ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನೇತರ ಹಾಗೂ ನವೋದ್ಯಮಗಳ ಉತ್ತೇಜನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಹಲವು ಉಪ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ದಡಿ ಭಾರತೀಯ ಸಾಫ್ಟ್ ವೇರ್ ತಂತ್ರಜ್ಞಾನ ಪಾರ್ಕ್ (ಎಸ್ ಟಿ ಪಿ ಐ ) ಮೂಲಕ ಗುಣಮಟ್ಟದ ಮೂಲಸೌಕರ್ಯ, ವೇಗದ ಸಂಪರ್ಕ, ಸಂಪೋಷಣೆ ಮತ್ತು ನೀತಿ ಬೆಂಬಲವನ್ನು ನೀಡುತ್ತಿದೆ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ ಜಿತಿನ್ ಪ್ರಸಾದ್ ರಾಜ್ಯಸಭೆಯಲ್ಲಿ ಸದಸ್ಯ ಲೆಹರ್ ಸಿಂಗ್ ಸಿರೋಯಾ ಅವರ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
ದೇಶಾದ್ಯಂತ ಒಟ್ಟು 68 ಎಸ್ ಟಿ ಪಿ ಐಗಳನ್ನು ಸ್ಥಾಪನೆ ಮಾಡಲಾಗಿದೆ, ಅವುಗಳಲ್ಲಿ ಕರ್ನಾಟಕದಲ್ಲಿ ಆರು ಎಸ್ ಟಿ ಪಿ ಐ ಕೇಂದ್ರಗಳು ಬೆಂಗಳೂರು, ಮಂಗಳೂರು, ಮಣಿಪಾಲ, ಮೈಸೂರು, ಹುಬ್ಬಳ್ಳಿ ಮತ್ತು ದಾವಣಗೆರೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ 1600ಕ್ಕೂ ಅಧಿಕ ಐಟಿ/ಐಟಿಇಎಸ್ ಕಂಪನಿಗಳ ನೋಂದಣಿಯನ್ನು ಮಾಡಿಕೊಂಡಿದ್ದು, ಆ ಕಂಪನಿಗಳು 10.5 ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಅವಕಾಶಗಳನ್ನು ನೀಡಿವೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಎಸ್ ಟಿಪಿಐ ನಾವೀನ ಚಿಂತನೆಗಳನ್ನು ನವೋದ್ಯಮಗಳನ್ನಾಗಿ ಪರಿವರ್ತಿಸಿಕೊಳ್ಳಲು ಉತ್ತೇಜನ ನೀಡುತ್ತಿದೆ. ಅದಕ್ಕೆ ಅಗತ್ಯ ನೆರವು ನೀಡುತ್ತಿದೆ. ಅಷ್ಟೇ ಅಲ್ಲದೆ, ಮೂರು ವಿಷಯ ಕೇಂದ್ರೀತ ಸೆಂಟರ್ ಆಫ್ ಎಂಟರ್ಪ್ರೈನರ್ ಶಿಪ್ (ಸಿಇಒಎಸ್)ಗಳ ಸ್ಥಾಪನೆ ಮಾಡಲಾಗಿದೆ, ಅವುಗಳೆಂದರೆ ಬೆಂಗಳೂರಿನ ಎಸ್ ಟಿ ಪಿ ಐ ನಲ್ಲಿ ಇಂಟರ್ ನೆಟ್ ಆಫ್ ಥಿಂಗ್ಸ್ (ಐಒಟಿ), ಓಪನ್ ಲ್ಯಾಬ್ ಸಿಒಇ, ಅಟಲ್ ಇನಕ್ಯುಬೇಷನ್ ಕೇಂದ್ರ ಮತ್ತು ಬೆಂಗಳೂರಿನಲ್ಲಿ ಎಫಿಷಿಯನ್ಸಿ ಆಗ್ಯುಮೆಂಟೇಷನ್ ಕೇಂದ್ರಗಳನ್ನು ತೆರೆದು ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪೋತ್ಸಾಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಪ್ಯೂಚರ್ ಸ್ಕಿಲ್ಸ್ ನಡಿ ಭವಿಷ್ಯದ ಉದ್ಯಮದ ಬೇಡಿಕೆಗಳಿಗೆ ತಕ್ಕಂತ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಒದಗಿಸಲು ಶ್ರಮಿಸುತ್ತಿದೆ. ಅದಕ್ಕಾಗಿ ಆ ಯೋಜನೆಯಡಿ ಯುವಜನತೆಗ ತರಬೇತಿ ನೀಡಲಾಗುತ್ತಿದ್ದು, ದೇಶಾದ್ಯಂತ 24.6 ಲಕ್ಷ ಅಭ್ಯರ್ಥಿಗಳು ತರಬೇತಿಗೆ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಕರ್ನಾಟಕದಿಂದ 1.6ಲಕ್ಷಕ್ಕೂ ಅಧಿಕ ಮಂದಿಯೂ ಇದ್ದಾರೆ ಎಂದು ಸಚಿವರಾದ ಜಿತಿನ್ ಪ್ರಸಾದ್ ಹೇಳಿದ್ದಾರೆ.
Matribhumi Samachar Kannad

