Tuesday, December 09 2025 | 03:12:15 AM
Breaking News

ಗುಜರಾತ್‌ ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ಉದ್ಘಾಟನೆ ಮತ್ತು ಶಂಕುಸ್ಥಾಪನೆ

Connect us on:

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗುಜರಾತ್‌ ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ವ್ಯಾಪ್ತಿಯಲ್ಲಿ ಸುಮಾರು 1,500 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ಅನೇಕ ಮಹತ್ತರ ಸಾಧನೆಗಳನ್ನು ಮಾಡಿದೆ ಎಂದು ಹೇಳಿದರು. ಪ್ರಮುಖವಾಗಿ ಬಲವಾದ ರಾಷ್ಟ್ರೀಯ ಭದ್ರತೆ, ಸದೃಢ ಆರ್ಥಿಕತೆ, ಬಡತನ ನಿರ್ಮೂಲನೆ, ಬಡವರಿಗೆ ಉತ್ತಮ ಸೌಲಭ್ಯಗಳು, ಹಳ್ಳಿ ಮತ್ತು ನಗರಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ, ಭಾರತವನ್ನು ಜಾಗತಿಕ ಉತ್ಪಾದನಾ ತಾಣವನ್ನಾಗಿ ರೂಪಿಸುವುದು, ಯುವಕರಿಗೆ ಹಲವಾರು ಉದ್ಯೋಗ ಮತ್ತು ವ್ಯವಹಾರದ ಯೋಜನೆಗಳು, ನೀರಾವರಿ ಕ್ಷೇತ್ರದ ವಿಸ್ತರಣೆ, ಆಹಾರ ಧಾನ್ಯ ಉತ್ಪಾದನೆಯನ್ನು ದ್ವಿಗುಣಗೊಳಿಸುವುದು, MSP ಅಡಿಯಲ್ಲಿ ಖರೀದಿಯನ್ನು ಮೂರು ಪಟ್ಟು ಹೆಚ್ಚಿಸುವುದು ಹಾಗೂ ವಿಶ್ವ ವೇದಿಕೆಯಲ್ಲಿ ಭಾರತದ ಸ್ಥಾನಮಾನವನ್ನು ಉನ್ನತೀಕರಿಸುವುದು ಸೇರಿದಂತೆ ಹಲವು ಸಾಧನೆಗಳನ್ನು ಅವರು ಪಟ್ಟಿಮಾಡಿದರು. ಇವೆಲ್ಲದರ ಪರಿಣಾಮವಾಗಿ ಇಂದು ನಮ್ಮ ನಾಗರಿಕತೆ, ಸಂಸ್ಕೃತಿ ಮತ್ತು ಸನಾತನ ಧರ್ಮಕ್ಕೆ ಪ್ರಪಂಚದಾದ್ಯಂತ ಮನ್ನಣೆ ಹಾಗೂ ಗೌರವ ಲಭಿಸುತ್ತಿದೆ. ಇದರ ಶ್ರೇಯಸ್ಸು ಮೋದಿಜೀ ಅವರ ನಾಯಕತ್ವಕ್ಕೆ ಸಲ್ಲುತ್ತದೆ ಎಂದು ಅವರು ತಿಳಿಸಿದರು.

