Sunday, December 07 2025 | 12:23:31 AM
Breaking News

ಸಂಚಾರ್ ಸಾಥಿ ಆ್ಯಪ್ ಕಡ್ಡಾಯದ ಬಗ್ಗೆ ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ

Connect us on:

ಕೇಂದ್ರ ಸಂಪರ್ಕ ಮತ್ತು ಈಶಾನ್ಯ ವಲಯ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ‘ಸಂಚಾರ್ ಸಾಥಿ’ ಆ್ಯಪ್ ಕುರಿತು ಸ್ಪಷ್ಟನೆ ನೀಡಿದ್ದು, “ಸಂಚಾರ್ ಸಾಥಿ ಸಂಪೂರ್ಣವಾಗಿ ಪ್ರಜಾಸತ್ತಾತ್ಮಕ ಮತ್ತು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ,” ಎಂದು ತಿಳಿಸಿದ್ದಾರೆ. ಬಳಕೆದಾರರು ಈ ಆ್ಯಪ್ ನ ಪ್ರಯೋಜನಗಳನ್ನು ಪಡೆಯಲು ತಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ಸಕ್ರಿಯಗೊಳಿಸಿಕೊಳ್ಳಬಹುದು ಮತ್ತು ಯಾವಾಗ ಬೇಕಾದರೂ ತಮ್ಮ ಮೊಬೈಲ್ ಗಳಿಂದ ಇದನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಡಿಲೀಟ್ ಮಾಡಬಹುದು ಎಂದು ಅವರು ತಿಳಿಸಿದ್ದಾರೆ

ನಾಗರಿಕ ಸ್ನೇಹಿ ಮತ್ತು ಗೌಪ್ಯತೆ-ಸುರಕ್ಷಿತ ವೇದಿಕೆ

ಗ್ರಾಹಕರ ರಕ್ಷಣೆಯೇ ಸರ್ಕಾರದ ಆದ್ಯತೆಯ ಜವಾಬ್ದಾರಿಯಾಗಿದೆ ಎಂದು ಶ್ರೀ ಸಿಂಧಿಯಾ ತಿಳಿಸಿದರು. ಪ್ರತಿಯೊಬ್ಬ ಮೊಬೈಲ್ ಬಳಕೆದಾರರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಸಂಚಾರ್ ಸಾಥಿಯನ್ನು ರೂಪಿಸಲಾಗಿದೆ. “ಸಂಚಾರ್ ಸಾಥಿ ಎನ್ನುವುದು ಆ್ಯಪ್ ಹಾಗೂ ಪೋರ್ಟಲ್ ಎರಡೂ ಹೌದು. ಇದು ಪಾರದರ್ಶಕ ಮತ್ತು ಬಳಸಲು ಸುಲಭವಾದ ಪರಿಕರಗಳ ಮೂಲಕ ನಾಗರಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ‘ಜನ್ ಭಾಗಿದಾರಿ’ (ಜನರ ಪಾಲ್ಗೊಳ್ಳುವಿಕೆ) ಕಡೆಗಿನ ಒಂದು ಮಹತ್ವದ ಹೆಜ್ಜೆಯಾಗಿದ್ದು, ಇಲ್ಲಿ ನಾಗರಿಕರು ತಮ್ಮದೇ ಆದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ,” ಎಂದು ಅವರು ಹೇಳಿದರು.

ಸಂಚಾರ್ ಸಾಥಿಯ ಪ್ರಭಾವ ಮತ್ತು ಫಲಿತಾಂಶಗಳು

ಆರಂಭವಾದಾಗಿನಿಂದ ಇಲ್ಲಿಯವರೆಗೆ, ಸಂಚಾರ್ ಸಾಥಿ ಉತ್ತಮ ಫಲಿತಾಂಶಗಳನ್ನು ನೀಡಿದೆ:

•    21.5 ಕೋಟಿಗೂ ಹೆಚ್ಚು ಬಾರಿ ಪೋರ್ಟಲ್ ಗೆ ಭೇಟಿ ನೀಡಲಾಗಿದೆ.

•    1.4 ಕೋಟಿಗೂ ಹೆಚ್ಚು ಆ್ಯಪ್ ಡೌನ್ ಲೋಡ್ ಗಳಾಗಿವೆ.

