ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಕರ್ನಾಟಕ ಸರ್ಕಾರದ ಗೌರವಾನ್ವಿತ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಮೂಲಸೌಕರ್ಯ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಉದ್ಯಮದ ಮುಖಂಡರು, ನವೋದ್ಯಮಗಳು ಮತ್ತು ಡೀಪ್ ಟೆಕ್ ನಾವೀನ್ಯಕಾರರ ಜೊತೆ ಫಲಪ್ರದ ಸಂವಾದ ನಡೆಸಿದರು.
ಭಾರತದ ದೃಢವಾದ ನಾವೀನ್ಯತೆ, ನೀತಿಚೌಕಟ್ಟು ವಿವರಿಸಿದ ಶ್ರೀ ಪಿಯೂಷ್ ಗೋಯಲ್ ಅವರು ಆರಂಭಿಕ ಮತ್ತು ಬೆಳವಣಿಗೆಯ ಹಂತದ ಡೀಪ್ಟೆಕ್ ಸ್ಟಾರ್ಟ್‌ಅಪ್ ಗಳನ್ನು ಬೆಂಬಲಿಸುವ 10,000 ಕೋಟಿ ರೂ.ಗಳ ‘ನವೋದ್ಯಮಗಳಿಗಾಗಿ ಫಂಡ್ ಆಫ್ ಫಂಡ್ಸ್ʼ(ಎಫ್ಎಫ್ಎಸ್)ಅನ್ನು ಪ್ರಾರಂಭಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಒತ್ತಿ ಹೇಳಿದರು. ಇದೇ ವೇಳೆ ಖಾಸಗಿ ವಲಯದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ದೀರ್ಘಾವಧಿ, ಕಡಿಮೆ ವೆಚ್ಚದ ಬಂಡವಾಳವನ್ನು ಒದಗಿಸುವ 1 ಲಕ್ಷ ಕೋಟಿ ರೂ.ಗಳ ʻಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನಾವೀನ್ಯತೆʼ(ಆರ್ ಡಿ ಐ) ಯೋಜನೆಯ ಬಗ್ಗೆಯೂ ಸಚಿವರು ಒತ್ತಿ ಹೇಳಿದರು.
ನಾವೀನ್ಯತೆ, ಉದ್ಯಮಶೀಲತೆ ಮತ್ತು ದೃಢವಾದ ನೀತಿ ಬೆಂಬಲದಿಂದ ಪ್ರೇರಿತವಾದ, ಪ್ರಸ್ತುತ ಜಾಗತಿಕವಾಗಿ ಗುರುತಸಲ್ಪಟ್ಟಿರುವ ಕೋವಿಡ್ ನಂತರದ ಭಾರತದ ಆರ್ಥಿಕತೆಯ ಗಮನಾರ್ಹ ಸದೃಢತೆಯನ್ನು ಅವರು ಪ್ರಸ್ತಾಪಿಸಿದರು. ಎಲೆಕ್ಟ್ರಾನಿಕ್ಸ್, ಉತ್ಪಾದನೆ, ಔಷಧ ಹಾಗೂ ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುಣಮಟ್ಟ, ವಿನ್ಯಾಸ ಮತ್ತು ಸ್ಪರ್ಧಾತ್ಮಕತೆಯ ಸುಧಾರಣೆಗಳಿಂದ ಪ್ರೇರಿತವಾದ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಜಾಗತಿಕವಾಗಿ ಖ್ಯಾತಿ ಹೆಚ್ಚುತ್ತಿದೆ. ಇದು ಭಾರತದ ಬೆಳೆಯುತ್ತಿರುವ ಆರ್ಥಿಕ ಸ್ಥಾನಮಾನಕ್ಕೆ ಸಾಕ್ಷಿಯಾಗಿದೆ. ವ್ಯಾಪಾರ ಸ್ನೇಹಿ ವಾತಾವರಣವನ್ನು ಬೆಳೆಸುವ ನಿಟ್ಟಿನಲ್ಲಿ ನಿಯಂತ್ರಕ ಚೌಕಟ್ಟುಗಳನ್ನು ಸರಾಗಗೊಳಿಸುವ ಪ್ರಾಮುಖ್ಯತೆ, ಪೇಟೆಂಟ್ ಗಳು ಮತ್ತು ಟ್ರೇಡ್ ಮಾರ್ಕ್ ಗಳಿಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಪ್ರಾಮುಖ್ಯತೆಯ ಬಗ್ಗೆಯೂ ಅವರು ಮಾತನಾಡಿದರು.