2030ರಲ್ಲಿ ಅಹ್ಮದಾಬಾದ್ ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಅನ್ನು ಅತ್ಯಂತ ಯಶಸ್ವಿಗೊಳಿಸಲು ಸಂಕಲ್ಪ ಮಾಡುವಂತೆ ಕರೆ ನೀಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ದೇಶದಲ್ಲೇ ಮೊದಲ ಬಾರಿಗೆ ಗುಜರಾತ್‌ ನಲ್ಲಿ “ಖೇಲೋ ಗುಜರಾತ್” ಅಭಿಯಾನವನ್ನು ಪ್ರಾರಂಭಿಸಲಾಯಿತು ಎಂದು ಸ್ಮರಿಸಿದರು. ಯುವಜನತೆ ದುಶ್ಚಟಗಳು, ಆಲಸ್ಯ ಮತ್ತು ಕೆಟ್ಟ ಸಹವಾಸದಿಂದ ದೂರವಿದ್ದು, ಕ್ರೀಡೆಗಳಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಜೀವನದಲ್ಲಿ ಪ್ರಗತಿ ಸಾಧಿಸಬೇಕು ಎಂಬುದೇ “ಖೇಲೋ ಗುಜರಾತ್”ನ ಮುಖ್ಯ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದರು. “ಖೇಲೋ ಗುಜರಾತ್”ನೊಂದಿಗೆ ಆರಂಭವಾದ ಈ ಪಯಣ ಈಗ “ಖೇಲೋ ಇಂಡಿಯಾ” ಹಂತವನ್ನು ತಲುಪಿದ್ದು, ಇಂದು ದೇಶದ ಪ್ರತಿಯೊಂದು ರಾಜ್ಯದಲ್ಲೂ ಕ್ರೀಡೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅಹಮದಾಬಾದ್ ನಗರದಲ್ಲಿ ಹಲವಾರು ಆಧುನಿಕ ಕ್ರೀಡಾ ಸಂಕೀರ್ಣಗಳನ್ನು (Sports Complexes) ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಕ್ರೀಡೆಗಳು ಮತ್ತು ತರಬೇತಿಗೆ ಅಲ್ಲಿ ಅತ್ಯುತ್ತಮ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಅಹ್ಮದಾಬಾದ್ ನಲ್ಲಿ ಯಾರೇ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಬಯಸಿದರೂ, ಅವರ ಮನೆಯಿಂದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲೇ ಎಲ್ಲಾ ರೀತಿಯ ಸೌಲಭ್ಯಗಳು ಈಗ ಲಭ್ಯವಿವೆ ಎಂದು ಅವರು ತಿಳಿಸಿದರು.

ತಮ್ಮ ಸಂಸದೀಯ ಕ್ಷೇತ್ರದಲ್ಲಿ ಹಿಂದೆ ಸೇತುವೆಗಳು ಮತ್ತು ಮೇಲ್ಸೇತುವೆಗಳ ಕೆಳಗೆ ಕೇವಲ ಕಸ ಮತ್ತು ಕತ್ತಲೆ ತುಂಬಿರುತ್ತಿತ್ತು, ಆದರೆ ಈಗ ಆ ಜಾಗಗಳಲ್ಲಿ ಚಿಕ್ಕ ಮತ್ತು ಸುಂದರವಾದ ಕ್ರೀಡಾ ಸಂಕೀರ್ಣಗಳು, ಗ್ರಂಥಾಲಯಗಳು, ಯೋಗ ಕೇಂದ್ರಗಳು ಮತ್ತು ‘ಓಪನ್ ಜಿಮ್‌’ಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ತಿಳಿಸಿದರು. ಲಭ್ಯವಿರುವ ಜಾಗವನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬುದನ್ನು ಕಲಿಯಲು ದೇಶದಾದ್ಯಂತದ ಜನರು ಅಹ್ಮದಾಬಾದ್ಗೆ ಭೇಟಿ ನೀಡಬೇಕು ಎಂದು ಅವರು ಹೇಳಿದರು. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ‘ನರೇಂದ್ರ ಮೋದಿ ಸ್ಟೇಡಿಯಂ’ ಮೊಟೆರಾದಲ್ಲಿದೆ ಮತ್ತು ಅದರ ಪಕ್ಕದಲ್ಲೇ ಮತ್ತಷ್ಟು ಭವ್ಯವಾದ ‘ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್’ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ ಎಂದು ಶ್ರೀ ಶಾ ತಿಳಿಸಿದರು. 70ಕ್ಕೂ ಹೆಚ್ಚು ದೇಶಗಳಲ್ಲಿನ ಕ್ರೀಡಾ ಸೌಲಭ್ಯಗಳು, ಮೂಲಸೌಕರ್ಯಗಳು, ಕ್ರೀಡೆಯಲ್ಲಿ ಯುವಕರ ಪಾಲ್ಗೊಳ್ಳುವಿಕೆ ಮತ್ತು ವಸತಿ ವ್ಯವಸ್ಥೆಗಳನ್ನು ಪರಿಶೀಲಿಸಿ ಹೋಲಿಕೆ ಮಾಡಿದ ನಂತರವೇ, 2030ರ ಕಾಮನ್ವೆಲ್ತ್ ಗೇಮ್ಸ್ ಆಯೋಜಿಸಲು ಭಾರತವನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಮಾಹಿತಿ ನೀಡಿದರು.

