ಕೇಂದ್ರ ಸಂಪರ್ಕ ಹಾಗೂ ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ಬೆಂಗಳೂರಿನಲ್ಲಿ ಗ್ರಾಮೀಣ ಅಂಚೆ ಸೇವಕರೊಂದಿಗೆ ಸಂವಾದ ನಡೆಸಿದರು ಹಾಗೂ 2024-25ನೇ ಸಾಲಿನಲ್ಲಿನ ಉತ್ತಮ ಕಾರ್ಯನಿರ್ವಹಣೆಗಾಗಿ 15 ಗ್ರಾಮೀಣ ಅಂಚೆ ಸೇವಕರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 1.64 ಲಕ್ಷ ಅಂಚೆ ಕಚೇರಿಗಳಿವೆ. ಸೇವೆ ನೀಡುವ ಸಂಸ್ಥೆಗಳಲ್ಲಿ ಅಂಚೆ ಇಲಾಖೆಯು ಶೀಘ್ರ ವಿಶ್ವದಲ್ಲೇ ಮೊದಲ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಅಂಚೆ ಇಲಾಖೆಯ ಕರ್ನಾಟಕ ವೃತ್ತ ಕಳೆದ ವರ್ಷದಲ್ಲಿ 200 ಕೋಟಿ ಅಂಚೆ, ಪಾರ್ಸಲ್ ಗಳನ್ನು ವಿಲೇವಾರಿ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಅಂಚೆ ಇಲಾಖೆಯ ಸ್ಥಿತಿಗತಿ ಹಾಗೂ ಪ್ರಗತಿ ಕುರಿತು ತಮ್ಮ ವಿಚಾರ ವ್ಯಕ್ತಪಡಿಸಿದ ಸಚಿವರು, ಈ ಹಿಂದೆ ಗ್ರಾಮೀಣ ಅಂಚೆ ಸೇವಕರಿಗೆ ಛತ್ರಿ, ಕಾರ್ಯನಿರ್ವಹಣಾ ಸಾಮಗ್ರಿಗಳು, ಬೂಟು ಮತ್ತಿತರ ಸೌಲಭ್ಯಗಳು ಇರಲಿಲ್ಲ. ಪ್ರಸ್ತುತ ಅಂಚೆ ಇಲಾಖೆಯ ಲಾಂಛನ, ಅಂಚೆ ಸೇವಕರಿಗೆ ಸಮವಸ್ತ್ರಗಳನ್ನು ವಿನ್ಯಾಸಗೊಳಿಸಿರುವುದರ ಜೊತೆಗೆ ಡಿಜಿಟಲ್ ಉಪಕರಣಗಳನ್ನು ನೀಡುವ ಮೂಲಕ ಕಚೇರಿಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ ಹಾಗೂ ಅಂಚೆ ಸೇವಕರ ಮಕ್ಕಳನ್ನು ಕೇಂದ್ರಿಯ ವಿದ್ಯಾಲಯಗಳಿಗೆ ದಾಖಲಾಗುವಂತೆ ನಿಯಮ ಬದಲಾಯಿಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಅಂಚೆ ಕಚೇರಿಗಳಿಗೆ ಹೊಸ ಸ್ಪರ್ಶ ನೀಡಲಾಗುತ್ತಿದ್ದು, ಅಮೆರಿಕ, ಜರ್ಮನಿ, ಜಪಾನ್ ಮುಂತಾದ ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಅಂಚೆ ಸೇವೆಯನ್ನು ಅಧ್ಯಯನ ಮಾಡಿ, ಹೇಗೆ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಗ್ರಾಮೀಣ ಅಂಚೆ ಸೇವಕರ ಸೇವೆ ಶ್ಲಾಘಿಸಿದ ಕೇಂದ್ರ ಸಚಿವರಾದ ಸಿಂಧಿಯಾ ಅವರು, ಒಂದು ಗ್ರಾಮದ ಜನರಿಗೆ ಸಹಜವಾಗಿ ಇಬ್ಬರ ಮೇಲೆ ಹೆಚ್ಚು ಭರವಸೆ ಇರುತ್ತದೆ. ಒಬ್ಬ ಗ್ರಾಮದ ಭದ್ರತಾ ಸಿಬ್ಬಂದಿ, ಮತ್ತೊಬ್ಬ ಅಂಚೆ ಸೇವಕ. ಅಂಚೆ ಸೇವಕರು ಕೇವಲ ಅಂಚೆಗಳನ್ನು ಮಾತ್ರ ತಲುಪಿಸುವುದಿಲ್ಲ ಬದಲಾಗಿ, ಜನರ ಭರವಸೆ, ಭಾವನೆಗಳನ್ನು ತಲುಪಿಸುತ್ತಾರೆ. ಅಂಚೆ ಸೇವೆ ಎಂದರೆ ಅದು ಜನರ ಸೇವೆ. ನಾನು ನಿಮ್ಮನ್ನು ನನ್ನ ಪರಿವಾರವೆಂದು ಭಾವಿಸಿದ್ದೇನೆ, ಅದೇ ರೀತಿ ನೀವೂ ಸಹ ಗ್ರಾಹಕರನ್ನು ನಿಮ್ಮ ಪರಿವಾರ ಎಂದು ತಿಳಿದು ಅವರಿಗೆ ಉತ್ತಮ ಸೇವೆ ನೀಡಬೇಕು ಎಂದು ಅಂಚೆ ಸೇವಕರಿಗೆ ಸಲಹೆ ನೀಡಿದರು.

ಅಂಚೆ ಇಲಾಖೆಯು ಪತ್ರ ವ್ಯವಹಾರಗಳ ಜೊತೆಗೆ ಬ್ಯಾಂಕ್ ಸೇವೆಗಳನ್ನು ಸಹ ಒದಗಿಸುತ್ತಿದೆ. ವಿಶ್ವದ ಯಾವುದೇ ದೇಶದಲ್ಲೂ ಅಂಚೆ ಇಲಾಖೆಯಷ್ಟು ವಿಶಾಲ ವ್ಯಾಪ್ತಿಯುಳ್ಳ ಸಂಸ್ಥೆಯಿಲ್ಲ. ಇದು ಸಾಮಾನ್ಯ ಜನರಿಗೆ ವಿಶ್ವದ ಕಿಟಕಿಯಿದ್ದಂತೆ. ಕಾಲ ಬದಲಾದಂತೆ ನಮ್ಮ ಕೆಲಸದ ಶೈಲಿ ಬದಲಿಸಿಕೊಳ್ಳಬೇಕು. ನಾವೀನ್ಯತೆ, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಇಲಾಖೆಗೆ ಉತ್ತಮವೆನಿಸುವ ಎಲ್ಲ ಸಲಹೆಗಳನ್ನು ಅನುಷ್ಠಾನಗೊಳಿಸಿ, ಗ್ರಾಹಕ ಕೇಂದ್ರಿತ ಸಂಸ್ಥೆಯಾಗಿ ಅಂಚೆ ಇಲಾಖೆಯನ್ನು ರೂಪುಗೊಳಿಸಬೇಕು. ಭಾರತೀಯ ಅಂಚೆ ಇಲಾಖೆಯ ಸಾಧನೆಗಳು ವಿಶ್ವಾದ್ಯಂತ ಹೆಸರು ಮಾಡಬೇಕು ಎಂದು ಸಚಿವರು ತಿಳಿಸಿದರು.
ಅಂಚೆ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ವಂದನಾ ಕೌಲ್, ಅಂಚೆ ಸೇವೆಗಳ ಮಂಡಳಿ ಸದಸ್ಯರಾದ ಶ್ರೀಮತಿ ಮಂಜು ಕುಮಾರ್, ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ಕೆ. ಪ್ರಕಾಶ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Matribhumi Samachar Kannad

