Monday, December 08 2025 | 02:55:33 PM
Breaking News

ವಿಮಾನಯಾನ ಕಾರ್ಯಾಚರಣೆಗಳ ತ್ವರಿತ ಪುನಃಸ್ಥಾಪನೆ ಮತ್ತು ಪ್ರಯಾಣಿಕರ ಸೌಲಭ್ಯಕ್ಕಾಗಿ ಕೈಗೊಂಡ ಕ್ರಮಗಳು

Connect us on:

ಪ್ರಸ್ತುತ ವಿಮಾನ ಕಾರ್ಯಾಚರಣೆಯ ಸ್ಥಿತಿಗತಿ

ಇತ್ತೀಚಿನ ‘ಇಂಡಿಗೋ’ (IndiGo) ಕಾರ್ಯಾಚರಣೆಯ ಬಿಕ್ಕಟ್ಟಿನಿಂದ ಉಂಟಾದ ವ್ಯತ್ಯಯವನ್ನು ಸರಿಪಡಿಸಲು ಮತ್ತು ಪ್ರಯಾಣಿಕರಿಗೆ ನಿರಂತರ ಅನಾನುಕೂಲವಾಗದಂತೆ ನೋಡಿಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯವು (MoCA) ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ ವಿಮಾನಯಾನ ಕಾರ್ಯಾಚರಣೆಗಳು ವೇಗವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ. ಇತರ ಎಲ್ಲಾ ದೇಶೀಯ ವಿಮಾನಯಾನ ಸಂಸ್ಥೆಗಳು ಸುಗಮವಾಗಿ ಮತ್ತು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅದೇ ಸಮಯದಲ್ಲಿ, ಇಂಡಿಗೋ ವಿಮಾನಗಳ ಕಾರ್ಯಾಚರಣೆಯು ಇಂದು ಸ್ಥಿರವಾದ ಸುಧಾರಣೆ ಕಂಡಿದ್ದು, ವಿಮಾನಗಳ ವೇಳಾಪಟ್ಟಿಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಇಂಡಿಗೋ ವಿಮಾನ ಕಾರ್ಯಾಚರಣೆಗಳ ಸಂಖ್ಯೆ ದಿನಾಂಕ 05.12.25 ರಂದು 706 ಇದ್ದದ್ದು, 06.12.25 ರಂದು 1,565 ಕ್ಕೆ ಏರಿಕೆಯಾಗಿದೆ. ಇಂದಿನ (ಭಾನುವಾರ) ಅಂತ್ಯದ ವೇಳೆಗೆ ಇದು 1,650 ರಷ್ಟನ್ನು ತಲುಪುವ ಸಾಧ್ಯತೆಯಿದೆ.

ಹೆಚ್ಚಿನ ದರ ವಿಧಿಸುವುದನ್ನು ತಡೆಯಲು ವಿಮಾನ ದರ ನಿಯಂತ್ರಣ

ಇತ್ತೀಚಿನ ವಿಮಾನ ರದ್ದತಿಗಳಿಂದಾಗಿ ಬೇಡಿಕೆ ಹೆಚ್ಚಾಗಿ, ವಿಮಾನ ದರಗಳಲ್ಲಿ ತಾತ್ಕಾಲಿಕ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸಚಿವಾಲಯವು ಮಧ್ಯಪ್ರವೇಶಿಸಿದೆ. ಅಲ್ಲದೆ, ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಮಾನ ದರಗಳ ಮೇಲೆ ಮಿತಿಯನ್ನು (Cap) ವಿಧಿಸಿದೆ. ಈ ಕ್ರಮವು ಪ್ರಯಾಣಿಕರಿಗೆ ನ್ಯಾಯಯುತ ಮತ್ತು ಕೈಗೆಟುಕುವ ದರವನ್ನು ಖಚಿತಪಡಿಸುತ್ತದೆ. ಈ ಆದೇಶದ ಅನುಷ್ಠಾನದ ನಂತರ, ಬಾಧಿತ ಮಾರ್ಗಗಳಲ್ಲಿನ ದರಗಳು ಸ್ವೀಕಾರಾರ್ಹ ಮಿತಿಗೆ ಇಳಿದಿವೆ. ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಪರಿಷ್ಕೃತ ದರ ಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಪ್ರಯಾಣಿಕರಿಗೆ ಹಣ ಮರುಪಾವತಿ ಮತ್ತು ಮರು ವೇಳಾಪಟ್ಟಿ ಬೆಂಬಲ

