Monday, December 08 2025 | 11:58:33 PM
Breaking News

ಐಐಎಸ್‌ಎಫ್ 2025ರಲ್ಲಿ, ಪ್ರಧಾನಮಂತ್ರಿ ಅವರ ಕೃತಕ ಬುದ್ಧಿಮತ್ತೆ (AI) ಚಾಲಿತ ‘ವಿಕಸಿತ ಭಾರತ’ದ ದೂರದೃಷ್ಟಿಗೆ ಉದ್ಯಮ ನಾಯಕರಿಂದ ಪ್ರಶಂಸೆ

Connect us on:

ಡಿಸೆಂಬರ್ 6ರಂದು ಆರಂಭಗೊಂಡ 2025ರ ‘ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಹಬ್ಬ’ವು (IISF), ಈ ವರ್ಷದ ಅತ್ಯಂತ ಪ್ರಭಾವಶಾಲಿ ವಿಜ್ಞಾನ ಕಾರ್ಯಕ್ರಮಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದು ಯುವ ಮನಸ್ಸುಗಳಿಗೆ ಸ್ಫೂರ್ತಿ ತುಂಬುವ ಜೊತೆಗೆ, ‘ವಿಕಸಿತ ಭಾರತ @2047’ರ ಕನಸನ್ನು ನನಸಾಗಿಸುವ ಭಾರತದ ಪ್ರಯತ್ನಗಳಿಗೆ ಬಲ ತುಂಬುತ್ತಿದೆ. ಕಾರ್ಯಕ್ರಮದ ಮೂರನೇ ದಿನದಂದು, “AI ಮತ್ತು AGI: ಬೌದ್ಧಿಕತೆಯ ಭವಿಷ್ಯ” (AI & AGI: The Future of Intelligence) ಎಂಬ ವಿಷಯದ ಕುರಿತು ಉನ್ನತ ಮಟ್ಟದ ಸಂವಾದ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಕೃತಕ ಬುದ್ಧಿಮತ್ತೆಯಿಂದ (AI) ಕೃತಕ ಸಾಮಾನ್ಯ ಬುದ್ಧಿಮತ್ತೆಯೆಡೆಗಿನ (AGI) ಪರಿವರ್ತನೆಯು ವಿಜ್ಞಾನ, ಆವಿಷ್ಕಾರ ಮತ್ತು ಮಾನವಕುಲದ ಭವಿಷ್ಯವನ್ನು ಹೇಗೆ ರೂಪಿಸಲಿದೆ ಎಂಬುದನ್ನು ಚರ್ಚಿಸಲು ಶಿಕ್ಷಣ, ಉದ್ಯಮ ಮತ್ತು ಸಂಶೋಧನಾ ಕ್ಷೇತ್ರಗಳ ದಿಗ್ಗಜರು ಒಂದೇ ವೇದಿಕೆಯಲ್ಲಿ ಸೇರಿದ್ದರು.

ಈ ಗೋಷ್ಠಿಯಲ್ಲಿ ಐಐಟಿ ರೋಪರ್ನ ನಿರ್ದೇಶಕರಾದ ಪ್ರೊ. ರಾಜೀವ್ ಅಹುಜಾ, ಇಂಟೆಲ್ ನ ನಿರ್ದೇಶಕ (ಡೇಟಾ ಸೆಂಟರ್ ಕಸ್ಟಮರ್ ಇಂಜಿನಿಯರಿಂಗ್) ಗೋಪಾಲ್ ಕೃಷ್ಣ ಭಟ್, NVIDIA ಎಚ್ ಪಿ ಸಿ ಮತ್ತು AI ವಿಭಾಗದ ಸ್ಟ್ರಾಟೆಜಿಕ್ ಬಿಸಿನೆಸ್ ಮುಖ್ಯಸ್ಥ ವಿವೇಕ್ ಕುಮಾರ್ ರಾಯ್ ಮತ್ತು ಸರ್ವಮ್ AI ಯ (Sarvam AI) ಸಹ-ಸ್ಥಾಪಕ ಪ್ರತ್ಯುಸ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

