Sunday, December 07 2025 | 08:27:54 PM
Breaking News

ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಕರ್ನಾಟಕದಲ್ಲಿ 14,151 ರೂಫ್‌ ಟಾಪ್ ಸೋಲಾರ್ ಅಳವಡಿಕೆ; 22,313 ಕುಟುಂಬಗಳಿಗೆ ಪ್ರಯೋಜನ

Connect us on:

ದಿನಾಂಕ 31.10.2025 ರಂತೆ, ಕರ್ನಾಟಕ ರಾಜ್ಯದಲ್ಲಿ ಒಟ್ಟು 25,675.39 ಮೆಗಾವ್ಯಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನವನ್ನು ಸ್ಥಾಪಿಸಲಾಗಿದೆ. ಇದು ದೇಶಾದ್ಯಂತ ಸ್ಥಾಪಿಸಲಾದ ಒಟ್ಟು 2,50,643.45 ಮೆಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸುಮಾರು 10.24% ರಷ್ಟಿದೆ.

ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯು (PMSG: MBY) ರೂಫ್‌ ಟಾಪ್ ಸೋಲಾರ್ (RTS) ವ್ಯವಸ್ಥೆಗಳ ಅಳವಡಿಕೆಗಾಗಿರುವ ಬೇಡಿಕೆ ಆಧಾರಿತ ಯೋಜನೆಯಾಗಿದೆ. ಇದರಲ್ಲಿ ಸ್ಥಳೀಯ ಡಿಸ್ಕಾಮ್‌ನ ಗ್ರಿಡ್ ಸಂಪರ್ಕಿತ ವಿದ್ಯುತ್ ಸಂಪರ್ಕವನ್ನು ಹೊಂದಿರುವ ದೇಶದ ಎಲ್ಲಾ ಗೃಹ ಗ್ರಾಹಕರು ಯೋಜನೆಯ ರಾಷ್ಟ್ರೀಯ ಪೋರ್ಟಲ್‌ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. 26.11.2025 ರಂತೆ, ದೇಶಾದ್ಯಂತ ಯೋಜನೆಯಡಿ ಒಟ್ಟು 18,72,499 RTS ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, 23,47,694 ಕುಟುಂಬಗಳು ಪ್ರಯೋಜನ ಪಡೆದಿವೆ. ಇವುಗಳಲ್ಲಿ, ಕರ್ನಾಟಕ ರಾಜ್ಯದಲ್ಲಿ ಒಟ್ಟು 14,151 RTS ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, 22,313 ಕುಟುಂಬಗಳು ಪ್ರಯೋಜನ ಪಡೆದಿವೆ.

ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ, 26.11.2025 ರಂತೆ ರಾಷ್ಟ್ರೀಯ ಪೋರ್ಟಲ್‌ ನಲ್ಲಿ ಒಟ್ಟು 25,778 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಯೋಜನೆಯಡಿ ರೂಫ್‌ ಟಾಪ್ ಸೋಲಾರ್ ಅಳವಡಿಕೆಯಿಂದ 681 ಕುಟುಂಬಗಳು ಪ್ರಯೋಜನ ಪಡೆದಿವೆ.

ಕರ್ನಾಟಕದ ಬೆಳಗಾವಿ ನಗರ ಸೇರಿದಂತೆ ದೇಶಾದ್ಯಂತ PMSG: MBY ಅಡಿಯಲ್ಲಿ 2026-27 ರ ವೇಳೆಗೆ ಒಂದು ಕೋಟಿ ಕುಟುಂಬಗಳಿಗೆ ರೂಫ್‌ ಟಾಪ್ ಸೋಲಾರ್ ಅಳವಡಿಸುವ ಗುರಿಯನ್ನು ಸಾಧಿಸಲು ಮತ್ತು ಪ್ರಗತಿಯನ್ನು ವೇಗಗೊಳಿಸಲು, ಸಚಿವಾಲಯವು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:

• ರಾಷ್ಟ್ರೀಯ ಪೋರ್ಟಲ್ ಮೂಲಕ ನೋಂದಣಿಯಿಂದ ಹಿಡಿದು ಗೃಹ ಗ್ರಾಹಕರ ಬ್ಯಾಂಕ್ ಖಾತೆಗೆ ನೇರವಾಗಿ ಸಬ್ಸಿಡಿ ವಿತರಣೆಯವರೆಗೆ ಸಂಪೂರ್ಣ ಆನ್‌ ಲೈನ್ ಪ್ರಕ್ರಿಯೆ.
• ರಾಷ್ಟ್ರೀಕೃತ ಬ್ಯಾಂಕ್‌ ಗಳಿಂದ 10 ವರ್ಷಗಳ ಅವಧಿಗೆ, ಪ್ರಸ್ತುತ ರೆಪೋ ದರ ಮತ್ತು 50 bps ಅಂದರೆ ವಾರ್ಷಿಕ 6% ರ ರಿಯಾಯಿತಿ ಬಡ್ಡಿ ದರದಲ್ಲಿ ಯಾವುದೇ ಭದ್ರತೆ ಇಲ್ಲದ (collateral free) ಸಾಲದ ಲಭ್ಯತೆ. 26.11.2025 ರಂತೆ, ಸಾಲದ ಮೂಲಕ ಒಟ್ಟು 5,67,939 RTS ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
• ತಾಂತ್ರಿಕ ಕಾರ್ಯಸಾಧ್ಯತೆಯ ಅಗತ್ಯವನ್ನು ಮನ್ನಾ ಮಾಡುವ ಮೂಲಕ ಮತ್ತು 10 kW ವರೆಗೆ ಆಟೋ ಲೋಡ್ ವರ್ಧನೆಯನ್ನು ಪರಿಚಯಿಸುವ ಮೂಲಕ ನಿಯಂತ್ರಕ ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.
•  RESCO/ ಯುಟಿಲಿಟಿ ನೇತೃತ್ವದ ಅಗ್ರಿಗೇಷನ್‌ (ULA) ಮಾದರಿಗಳನ್ನು ಸೇರಿಸಲಾಗಿದೆ.
•  ನೆಟ್ ಮೀಟರಿಂಗ್ ಒಪ್ಪಂದವನ್ನು ರಾಷ್ಟ್ರೀಯ ಪೋರ್ಟಲ್‌ ನಲ್ಲಿನ ಅರ್ಜಿಯ ಭಾಗವಾಗಿಸಲಾಗಿದೆ.
• ಸಾಕಷ್ಟು ಮತ್ತು ಅರ್ಹ ಮಾರಾಟಗಾರರು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಮಾರಾಟಗಾರರ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. 11.11.2025 ರಂತೆ 20,423 ಮಾರಾಟಗಾರರು ನೋಂದಾಯಿಸಿಕೊಂಡಿದ್ದಾರೆ.
•  ನುರಿತ ಮಾನವಶಕ್ತಿಯನ್ನು ರೂಪಿಸಲು ಸಾಮರ್ಥ್ಯ ವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. 11.11.2025 ರವರೆಗೆ 1,49,916 ಮಂದಿಗೆ ತರಬೇತಿ ನೀಡಲಾಗಿದೆ.
•  ದೇಶದ ಪ್ರಮುಖ ಪತ್ರಿಕೆಗಳಲ್ಲಿ ಮುದ್ರಣ ಜಾಹೀರಾತು, ಟಿವಿ ಜಾಹೀರಾತು ಪ್ರಚಾರಗಳು, ಪ್ರಾದೇಶಿಕ ಚಾನೆಲ್‌ ಗಳು ಸೇರಿದಂತೆ ಎಫ್‌ ಎಂ ಸ್ಟೇಷನ್‌ ಗಳಲ್ಲಿ ರೇಡಿಯೊ ಪ್ರಚಾರಗಳಂತಹ ಜಾಗೃತಿ ಮತ್ತು ಔಟ್‌ ರೀಚ್ ಕಾರ್ಯಕ್ರಮಗಳ ಮೂಲಕ ಯೋಜನೆಯ ಬಗ್ಗೆ ಅರಿವು ಮೂಡಿಸುವುದು.
•  ರಾಜ್ಯಗಳು/ಡಿಸ್ಕಾಮ್‌ ಗಳು ಸೇರಿದಂತೆ ವಿವಿಧ ಹಂತಗಳಲ್ಲಿ ಯೋಜನೆಯ ಪ್ರಗತಿಯ ನಿಯಮಿತ ಮೇಲ್ವಿಚಾರಣೆ.
• ಪ್ರಾದೇಶಿಕ ಸಭೆಗಳನ್ನು ನಡೆಸುವುದು. ಈಶಾನ್ಯ ಪ್ರದೇಶದ ಪರಿಶೀಲನಾ ಸಭೆಯನ್ನು ಇತ್ತೀಚೆಗೆ 31.10.2025 ರಂದು ಗುವಾಹಟಿಯಲ್ಲಿ ಕೇಂದ್ರ ಸಂಪುಟ ಸಚಿವರ ಮಟ್ಟದಲ್ಲಿ ನಡೆಸಲಾಯಿತು.
• ಕುಂದುಕೊರತೆಗಳ ತ್ವರಿತ ಪರಿಹಾರಕ್ಕಾಗಿ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. 12 ಭಾಷೆಗಳಲ್ಲಿ ಕಾರ್ಯನಿರ್ವಹಿಸುವ ಕಾಲ್ ಸೆಂಟರ್ ದೂರವಾಣಿ ಸಂಖ್ಯೆ 15555 ಲಭ್ಯವಿದೆ.