2029ರಲ್ಲಿ ಅಹ್ಮದಾಬಾದ್ ನಲ್ಲಿ ‘ವರ್ಲ್ಡ್ ಪೊಲೀಸ್ ಮತ್ತು ಫೈರ್ ಗೇಮ್ಸ್’ (World Police & Fire Games) ನಡೆಯಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಗರದಲ್ಲಿ 13 ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು. ಅಹ್ಮದಾಬಾದ್ಗೆ 2036ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಹಕ್ಕು ಲಭಿಸುವ ಬಲವಾದ ಸಾಧ್ಯತೆಯಿದೆ ಎಂದೂ ಶ್ರೀ ಶಾ ಹೇಳಿದರು. ಅಹಮದಾಬಾದ್ ವಿಶ್ವ ಕ್ರೀಡಾ ಭೂಪಟದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾಮನ್ವೆಲ್ತ್ ಮತ್ತು ಒಲಿಂಪಿಕ್ಸ್ ನಂತರ, ಈ ಎಲ್ಲಾ ಕ್ರೀಡಾ ಸೌಲಭ್ಯಗಳು, ಕ್ರೀಡಾಂಗಣಗಳು, ಕೋಚಿಂಗ್ ಸೆಂಟರ್‌ಗಳು ಮತ್ತು ಹಾಸ್ಟೆಲ್‌ಗಳು ವ್ಯರ್ಥವಾಗುವುದಿಲ್ಲ; ಬದಲಾಗಿ, ಅಹಮದಾಬಾದ್ ಪ್ರತಿ ಕ್ರೀಡೆಗೂ ವಿಶ್ವದ ಅತ್ಯುತ್ತಮ ತರಬೇತಿ ತಾಣವಾಗಿ (Training Hub) ಹೊರಹೊಮ್ಮಲಿದೆ ಎಂದು ಶ್ರೀ ಶಾ ಹೇಳಿದರು. ಈ ಅಭಿವೃದ್ಧಿ ಸರಣಿಯ ಭಾಗವಾಗಿ, ಇಂದು ಅಹ್ಮದಾಬಾದ್ನ ಮೂರು ಸ್ಥಳಗಳಲ್ಲಿ ಹೊಸ ಕ್ರೀಡಾ ಸಂಕೀರ್ಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಒಟ್ಟು 1,500 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಅಡಿಯಲ್ಲಿ, 26 ಕೋಟಿ ರೂ. ಮೌಲ್ಯದ ಯೋಜನೆಗಳ ಲೋಕಾರ್ಪಣೆ, 30 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಚಾಲನೆ ಮತ್ತು ಎರಡು ವಸತಿ ಯೋಜನೆಗಳ ಹಂಚಿಕೆ ಡ್ರಾವನ್ನು ನಡೆಸಲಾಯಿತು. ಹೀಗೆ ಒಂದೇ ವೇದಿಕೆಯಿಂದ ಒಟ್ಟು 58 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ಅಭಿವೃದ್ಧಿಯ ಯಾವುದೇ ಕ್ಷೇತ್ರವನ್ನೂ ಸ್ಪರ್ಶಿಸದೆ ಬಿಟ್ಟಿಲ್ಲ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರಂಭಿಸಿದ ಈ ಅಭಿವೃದ್ಧಿ ಪಯಣವನ್ನು ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಪೂರ್ಣ ವೇಗ ಮತ್ತು ಬದ್ಧತೆಯಿಂದ ಮುನ್ನಡೆಸುತ್ತಿದ್ದಾರೆ ಎಂದು ಶ್ರೀ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಗುಜರಾತ್‌ ನಲ್ಲಿ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಪಾರ್ಕ್ (Renewable Energy Park) ನಿರ್ಮಾಣವಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಧೋಲೇರಾದಲ್ಲಿ ಏಷ್ಯಾದ ಅತಿದೊಡ್ಡ ‘ಗ್ರೀನ್‌ಫೀಲ್ಡ್ ಸಿಟಿ’ ಅಭಿವೃದ್ಧಿಗೊಳ್ಳುತ್ತಿದೆ. ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ ವೇ ಆದ ‘ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ ವೇ’ ಗುಜರಾತ್‌ ನಿಂದಲೇ ಪ್ರಾರಂಭವಾಗುತ್ತದೆ. ಭಾರತದ ಮೊದಲ ಅಂತಾರಾಷ್ಟ್ರೀಯ ಹಣಕಾಸು ಕೇಂದ್ರವಾದ ‘ಗಿಫ್ಟ್ ಸಿಟಿ’ ನಮ್ಮ ಗುಜರಾತ್‌ ನಲ್ಲಿದೆ ಎಂದು ಅವರು ಹೆಮ್ಮೆಯಿಂದ ನುಡಿದರು. ದೇಶದ ಮೊದಲ ಬುಲೆಟ್ ರೈಲು ಯೋಜನೆಯಾದ ‘ಅಹಮದಾಬಾದ್-ಮುಂಬೈ’ ಮಾರ್ಗವು ಗುಜರಾತ್‌ ನಿಂದ ಪ್ರಾರಂಭವಾಗಲಿದೆ. ‘ಭುಜ್ ನಿಂದ ಅಹಮದಾಬಾದ್’ ವರೆಗಿನ ಮೊದಲ ನಮೋ ರ್ಯಾಪಿಡ್ ರೈಲು ಸೇವೆಯು ಸಹ ಗುಜರಾತ್‌ ನಲ್ಲಿಯೇ ಕಾರ್ಯಾಚರಿಸಲಿದೆ. ಗುಜರಾತ್ ದಿನದಿಂದ ದಿನಕ್ಕೆ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದರು. ಕೇಂದ್ರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದೊಂದಿಗೆ, ಗುಜರಾತ್‌ನಲ್ಲಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಶ್ರೀ ಹರ್ಷ ಸಂಘವಿ ಅವರ ಕಾರ್ಯವೈಖರಿಯು ರಾಜ್ಯವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಎಂದು ಶ್ರೀ ಶಾ ತಿಳಿಸಿದರು.

