ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತಿನ ವಾವ್-ಥರಾಡ್ ಜಿಲ್ಲೆಯಲ್ಲಿ ಬನಾಸ್ ಡೈರಿ ಹೊಸದಾಗಿ ನಿರ್ಮಿಸಿರುವ ಬಯೋ-ಸಿ ಎನ್ ಜಿ ಮತ್ತು ರಸಗೊಬ್ಬರ ಘಟಕವನ್ನು ಉದ್ಘಾಟಿಸಿದರು ಮತ್ತು 150 ಟನ್ ಹಾಲಿನ ಪುಡಿ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ, ಗುಜರಾತ್ ವಿಧಾನಸಭಾಧ್ಯಕ್ಷ ಶ್ರೀ ಶಂಕರ್ ಚೌಧರಿ, ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಕ್ರಿಶನ್ ಪಾಲ್ ಗುರ್ಜರ್ ಮತ್ತು ಶ್ರೀ ಮುರಳೀಧರ್ ಮೊಹೋಲ್, ಕೇಂದ್ರ ಸಹಕಾರ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಬನಸ್ಕಾಂತದಲ್ಲಿ ಬನಾಸ್ ಡೈರಿಯನ್ನು ಸ್ಥಾಪಿಸಿದ ಗಲ್ಬಾಭಾಯಿ ನಂಜಿಭಾಯ್ ಪಟೇಲ್ ಅವರು ಪ್ರಾರಂಭಿಸಿದ ಪ್ರಯಾಣವು ಎಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ ಇಂದು ಡೈರಿಯ ವಹಿವಾಟು ₹24,000 ಕೋಟಿ ತಲುಪಿದೆ ಎಂದು ಹೇಳಿದರು. ತಾವು ದೇಶಾದ್ಯಂತ ಎಲ್ಲಿಗೆ ಹೋದರೂ, ಗುಜರಾತಿನ ಹಳ್ಳಿಗಳನ್ನು ಸಮೃದ್ಧಗೊಳಿಸುವ ರಾಜ್ಯದ ತಾಯಂದಿರು ಮತ್ತು ಸಹೋದರಿಯರು ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದಾಗಿ ಅವರು ಹೇಳಿದರು. ಈ ಪ್ರದೇಶದ ರೈತರು, ವಿಶೇಷವಾಗಿ ಸಹಕಾರಿ ಚಳುವಳಿಯ ಪ್ರವರ್ತಕರು, ಗ್ರಾಮ ಮಟ್ಟದ ಹಾಲು ಸಂಘಗಳ ಅಧ್ಯಕ್ಷರು ಮತ್ತು ಬನಾಸ್ ಡೈರಿಯ ನಿರ್ದೇಶಕರು ತಾವು ಸಾಧಿಸಿದ ಬೃಹತ್ ಪವಾಡದ ಬಗ್ಗೆ ಸ್ವತಃ ಅವರಿಗೇ ಅರಿವಿಲ್ಲದಿರಬಹುದು. ₹24,000 ಕೋಟಿ ಮೌಲ್ಯದ ಕಂಪನಿಯನ್ನು ನಿರ್ಮಿಸುವುದು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಸಹ ಬೆವರು ಸುರಿಸುವಂತಹ ಕೆಲಸವಾಗಿದೆ, ಆದರೆ ಬನಸ್ಕಾಂತದ ಮಹಿಳೆಯರು ಮತ್ತು ರೈತರು ಕಣ್ಣು ಮಿಟುಕಿಸುವುದರೊಳಗೆ ₹24,000 ಕೋಟಿ ಮೌಲ್ಯದ ಕಂಪನಿಯನ್ನು ಕಟ್ಟಿದ್ದಾರೆ ಎಂದು ಅವರು ಹೇಳಿದರು.
ಇಂದು ತಾವು ಭಾರತದ ಸಂಸತ್ತಿನ ಎರಡೂ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನು ಕರೆತಂದಿರುವುದಾಗಿ ಶ್ರೀ ಅಮಿತ್ ಶಾ ಹೇಳಿದರು. ಈ ಬರುವ ಜನವರಿಯಲ್ಲಿ, ದೇಶಾದ್ಯಂತದ ಸುಮಾರು 250 ಡೈರಿಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸಹಕಾರಿ ಡೈರಿ ವಲಯದಲ್ಲಿ ಸಂಭವಿಸಿದ ಪವಾಡವನ್ನು ಸ್ವತಃ ವೀಕ್ಷಿಸಲು ಬನಸ್ಕಾಂತಕ್ಕೆ ಬರುತ್ತಿದ್ದಾರೆ ಎಂದು ಅವರು ಹೇಳಿದರು. 1985-87ರ ಬರಗಾಲದ ನಂತರ ತಾವು ಆ ಪ್ರದೇಶಕ್ಕೆ ಭೇಟಿ ನೀಡಿ ರೈತರನ್ನು ಮಾತನಾಡಿಸಿದಾಗ, ಅವರು ವರ್ಷಕ್ಕೆ ಒಂದು ಬೆಳೆ ಮಾತ್ರ ಬೆಳೆಯಬಹುದು ಎಂದು ಹೇಳುತ್ತಿದ್ದರು ಎಂದು ಅವರು ನೆನಪಿಸಿಕೊಂಡರು. ಆದರೆ ಈಗ, ಬನಸ್ಕಾಂತದ ರೈತರು ವರ್ಷಕ್ಕೆ ಮೂರು – ಕಡಲೆಕಾಯಿ, ಆಲೂಗಡ್ಡೆ, ಬೇಸಿಗೆಯಲ್ಲಿ ರಾಗಿ ಮತ್ತು ಖಾರಿಫ್ ಬೆಳೆ – ಬೆಳೆಗಳನ್ನು ಬೆಳೆಯುತ್ತಾರೆ. ಕೇವಲ ಇಪ್ಪತ್ತೈದು ವರ್ಷಗಳ ಹಿಂದೆ, ಬನಸ್ಕಾಂತದಲ್ಲಿ ಮೂರು ಬೆಳೆಗಳನ್ನು ಬೆಳೆಯುವುದು ಕನಸಾಗಿತ್ತು ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನಲ್ಲಿ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಹೆಚ್ಚುವರಿ ನೀರನ್ನು ಹೇರಳವಾಗಿರುವ ಪ್ರದೇಶಗಳಿಂದ ಬೇರೆಡೆಗೆ ತಿರುಗಿಸುವ ಮೂಲಕ ನೀರಿನ ಲಭ್ಯತೆಯನ್ನು ಖಚಿತಪಡಿಸಿದರು ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಸುಜಲಾಂ-ಸುಫಲಾಂ ಯೋಜನೆಯಡಿಯಲ್ಲಿ, ನರ್ಮದಾ ಮತ್ತು ಮಾಹಿ ನದಿಗಳಿಂದ ಹೆಚ್ಚುವರಿ ನೀರನ್ನು ಬನಸ್ಕಾಂತಕ್ಕೆ ತರಲಾಯಿತು ಎಂದು ಅವರು ಹೇಳಿದರು. ಹಿಂದೆ, ಇಲ್ಲಿನ ರೈತರು ಇತರರ ಜಮೀನುಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡಬೇಕಾಗಿತ್ತು. ಇಂದು, ಅದೇ ರೈತ ತನ್ನ ಭೂಮಿಯನ್ನು ಸ್ವರ್ಗವನ್ನಾಗಿ ಪರಿವರ್ತಿಸಿ ಇಡೀ ಬನಸ್ಕಾಂತವನ್ನು ಸಮೃದ್ಧಗೊಳಿಸಿದ್ದಾನೆ ಎಂದು ಅವರು ಹೇಳಿದರು.