ಸೌರ ಉದ್ಯಾನವನಗಳು ಮತ್ತು ಅಲ್ಟ್ರಾ-ಮೆಗಾ ಸೌರ ವಿದ್ಯುತ್ ಯೋಜನೆಗಳ ಅಭಿವೃದ್ಧಿ ಯೋಜನೆಯಡಿ, 2000 ಮೆಗಾವ್ಯಾಟ್ ಸಾಮರ್ಥ್ಯದ ಪಾವಗಡ ಸೋಲಾರ್ ಪಾರ್ಕ್ ಮತ್ತು ಅದರ ವಿದ್ಯುತ್ ಪ್ರಸರಣ ಮೂಲಸೌಕರ್ಯದ ಅಭಿವೃದ್ಧಿಗಾಗಿ ಒಟ್ಟು 351.94 ಕೋಟಿ ರೂ.ಗಳನ್ನು ಕೇಂದ್ರ ಹಣಕಾಸು ನೆರವು (CFA) ಆಗಿ ಬಿಡುಗಡೆ ಮಾಡಲಾಗಿದೆ. ಪಾವಗಡ ಸೋಲಾರ್ ಪಾರ್ಕ್ ಡಿಸೆಂಬರ್ 2019 ರಿಂದ 2000 ಮೆಗಾವ್ಯಾಟ್ ಸಾಮರ್ಥ್ಯದೊಂದಿಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಬೃಹತ್ ಪ್ರಮಾಣದ ಸೌರ ಯೋಜನೆಗಳ ಅಭಿವೃದ್ಧಿಗೆ ಭೂಮಿಯ ಸಕಾಲಿಕ ಲಭ್ಯತೆ ಮತ್ತು ಪ್ರಸರಣ ಮೂಲಸೌಕರ್ಯದ ಮುಂಚಿತ ಯೋಜನೆಯ ಅಗತ್ಯವಿದೆ ಎಂಬುದು ಭವಿಷ್ಯದ ಯೋಜನೆಗಳಿಗಾಗಿ ಕಲಿತ ಪ್ರಮುಖ ಪಾಠವಾಗಿದೆ.

ಕರ್ನಾಟಕ ಸರ್ಕಾರದಿಂದ ಲಭ್ಯವಾದ ಮಾಹಿತಿಯ ಪ್ರಕಾರ, ಉತ್ತರ ಕರ್ನಾಟಕದಲ್ಲಿ, ನಿರ್ದಿಷ್ಟವಾಗಿ ಬೆಳಗಾವಿ ಜಿಲ್ಲೆಯಲ್ಲಿ ಸೌರ ಅಥವಾ ಪವನ ವಿದ್ಯುತ್ ಪಾರ್ಕ್‌ ಗಳನ್ನು ಸ್ಥಾಪಿಸುವ ಯಾವುದೇ ಯೋಜನೆಗಳು ಪ್ರಸ್ತುತ ಇಲ್ಲ.

ಈ ಮಾಹಿತಿಯನ್ನು ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ನೀಡಿದರು.

About Matribhumi Samachar

Check Also

ಗುಜರಾತಿನ ವಾವ್-ಥರಾಡ್ ಜಿಲ್ಲೆಯಲ್ಲಿ ಬನಾಸ್ ಡೈರಿಯು ಹೊಸದಾಗಿ ನಿರ್ಮಿಸಿರುವ ಬಯೋ-ಸಿ ಎನ್‌ ಜಿ ಮತ್ತು ರಸಗೊಬ್ಬರ ಘಟಕವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಉದ್ಘಾಟಿಸಿದರು ಮತ್ತು 150 ಟನ್ ಹಾಲಿನ ಪುಡಿ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತಿನ ವಾವ್-ಥರಾಡ್ ಜಿಲ್ಲೆಯಲ್ಲಿ ಬನಾಸ್ ಡೈರಿ …