ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಕಾಶಿ ಮತ್ತು ತಮಿಳುನಾಡು ನಡುವಿನ ಶಾಶ್ವತ ಸಾಂಸ್ಕೃತಿಕ ಬಾಂಧವ್ಯವನ್ನು ಆಚರಿಸುವ ಕಾಶಿ ತಮಿಳು ಸಂಗಮಮ್ ನ ನಾಲ್ಕನೇ ಆವೃತ್ತಿಯ ಸಂದರ್ಭದಲ್ಲಿ ವಿಶೇಷ ವೀಡಿಯೊ ಸಂದೇಶವನ್ನು ನೀಡಿದರು.
2022ರಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕಾಶಿ ತಮಿಳು ಸಂಗಮಮ್ ಅನ್ನು ಪ್ರಾರಂಭಿಸಿದಾಗಿನಿಂದ, ಈ ಉಪಕ್ರಮವು ಗಂಗಾ ಸಂಸ್ಕೃತಿ ಮತ್ತು ಕಾವೇರಿಯ ಸಂಪ್ರದಾಯಗಳನ್ನು ಒಟ್ಟುಗೂಡಿಸುವ ಪ್ರಮುಖ ರಾಷ್ಟ್ರೀಯ ವೇದಿಕೆಯಾಗಿ ಬೆಳೆದಿದೆ, ಇದು ಉತ್ತರ ಮತ್ತು ದಕ್ಷಿಣದ ಸಾಂಸ್ಕೃತಿಕ ಏಕತೆ ಮತ್ತು ಅವರ ಹಂಚಿಕೆಯ ನಾಗರಿಕತೆಯ ಪರಂಪರೆಯನ್ನು ಸಂಕೇತಿಸುತ್ತದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು.
ನವೆಂಬರ್ 30 ರಂದು ಪ್ರಸಾರವಾದ ಮನ್ ಕಿ ಬಾತ್ ನಲ್ಲಿ ಪ್ರಧಾನಮಂತ್ರಿ ಅವರು ನೀಡಿದ್ದ ಹೇಳಿಕೆಗಳನ್ನು ಅವರು ನೆನಪಿಸಿಕೊಂಡರು. ಸಂಗಮಮ್ ಅನ್ನು ವಿಶ್ವದ ಅತ್ಯಂತ ಹಳೆಯ ಭಾಷೆಗಳೊಂದಿಗೆ ವಿಶ್ವದ ಅತ್ಯಂತ ಹಳೆಯ ನಗರಗಳ ಸಂಗಮ ಎಂದು ಪ್ರಧಾನಮಂತ್ರಿ ಅವರು ಬಣ್ಣಿಸಿದ್ದರು.
ತಮಿಳಿಗೆ ಸಿಗುತ್ತಿರುವ ಗೌರವ ಮತ್ತು ರಾಷ್ಟ್ರೀಯ ಬೆಂಬಲದ ಬಗ್ಗೆ ಉಪರಾಷ್ಟ್ರಪತಿಯವರು ಸಂತೋಷ ವ್ಯಕ್ತಪಡಿಸಿದರು. ಭಾಷೆ ಮತ್ತು ಸಂಸ್ಕೃತಿಯ ನಡುವಿನ ಸಮನ್ವಯವನ್ನು ಬಲಪಡಿಸುವ ಈ ವರ್ಷದ “ತಮಿಳು ಕಲಿಯೋಣ” ಎಂಬ ಧ್ಯೇಯವಾಕ್ಯವನ್ನು ಅವರು ಸ್ವಾಗತಿಸಿದರು.
ಚೆನ್ನೈನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು ಸಂಸ್ಥೆಯಲ್ಲಿ ತರಬೇತಿ ಪಡೆದ ಐವತ್ತು ಹಿಂದಿ ಮಾತನಾಡುವ ತಮಿಳು ಶಿಕ್ಷಕರು ಮತ್ತು ಸಂಯೋಜಕರು ವಾರಾಣಸಿಗೆ ಬಂದು 15 ದಿನಗಳಲ್ಲಿ ಐವತ್ತು ಸರ್ಕಾರಿ ಮತ್ತು ಖಾಸಗಿ ಶಾಲೆಗಳ 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಾಮಾನ್ಯ ತಮಿಳು ಕಲಿಸಲು ಮುಂದಾಗಿರುವುದನ್ನು ಅವರು ಶ್ಲಾಘಿಸಿದರು.
ತಮಿಳುನಾಡು ಮತ್ತು ಕಾಶಿ ನಡುವಿನ ಪ್ರಾಚೀನ ಸಾಂಸ್ಕೃತಿಕ ಮಾರ್ಗಗಳನ್ನು ಮರುಶೋಧಿಸುವ ಪ್ರಯತ್ನಗಳನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಯವರು, ಡಿಸೆಂಬರ್ 2 ರಂದು ಪ್ರಾರಂಭವಾಗಿ ಡಿಸೆಂಬರ್ 10 ರಂದು ಮುಕ್ತಾಯಗೊಳ್ಳಲಿರುವ ತೆಂಕಾಶಿಯಿಂದ ಕಾಶಿಗೆ ಸಾಂಕೇತಿಕ ಅಗತಿಯರ್ ಯಾತ್ರೆಯ ಬಗ್ಗೆ ಪ್ರಸ್ತಾಪಿಸಿದರು. ಈ ಯಾತ್ರೆಯು ಪಾಂಡ್ಯ ರಾಜ ಅತಿವೀರ ಪರಾಕ್ರಮ ಪಾಂಡ್ಯನ್ ಸಾರಿದ ಏಕತೆಯ ಸಂದೇಶವನ್ನು ಸ್ಮರಿಸುತ್ತದೆ, ಅದು ತಮಿಳುನಾಡನ್ನು ಕಾಶಿಯೊಂದಿಗೆ ಸಂಪರ್ಕಿಸಿತು ಮತ್ತು ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ತಮಿಳುನಾಡಿನ ನಗರವಾದ ತೆಂಕಾಶಿಗೆ ಅದರ ಗುರುತನ್ನು ನೀಡಿತು ಎಂದು ಅವರು ಹೇಳಿದರು.
ದ್ವಿಮುಖ ಸಾಂಸ್ಕೃತಿಕ ತಿಳುವಳಿಕೆ ಮತ್ತು ವಿನಿಮಯವನ್ನು ಬಲಪಡಿಸಲು ಉತ್ತರ ಪ್ರದೇಶದ 300 ವಿದ್ಯಾರ್ಥಿಗಳು ಹತ್ತು ಗುಂಪುಗಳಲ್ಲಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು ಸೇರಿದಂತೆ ತಮಿಳುನಾಡಿನ ಪ್ರಮುಖ ಸಂಸ್ಥೆಗಳಿಗೆ ಪ್ರಯಾಣಿಸುವ ಈ ಉಪಕ್ರಮವನ್ನು ಅವರು ಸ್ವಾಗತಿಸಿದರು.
ಸಂಗಮವನ್ನು ಏಕ ಭಾರತ, ಶ್ರೇಷ್ಠ ಭಾರತದ ಸಂಕೇತವೆಂದು ಬಣ್ಣಿಸಿದ ಉಪರಾಷ್ಟ್ರಪತಿಯವರು, ಕಾಶಿ ಮತ್ತು ತಮಿಳುನಾಡು ಭಾರತದ ಪ್ರಾಚೀನ ನಾಗರಿಕತೆಯ ಪ್ರಜ್ವಲಿಸುವ ದೀಪಗಳಾಗಿವೆ, ದೇಶವನ್ನು ತಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಬೆಳಗಿಸುತ್ತಿವೆ ಎಂದು ಹೇಳಿದರು.
ಈ ಸಾಂಸ್ಕೃತಿಕ ಏಕತಾ ಕಾರ್ಯಕ್ರಮವನ್ನು ಇಷ್ಟು ಅದ್ಧೂರಿಯಾಗಿ ಆಯೋಜಿಸಿದ್ದಕ್ಕಾಗಿ ಶಿಕ್ಷಣ ಸಚಿವಾಲಯ, ಉತ್ತರ ಪ್ರದೇಶ ಸರ್ಕಾರ ಮತ್ತು ಇತರ ಕೇಂದ್ರ ಸಚಿವಾಲಯಗಳನ್ನು ಉಪರಾಷ್ಟ್ರಪತಿಯವರು ಶ್ಲಾಘಿಸಿದರು.
ಕಾಶಿ ತಮಿಳು ಸಂಗಮವು ಭವ್ಯವಾದ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಬೌದ್ಧಿಕ ಆಚರಣೆಯಾಗಲಿ ಎಂದು ಉಪರಾಷ್ಟ್ರಪತಿಯವರು ಶುಭ ಹಾರೈಸಿದರು. ಸಂಗಮವು ನಿರಂತರವಾಗಿ ಪ್ರಜ್ವಲಿಸಲಿ, ಕಾಶಿ ಮತ್ತು ತಮಿಳುನಾಡು ನಡುವಿನ ಬಾಂಧವ್ಯ ಸಾವಿರಾರು ವರ್ಷಗಳ ಕಾಲ ಬಲವಾಗಿ ಬೆಳೆಯಲಿ ಮತ್ತು ಈ ಏಕತೆಯ ಮನೋಭಾವವು ದೇಶವನ್ನು ಪ್ರಧಾನಮಂತ್ರಿ ಅವರ ಏಕೀಕೃತ ಭಾರತದ ದೃಷ್ಟಿಕೋನದತ್ತ ಕೊಂಡೊಯ್ಯಲಿ ಎಂಬ ಆಶಯದೊಂದಿಗೆ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
Matribhumi Samachar Kannad