2024ರ ಲೋಕಸಭಾ ಚುನಾವಣೆಯಿಂದ ಇಂದಿನವರೆಗೆ ನಮ್ಮ ಪಕ್ಷಕ್ಕೆ ಸತತ ವಿಜಯಗಳ ಪರ್ವವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ನಮ್ಮ ನಾಯಕ ಶ್ರೀ ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿಯಾದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ, ಅನೇಕ ದಶಕಗಳ ನಂತರ, ಯಾರಾದರೂ ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಮಂತ್ರಿಯಾಗುವ ದಾಖಲೆ ಬರೆದಿದ್ದರೆ, ಅದು ನಮ್ಮ ನೆಚ್ಚಿನ ನಾಯಕ ಶ್ರೀ ನರೇಂದ್ರ ಮೋದಿ ಅವರೇ ಎಂದು ಅವರು ಬಣ್ಣಿಸಿದರು.ಮಹಾರಾಷ್ಟ್ರ, ಹರಿಯಾಣ, ದೆಹಲಿ ಮತ್ತು ಬಿಹಾರದಲ್ಲೂ ವಿರೋಧ ಪಕ್ಷಗಳು ಸಂಪೂರ್ಣವಾಗಿ ಧೂಳಿಪಟವಾಗಿವೆ ಎಂದು ಅವರು ಹೇಳಿದರು. ಬಿಹಾರದಲ್ಲಿ ನಮ್ಮ ಪಕ್ಷ ಮತ್ತು ನಮ್ಮ ಮೈತ್ರಿಕೂಟವು ಮೂರನೇ ಎರಡರಷ್ಟು ಬಹುಮತದೊಂದಿಗೆ ಸರ್ಕಾರವನ್ನು ರಚಿಸಿದೆ. ಜನಪರ ಕಲ್ಯಾಣ ಕಾರ್ಯಗಳಿಂದಾಗಿ ರಾಜ್ಯಗಳಲ್ಲಿ NDA ಸರ್ಕಾರಗಳು ರಚನೆಯಾಗುತ್ತಿವೆ. ಆದರೆ ವಿರೋಧ ಪಕ್ಷಗಳು ಜನರ ಸಮಸ್ಯೆಗಳಿಂದ ವಿಮುಖರಾಗಿ, ಇವಿಎಂ (EVM) ಮತ್ತು ಮತದಾರರ ಪಟ್ಟಿಯನ್ನು ದೂಷಿಸುವುದರಲ್ಲಿ ನಿರತರಾಗಿವೆ ಎಂದು ಅವರು ಟೀಕಿಸಿದರು. ವಿಎಂ ದೋಷಪೂರಿತವಾಗಿಲ್ಲ ಅಥವಾ ಮತದಾರರ ಪಟ್ಟಿಯೂ ದೋಷಪೂರಿತವಾಗಿಲ್ಲ ಎಂದು ಶ್ರೀ ಶಾ ಸ್ಪಷ್ಟಪಡಿಸಿದರು. ಸತ್ಯವೇನೆಂದರೆ, ದೇಶದ ಜನರು ವಿರೋಧ ಪಕ್ಷವನ್ನು ಮತ್ತು ಅವರ ಮೈತ್ರಿಕೂಟದ ಪಾಲುದಾರರನ್ನು ಒಪ್ಪಿಕೊಳ್ಳುತ್ತಿಲ್ಲ. ಇದೇ ಅವರ ಸತತ ಸೋಲಿಗೆ ನಿಜವಾದ ಕಾರಣ ಎಂದು ಅವರು ತಿಳಿಸಿದರು.

