಹಾಗು ಪರಂಪರೆಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕೃಷಿ ವಿಜ್ಞಾನ ಕೇಂದ್ರ ಹಾಗು ಕೃಷಿ ಆಧಾರಿತ ಸಂಶೋಧನಾ ಸಂಸ್ಥೆಗಳಿಗೆ ರೈತರು ಭೇಟಿ ನೀಡಿ ಹೊಸ ತಳಿಗಳು, ನೂತನ ತಂತ್ರಜ್ಞಾನದ ಕುರಿತು ಮಾಹಿತಿ ಪಡೆದುಕೊಳ್ಳ ಬೇಕು. ಇದರಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ರೈತ ಮಿತ್ರ ಕೀಟಗಳನ್ನು ರಕ್ಷಿಸಬೇಕು. ಇದರಿಂದ ಸಹಜ ಕೃಷಿಗೆ ಸಾಧ್ಯವಾಗಲಿದೆ. ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಕೀಟನಾಶಕ ಗಳನ್ನು ಬಳಸದೆ ಸಹಜ ಕೃಷಿಗೆ ರೈತರು ಮುಂದಾಗ ಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬುಡಕಟ್ಟು ಉಪಯೋಜನೆಯಡಿ ಜೈವಿಕ ಕೀಟ ನಿಯಂತ್ರಣ ಪರಿಕರಣಗಳನ್ನು ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ವಿತರಿಸಿದರು. ಇದಕ್ಕೂ ಮುನ್ನ ಬೆಂಗಳೂರಿನ ಐ.ಸಿ.ಎ.ಆರ್. ನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ ಸಂಶೋಧನೆ ಮತ್ತು ಅನ್ವೇಷಣೆಗಳ ಕುರಿತು ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಐ.ಸಿ.ಎ.ಆರ್. ನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ ನಿರ್ದೇಶಕರಾದ ಡಾ. ಎಸ್.ಎನ್. ಸುಶೀಲ್ ಸೇರಿದಂತೆ ಸಂಸ್ಥೆಯ ವಿಜ್ಞಾನಿಗಳು ಉಪಸ್ಥಿತರಿದ್ದರು.
Matribhumi Samachar Kannad