•    “ಇದು ನನ್ನ ನಂಬರ್ ಅಲ್ಲ” (Not My Number) ಎಂದು ಆಯ್ಕೆ ಮಾಡುವ ಮೂಲಕ ನಾಗರಿಕರು 1.43 ಕೋಟಿಗೂ ಹೆಚ್ಚು ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಿದ್ದಾರೆ.

•    26 ಲಕ್ಷ ಕಳೆದುಹೋದ/ಕಳುವಾದ ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳಲ್ಲಿ 7.23 ಲಕ್ಷ ಫೋನ್ ಗಳನ್ನು ಯಶಸ್ವಿಯಾಗಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ.

•    ನಾಗರಿಕರ ವರದಿಗಳ ಆಧಾರದ ಮೇಲೆ 40.96 ಲಕ್ಷ ನಕಲಿ ಅಥವಾ ಮೋಸದ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.

•    ವಂಚನೆಗೆ ಸಂಬಂಧಿಸಿದ 6.2 ಲಕ್ಷ ಐಎಂಇಐ (IMEI) ಗಳನ್ನು ಬ್ಲಾಕ್ ಮಾಡಲಾಗಿದೆ.

•    ಫೈನಾನ್ಷಿಯಲ್ ಫ್ರಾಡ್ ರಿಸ್ಕ್ ಇಂಡಿಕೇಟರ್ (FRI) ಮೂಲಕ ಸುಮಾರು 475 ಕೋಟಿ ರೂ. ಗಳ ಸಂಭವನೀಯ ಆರ್ಥಿಕ ನಷ್ಟವನ್ನು ತಡೆಯಲಾಗಿದೆ.

ಸೈಬರ್ ಸುರಕ್ಷತೆ ಮತ್ತು ನಾಗರಿಕರ ರಕ್ಷಣೆಯೇ ಮೂಲ ಮಂತ್ರ

ಸಂಚಾರ್ ಸಾಥಿಯು ಬಳಕೆದಾರರಿಗೆ ನೇರವಾಗಿ ಕರೆಗಳ ಲಾಗ್ ನಿಂದ (call logs) ಶಂಕಿತ ವಂಚನೆಯನ್ನು ವರದಿ ಮಾಡಲು ಅವಕಾಶ ನೀಡುತ್ತದೆ. ಈ ಮೂಲಕ ಜಾಗೃತ ನಾಗರಿಕರು, ಕಡಿಮೆ ಅರಿವುಳ್ಳ ಬಳಕೆದಾರರನ್ನು ಸಕ್ರಿಯವಾಗಿ ರಕ್ಷಿಸಲು ಇದು ಅನುವು ಮಾಡಿಕೊಡುತ್ತದೆ.

“ಪ್ರತಿಯೊಬ್ಬ ನಾಗರಿಕನ ಡಿಜಿಟಲ್ ಸುರಕ್ಷತೆಯೇ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ. ಸಂಚಾರ್ ಸಾಥಿ ಸ್ವಯಂಪ್ರೇರಿತ ಹಾಗೂ ಪಾರದರ್ಶಕವಾಗಿದೆ. ರಾಷ್ಟ್ರದ ಸೈಬರ್ ಸುರಕ್ಷತೆಯನ್ನು ಹೆಚ್ಚಿಸುವ ಜೊತೆಗೆ ಭಾರತದ ಮೊಬೈಲ್ ಗ್ರಾಹಕರನ್ನು ರಕ್ಷಿಸುವ ಏಕೈಕ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ. ಬಳಕೆದಾರರು ತಮ್ಮ ಗೌಪ್ಯತೆಗೆ ಧಕ್ಕೆಯಾಗದಂತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಯಾವುದೇ ಸಮಯದಲ್ಲಿ ಆ್ಯಪ್ ಅನ್ನು ಸಕ್ರಿಯಗೊಳಿಸಲು ಅಥವಾ ಡಿಲೀಟ್ ಮಾಡಲು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.” ಎಂದು ಹೇಳಿ ಸಿಂಧಿಯಾ ಅವರು ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.

About Matribhumi Samachar

Check Also

ಮಹಾಪರಿನಿರ್ವಾಣ ದಿನದಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

ಇಂದು ಮಹಾಪರಿನಿರ್ವಾಣ ದಿವಸದ ಅಂಗವಾಗಿ ಪ್ರಧಾನಮಂತ್ರಿ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು. ನ್ಯಾಯ, …