ಪ್ರಧಾನಮಂತ್ರಿ ಅವರ ವಿಕಸಿತ ಭಾರತದ ಕನಸಿಗೆ ಪೂರಕವಾದ AI ಮಿಷನ್

ಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಐಐಟಿ ರೋಪರ್ ನ ನಿರ್ದೇಶಕರಾದ ಪ್ರೊ. ರಾಜೀವ್ ಅಹುಜಾ, ಯುವ ಪ್ರತಿಭೆಗಳು ಮತ್ತು ದೇಶದ ಸಮೃದ್ಧ ದತ್ತಾಂಶದ (data-rich ecosystem) ಬಲದೊಂದಿಗೆ, 2035ರ ವೇಳೆಗೆ ಭಾರತವು ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ನಾಯಕನಾಗಲು ಸಜ್ಜಾಗುತ್ತಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಅವರು ಘೋಷಿಸಿದ ‘ಇಂಡಿಯಾAI ಮಿಷನ್’ (IndiaAI Mission) ಬಗ್ಗೆ ಪ್ರಸ್ತಾಪಿಸಿದ ಅವರು, ಒಂದು ಕೋಟಿ ಯುವಕರಿಗೆ AI ತರಬೇತಿ ನೀಡುವುದು, ರಾಷ್ಟ್ರೀಯ ಕಂಪ್ಯೂಟ್ ಮೂಲಸೌಕರ್ಯವನ್ನು (national compute infrastructure) ನಿರ್ಮಿಸುವುದು, ದೇಶೀಯ AI ಮಾದರಿಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಜವಾಬ್ದಾರಿಯುತ ಮತ್ತು ನೈತಿಕ ಎಐ ಬಳಕೆಯನ್ನು ಉತ್ತೇಜಿಸುವುದು ಈ ಯೋಜನೆಯ ವಿನ್ಯಾಸ ಮತ್ತು ಉದ್ದೇಶವಾಗಿದೆ ಎಂದು ತಿಳಿಸಿದರು.

ಡಿಜಿಟಲ್ ಹೆಲ್ತ್ , ಸ್ಮಾರ್ಟ್ ಸಿಟಿಗಳು ಮತ್ತು ಅಗ್ರಿಟೆಕ್ ನಂತಹ (ಕೃಷಿ ತಂತ್ರಜ್ಞಾನ) ಆದ್ಯತಾ ವಲಯಗಳಲ್ಲಿ AI ಪರಿಹಾರಗಳನ್ನು ಅಳವಡಿಸಲು ಶಿಕ್ಷಣ ಸಚಿವಾಲಯವು ಉಪಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ, ಕೃಷಿ ವಲಯದ ಮೇಲೆ ಕೇಂದ್ರೀಕೃತವಾಗಿರುವ ಭಾರತದ ಮೂರು ರಾಷ್ಟ್ರೀಯ ‘ವಲಯವಾರು AI ಉತ್ಕೃಷ್ಟತಾ ಕೇಂದ್ರ’ಗಳಲ್ಲಿ (Sectoral AI Centres of Excellence) ಒಂದನ್ನು ಐಐಟಿ ರೋಪರ್ ಹೊಂದಿದೆ ಎಂದು ಅವರು ತಿಳಿಸಿದರು.

ಭಾರತದಲ್ಲಿರುವ ಮಾನವ ಸಂಪನ್ಮೂಲ, ದತ್ತಾಂಶ ಮತ್ತು ವೈಜ್ಞಾನಿಕ ಕುತೂಹಲದ ಶಕ್ತಿಯು, ದೇಶವನ್ನು ‘ಸೆಮಿಕಂಡಕ್ಟರ್ ತಯಾರಿಕೆ’ಯ ಜಾಗತಿಕ ತಾಣವನ್ನಾಗಿ ರೂಪಿಸಲು ನೆರವಾಗಲಿದೆ. ಇದು ಪ್ರಧಾನಮಂತ್ರಿ ಅವರ ತಾಂತ್ರಿಕ ಸ್ವಾವಲಂಬನೆ ಮತ್ತು ‘ವಿಕಸಿತ ಭಾರತ’ದ ಕನಸಿನ ಅತ್ಯಗತ್ಯ ಆಧಾರಸ್ತಂಭವಾಗಿದೆ ಎಂದು ಪ್ರೊ. ಅಹುಜಾ ವಿವರಿಸಿದರು.

