ರಾಷ್ಟ್ರೀಯ ‘ಫಿಟ್ ಇಂಡಿಯಾ’ ಮತ್ತು ‘ವಿಕಸಿತ ಭಾರತಕ್ಕಾಗಿ ಫಿಟ್ ಯುವ’ ಅಭಿಯಾನಗಳ ಅಡಿಯಲ್ಲಿ ಕ್ರಿಯಾತ್ಮಕ ಉಪಕ್ರಮವಾದ ಸಂಸದ್ ಖೇಲ್ ಮಹೋತ್ಸವಕ್ಕೆ ಇಂದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.

ಸೆಪ್ಟೆಂಬರ್ 27 ರಿಂದ ಡಿಸೆಂಬರ್ 25, 2025 ರವರೆಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರು ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರ ಕಚೇರಿ ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ಸುಶ್ರೀ ಶೋಭಾ ಅವರು, ತಳಮಟ್ಟದಲ್ಲಿ ಬಲಿಷ್ಠ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಧಾನಮಂತ್ರಿಗಳ ದೃಷ್ಟಿಕೋನವನ್ನು ತಿಳಿಸಿದರು. ಎಲ್ಲ ವಯೋಮಾನದವರಿಗೆ ದೈಹಿಕ ಸಾಮರ್ಥ್ಯ ಅವಶ್ಯವಾಗಿದ್ದು, ಕಾರ್ಯಕ್ರಮದಲ್ಲಿ ವಿಶೇಷವಾಗಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಅವರ ಸ್ಥಿರವಾದ ಶಕ್ತಿ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು. ಸಂಸದ್ ಖೇಲ್ ಮಹೋತ್ಸವದ ಗುರಿಯು ಕ್ರೀಡೆ ಮತ್ತು ದೈಹಿಕ ಸಾಮರ್ಥ್ಯ ಉತ್ತೇಜಿಸುವುದರ ಜೊತೆಗೆ, ಕ್ಷೇತ್ರದಿಂದ ಪ್ರತಿಭೆಗಳನ್ನು ಗುರುತಿಸಿ, ಪೋಷಿಸುವುದು ಮತ್ತು ಯುವಜನರನ್ನು ‘ವಿಕಸಿತ ಭಾರತ’ ನಿರ್ಮಾಣದ ಕಡೆಗೆ ಪ್ರೇರೇಪಿಸುವುದಾಗಿದೆ ಎಂದು ಹೇಳಿದರು.

ಬೆಂಗಳೂರಿನ ಪುಲಕೇಶಿ ನಗರದ ಪೆರಿಯಾರ್ ಮೈದಾನದಲ್ಲಿ ನಡೆದ ವಾಲಿಬಾಲ್ ಮುಂತಾದ ಕ್ರೀಡಾ ಸ್ಫರ್ಧೆಗಳಲ್ಲಿ 16ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು. ಈ ಸಂದರ್ಭದಲ್ಲಿ ಮುರಳಿ, ಬೆಂಗಳೂರು ಉತ್ತರ ಜಿಲ್ಲೆಯ ಗಣ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.
Matribhumi Samachar Kannad

