ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಕೊಚ್ಚಿನ್ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳಲ್ಲಿ ‘ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ – ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂʼ (ಎಫ್ ಟಿ ಐ-ಟಿ ಟಿ ಪಿ) ಅನ್ನು 16 ಜನವರಿ 2025 ರಂದು ಅಹಮದಾಬಾದ್ ನಿಂದ ಉದ್ಘಾಟಿಸಲಿದ್ದಾರೆ. ಗೃಹ ಸಚಿವರು ಈ ಹಿಂದೆ ಜೂನ್ 22, 2024 ರಂದು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಟರ್ಮಿನಲ್-3 ರಿಂದ ‘ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ – ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ’ ಗೆ ಚಾಲನೆ ನೀಡಿದ್ದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ‘ವಿಕಸಿತ ಭಾರತ್’@2047 ದೃಷ್ಟಿಕೋನದ ಅಡಿಯಲ್ಲಿ ‘ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್-ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ’ ಒಂದು ಮಹತ್ವದ ಉಪಕ್ರಮವಾಗಿದೆ. ಪ್ರಯಾಣಿಕರಿಗೆ ವಿಶ್ವದರ್ಜೆಯ ವಲಸೆ ಸೌಲಭ್ಯಗಳನ್ನು ಒದಗಿಸುವುದು, ಅಂತರರಾಷ್ಟ್ರೀಯ ಪ್ರಯಾಣವನ್ನು ತಡೆರಹಿತ ಮತ್ತು ಸುರಕ್ಷಿತಗೊಳಿಸುವುದು ಇದರ ಉದ್ದೇಶವಾಗಿದೆ. ಆರಂಭದಲ್ಲಿ, ಈ ಸೌಲಭ್ಯವನ್ನು ಭಾರತೀಯ ನಾಗರಿಕರು ಮತ್ತು ಒಸಿಐ ಕಾರ್ಡುದಾರರಿಗೆ ಉಚಿತವಾಗಿ ಪ್ರಾರಂಭಿಸಲಾಗಿದೆ.
ಎಫ್ ಟಿ ಐ-ಟಿ ಟಿ ಪಿ ಅನ್ನು ಆನ್‌ಲೈನ್ ಪೋರ್ಟಲ್ https://ftittp.mha.gov.in ಮೂಲಕ ಅನುಷ್ಠಾನಗೊಳಿಸಲಾಗಿದೆ. ಈ ಪ್ರೋಗ್ರಾಂಗೆ ನೋಂದಾಯಿಸಲು, ಅರ್ಜಿದಾರರು ತಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ಪೋರ್ಟಲ್ ನಲ್ಲಿ ಅಗತ್ಯವಾದ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಆನ್‌ಲೈನ್ ನೋಂದಣಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ನೋಂದಾಯಿತ ಅರ್ಜಿದಾರರ ಬಯೋಮೆಟ್ರಿಕ್ ಡೇಟಾವನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ (ಎಫ್ ಆರ್ ಆರ್ ಒ) ಅಥವಾ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವಾಗ ಸೆರೆಹಿಡಿಯಲಾಗುತ್ತದೆ.
ನೋಂದಾಯಿತ ಪ್ರಯಾಣಿಕರು ತಮ್ಮ ಏರ್‌ಲೈನ್ ನೀಡಿದ ಬೋರ್ಡಿಂಗ್ ಪಾಸ್ ಅನ್ನು ಇ-ಗೇಟ್ ನಲ್ಲಿ ಸ್ಕ್ಯಾನ್ ಮಾಡಬೇಕಾಗುತ್ತದೆ, ನಂತರ ಅವರ ಪಾಸ್‌ಪೋರ್ಟ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. ಆಗಮನ ಮತ್ತು ನಿರ್ಗಮನ ಎರಡೂ ಸ್ಥಳಗಳಲ್ಲಿ, ಇ-ಗೇಟ್ ಗಳಲ್ಲಿ ಪ್ರಯಾಣಿಕರ ಬಯೋಮೆಟ್ರಿಕ್ ಗಳನ್ನು ದೃಢೀಕರಿಸಲಾಗುತ್ತದೆ. ಒಮ್ಮೆ ಈ ದೃಢೀಕರಣ ಯಶಸ್ವಿಯಾದರೆ, ಇ-ಗೇಟ್ ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ ಮತ್ತು ವಲಸೆ ಅನುಮತಿ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.
ದೇಶಾದ್ಯಂತ 21 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಎಫ್ ಟಿ ಐ-ಟಿ ಟಿ ಪಿ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ, ದೆಹಲಿಯ ಜೊತೆಗೆ, ಏಳು ಪ್ರಮುಖ ವಿಮಾನ ನಿಲ್ದಾಣಗಳಾದ ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಕೊಚ್ಚಿ ಮತ್ತು ಅಹಮದಾಬಾದ್ ನಲ್ಲಿ ಈ ಸೌಲಭ್ಯವನ್ನು ಪರಿಚಯಿಸಲಾಗಿದೆ.
Matribhumi Samachar Kannad