ಬಿಹಾರದ ನಂತರ, ಈಗ ಬಂಗಾಳ ಮತ್ತು ತಮಿಳುನಾಡಿನಲ್ಲೂ ನಮ್ಮ ಪಕ್ಷ ಮತ್ತು ನಮ್ಮ ಮೈತ್ರಿಕೂಟಕ್ಕೆ ಜಯಗಳಿಸುವ ಕಾಲ ಕೂಡಿಬರುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮೋದಿಜೀ ಅವರ ನಾಯಕತ್ವದಲ್ಲಿ ಇಡೀ ದೇಶದಾದ್ಯಂತ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ಪ್ರತಿಯೊಂದು ಕ್ಷೇತ್ರವೂ ಪ್ರಗತಿ ಸಾಧಿಸುತ್ತಿದೆ ಮತ್ತು ಭಾರತವನ್ನು ಜಾಗತಿಕ ಮಹಾಶಕ್ತಿಯನ್ನಾಗಿ ರೂಪಿಸುವ ಸಂಕಲ್ಪವನ್ನು ದೇಶದ ಜನರು ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು. ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ನಾಯಕನೂ ಇಲ್ಲ ಮತ್ತು ಸ್ಪಷ್ಟ ನೀತಿಯೂ ಇಲ್ಲ — ಇದು ಕೇವಲ ಅಹಂಕಾರ ಮತ್ತು ದರ್ಪದಿಂದ ತುಂಬಿರುವ ಮೈತ್ರಿಕೂಟವಾಗಿದೆ ಎಂದು ಶ್ರೀ ಶಾ ಟೀಕಿಸಿದರು. ದೇಶದ ಯಾವುದೇ ಮೂಲೆಯಲ್ಲಿಯೂ ಈ ಮೈತ್ರಿಕೂಟಕ್ಕೆ ಜನಮನ್ನಣೆ ಸಿಗುತ್ತಿಲ್ಲ. ಚುನಾವಣೆ ಫಲಿತಾಂಶಗಳು ಬಂದ ನಂತರ, ಬಂಗಾಳ ಮತ್ತು ತಮಿಳುನಾಡಿನಲ್ಲಿಯೂ ವಿರೋಧ ಪಕ್ಷಗಳ ಅಸ್ತಿತ್ವ ಮುಗಿದುಹೋಗಲಿದೆ ಎಂದು ಅವರು ಭವಿಷ್ಯ ನುಡಿದರು.

ಪ್ರಧಾನಮಂತ್ರಿ ಮೋದಿ ಅವರು 2019ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಿದರು, 2024ರಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದರು ಮತ್ತು 2025ರಲ್ಲಿ ಭಗವಾ ಧ್ವಜವನ್ನು ಹಾರಿಸುವ ಮೂಲಕ ‘ಜೈ ಶ್ರೀರಾಮ್’ ಘೋಷಣೆಯೊಂದಿಗೆ ಮಂದಿರದ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿದರು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಸ್ಮರಿಸಿದರು. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಅದೇ ರೀತಿ, ತಾಯಿ ಸೀತೆ ಜನಿಸಿದ ಪುಣ್ಯಭೂಮಿಯಲ್ಲಿ ಸೀತಾ ಮಾತೆ ಮಂದಿರ ನಿರ್ಮಿಸಲು ನಾಲ್ಕು ತಿಂಗಳ ಹಿಂದಷ್ಟೇ ಶ್ರೀ ನಿತೀಶ್ ಕುಮಾರ್ ಮತ್ತು ನಾನು ಶಂಕುಸ್ಥಾಪನೆ ನೆರವೇರಿಸಿದ್ದೇವೆ ಎಂದು ಅವರು ಹೇಳಿದರು. 2026ರ ವೇಳೆಗೆ ಅಲ್ಲೂ ಕೂಡ ಭಗವಾ ಧ್ವಜ ರಾರಾಜಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ‘ಸಶಸ್ತ್ರ ಪಡೆಗಳ ಧ್ವಜ ದಿನ’ (Armed Forces Flag Day) ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ದೇಶದ ಭೂ, ಜಲ ಮತ್ತು ವಾಯು ಗಡಿಗಳನ್ನು ಹಗಲಿರುಳು ರಕ್ಷಿಸುತ್ತಿರುವ ನಮ್ಮ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಧೈರ್ಯಶಾಲಿ ಯೋಧರನ್ನು ಗೌರವಿಸಲು ಈ ದಿನ ಮೀಸಲಾಗಿದೆ. ನಿವೃತ್ತಿಯ ನಂತರ ಯೋಧರ ಕಲ್ಯಾಣಕ್ಕಾಗಿ ಕೊಡುಗೆ ನೀಡುವ ದಿನವೂ ಇದಾಗಿದೆ. ಈ ಪವಿತ್ರ ಸಂದರ್ಭದಲ್ಲಿ, ಸ್ವಾತಂತ್ರ್ಯ ನಂತರದಿಂದ ಇಂದಿನವರೆಗೆ ಭಾರತ ಮಾತೆಯನ್ನು ರಕ್ಷಿಸುವಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿ ಸರ್ವೋಚ್ಚ ಬಲಿದಾನ ನೀಡಿದ ಎಲ್ಲ ಯೋಧರಿಗೆ ತಾನು ಮನಃಪೂರ್ವಕವಾಗಿ ನಮಸ್ಕರಿಸುವುದಾಗಿ ಮತ್ತು ಭಾವಪೂರ್ಣ ಗೌರವ ಸಲ್ಲಿಸುವುದಾಗಿ ಅವರು ತಿಳಿಸಿದರು.