ಪ್ರಯಾಣಿಕರ ಆರ್ಥಿಕ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಸಚಿವಾಲಯವು ಇಂಡಿಗೋ ಸಂಸ್ಥೆಗೆ ಕಠಿಣ ನಿರ್ದೇಶನಗಳನ್ನು ನೀಡಿದೆ. ರದ್ದುಗೊಂಡ ಅಥವಾ ತೀವ್ರ ವಿಳಂಬವಾದ ವಿಮಾನಗಳ ಎಲ್ಲಾ ಹಣ ಮರುಪಾವತಿಯನ್ನು  ಇಂದು ರಾತ್ರಿ 8:00 ಗಂಟೆಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಇಂಡಿಗೋ ಇದುವರೆಗೆ ಒಟ್ಟು ₹610 ಕೋಟಿ ಮರುಪಾವತಿಯನ್ನು ಪ್ರಕ್ರಿಯೆಗೊಳಿಸಿದೆ. ರದ್ದತಿಯಿಂದಾಗಿ ಪ್ರಯಾಣದ ದಿನಾಂಕವನ್ನು ಬದಲಾಯಿಸಲು ಅಥವಾ ಮರುನಿಗದಿಪಡಿಸಲು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಅನುಮತಿ ಇಲ್ಲ. ಹಣ ಮರುಪಾವತಿ ಮತ್ತು ರಿ-ಬುಕ್ಕಿಂಗ್ ಸಮಸ್ಯೆಗಳನ್ನು ಯಾವುದೇ ವಿಳಂಬ ಅಥವಾ ಅನಾನುಕೂಲವಿಲ್ಲದೆ ಪರಿಹರಿಸಲು ಪ್ರಯಾಣಿಕರಿಗೆ ನೆರವಾಗುವಂತೆ ಪ್ರತ್ಯೇಕ ಬೆಂಬಲ ಘಟಕಗಳನ್ನು  ರಚಿಸಲಾಗಿದೆ.

ಲಗೇಜ್‌ ಪತ್ತೆ ಮತ್ತು ವಿಲೇವಾರಿ

ವಿಮಾನಯಾನ ವ್ಯತ್ಯಯದಿಂದಾಗಿ ಪ್ರಯಾಣಿಕರಿಂದ ಬೇರ್ಪಟ್ಟ ಎಲ್ಲಾ ಲಗೇಜ್ ಗಳನ್ನು  ಪತ್ತೆಹಚ್ಚಿ, 48 ಗಂಟೆಗಳ ಒಳಗೆ ತಲುಪಿಸುವಂತೆ ಸಚಿವಾಲಯವು ಇಂಡಿಗೋಗೆ ಸೂಚನೆ ನೀಡಿದೆ. ಈ ಪ್ರಕ್ರಿಯೆಯುದ್ದಕ್ಕೂ ಪ್ರಯಾಣಿಕರೊಂದಿಗೆ ನಿರಂತರ ಸಂಪರ್ಕದಲ್ಲಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕ್ರಮದ ಫಲವಾಗಿ, ನಿನ್ನೆಯವರೆಗೆ ಇಂಡಿಗೋ ಸಂಸ್ಥೆಯು ಭಾರತದಾದ್ಯಂತ ಪ್ರಯಾಣಿಕರಿಗೆ 3,000 ಲಗೇಜ್‌ ಗಳನ್ನು ಯಶಸ್ವಿಯಾಗಿ ತಲುಪಿಸಿದೆ.

ವಿಮಾನ ನಿಲ್ದಾಣ ಕಾರ್ಯಾಚರಣೆಗಳು ಮತ್ತು ಸ್ಥಳದಲ್ಲಿ ಸೌಲಭ್ಯ

ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಗೋವಾ ವಿಮಾನ ನಿಲ್ದಾಣಗಳ ನಿರ್ದೇಶಕರು ಇಂದು ಎಲ್ಲಾ ಟರ್ಮಿನಲ್‌ ಗಳಲ್ಲಿ ಪರಿಸ್ಥಿತಿ ಸಹಜವಾಗಿದೆ ಎಂದು ಖಚಿತಪಡಿಸಿದ್ದಾರೆ. ಪ್ರಯಾಣಿಕರ ಸಂಚಾರ ಸುಗಮವಾಗಿದ್ದು, ಚೆಕ್-ಇನ್, ಭದ್ರತಾ ತಪಾಸಣೆ ಅಥವಾ ಬೋರ್ಡಿಂಗ್ ಪಾಯಿಂಟ್‌ ಗಳಲ್ಲಿ ಯಾವುದೇ ಜನದಟ್ಟಣೆ  ಕಂಡುಬಂದಿಲ್ಲ. ವಿಮಾನ ನಿಲ್ದಾಣ ನಿರ್ವಾಹಕರು ಮತ್ತು CISF ಸಿಬ್ಬಂದಿಯ ಮೂಲಕ ಕಣ್ಗಾವಲು ಹೆಚ್ಚಿಸಿ, ಸಕಾಲದಲ್ಲಿ ನೆರವು ಒದಗಿಸುವ ಮೂಲಕ ಸ್ಥಳದಲ್ಲೇ ಬೆಂಬಲವನ್ನು ಬಲಪಡಿಸಲಾಗಿದೆ.