ಈ ಅಧಿವೇಶನದಲ್ಲಿ ಪ್ರಮುಖ ನವೋದ್ಯಮಗಳ ಸಂಸ್ಥಾಪಕರು, ಉದ್ಯಮದ ನಾಯಕರು, ಡೀಪ್ ಟೆಕ್ ಆವಿಷ್ಕಾರಕರು, ಸಾಹಸೋದ್ಯಮ ಬಂಡವಾಳಶಾಹಿಗಳು ಮತ್ತು ಶೈಕ್ಷಣಿಕ ಪ್ರತಿನಿಧಿಗಳು ಸೇರಿದಂತೆ 100ಕ್ಕೂ ಹೆಚ್ಚು ಪ್ರಮುಖ ಪಾಲುದಾರರು ಭಾಗವಹಿಸಿದ್ದರು. ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಹಾಗೂ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಲಾಗಿತ್ತು. ಅಧಿವೇಶನದಲ್ಲಿ, ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಭಾರತದ ಕೈಗಾರಿಕಾ ಕ್ಷೇತ್ರವನ್ನು ಬಲಪಡಿಸುವ ಪ್ರಯತ್ನಗಳನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮದ (ಎನ್ಐಸಿಡಿಸಿ) ಸಿಇಒ ಪ್ರಸ್ತುತಪಡಿಸಿದರು.

ಸಂವಾದದ ಸಮಯದಲ್ಲಿ, ಉದ್ಯಮದ ದಿಗ್ಗಜರಾದ ಶ್ರೀ ಕ್ರಿಸ್ ಗೋಪಾಲಕೃಷ್ಣನ್, ಶ್ರೀಮತಿ ಕಿರಣ್ ಮಜುಂದಾರ್-ಶಾ, ಶ್ರೀಮತಿ ಗೀತಾಂಜಲಿ ಕಿರ್ಲೋಸ್ಕರ್ ಮತ್ತು ಡಾ.ದೇವಿ ಪ್ರಸಾದ್ ಶೆಟ್ಟಿ ಅವರು ʻಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿʼ(ಸಿಐಐ) ಅಧ್ಯಕ್ಷ (ದಕ್ಷಿಣ) ಶ್ರೀ ಕಮಲ್ ಬಾಲಿ ಅವರ ನೇತೃತ್ವದಲ್ಲಿ ಒಳನೋಟದ ಚರ್ಚೆಯಲ್ಲಿ ತೊಡಗಿದ್ದರು. ʻಆಪರೇಷನ್ ಸಿಂಧೂರ್ʼ ಸಮಯದಲ್ಲಿ ಸಾಬೀತಾದಂತೆ, ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆಯಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಸಂವಾದವು ಎತ್ತಿ ತೋರಿತು ಮತ್ತು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿ ಭಾರತದ ಸ್ಥಾನವನ್ನು ಹೆಚ್ಚಿಸಲು ವೇಗವಾಗಿ ಸಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿತು.

ಈ ಕಾರ್ಯಕ್ರಮವು ಎಲ್ಲರನ್ನೂ ಒಳಗೊಂಡ, ನಾವೀನ್ಯತೆ ಆಧಾರಿತ ಬೆಳವಣಿಗೆಯನ್ನು ಸಕ್ರಿಯಗೊಳಿಸುವ ಹಾಗೂ ʻವಿಕಸಿತ ಭಾರತ @2047ʼರ ದೃಷ್ಟಿಕೋನಕ್ಕೆ ಅನುಗುಣವಾಗಿ ಜಾಗತಿಕವಾಗಿ ಸ್ಪರ್ಧಾತ್ಮಕ ಉದ್ಯಮ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಭಾರತ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿತು.
Matribhumi Samachar Kannad