ನಮ್ಮ ಯಾವುದೇ ಪ್ರಮುಖ ಸಾಧನೆಗಳ ಸಂಪೂರ್ಣ ಇತಿಹಾಸವನ್ನು ದಾಖಲಿಸುವುದು ಅಥವಾ ಬರೆಯುವುದು ನಮ್ಮ ಸಂಪ್ರದಾಯ ಅಥವಾ ಅಭ್ಯಾಸವಾಗಿರಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಬನಸ್ಕಾಂತ ಮತ್ತು ಮೆಹ್ಸಾನಾದಲ್ಲಿನ ಜಲ ಸಂರಕ್ಷಣಾ ಪ್ರಯತ್ನಗಳು, ನೀರಿನಿಂದ ಉಂಟಾದ ಸಮೃದ್ಧಿ ಮತ್ತು ಜನರ ಜೀವನದಲ್ಲಾದ ಪರಿವರ್ತನೆಯ ಕುರಿತು ವಿವರವಾದ, ಉತ್ತಮವಾಗಿ ದಾಖಲಿಸಲಾದ ಅಧ್ಯಯನವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಎರಡು ವಿಶ್ವವಿದ್ಯಾಲಯಗಳಿಗೆ ವಹಿಸಿದ್ದೇನೆ ಎಂದು ಶ್ರೀ ಶಾ ಹೇಳಿದರು. ಬನಸ್ಕಾಂತದ ಕಠಿಣ ಪರಿಶ್ರಮವನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗುವುದು ಮತ್ತು ಇದು ದೇಶಾದ್ಯಂತ ಗ್ರಾಮೀಣ ಅಭಿವೃದ್ಧಿಯ ಇತಿಹಾಸದಲ್ಲಿ ಸ್ಫೂರ್ತಿಯ ಮೂಲವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.

ಈ ಸಾಧನೆಯಲ್ಲಿ ಮಹಿಳೆಯರ ಅಪಾರ ಕೊಡುಗೆ ಅತ್ಯಂತ ಹೃದಯಸ್ಪರ್ಶಿ ಅಂಶವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ₹24,000 ಕೋಟಿ ಮೌಲ್ಯದ ಈ ಬೃಹತ್ ವ್ಯವಹಾರದಲ್ಲಿ, ಹಾಲು ಸಂಗ್ರಹಣೆಯ ಸಂಪೂರ್ಣ ಶ್ರಮವನ್ನು ಬನಸ್ಕಾಂತದ ಸಹೋದರಿಯರು, ಹೆಣ್ಣುಮಕ್ಕಳು ಮತ್ತು ತಾಯಂದಿರು ಮಾಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ಮಹಿಳಾ ಸಬಲೀಕರಣದ ಬಗ್ಗೆ ನಿರಂತರವಾಗಿ ಮಾತನಾಡುವ ಪ್ರಪಂಚದಾದ್ಯಂತದ ಎಲ್ಲಾ ಎನ್ ಜಿ ಒ ಗಳಿಗೆ ಈ ಮಹಿಳೆಯರು ಅತ್ಯಂತ ಚೈತನ್ಯಶೀಲ ಮತ್ತು ಶ್ರೇಷ್ಠ ಜೀವಂತ ಉದಾಹರಣೆಯಾಗಿದ್ದಾರೆ ಎಂದು ಅವರು ಹೇಳಿದರು. ಅಂತಹ ಪಾರದರ್ಶಕ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ, ಯಾವುದೇ ಆಂದೋಲನ ಅಥವಾ ಘೋಷಣೆಗಳಿಲ್ಲದೆ, ಅವರ ಹಾಲಿನ ಸಂಪೂರ್ಣ ಪಾವತಿ ಪ್ರತಿ ವಾರ ಈ ತಾಯಂದಿರು ಮತ್ತು ಸಹೋದರಿಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಲುಪುವಷ್ಟು ಪಾರದರ್ಶಕ ವ್ಯವಸ್ಥೆಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಬನಾಸ್ ಡೈರಿ ಈಗ ಏಷ್ಯಾದ ಅತಿದೊಡ್ಡ ಹಾಲು ಉತ್ಪಾದಿಸುವ ಡೈರಿಯಾಗಿದೆ ಮತ್ತು ಈ ಸಾಧನೆಯಲ್ಲಿ ಗಲ್ಬಾ ಕಾಕಾ (ಗಲ್ಬಾಭಾಯಿ ನಂಜಿಭಾಯ್ ಪಟೇಲ್) ಅವರ ಕೊಡುಗೆ ಅಪಾರವಾಗಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಗಲ್ಬಾ ಕಾಕಾ ಅವರ ಹೃದಯವು ರೈತರ ಕಲ್ಯಾಣದಿಂದ ಮಾತ್ರ ತುಂಬಿತ್ತು. 1960 ರಲ್ಲಿ ವಡ್ಗಾಮ್ ಮತ್ತು ಪಾಲನ್ಪುರ್ ಎಂಬ ಎರಡು ತಾಲೂಕುಗಳ ಕೇವಲ ಎಂಟು ಹಳ್ಳಿಗಳ ಹಾಲಿನ ಸಂಘಗಳೊಂದಿಗೆ ಪ್ರಾರಂಭವಾದ ಪ್ರಯಾಣವು ಇಂದು ₹24,000 ಕೋಟಿ ವಹಿವಾಟು ತಲುಪಿದೆ. ಗಲ್ಬಾಭಾಯಿ ಪಟೇಲ್ ಪ್ರಾರಂಭಿಸಿದ ಸಂಪ್ರದಾಯದ ಮೂಲ ಮಂತ್ರವು ತುಂಬಾ ಸರಳವಾಗಿತ್ತು: “ನಮ್ಮಲ್ಲಿ ಹಣ ಕಡಿಮೆಯಿರಬಹುದು, ಆದರೆ ನಮ್ಮಲ್ಲಿ ಅಪಾರ ಸಂಖ್ಯೆಯ ಜನರಿದ್ದಾರೆ.” ದೊಡ್ಡ ಸಾಧನೆ ಮಾಡಲು ಅನೇಕ ಜನರು ಸಣ್ಣ ಮೊತ್ತದ ದೇಣಿಗೆ ನೀಡುವ ಗಲ್ಬಾಭಾಯಿ ಅವರ ಕಲ್ಪನೆಯು ಈಗ ಒಂದು ದೊಡ್ಡ ಆಲದ ಮರವಾಗಿ ಬೆಳೆದಿದೆ, ಇದು ಇಂದು ಭಾರತದ ಸಹಕಾರಿ ಚಳುವಳಿಗಳಿಗೆ ಮಾತ್ರವಲ್ಲದೆ ಇಡೀ ಪ್ರಪಂಚದಾದ್ಯಂತ ಸಹಕಾರಿ ಚಳುವಳಿಗಳಿಗೆ ಸ್ಫೂರ್ತಿ ನೀಡುತ್ತಿದೆ ಎಂದು ಶ್ರೀ ಶಾ ಹೇಳಿದರು.

ಇಂದು ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಪುಣ್ಯತಿಥಿ ಎಂದು ಶ್ರೀ ಅಮಿತ್ ಶಾ ಹೇಳಿದರು. ಬಾಬಾ ಸಾಹೇಬರು ಈ ದೇಶಕ್ಕೆ ನೀಡಿದ ಸಂವಿಧಾನವು ದಲಿತರು, ಬಡವರು, ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದ ವರ್ಗಗಳು ಸಹ ಘನತೆ ಮತ್ತು ಗೌರವದ ಜೀವನವನ್ನು ನಡೆಸಬಹುದಾದ ಬಲವಾದ ವ್ಯವಸ್ಥೆಯನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು. ಅವರು ಬಾಬಾ ಸಾಹೇಬರಿಗೆ ತಮ್ಮ ಹೃತ್ಪೂರ್ವಕ ಗೌರವ ಸಲ್ಲಿಸಿದರು. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಗುಜರಾತಿನಾದ್ಯಂತ ಆಯೋಜಿಸಲಾಗಿರುವ ಭವ್ಯ ಪಾದಯಾತ್ರೆಯ ಸಮಾರೋಪ ಸಮಾರಂಭವೂ ಇಂದು ಎಂದು ಶ್ರೀ ಶಾ ಹೇಳಿದರು. ರೈತರು ಮತ್ತು ಸಹಕಾರದ ಪರಿಕಲ್ಪನೆ ಸರ್ದಾರ್ ಸಾಹೇಬ್ ಅವರ ಸ್ವಂತ ಕಲ್ಪನೆಯಾಗಿತ್ತು ಎಂದು ಅವರು ಹೇಳಿದರು. ಗುಜರಾತ್ ಅದನ್ನು ಸ್ವೀಕರಿಸಿತು ಮತ್ತು ಇಂದು ಆ ಕಲ್ಪನೆಯು ಬೃಹತ್ ಆಲದ ಮರವಾಗಿ ಬೆಳೆದಿದೆ ಎಂದು ಅವರು ಹೇಳಿದರು.
ಇಂದು ಇಲ್ಲಿ ಹಲವಾರು ಹೊಸ ಉಪಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು, ಅವುಗಳಲ್ಲಿ ಬಯೋ-ಸಿ ಎನ್ ಜಿ ಘಟಕ ಮತ್ತು ಹಾಲಿನ ಪುಡಿ ಘಟಕದ ಉದ್ಘಾಟನೆ, ಜೊತೆಗೆ ಅತ್ಯಾಧುನಿಕ ಪ್ರೋಟೀನ್ ಸ್ಥಾವರ ಮತ್ತು ಹೈಟೆಕ್ ಸ್ವಯಂಚಾಲಿತ ಚೀಸ್ ಘಟಕರ ಸೇರಿವೆ. ಬನಾಸ್ ಡೈರಿಯ ಬಯೋ-ಸಿ ಎನ್ ಜಿ ಸ್ಥಾವರವನ್ನು ಸ್ಥಾಪಿಸುವ ಸಂಪ್ರದಾಯವು ದೇಶಾದ್ಯಂತ ಸಹಕಾರಿ ಸಂಘಗಳಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು. ಮರುಬಳಕೆ ಆರ್ಥಿಕತೆಯಲ್ಲಿ ಬನಾಸ್ ಡೈರಿಯ ನವೀನ ಪ್ರಯೋಗಗಳನ್ನು ಸಲಹಾ ಸಮಿತಿಯ ಭಾಗವಾಗಿರುವ ಸಂಸತ್ ಸದಸ್ಯರಿಗೆ ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದರು. ಇಲ್ಲಿಯವರೆಗೆ, ಅಮುಲ್ ನಾಯಕತ್ವದಲ್ಲಿ, ಗುಜರಾತಿನ ಡೈರಿಗಳು ಹಾಲನ್ನು ಸಂಗ್ರಹಿಸುತ್ತಿವೆ, ಅದನ್ನು ಉತ್ಪನ್ನಗಳಾಗಿ ಸಂಸ್ಕರಿಸುತ್ತಿವೆ, ಮಾರಾಟ ಮಾಡುತ್ತಿವೆ ಮತ್ತು ಲಾಭವನ್ನು ಸಹೋದರಿಯರು ಮತ್ತು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸುತ್ತಿವೆ – ಇದರಲ್ಲಿ, ನಾವು ಇಡೀ ಪ್ರಪಂಚಕ್ಕಿಂತ ಮುಂದಿದ್ದೇವೆ. ಆದರೆ ಈಗ ಡೈರಿ ವಲಯವನ್ನು ಸಂಪೂರ್ಣವಾಗಿ ಮರುಬಳಕೆ ಆರ್ಥಿಕತೆಯಾಗಿ ಪರಿವರ್ತಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.
ಒಂದು ಗ್ರಾಮ್ ನಷ್ಟು ಹಸು ಅಥವಾ ಎಮ್ಮೆಯ ಸಗಣಿ ಕೂಡ ವ್ಯರ್ಥವಾಗಬಾರದು – ಅದನ್ನು ಸಾವಯವ ಗೊಬ್ಬರ, ಜೈವಿಕ ಅನಿಲ ಮತ್ತು ವಿದ್ಯುತ್ ಆಗಿ ಪರಿವರ್ತಿಸಬೇಕು ಮತ್ತು ಅದರಿಂದ ಬರುವ ಆದಾಯವು ರೈತನಿಗೆ ತಲುಪಬೇಕು ಎಂದು ಶ್ರೀ ಶಾ ಒತ್ತಿ ಹೇಳಿದರು. ಇನ್ನೂ ಭಾರತದಲ್ಲಿ ಉತ್ಪಾದನೆಯಾಗದ ಅನೇಕ ಹೆಚ್ಚಿನ ಮೌಲ್ಯದ ಡೈರಿ ಉತ್ಪನ್ನಗಳು ಇವೆ ಎಂದು ಅವರು ಹೇಳಿದರು. ಅಂತಹ ಉತ್ಪನ್ನಗಳ ಸಂಪೂರ್ಣ ಪಟ್ಟಿಯನ್ನು ಇಂದು ಅಮುಲ್ ಅಧ್ಯಕ್ಷರಿಗೆ ಹಸ್ತಾಂತರಿಸುತ್ತಿರುವುದಾಗಿ ಅವರು ಘೋಷಿಸಿದರು, ಇದರಿಂದ ಅವುಗಳ ಉತ್ಪಾದನೆ ತಕ್ಷಣವೇ ಪ್ರಾರಂಭವಾಗಬಹುದು. ಈ ಉತ್ಪನ್ನಗಳು ಹೆಚ್ಚಿನ ಬೆಲೆಯನ್ನು ಹೊಂದಿವೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯನ್ನು ಹೊಂದಿವೆ. ಮೊಸರು, ತುಪ್ಪ ಮತ್ತು ಪನೀರ್ ಅನ್ನು ಮಾತ್ರ ಉತ್ಪಾದಿಸುವ ಬದಲು, ನಾವು ಈ ಹೆಚ್ಚಿನ ಮೌಲ್ಯದ ಉತ್ಪನ್ನಗಳ ಮೇಲೆ ಕೇಂದ್ರೀಕರಿಸಿದರೆ, ನಮ್ಮ ರೈತ ಸಹೋದರ ಸಹೋದರಿಯರು ಅನೇಕ ಪಟ್ಟು ಹೆಚ್ಚಿನ ಲಾಭವನ್ನು ಗಳಿಸುತ್ತಾರೆ ಎಂದು ಅವರು ಹೇಳಿದರು.
ಈಗ ಡೈರಿ ಜೊತೆಗೆ, ನಾವು ಬಯೋಗ್ಯಾಸ್ ಮತ್ತು ಬಯೋ-ಸಿ ಎನ್ ಜಿ ಉತ್ಪಾದನೆಯನ್ನು ಪ್ರಾರಂಭಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಇನ್ನು ಮುಂದೆ, ಭಾರತದಾದ್ಯಂತ ಸಹಕಾರಿ ಡೈರಿಗಳು ಮುಕ್ತ ಮಾರುಕಟ್ಟೆಯಿಂದ ಪಶು ಆಹಾರವನ್ನು ಖರೀದಿಸುವುದಿಲ್ಲ; ಇದನ್ನು ಸಹಕಾರಿ ಮಟ್ಟದಲ್ಲಿಯೂ ಉತ್ಪಾದಿಸಲಾಗುತ್ತದೆ ಮತ್ತು ಪಶು ಆಹಾರವನ್ನು ತಯಾರಿಸುವುದರಿಂದ ಗಳಿಸುವ ಲಾಭವು ನಮ್ಮ ಸಹೋದರಿಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹೋಗುತ್ತದೆ ಎಂದು ಅವರು ಹೇಳಿದರು. ತಂತ್ರಜ್ಞಾನ ಮತ್ತು ಹಣಕಾಸು ಸೇರಿದಂತೆ ಇದಕ್ಕೆ ಅಗತ್ಯವಿರುವ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಈಗಾಗಲೇ ಜಾರಿಗೆ ತಂದಿದೆ ಎಂದು ಅವರು ಭರವಸೆ ನೀಡಿದರು.
ರೈತರ ಅನುಕೂಲಕ್ಕಾಗಿ, ಭಾರತ ಸರ್ಕಾರವು ಮೂರು ಹೊಸ ರಾಷ್ಟ್ರೀಯ ಮಟ್ಟದ ಸಹಕಾರ ಸಂಘಗಳನ್ನು ರಚಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು: ಒಂದು ಬೀಜ ಉತ್ಪಾದನೆ ಮತ್ತು ವಿತರಣೆಗಾಗಿ, ಇನ್ನೊಂದು ಸಾವಯವ ಉತ್ಪನ್ನಗಳ ಮಾರುಕಟ್ಟೆಗಾಗಿ ಮತ್ತು ಮತ್ತೊಂದು ಕೃಷಿ ರಫ್ತಿಗಾಗಿ. ಅದೇ ಸಮಯದಲ್ಲಿ, ಮೂರು ರಾಷ್ಟ್ರೀಯ ಮಟ್ಟದ ಬಹು-ರಾಜ್ಯ ಸಹಕಾರಿ ಸಂಘಗಳನ್ನು ವಿಶೇಷವಾಗಿ ಡೈರಿ ವಲಯಕ್ಕಾಗಿ ರಚಿಸಲಾಗಿದೆ. ಈ ಆರು ಸಹಕಾರಿ ಸಂಸ್ಥೆಗಳು ಒಟ್ಟಾಗಿ ಈಗ ಕೃಷಿ ಮತ್ತು ಪಶುಸಂಗೋಪನೆಯ ಪ್ರತಿಯೊಂದು ಅಂಶವನ್ನು ಒಳಗೊಳ್ಳುತ್ತವೆ – ಅದು ಚೀಸ್, ಪ್ರೋಟೀನ್, ಡೈರಿ ವೈಟ್ನರ್, ಖೋಯಾ, ಐಸ್ ಕ್ರೀಮ್, ಬೇಬಿ ಫುಡ್ ತಯಾರಿಕೆ; ಖಾದ್ಯ ಎಣ್ಣೆಯನ್ನು ಪ್ಯಾಕೇಜಿಂಗ್ ಮಾಡುವುದು, ಹಿಟ್ಟು, ಜೇನುತುಪ್ಪವನ್ನು ಉತ್ಪಾದಿಸುವುದು, ಕೋಲ್ಡ್ ಸ್ಟೋರೇಜ್ ಗಳನ್ನು ನಡೆಸುವುದು, ಆಲೂಗಡ್ಡೆ ಚಿಪ್ಸ್, ಬೀಜ ಉತ್ಪಾದನೆ ಅಥವಾ ಪಶು ಆಹಾರ ತಯಾರಿಕೆ – ಈ ಎಲ್ಲಾ ಚಟುವಟಿಕೆಗಳು ಡೈರಿ ಆರ್ಥಿಕತೆಯ ಅಡಿಯಲ್ಲಿ ಬರುತ್ತವೆ ಮತ್ತು ಸಂಪೂರ್ಣ ಲಾಭವು ನೇರವಾಗಿ ಜಾನುವಾರು ರೈತರ ಖಾತೆಗಳಿಗೆ ತಲುಪುತ್ತದೆ. ಇದು ಭಾರತ ಸರ್ಕಾರದ ಸ್ಪಷ್ಟ ಮತ್ತು ದೃಢವಾದ ಯೋಜನೆಯಾಗಿದೆ ಎಂದು ಅವರು ಹೇಳಿದರು.
ಐದು ವರ್ಷಗಳಲ್ಲಿ, ಹೆಚ್ಚಿದ ಹಾಲು ಉತ್ಪಾದನೆಯು ಗಮನಾರ್ಹ ಪ್ರಯೋಜನಗಳನ್ನು ತರುವುದಲ್ಲದೆ, ಅಸ್ತಿತ್ವದಲ್ಲಿರುವ ಹಾಲು ಉತ್ಪಾದನೆಯೊಂದಿಗೆ, ಮರುಬಳಕೆ ಆರ್ಥಿಕ ಮಾದರಿಯು ಅವರ ಆದಾಯವನ್ನು ಕನಿಷ್ಠ 20 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ಬನಸ್ಕಾಂತದ ಸಹೋದರ ಸಹೋದರಿಯರಿಗೆ ಭರವಸೆ ನೀಡುವುದಾಗಿ ಶ್ರೀ ಶಾ ಹೇಳಿದರು. ಈ ಉದ್ದೇಶಕ್ಕಾಗಿ ವಿವರವಾದ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಬನಾಸ್ ಡೈರಿಯ ಪ್ರಧಾನ ಕಛೇರಿಯು ಈ ವಿವರವಾದ ಯೋಜನೆಯ ಕೇಂದ್ರವಾಗುವುದು ಅದ್ಭುತವಾಗಿದೆ. ಬನಸ್ಕಾಂತದಲ್ಲಿರುವಂತೆ ಜಾನುವಾರು ರೈತರು ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಈ ಮಾದರಿಯು ದೇಶಾದ್ಯಂತ ಯಶಸ್ವಿಯಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಹಳ್ಳಿಯ ಹಾಲು ಸಹಕಾರ ಸಂಘಕ್ಕೂ ಮೈಕ್ರೋ-ಎಟಿಎಂ ಒದಗಿಸಲಾಗಿದ್ದು, ಹೆಪ್ಪುಗಟ್ಟಿದ ವೀರ್ಯವನ್ನು ನಿರ್ವಹಿಸುವ ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮುಂಬರುವ ದಿನಗಳಲ್ಲಿ, ಈ ಮೈಕ್ರೋ-ಎಟಿಎಂಗಳ ಮೂಲಕ ಹಣಕಾಸು ಸೇವೆಗಳನ್ನು ಸಹ ಪ್ರಾರಂಭಿಸಲಾಗುವುದು. ಪ್ರಧಾನಮಂತ್ರಿ ಮೋದಿ ಶ್ವೇತ ಕ್ರಾಂತಿ 2.0 ಗಾಗಿ ಹಲವಾರು ದೊಡ್ಡ ಗುರಿಗಳನ್ನು ಹೊಂದಿದ್ದಾರೆ ಮತ್ತು ನಾಲ್ಕು ಸ್ತಂಭಗಳಾದ ರಾಷ್ಟ್ರೀಯ ಗೋಕುಲ್ ಮಿಷನ್, ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ, ಪುನರ್ರಚಿಸಿದ ರಾಷ್ಟ್ರೀಯ ಡೈರಿ ಯೋಜನೆ ಮತ್ತು ರಾಷ್ಟ್ರೀಯ ಪಶು ರೋಗ ನಿಯಂತ್ರಣ ಕಾರ್ಯಕ್ರಮಗಳ ಮೂಲಕ ಶ್ವೇತ ಕ್ರಾಂತಿ 2.0 ಯಶಸ್ವಿಯಾಗುತ್ತದೆ ಎಂದು ಅವರು ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದರು. ಬನಾಸ್ ಡೈರಿ ಸ್ಥಾಪಿಸಿದ ಸಂಪ್ರದಾಯವು ಬನಸ್ಕಾಂತಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ದೇಶಾದ್ಯಂತ ಲಕ್ಷಾಂತರ ಜಾನುವಾರು ಸಾಕಣೆದಾರರಿಗೆ ಸಮೃದ್ಧಿಯ ಮೂಲವಾಗಲಿದೆ ಎಂದು ಹೇಳಿದರು.
Matribhumi Samachar Kannad