ಭಾರತದ ಉದಯೋನ್ಮುಖ ‘ಡೀಪ್-ಟೆಕ್’ ಸಾಮರ್ಥ್ಯವನ್ನು ಶ್ಲಾಘಿಸಿದ ಉದ್ಯಮದ ನಾಯಕರು

ಸರ್ವರ್ ವಿನ್ಯಾಸ, ಚಿಪ್ ಅಭಿವೃದ್ಧಿ ಮತ್ತು ಅಧಿಕ ಸಾಮರ್ಥ್ಯದ ಕಂಪ್ಯೂಟಿಂಗ್ (High-performance computing) ಹಾರ್ಡ್ ವೇರ್ ಕ್ಷೇತ್ರಗಳಲ್ಲಿ ಭಾರತವು ಹೇಗೆ ವೇಗವಾಗಿ ಮುನ್ನಡೆಯುತ್ತಿದೆ ಎಂಬುದನ್ನು ಇಂಟೆಲ್ ನ ಡೇಟಾ ಸೆಂಟರ್ ಕಸ್ಟಮರ್ ಇಂಜಿನಿಯರಿಂಗ್ ವಿಭಾಗದ ನಿರ್ದೇಶಕರಾದ ಶ್ರೀ ಗೋಪಾಲ್ ಕೃಷ್ಣ ಭಟ್ ಅವರು ವಿವರಿಸಿದರು. ಭಾರತವು ಚಿಪ್ ಆಮದಿನ ಮೇಲಿನ ಅವಲಂಬನೆಯಿಂದ ಹೊರಬಂದು, ದೇಶೀಯವಾಗಿಯೇ ಸಿಸ್ಟಮ್ ವಿನ್ಯಾಸ ಮತ್ತು ತಯಾರಿಕೆಯತ್ತ ಹೇಗೆ ಬದಲಾಗುತ್ತಿದೆ ಎನ್ನುವುದಕ್ಕೆ ಅವರು ಕೆಲವು ಉದಾಹರಣೆಗಳನ್ನು ನೀಡಿದರು. ಇದಕ್ಕೆ ಪುಷ್ಟಿಯಾಗಿ, ಸಿ-ಡಾಕ್ (C-DAC) ನೊಂದಿಗೆ ಇಂಟೆಲ್ ಹೊಂದಿರುವ ‘ರುದ್ರ’ ಸರ್ವರ್ ಪ್ಲಾಟ್ ಫಾರ್ಮ್ ಪಾಲುದಾರಿಕೆಯಂತಹ ಪ್ರಸ್ತುತ ನಡೆಯುತ್ತಿರುವ ಸಹಯೋಗಗಳನ್ನು ಅವರು ಉಲ್ಲೇಖಿಸಿದರು.

ಸರ್ಕಾರವು ಸೆಮಿಕಂಡಕ್ಟರ್ ಮತ್ತು ಡಿಜಿಟಲ್ ಮೂಲಸೌಕರ್ಯಕ್ಕೆ ನೀಡುತ್ತಿರುವ ಉತ್ತೇಜನದಿಂದ ಸೃಷ್ಟಿಯಾದ ವೇಗವನ್ನು ಪ್ರತಿಬಿಂಬಿಸುವಂತೆ, ಪ್ರಸ್ತುತ ಭಾರತ ಮೂಲದ ಹತ್ತಾರು ಸರ್ವರ್ ಮತ್ತು ಡೇಟಾ ಸೆಂಟರ್ ಹಾರ್ಡ್ ವೇರ್ ವಿನ್ಯಾಸಗಳು ಸಿದ್ಧಗೊಳ್ಳುತ್ತಿವೆ ಎಂದು ಅವರು ತಿಳಿಸಿದರು. ಇದೇ ವೇಳೆ, ‘ಕುತೂಹಲವೇ ಆವಿಷ್ಕಾರದ ತಳಹದಿ’ ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳಲ್ಲಿ ಸದಾ ಕುತೂಹಲವನ್ನು ಜೀವಂತವಾಗಿರಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.