ಗಾಂಧಿನಗರ ಲೋಕಸಭಾ ಕ್ಷೇತ್ರವನ್ನು ಇಡೀ ದೇಶದಲ್ಲೇ ಅತ್ಯಂತ ಅಭಿವೃದ್ಧಿ ಹೊಂದಿದ ಪ್ರದೇಶವನ್ನಾಗಿ ಮಾಡಲು ನಾವು ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗಾಂಧಿನಗರ ಲೋಕಸಭಾ ಕ್ಷೇತ್ರದ ಜನರು ಒಂದು ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು; ಅದೇನೆಂದರೆ, ಮುಂಬರುವ ಮಳೆಗಾಲದಲ್ಲಿ ಪ್ರತಿಯೊಂದು ವಸತಿ ಸಮುಚ್ಚಯ ಕನಿಷ್ಠ 5 ರಿಂದ 50 ಸಸಿಗಳನ್ನು ನೆಡಬೇಕು. ಈ ಮೂಲಕ ‘ಹಸಿರು ಗಾಂಧಿನಗರ ಲೋಕಸಭಾ ಕ್ಷೇತ್ರ’ದ ಅಭಿಯಾನಕ್ಕೆ ಚಾಲನೆ ನೀಡಬಹುದು ಎಂದು ಅವರು ಕರೆ ನೀಡಿದರು. ಮುಂದಿನ ಪೀಳಿಗೆಗೆ ಮರ ನೆಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಶ್ರೀ ಶಾ ಹೇಳಿದರು. ಶುದ್ಧ ಗಾಳಿ, ಸಹನೀಯ ತಾಪಮಾನ, ಪಕ್ಷಿಗಳ ಚಿಲಿಪಿಲಿ ಮತ್ತು ಒತ್ತಡ ಮುಕ್ತ ಪರಿಸರವನ್ನು ಖಚಿತಪಡಿಸಿಕೊಳ್ಳಲು ಮರಗಳನ್ನು ನೆಡುವುದು ಏಕೈಕ ಮಾರ್ಗವಾಗಿದೆ. ಕಳೆದ ಐದು ವರ್ಷಗಳಲ್ಲಿ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಹಸಿರು ಹೊದಿಕೆ ಶೇಕಡಾ 13.6 ರಷ್ಟು ಹೆಚ್ಚಾಗಿದೆ, ಆದರೆ ನಾವು ಇಷ್ಟಕ್ಕೇ ತೃಪ್ತರಾಗಬಾರದು. ಪ್ರತಿಯೊಂದು ವಸತಿ ಸಮುಚ್ಚಯ 5 ರಿಂದ 50 ಮರಗಳನ್ನು ನೆಡುವುದನ್ನು ಮತ್ತು ಅವುಗಳಿಗೆ ನೀರುಣಿಸುವ ಜವಾಬ್ದಾರಿಯನ್ನು ಯುವಕರಿಗೆ ವಹಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

About Matribhumi Samachar

Check Also

ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಯು ಪ್ರಸ್ತುತ ಪ್ರಶಾದ್ ಯೋಜನೆಯಡಿ ಪರಿಗಣನೆಯಲ್ಲಿಲ್ಲ

ಕರ್ನಾಟಕದ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಯು ಪ್ರಸ್ತುತ ಪ್ರಶಾದ್ ಯೋಜನೆಯಡಿ ಅನುಮೋದನೆಗಾಗಿ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ …