ವಿಶ್ವ ಪವನ ದಿನ 2025″ ರ ಅಂಗವಾಗಿ ಇಂದು ಬೆಂಗಳೂರಿನಲ್ಲಿ ನಡೆದ ಪಾಲುದಾರರ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, “ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಕಾರ್ಯತಂತ್ರದಲ್ಲಿ ಪವನ ಶಕ್ತಿಯು ಕೇಂದ್ರ ಸ್ಥಾನದಲ್ಲಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಮತ್ತು ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಶ್ರೀ ಕೆ.ಜಿ. ಜಾರ್ಜ್ ಅವರೂ ಉಪಸ್ಥಿತರಿದ್ದರು. ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗಲು, ಅದಕ್ಕೆ ಸೌರಶಕ್ತಿ, ಪವನಶಕ್ತಿ ಅಥವಾ ಇನ್ಯಾವುದೇ ರೂಪದ ಶಕ್ತಿಯಿರಲಿ, ಒಟ್ಟಿನಲ್ಲಿ ಶಕ್ತಿಯ ಅಗತ್ಯವಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಅವರು ನುಡಿದರು.

ನಮ್ಮ ರಾಷ್ಟ್ರೀಯ ಗುರಿಗಳು ಮಹತ್ವಾಕಾಂಕ್ಷಿ ಮತ್ತು ಸ್ಪಷ್ಟವಾಗಿವೆ: 2030ರ ವೇಳೆಗೆ ನಮ್ಮ ವಿದ್ಯುತ್ ಸಾಮರ್ಥ್ಯದ ಶೇ. 50 ರಷ್ಟನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಪಡೆಯುವುದು ಮತ್ತು 2070ರ ವೇಳೆಗೆ ‘ನಿವ್ವಳ-ಶೂನ್ಯ’ (ನೆಟ್-ಝೀರೋ) ಭಾರತವನ್ನು ಸಾಧಿಸುವುದು. ಈ ಗುರಿಗಳನ್ನು ತಲುಪಲು ಪವನ ಶಕ್ತಿಯು ಕೇಂದ್ರಬಿಂದುವಾಗಿದೆ. ಪವನ ಶಕ್ತಿಯು ನಮ್ಮ ನವೀಕರಿಸಬಹುದಾದ ಇಂಧನ ಕಾರ್ಯತಂತ್ರದ ಒಂದು ಭಾಗವಷ್ಟೇ ಅಲ್ಲ, ಅದು ಅದರ ಹೃದಯಭಾಗದಲ್ಲಿದೆ ಮತ್ತು ಆತ್ಮನಿರ್ಭರ ಭಾರತದ ಕೇಂದ್ರವಾಗಿದೆ” ಎಂದು ಸಚಿವರು ಹೇಳಿದರು.
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಒತ್ತಿ ಹೇಳಿದ ಶ್ರೀ ಜೋಶಿ ಅವರು, “ಗೌರವಾನ್ವಿತ ಪ್ರಧಾನಿಯವರು ನಮಗೆ ‘ಉತ್ಪಾದನೆಗೆ ನವೀಕರಿಸಬಹುದಾದ ಇಂಧನ ಮತ್ತು ಗೃಹ ಬಳಕೆಗೆ ಸಾಂಪ್ರದಾಯಿಕ ಇಂಧನ’ ಎಂಬ ದೃಷ್ಟಿಕೋನವನ್ನು ನೀಡಿದ್ದಾರೆ” ಎಂದು ತಿಳಿಸಿದರು.
ಭಾರತದ ಉತ್ಪಾದನಾ ಸಾಮರ್ಥ್ಯವು ಹೆಚ್ಚುತ್ತಿದೆ ಮತ್ತು ಅದು ಮುಂದೆಯೂ ಹೆಚ್ಚುತ್ತಲೇ ಇರುತ್ತದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು, ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನವು ನವೀಕರಿಸಬಹುದಾದ ಇಂಧನದ ಉತ್ಪಾದನೆ, ಸಂಗ್ರಹಣೆ ಮತ್ತು ಬಳಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಇದರಿಂದ, ಸಮೀಪದ ಭವಿಷ್ಯದಲ್ಲಿ ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾದಾಗ, ಉತ್ಪಾದನಾ ವಲಯದ ಇಂಧನ ಬೇಡಿಕೆಗಳನ್ನು ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕವೇ ಪೂರೈಸಲು ಸಾಧ್ಯವಾಗಬೇಕು” ಎಂದು ಸಚಿವರು ಹೇಳಿದರು.
ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತವು ಬೃಹತ್ ಸಾಮರ್ಥ್ಯವನ್ನು ಹೊಂದಿದೆ, ಏಕೆಂದರೆ ಅದು ವಿಶ್ವದಲ್ಲಿಯೇ ನಾಲ್ಕನೇ ಅತಿ ದೊಡ್ಡ ಪವನ ಶಕ್ತಿ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ ಮತ್ತು ಮೂರನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕ ರಾಷ್ಟ್ರವಾಗಿದೆ. ‘ಕೇವಲ 10 ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕನಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ, ಆದರೆ ಇಂದು ಅದು ವಾಸ್ತವವಾಗಿದೆ’ ಎಂದು ಸಚಿವರು ನುಡಿದರು.

ಸಚಿವರು ಪವನ ಶಕ್ತಿ ವಲಯಕ್ಕೆ ಸಂಬಂಧಿಸಿದಂತೆ ಮೂರು ಪ್ರಮುಖ ವಿಷಯಗಳನ್ನು ಒತ್ತಿ ಹೇಳಿದರು:
“ಮೊದಲನೆಯದಾಗಿ, ನಿರಂತರ ವಿದ್ಯುತ್ ಪೂರೈಕೆ ಮತ್ತು ಗ್ರಿಡ್ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಪವನ ಶಕ್ತಿಯನ್ನು ಸೌರಶಕ್ತಿ ಮತ್ತು ಸಂಗ್ರಹಣೆಯೊಂದಿಗೆ (BESS) ಸಂಯೋಜಿಸಬೇಕು.
ಎರಡನೆಯದಾಗಿ, ಸುಂಕಗಳು ಸ್ಪರ್ಧಾತ್ಮಕವಾಗಿರಬೇಕು. ಪ್ರತಿ ಯೂನಿಟ್ಗೆ ₹3.90 ದರವು ತುಂಬಾ ಹೆಚ್ಚಾಗಿದೆ; ವೆಚ್ಚಗಳನ್ನು ಕಡಿಮೆ ಮಾಡಲು ನಾವು ಒಟ್ಟಾಗಿ ಕೆಲಸ ಮಾಡಬೇಕು.
ಮೂರನೆಯದಾಗಿ, ದೇಶೀಯ ಉತ್ಪಾದನೆಯು ನಮ್ಮ ಸ್ವಂತ ಗುರಿಗಳನ್ನು ಪೂರೈಸಲು ಮಾತ್ರವಲ್ಲದೆ, ರಫ್ತುಗಳನ್ನು ಹೆಚ್ಚಿಸಲು ಹೆಚ್ಚು ಪರಿಣಾಮಕಾರಿಯಾಗಬೇಕು.”
ನವೀಕರಿಸಬಹುದಾದ ಇಂಧನ ವಲಯದ ಸಾಮರ್ಥ್ಯವನ್ನು ಅನಾವರಣಗೊಳಿಸಲು ಭಾರತ ಸರ್ಕಾರ ಕೈಗೊಳ್ಳುತ್ತಿರುವ ಸಮರ್ಪಿತ ಪ್ರಯತ್ನಗಳನ್ನು ಒತ್ತಿಹೇಳಿದ ಶ್ರೀ ಜೋಶಿ, “ಸರ್ಕಾರವು ಈ ವಲಯವನ್ನು ಸಂಪೂರ್ಣ ಗಂಭೀರತೆಯಿಂದ ಬೆಂಬಲಿಸುತ್ತಿದೆ. ಈ ವರ್ಷ ನವೀಕರಿಸಬಹುದಾದ ಇಂಧನ ಬಜೆಟ್ 53% ರಷ್ಟು ಹೆಚ್ಚಾಗಿ, ₹26,549 ಕೋಟಿಗೆ ಏರಿದೆ, ಇದರಲ್ಲಿ ದೊಡ್ಡ ಪಾಲು ಪವನ ಶಕ್ತಿಗೆ ನಿರ್ದೇಶಿಸಲಾಗಿದೆ,” ಎಂದರು.
“ನವೀಕರಿಸಬಹುದಾದ ಇಂಧನಗಳಿಗೆ ಪರಿವರ್ತನೆಯು ಅನಿವಾರ್ಯವಾಗಿದೆ. ರಾಜ್ಯಗಳು ಈ ಪರಿವರ್ತನೆಯನ್ನು ಮುನ್ನಡೆಸಬೇಕು. ಭೂ ಲಭ್ಯತೆ ಮತ್ತು ಪ್ರಸರಣ ವಿಳಂಬಗಳನ್ನು ನಿವಾರಿಸಬೇಕು. ಇದು ಹಿಂಜರಿಕೆಯ ಸಮಯವಲ್ಲ, ಇದು ಅನುಷ್ಠಾನದ ಸಮಯ,” ಎಂದು ಸಚಿವರು ಸೇರಿಸಿದರು.
ಸಚಿವರು, “ಭಾರತವು 225 kW ನಿಂದ 5.2 MW ವರೆಗಿನ ಪವನ ಟರ್ಬೈನ್ಗಳನ್ನು ತಯಾರಿಸುತ್ತಿದೆ, 14 ಕಂಪನಿಗಳಿಂದ 33 ಮಾದರಿಗಳನ್ನು ಉತ್ಪಾದಿಸಲಾಗುತ್ತಿದೆ ಎಂಬುದನ್ನು ಗಮನಿಸಲು ನನಗೆ ಸಂತೋಷವಾಗಿದೆ. ಈ ಟರ್ಬೈನ್ಗಳು ನಮ್ಮ ದೇಶೀಯ ಅಗತ್ಯಗಳನ್ನು ಪೂರೈಸುತ್ತವೆ ಮತ್ತು ಜಾಗತಿಕವಾಗಿಯೂ ವೆಚ್ಚ-ಸ್ಪರ್ಧಾತ್ಮಕವಾಗಿವೆ,” ಎಂದು ಹೇಳಿದರು.
ಸಚಿವರು, ರಾಷ್ಟ್ರೀಯ ಪವನ ಶಕ್ತಿಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅನಾವರಣಗೊಳಿಸಲು, ನಮಗೆ ಸಮನ್ವಯದ ರಾಷ್ಟ್ರೀಯ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದರು. ಅದಕ್ಕಾಗಿಯೇ ನಾವು 5 ಆದ್ಯತೆಗಳ ಮೇಲೆ ಗಮನ ಹರಿಸುತ್ತಿದ್ದೇವೆ:
i. ಮಧ್ಯಪ್ರದೇಶ, ತೆಲಂಗಾಣ ಮತ್ತು ಒಡಿಶಾದಂತಹ ಹೊಸ ರಾಜ್ಯಗಳಿಗೆ ವಿಸ್ತರಿಸುವುದು.
ii. ಗುಜರಾತ್ ಮತ್ತು ತಮಿಳುನಾಡಿನಲ್ಲಿ 4 GW ನಷ್ಟು ಲೀಸಿಂಗ್ ಪ್ರದೇಶಗಳನ್ನು ಗುರುತಿಸುವ ಮೂಲಕ ಕಡಲಾಚೆಯ (offshore) ವಲಯವನ್ನು ಪ್ರಾರಂಭಿಸುವುದು ಮತ್ತು ಟೆಂಡರ್ಗಳನ್ನು ಸಿದ್ಧಪಡಿಸುವುದು.
iii. ಸಂಗ್ರಹಣಾ-ಸಂಬಂಧಿತ ವ್ಯವಹಾರ ಮಾದರಿಗಳ ಮೂಲಕ ಪವನ ಶಕ್ತಿಯನ್ನು ನಿರಂತರ ಮತ್ತು ದೃಢವಾದ ಹಸಿರು ವಿದ್ಯುತ್ ತಂತ್ರಗಳಲ್ಲಿ ಅಳವಡಿಸಿಕೊಳ್ಳುವುದು.
iv. ಗ್ರಿಡ್ ಅನ್ನು ಆಧುನೀಕರಿಸುವುದು, ವೇರಿಯಬಲ್ ನವೀಕರಿಸಬಹುದಾದ ಇಂಧನವನ್ನು ನಿರ್ವಹಿಸಲು AI-ಆಧಾರಿತ ಮುನ್ಸೂಚನೆಯಲ್ಲಿ ಹೂಡಿಕೆ ಮಾಡುವುದು.
v. ಸಂಪೂರ್ಣ ಪವನ ಶಕ್ತಿ ಮೌಲ್ಯ ಸರಪಳಿಯಲ್ಲಿ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವುದು.
ಕೇಂದ್ರ ಸಚಿವರಾದ ಜೋಶಿ ಅವರು ಕಾರ್ಯಕ್ರಮದಲ್ಲಿ ಪವನ ಶಕ್ತಿ ರೋಡ್ ಮ್ಯಾಪ್ ಮತ್ತು ಉತ್ಪಾದನಾ ರೋಡ್ ಮ್ಯಾಪ್ ಕುರಿತ ವರದಿಗಳನ್ನು ಬಿಡುಗಡೆ ಮಾಡಿದರು. ಈ ದಾಖಲೆಗಳು ನಮ್ಮ ಮುಂದಿನ ಪಯಣಕ್ಕೆ ಮಾರ್ಗದರ್ಶಕ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಭಾರತದಲ್ಲಿ ಬಲವಾದ ಮತ್ತು ಆತ್ಮನಿರ್ಭರ ಪವನ ಶಕ್ತಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಸಾಮೂಹಿಕ ಮಹತ್ವಾಕಾಂಕ್ಷೆ, ಕಾರ್ಯತಂತ್ರದ ಚಿಂತನೆ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು. ಪವನ ಸಾಮರ್ಥ್ಯ ಹೆಚ್ಚಳದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳನ್ನು ಸಹ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕರ್ನಾಟಕವು 1331.48 MW ಪವನ ಸಾಮರ್ಥ್ಯ ಹೆಚ್ಚಳದೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ನಂತರ ತಮಿಳುನಾಡು (1136.37 MW) ಮತ್ತು ಗುಜರಾತ್ (954.76 MW) ಸ್ಥಾನ ಪಡೆದಿವೆ.
ಜಾಗತಿಕ ಪವನ ದಿನದ ಬಗ್ಗೆ
ಪವನ ಶಕ್ತಿಯ ಅಭಿವೃದ್ಧಿಯನ್ನು ಗುರುತಿಸಲು ಪ್ರತಿ ವರ್ಷ ಜೂನ್ 15 ರಂದು ವಿಶ್ವ ಪವನ ದಿನವನ್ನು ಆಚರಿಸಲಾಗುತ್ತದೆ. ಸರ್ಕಾರದ ನಿರಂತರ ನೀತಿ ಬೆಂಬಲದಿಂದಾಗಿ, ಭಾರತದ ಪವನ ಶಕ್ತಿ ವಲಯವು ಗಣನೀಯ ಬೆಳವಣಿಗೆಯನ್ನು ಕಂಡಿದೆ. ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಆಯೋಜಿಸುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಾಧಿಕಾರಗಳು, ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂಗಳು), ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿ ಪಿ ಎಸ್ ಯು ಗಳು), ಪವನ ಶಕ್ತಿ ಉದ್ಯಮ, ಶೈಕ್ಷಣಿಕ ವಲಯ, ಮತ್ತು ಚಿಂತಕರ ಚಾವಡಿ (ಥಿಂಕ್ ಟ್ಯಾಂಕ್)ಗಳ ಪ್ರಮುಖ ಪಾಲುದಾರರು ಭಾಗವಹಿಸುತ್ತಾರೆ. ದೇಶದ ಪವನ ಶಕ್ತಿ ಅಭಿವೃದ್ಧಿಯ ಪ್ರಗತಿ ಸೇರಿದಂತೆ, ಪ್ರಮುಖ ಅಂಶಗಳ ಕುರಿತು ಸಂವಾದವನ್ನು ಸುಗಮಗೊಳಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಈ ಕಾರ್ಯಕ್ರಮಕ್ಕೆ ವಿಂಡ್ ಇಂಡಿಪೆಂಡೆಂಟ್ ಪವರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ಸ್ (WIPPA), ಇಂಡಿಯನ್ ವಿಂಡ್ ಟರ್ಬೈನ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (IWTMA), ಮತ್ತು ಇಂಡಿಯನ್ ವಿಂಡ್ ಪವರ್ ಅಸೋಸಿಯೇಷನ್ (IWPA) ಸಹ ಬೆಂಬಲ ನೀಡಿವೆ.

Matribhumi Samachar Kannad