ವಿಜ್ಞಾನ ಮತ್ತು ಸಮಾಜದಲ್ಲಿ AI ಅನ್ವಯಗಳು: NVIDIA ವಿವರಣೆ

ಔಷಧ ಅಭಿವೃದ್ಧಿ, ಹವಾಮಾನ ಮಾದರಿ ತಯಾರಿ, ವಸ್ತು ವಿಜ್ಞಾನ ಮತ್ತು ವಾಹನ ವಿನ್ಯಾಸ  ಸೇರಿದಂತೆ ವೈಜ್ಞಾನಿಕ ಆವಿಷ್ಕಾರದ ವಲಯವನ್ನು ಕೃತಕ ಬುದ್ಧಿಮತ್ತೆ (AI) ಹೇಗೆ ಬದಲಾಯಿಸುತ್ತಿದೆ ಎಂಬುದನ್ನು NVIDIAದ ಎಚ್ ಪಿ ಸಿ ಮತ್ತು AI ವಿಭಾಗದ ಮುಖ್ಯಸ್ಥರಾದ ಶ್ರೀ ವಿವೇಕ್ ಕುಮಾರ್ ರಾಯ್ ಅವರು ಉಲ್ಲೇಖಿಸಿದರು.

ಭಾರತೀಯ ಸಂಶೋಧನಾ ಸಂಸ್ಥೆಗಳು ಮತ್ತು ಸಚಿವಾಲಯಗಳೊಂದಿಗೆ NVIDIA ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಹವಾಮಾನ ಮುನ್ಸೂಚನೆಯಿಂದ ಹಿಡಿದು ಸೂಪರ್ ಕಂಪ್ಯೂಟಿಂಗ್ ಮೂಲಸೌಕರ್ಯದವರೆಗಿನ ‘ರಾಷ್ಟ್ರೀಯ ಯೋಜನೆ’ಗಳನ್ನು GPU ಆಧಾರಿತ ಕಂಪ್ಯೂಟಿಂಗ್ ವ್ಯವಸ್ಥೆಯು ಹೇಗೆ ವೇಗಗೊಳಿಸುತ್ತಿದೆ ಎಂಬುದನ್ನು ಅವರು ವಿವರಿಸಿದರು.

ತಂತ್ರಜ್ಞಾನವು ಪ್ರತಿಯೊಬ್ಬ ಪ್ರಜೆಗೂ ಲಾಭದಾಯಕವಾಗಬೇಕು ಎಂಬ ಪ್ರಧಾನಮಂತ್ರಿ ಅವರ ಆಶಯಕ್ಕೆ ಪೂರಕವಾಗಿ, AI ತಂತ್ರಜ್ಞಾನವು ಭಾಷಾ ಅಡೆತಡೆಗಳನ್ನು ನಿವಾರಿಸುತ್ತಿದೆ ಮತ್ತು ಭಾರತದ ವೈವಿಧ್ಯಮಯ ಜನಸಂಖ್ಯೆಗೆ ಬೆಂಬಲ ನೀಡುತ್ತಿದೆ ಎಂದು ಅವರು ತಿಳಿಸಿದರು.

ಡಿಜಿಟಲ್ ಒಳಗೊಳ್ಳುವಿಕೆಯ ಕೇಂದ್ರಬಿಂದುವಾಗಿ ಭಾರತೀಯ ಭಾಷಾ AI

ಸರ್ವಮ್ AI ನ ಸಹ-ಸ್ಥಾಪಕರಾದ ಶ್ರೀ ಪ್ರತ್ಯುಸ್ ಕುಮಾರ್ ಅವರು, ‘ಇಂಡಿಯಾ AI ಮಿಷನ್’ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಬಹುಭಾಷಾ AI ವ್ಯವಸ್ಥೆಗಳನ್ನು ಪರಿಚಯಿಸಿದರು. ಇದರಲ್ಲಿ ಭಾರತೀಯ ಭಾಷೆಗಳಿಗಾಗಿ ರೂಪಿಸಲಾಗುತ್ತಿರುವ ಭಾರತದ ಮೊದಲ ಸಾವರಿನ್ ಫೌಂಡೇಷನಲ್ ಲಾರ್ಜ್ ಲಾಂಗ್ವೇಜ್ ಮಾಡೆಲ್’ (LLM) ಕೂಡ ಸೇರಿದೆ. ವಿಶೇಷವೆಂದರೆ, ಈ ಉಪಕ್ರಮವನ್ನು ಈ ವರ್ಷದ ಆರಂಭದಲ್ಲಿ ಸರ್ಕಾರವೇ ಆಯ್ಕೆ ಮಾಡಿತ್ತು.

ವೈಜ್ಞಾನಿಕ ಅನ್ವೇಷಣೆ, ನಿರ್ಧಾರ ಕೈಗೊಳ್ಳುವಿಕೆ ಮತ್ತು ಸಾರ್ವಜನಿಕ ನೀತಿ ರೂಪಿಸುವಲ್ಲಿ – ಕೃಷಿ, ಆರ್ಥಿಕತೆ ಮತ್ತು ಹವಾಮಾನ ಪರಿಹಾರಗಳಂತಹ ಕ್ಷೇತ್ರಗಳಲ್ಲಿ AI ವಹಿಸುವ ಪಾತ್ರವನ್ನು ವಿವರಿಸುವ ಮೂಲಕ, ಅವರು ಗೋಷ್ಠಿಯ ಧ್ಯೇಯವಾಕ್ಯವಾದ ‘ವಿಜ್ಞಾನ ಸೇ ಸಮೃದ್ಧಿ’ (ವಿಜ್ಞಾನದಿಂದ ಸಮೃದ್ಧಿ) ಯನ್ನು ಪ್ರಸ್ತುತ ಸನ್ನಿವೇಶಕ್ಕೆ ಅರ್ಥಪೂರ್ಣವಾಗಿ ಜೋಡಿಸಿದರು.

AI ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಪ್ರತಿಯೊಂದು ವೃತ್ತಿಯ ಅವಿಭಾಜ್ಯ ಅಂಗವಾಗಲಿದೆ ಎಂದು ಅವರು ಪ್ರತಿಪಾದಿಸಿದರು. ಸಮಗ್ರ ಬೆಳವಣಿಗೆ ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯ ಕುರಿತಾದ ಪ್ರಧಾನಮಂತ್ರಿ ಅವರ ಆಶಯವನ್ನು ಪ್ರತಿಬಿಂಬಿಸುವಂತೆ, ಎಲ್ಲರಿಗೂ ಸಮಾನವಾದ ಸಮೃದ್ಧಿ ಸಿಗಬೇಕಾದರೆ ‘ಭಾರತ-ಕೇಂದ್ರಿತ ದತ್ತಾಂಶ’, ಮಾದರಿಗಳು ಮತ್ತು ಭಾಷಾ ತಂತ್ರಜ್ಞಾನಗಳ ಅಗತ್ಯವಿದೆ ಎಂದು ಅವರು ತಿಳಿಸಿದರು.

ಸಂವಾದ ಗೋಷ್ಠಿ: AI ಮತ್ತು AGI – ಮುಂದಿನ ಮೈಲಿಗಲ್ಲು

ಪ್ರಮುಖ ಭಾಷಣಗಳ ನಂತರ, ಕ್ಸೇವಿಯರ್ ಕುರಿಯನ್ (Neysa), ಗಣೇಶ್ ಗೋಪಾಲನ್ (Gnani.ai) ಮತ್ತು ಡಾ. ಮನೀಶ್ ಮೋದಾನಿ (NVIDIA) ಅವರನ್ನೊಳಗೊಂಡ ಆಸಕ್ತಿದಾಯಕ ಸಂವಾದ ಗೋಷ್ಠಿ ನಡೆಯಿತು. ಭಾರತದಲ್ಲಿ ಉದ್ಯಮಗಳು AI ಅಳವಡಿಸಿಕೊಳ್ಳುವುದು ಈಗ ಕೇವಲ ಒಂದು ಪ್ರಯೋಗವಾಗಿ ಉಳಿದಿಲ್ಲ, ಬದಲಿಗೆ ಇದೊಂದು ‘ಅವಶ್ಯಕತೆ’ಯಾಗಿದೆ ಎಂದು ಕ್ಸೇವಿಯರ್ ಕುರಿಯನ್ ಅಭಿಪ್ರಾಯಪಟ್ಟರು. ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI), ಉತ್ಪಾದನಾ ವಲಯ, ಆರೋಗ್ಯ ಮತ್ತು ನಾಗರಿಕ ಸೇವೆಗಳಲ್ಲಿ AI ಆಧಾರಿತ ಪರಿಹಾರಗಳು ವೇಗವಾಗಿ ವಿಸ್ತರಣೆಯಾಗುತ್ತಿವೆ ಎಂದು ಅವರು ತಿಳಿಸಿದರು. ಆವಿಷ್ಕಾರ ಆಧಾರಿತ ಚಿಂತನೆಯ ಮಹತ್ವವನ್ನು ತಿಳಿಸಿದ ಅವರು, ‘ಇಂಡಿಯಾ AI ಮಿಷನ್’ ಮೂಲಕ ಸರ್ಕಾರ ನೀಡುತ್ತಿರುವ ಸಕ್ರಿಯ ಬೆಂಬಲವನ್ನು ಶ್ಲಾಘಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರದ ಸ್ಪಷ್ಟ ನಿಲುವನ್ನು ಗಣೇಶ್ ಗೋಪಾಲನ್ ತಿಳಿಸಿದರು. ‘ವಿಕಸಿತ ಭಾರತ’ ನಿರ್ಮಾಣಕ್ಕೆ AI ಒಂದು ಪ್ರಮುಖ ‘ರಾಷ್ಟ್ರೀಯ ವಿಭಿನ್ನ ಶಕ್ತಿ’ (national differentiator) ಎಂದು ಗುರುತಿಸಲಾಗಿದೆ ಎಂದರು. ‘ಇಂಡಿಯಾ AI ಮಿಷನ್’ ಅಡಿಯಲ್ಲಿ ಲಭ್ಯವಿರುವ ಸಾರ್ವಭೌಮ ದತ್ತಾಂಶಗಳು, ಮೂಲಭೂತ ಮಾದರಿಗಳು ಮತ್ತು ಆವಿಷ್ಕಾರ ಪೂರಕ ವ್ಯವಸ್ಥೆಗಳು, Gnani.ai ನಂತಹ ಕಂಪನಿಗಳಿಗೆ ಜಾಗತಿಕ ಮಟ್ಟದಲ್ಲಿ ಬೆಳೆಯಬಲ್ಲ ವಿಶಿಷ್ಟ ಭಾರತೀಯ ಮಾದರಿಗಳನ್ನು ರೂಪಿಸಲು ಹೇಗೆ ನೆರವಾಗುತ್ತಿವೆ ಎಂಬುದನ್ನು ಅವರು ವಿವರಿಸಿದರು. ಸರ್ಕಾರಿ ಇಲಾಖೆಗಳು ಹಿಂದೆಂದೂ ಕಾಣದ ಪ್ರಮಾಣದಲ್ಲಿ AI ಅನ್ನು ಅಳವಡಿಸಿಕೊಳ್ಳುತ್ತಿವೆ. ಬಹುಭಾಷಾ ಧ್ವನಿ ಸ್ವಯಂಚಾಲಿತ ವ್ಯವಸ್ಥೆಯು ಪ್ರತಿದಿನ ಕೋಟ್ಯಂತರ ಡೇಟಾ ಟೋಕನ್ ಗಳನ್ನು ನಿರ್ವಹಿಸುತ್ತಿದ್ದು, AI ಬಳಕೆಯ ವಿಚಾರದಲ್ಲಿ ಭಾರತವು ಹಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತಲೂ ಮುಂದಿದೆ ಎಂದು ಅವರು ಹೇಳಿದರು.

ಹವಾಮಾನ ಮಾದರಿ ತಯಾರಿಕೆಯಿಂದ (climate modelling) ಹಿಡಿದು ಭಾಷಾ ತಂತ್ರಜ್ಞಾನಗಳವರೆಗಿನ ವಿವಿಧ ಕ್ಷೇತ್ರಗಳಲ್ಲಿ, ಭಾರತದಲ್ಲಿ ವೇಗವಾಗಿ ವಿಸ್ತಾರಗೊಳ್ಳುತ್ತಿರುವ HPC ಮತ್ತು GPU ಆಧಾರಿತ ಮೂಲಸೌಕರ್ಯವು ಸಂಶೋಧನಾ ಫಲಿತಾಂಶಗಳನ್ನು ಹೆಚ್ಚಿಸುತ್ತಿದೆ ಎಂದು ಡಾ. ಮನೀಶ್ ಮೋದಾನಿ ಅವರು ಉಲ್ಲೇಖಿಸಿದರು. ಭಾರತದ ಬೃಹತ್ ದತ್ತಾಂಶ ವ್ಯಾಪ್ತಿ , ಭಾಷಾ ವೈವಿಧ್ಯತೆ ಮತ್ತು ವೈಜ್ಞಾನಿಕ ಪ್ರತಿಭೆಯು, AI ನಿಂದ AGI ಗೆ ನಡೆಯುತ್ತಿರುವ ಜಾಗತಿಕ ಪರಿವರ್ತನೆಯ ನೇತೃತ್ವ ವಹಿಸಲು ದೇಶಕ್ಕೆ ವಿಶಿಷ್ಟ ಸ್ಥಾನವನ್ನು ಕಲ್ಪಿಸಿದೆ ಎಂದು ಅವರು ಹೇಳಿದರು.

ಎಲ್ಲಾ ಭಾಷಣಗಳಲ್ಲಿಯೂ ಭಾಷಣಕಾರರು ಒಂದು ವಿಷಯವನ್ನು ಪದೇ ಪದೇ ತಿಳಿಸಿದರು: ‘ಗೌರವಾನ್ವಿತ ಪ್ರಧಾನಮಂತ್ರಿ ಅವರ ನಾಯಕತ್ವದಲ್ಲಿ ಸರ್ಕಾರದ ಪ್ರಬಲ ನೀತಿ ಬೆಂಬಲ ಹಾಗೂ ಭಾರತದ ಜನಸಂಖ್ಯಾ ಶಕ್ತಿಯು, AI ಮತ್ತು AGI ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವದತ್ತ ಸಾಗಲು ಭಾರತವನ್ನು ನಿರ್ಣಾಯಕ ಹಾದಿಯಲ್ಲಿ ಇರಿಸಿದೆ.

AI ಪರಿಕರಗಳನ್ನು ಬಳಸಿಕೊಳ್ಳಲು, ಡೀಪ್-ಟೆಕ್ (deep-tech) ಕ್ಷೇತ್ರಗಳಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಮತ್ತು 2047ರ ವೇಳೆಗೆ ಜ್ಞಾನಾಧಾರಿತ ಹಾಗೂ ಆವಿಷ್ಕಾರ ಚಾಲಿತ ‘ವಿಕಸಿತ ಭಾರತ’ ನಿರ್ಮಾಣದ ಕನಸಿಗೆ ಕೊಡುಗೆ ನೀಡುವಂತೆ ಇದೇ ವೇಳೆ ವಿದ್ಯಾರ್ಥಿಗಳಿಗೆ ಕರೆ ನೀಡಲಾಯಿತು.

About Matribhumi Samachar

Check Also

ಸಶಸ್ತ್ರ ಪಡೆಗಳ ಧ್ವಜ ದಿನದಂದು ಸಶಸ್ತ್ರ ಪಡೆಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

ಸಶಸ್ತ್ರ ಪಡೆಗಳ ಧ್ವಜ ದಿನದ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರಧಾನಮಂತ್ರಿ ಅವರು ತಮ್ಮ ಹೃದಯಾಂತರಾಳದ …