ಆಗಸ್ಟ್ 15 ರಂದು ನವದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಂಚಾಯತ್ ರಾಜ್ ಸಚಿವಾಲಯವು(ಎಂ.ಒ.ಪಿ.ಆರ್) 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 210 ಪಂಚಾಯತ್ ಪ್ರತಿನಿಧಿಗಳನ್ನು ವಿಶೇಷ ಅತಿಥಿಗಳಾಗಿ ಸತ್ಕರಿಸಲಿದೆ. ತಮ್ಮ ಸಂಗಾತಿಗಳು ಮತ್ತು ನೋಡಲ್ ಅಧಿಕಾರಿಗಳೊಂದಿಗೆ, ಒಟ್ಟು 425 ಮಂದಿ ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ಈ ವಿಶೇಷ ಅತಿಥಿಗಳಿಗೆ ಔಪಚಾರಿಕ ಅಭಿನಂದನಾ ಕಾರ್ಯಕ್ರಮವು ಆಗಸ್ಟ್ 14, 2025 ರಂದು ನವದೆಹಲಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಕೇಂದ್ರ ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಮತ್ತು ಕೇಂದ್ರ ಪಂಚಾಯತ್ ರಾಜ್ ಸಹಾಯಕ ಸಚಿವರಾದ ಪ್ರೊ. ಎಸ್.ಪಿ. ಸಿಂಗ್ ಬಘೇಲ್ ಉಪಸ್ಥಿತರಿರಲಿದ್ದಾರೆ. ಎಂ.ಒ.ಪಿ.ಆರ್ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಈ ವರ್ಷದ ಕಾರ್ಯಕ್ರಮದ “आत्मनिर्भर पंचायत, विकसित भारत की पहचान” ಎಂಬ ವಿಷಯಾಧಾರಿತವಾಗಿ ನಡೆಯಲಿದ್ದು, ಸ್ವಾವಲಂಬಿ ಪಂಚಾಯತ್ ಗಳು ಅಭಿವೃದ್ಧಿ ಹೊಂದಿದ ಭಾರತದ ಪ್ರಮುಖ ಆಧಾರಸ್ತಂಭಗಳು ಎಂಬ ದೃಷ್ಟಿಕೋನವನ್ನು ಇದು ಎತ್ತಿ ಹಿಡಿಯುತ್ತದೆ. ಅಭಿನಂದನಾ ಸಮಾರಂಭದಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ “ಸಭಾಸಾರ್” ತಂತ್ರಾಂಶ ಬಿಡುಗಡೆ ಮತ್ತು ಗ್ರಾಮೋದಯ ಸಂಕಲ್ಪ ನಿಯತಕಾಲಿಕದ 16ನೇ ಸಂಚಿಕೆಯ ಬಿಡುಗಡೆ ಸೇರಿವೆ.
ಈ ವರ್ಷದ ವಿಶೇಷ ಅತಿಥಿಗಳಲ್ಲಿ ಗಮನಾರ್ಹ ಸಂಖ್ಯೆಯ ಮಹಿಳಾ ಪಂಚಾಯತ್ ಮುಖಂಡರು ಸೇರಿದ್ದಾರೆ. ಅವರು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಉತ್ತಮ ಮೂಲಸೌಕರ್ಯ, ಸುಧಾರಿತ ಸಾರ್ವಜನಿಕ ಸೇವೆಗಳು ಮತ್ತು ಎಲ್ಲರನ್ನೂ ಒಳಗೊಂಡ ಸಮುದಾಯ ಉಪಕ್ರಮಗಳಂತಹ ಗೋಚರಿಸುವ ಸುಧಾರಣೆಗಳನ್ನು ತಂದಿದ್ದಾರೆ. ಪಂಚಾಯತ್ ರಾಜ್ ಸಂಸ್ಥೆಗಳ (ಪಿ.ಆರ್.ಐ) ಈ ಚುನಾಯಿತ ಮಹಿಳಾ ಪ್ರತಿನಿಧಿಗಳು (ಇ.ಡಬ್ಲ್ಯು.ಆರ್) ಗ್ರಾಮೀಣ ನಾಯಕತ್ವದ ಉದಯೋನ್ಮುಖ ಶಕ್ತಿಗೆ ಉದಾಹರಣೆಯಾಗಿದ್ದಾರೆ. ತಮ್ಮ ಆಡಳಿತದ ಜವಾಬ್ದಾರಿಗಳನ್ನು ದೇಶದ ವಿವಿಧ ಪ್ರದೇಶಗಳಲ್ಲಿ ಮುಂದಾಲೋಚನೆಯ ಅಭಿವೃದ್ಧಿ ವಿಧಾನಗಳೊಂದಿಗೆ ಯಶಸ್ವಿಯಾಗಿ ಸಂಯೋಜಿಸುತ್ತಾರೆ. ಈ ವಿಶೇಷ ಅತಿಥಿಗಳು ‘ಹರ್ ಘರ್ ಜಲ ಯೋಜನೆ’, ‘ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ’, ‘ಮಿಷನ್ ಇಂದ್ರಧನುಷ್’ ಮುಂತಾದ ಪ್ರಮುಖ ಸರ್ಕಾರಿ ಯೋಜನೆಗಳ ಪರಿಪೂರ್ಣ ಅನುಷ್ಠಾನದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ.

Matribhumi Samachar Kannad

