ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಇಂದು ಎರಡು ಸಾವಿರದ ನಲವತ್ತೆರೆಡು ಕೋಟಿ ರೂಪಾಯಿ ವೆಚ್ಚದ ಒಂಬತ್ತು ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಲೋಕಸಭಾ ಸದಸ್ಯರಾದ ಬಿ.ವೈ ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸಾಗರ ತಾಲ್ಲೂಕಿನ ಅಂಬಾರಗೋಡ್ಲು – ಕಳಸವಳ್ಳಿ ನಡುವೆ ನಿರ್ಮಿಸಲಾಗಿರುವ ತೂಗು ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು. ಈ ತೂಗು ಸೇತುವೆಯು 6.18 ಕಿ.ಮೀ. ಉದ್ದವನ್ನು ಹೊಂದಿದ್ದು 472.08 – ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಭಾರತದ ಎರಡನೇ ಅತಿ ಉದ್ದದ ತೂಗು ಸೇತುವೆಯಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು, ಕರ್ನಾಟಕದಲ್ಲಿ ಅತ್ಯುತ್ತಮ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಸುಮಾರು 9 ಸಾವಿರ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಕರ್ನಾಟಕದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಮೂರು ಲಕ್ಷ ಕೋಟಿ ರೂಪಾಯಿ ವೆಚ್ಚದ ಯೋಜನೆಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದ್ದು, ಮುಂದಿನ ಐದು ವರ್ಷಗಳಲ್ಲಿ ಐದು ಲಕ್ಷ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಆಕಾಂಕ್ಷಿ ಜಿಲ್ಲೆಗಳಿಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಕರ್ನಾಟಕದ ವಿಕಾಸಕ್ಕೆ ಯೋಜನೆಗಳನ್ನು ರೂಪಿಸಲಾಗಿದ್ದು, ಹೊಸ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸಂಪರ್ಕ ಕಲ್ಪಿಸಲಾಗಿದೆ. ದೆಹಲಿಯಿಂದ ಮುಂಬೈ ಮಾರ್ಗವಾಗಿ ದಕ್ಷಿಣ ಭಾಗದ ರಾಜ್ಯಗಳಾದ ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದರು. ಅಟಲ್ ಟನಲ್ ನಂತಹ ಹಲವು ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ದೇಶದಲ್ಲಿ ಅತ್ಯುತ್ತಮ ಹೆದ್ದಾರಿಗಳ ನಿರ್ಮಾಣದ ಮೂಲಕ ವಿವಿಧ ರಾಜ್ಯಗಳನ್ನು ಸಂಪರ್ಕಿಸಲಾಗುತ್ತಿದೆ. ನಾಲ್ಕು ಪಥಗಳ ಹಾಸನ-ರಾಯಚೂರು ನಡುವೆ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಇದನ್ನು ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು. ಇದರಿಂದ ಪ್ರಯಾಣ ಅವಧಿ ಇಳಿಕೆಯಾಗಲಿದೆ. ಬೆಂಗಳೂರು – ಚೆನ್ನೈ ನಡುವೆ ಹೊಸ ಹೆದ್ದಾರಿ ನಿರ್ಮಾಣ ಪೂರ್ಣಗೊಂಡಿದ್ದು, ಮುಂದಿನ ಆರು ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಹುಬ್ಬಳ್ಳಿ – ಧಾರವಾಡ ನಡುವೆ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿದ್ದು ಶೇಕಡ 70 ರಷ್ಟು ಮುಕ್ತಾಯ ಹೊಂದಿದೆ. ಮುಂದಿನ ಮಾರ್ಚ್ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಇದರಿಂದ ಪ್ರಯಾಣ ಅವಧಿ ಅವಳಿ ನಗರಗಳ ನಡುವೆ 15 ನಿಮಿಷಕ್ಕೆ ತಗ್ಗಲಿದೆ. ಮೈಸೂರು-ಮಡಿಕೇರಿ, ಶಿರಾಡಿ ಘಾಟ್ ನ ರಸ್ತೆಗಳ ಕಾಮಗಾರಿಗಳು ಸಹ ಪ್ರಗತಿಯಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದರು. ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ದೇಶದಲ್ಲಿ ಹೆದ್ದಾರಿಗಳ ಮೂಲಕ ಸಂಪರ್ಕ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲಾಗಿದೆ. ಅಂಬಾರಗೋಡ್ಲು – ಕಳಸವಳ್ಳಿ ನಡುವೆ ನಿರ್ಮಿಸಲಾಗಿರುವ ತೂಗು ಸೇತುವೆಯಿಂದ ಪ್ರಯಾಣ ಸಮಯ ಉಳಿತಾಯವಾಗಲಿದೆ. ಈ ಸೇತುವೆಗೆ ಚೌಡೇಶ್ವರಿ ಮಾತೆ ಸೇತುವೆ ಎಂದು ನಾಮಕರಣ ಮಾಡಬೇಕು ಎಂದರು.

ಕಳೆದ ಹತ್ತು ವರ್ಷಗಳಲ್ಲಿ ಸುಮಾರು 50 ಸಾವಿರ ಕಿ.ಮೀ ಉದ್ದದ ಹೆದ್ದಾರಿಗಳನ್ನು ನಿರ್ಮಿಸಲಾಗಿದ್ದು ಕರ್ನಾಟಕಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಹಿಂದೆ ಪ್ರತಿನಿತ್ಯ ಕೇವಲ 7 ರಿಂದ 8 ಕಿ.ಮೀ ಉದ್ದದ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಪ್ರತಿದಿನ 34 ಕಿ.ಮೀ. ವ್ಯಾಪ್ತಿಯ ಹೆದ್ದಾರಿಯನ್ನು ನಿರ್ಮಾಣ ಮಾಡುತ್ತಿದೆ. ಭಾರತ್ ಮಾಲಾ ಯೋಜನೆಯ ಮೂಲಕ ದೇಶದಾದ್ಯಂತ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
Matribhumi Samachar Kannad