ರಿಯಲ್‌ ಟೈಮ್‌ ಮೇಲ್ವಿಚಾರಣೆ ಮತ್ತು ನಿಯಂತ್ರಣ ಕ್ರಮಗಳು

ನಾಗರಿಕ ವಿಮಾನಯಾನ ಸಚಿವಾಲಯದ 24×7 ನಿಯಂತ್ರಣ ಕೊಠಡಿಯು (Control Room) ಒಂದು ‘ಸಮಗ್ರ ಸಮನ್ವಯ ಕೇಂದ್ರವಾಗಿ’ (Integrated coordination hub) ಕಾರ್ಯನಿರ್ವಹಿಸುತ್ತಿದೆ. ಇದು ವಿಮಾನಗಳ ಕಾರ್ಯಾಚರಣೆ, ವಿಮಾನ ನಿಲ್ದಾಣಗಳ ಸ್ಥಿತಿಗತಿ ಮತ್ತು ಪ್ರಯಾಣಿಕರ ಅಗತ್ಯಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ಪ್ರಯಾಣಿಕರ ಕರೆಗಳಿಗೆ ತಕ್ಷಣವೇ ಸ್ಪಂದಿಸಲಾಗುತ್ತಿದ್ದು, ಅವರಿಗೆ ಅಗತ್ಯವಿರುವ ನೆರವನ್ನು ಒದಗಿಸಲಾಗುತ್ತಿದೆ. ಕಾರ್ಯಾಚರಣೆಯ ಯೋಜನೆ, ಸಿಬ್ಬಂದಿಯ ರೋಸ್ಟರಿಂಗ್ (Crew rostering) ಮತ್ತು ಪ್ರಯಾಣಿಕರ ನಿರ್ವಹಣಾ ಮಾನದಂಡಗಳ ಕಟ್ಟುನಿಟ್ಟಿನ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡಗಳನ್ನು ಸ್ಥಳದಲ್ಲೇ ನಿಯೋಜಿಸಲಾಗಿದೆ.

ಪ್ರಯಾಣಿಕರಿಗೆ ಭರವಸೆ

ಪ್ರಯಾಣಿಕರ ಸುರಕ್ಷತೆ, ಅನುಕೂಲ ಮತ್ತು ಗೌರವವು ಭಾರತ ಸರ್ಕಾರದ ‘ಅತ್ಯುನ್ನತ ಆದ್ಯತೆ’ಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಪ್ರಯಾಣಿಕರಿಗೆ ಭರವಸೆ ನೀಡುತ್ತದೆ. ದೇಶದ ವಿಮಾನಯಾನ ಜಾಲವು ವೇಗವಾಗಿ ಸಂಪೂರ್ಣ ಸಹಜ ಸ್ಥಿತಿಯತ್ತ ಮರಳುತ್ತಿದೆ. ಕಾರ್ಯಾಚರಣೆಗಳು ಪೂರ್ಣವಾಗಿ ಸ್ಥಿರಗೊಳ್ಳುವವರೆಗೆ ಎಲ್ಲಾ ಪರಿಹಾರ ಕ್ರಮಗಳು ಜಾರಿಯಲ್ಲಿರುತ್ತವೆ. ಪ್ರಯಾಣಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ನಿರಂತರ ನಿಗಾ ವಹಿಸಲಿದೆ ಮತ್ತು ಅಗತ್ಯವಿದ್ದಲ್ಲಿ ಮುಂದಿನ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು.

About Matribhumi Samachar

Check Also

ಭಾರತದ ಭವಿಷ್ಯದ ಪೀಳಿಗೆಯ ನವೋದ್ಯಮಗಳನ್ನು ರೂಪಿಸುವಲ್ಲಿ ಹಣಕಾಸು ನೆರವಿನ ಜೊತೆಗೆ ಮಾರ್ಗದರ್ಶನ ಕೂಡ ಪ್ರಧಾನ: ಡಾ.ಜಿತೇಂದ್ರ ಸಿಂಗ್

ಸ್ಟಾರ್ಟ್‌ ಅಪ್‌ ಗಳು ಭಾರತದ ಭವಿಷ್ಯದ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿ  ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ …