ಜೋರ್ಡಾನ್ ನ ಹ್ಯಾಶೆಮೈಟ್ ಸಾಮ್ರಾಜ್ಯದ ಘನವೆತ್ತ ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ, ಭಾರತ ಗಣರಾಜ್ಯದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಡಿಸೆಂಬರ್ 15 ಮತ್ತು 16 ರಂದು ಜೋರ್ಡಾನ್ಗೆ ಭೇಟಿ ನೀಡಿದರು.
ಉಭಯ ದೇಶಗಳು ತಮ್ಮ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ಪ್ರಧಾನಮಂತ್ರಿ ಮೋದಿಯವರ ಈ ಭೇಟಿ ನಡೆಯುತ್ತಿರುವುದು ಅತ್ಯಂತ ಮಹತ್ವದ್ದು ಎಂದು ಉಭಯ ನಾಯಕರು ಅಭಿಪ್ರಾಯಪಟ್ಟರು.
ಪರಸ್ಪರ ನಂಬಿಕೆ, ಆತ್ಮೀಯತೆ ಮತ್ತು ಸದ್ಭಾವನೆಗಳಿಂದ ಕೂಡಿದ ಉಭಯ ದೇಶಗಳ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ನಾಯಕರು ಶ್ಲಾಘಿಸಿದರು. ರಾಜಕೀಯ, ಆರ್ಥಿಕ, ರಕ್ಷಣೆ, ಭದ್ರತೆ, ಸಂಸ್ಕೃತಿ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ಭಾರತ-ಜೋರ್ಡಾನ್ ನಡುವಿನ ಬಹುಮುಖಿ ಸಂಬಂಧಗಳನ್ನು ಅವರು ಸಕಾರಾತ್ಮಕವಾಗಿ ಅವಲೋಕಿಸಿದರು.
ದ್ವಿಪಕ್ಷೀಯ ಮಟ್ಟದಲ್ಲಿ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಎರಡೂ ಕಡೆಯ ನಡುವಿನ ಅತ್ಯುತ್ತಮ ಸಹಕಾರವನ್ನು ನಾಯಕರು ಶ್ಲಾಘಿಸಿದರು. ಇದೇ ವೇಳೆ, ನ್ಯೂಯಾರ್ಕ್ (ಸೆಪ್ಟೆಂಬರ್ 2019), ರಿಯಾದ್ (ಅಕ್ಟೋಬರ್ 2019), ದುಬೈ (ಡಿಸೆಂಬರ್ 2023) ಮತ್ತು ಇಟಲಿಯಲ್ಲಿ (ಜೂನ್ 2024) ನಡೆದ ತಮ್ಮ ಹಿಂದಿನ ಭೇಟಿಗಳನ್ನು ಅವರು ಆತ್ಮೀಯವಾಗಿ ಸ್ಮರಿಸಿದರು.
ರಾಜಕೀಯ ಸಂಬಂಧಗಳು
ಉಭಯ ನಾಯಕರು 2025ರ ಡಿಸೆಂಬರ್ 15ರಂದು ಅಮ್ಮನ್ ನಲ್ಲಿ ದ್ವಿಪಕ್ಷೀಯ ಹಾಗೂ ವಿಸ್ತೃತ ಮಾತುಕತೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಅವರು ಭಾರತ ಮತ್ತು ಜೋರ್ಡಾನ್ ನಡುವಿನ ಸಂಬಂಧಗಳ ಕುರಿತು ಚರ್ಚಿಸಿದರು. ಅಲ್ಲದೆ, ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಹಾಗೂ ತಮ್ಮ ಅಭಿವೃದ್ಧಿಯ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವಲ್ಲಿ ‘ವಿಶ್ವಾಸಾರ್ಹ ಪಾಲುದಾರರಾಗಿ’ ಜೊತೆಯಾಗಿ ನಿಲ್ಲಲು ಅವರು ಸಮ್ಮತಿಸಿದರು.
ಉಭಯ ದೇಶಗಳ ನಡುವೆ ನಿಯಮಿತವಾಗಿ ನಡೆಯುತ್ತಿರುವ ರಾಜಕೀಯ ಸಂವಾದಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಜಂಟಿ ಕಾರ್ಯಕಾರಿ ಗುಂಪುಗಳ (JWG) ಸಭೆಗಳ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು, ಈಗಾಗಲೇ ಸ್ಥಾಪಿತವಾಗಿರುವ ವ್ಯವಸ್ಥೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಅವರು ನಿರ್ಧರಿಸಿದರು. ಈ ನಿಟ್ಟಿನಲ್ಲಿ, 2025ರ ಏಪ್ರಿಲ್ 29ರಂದು ಅಮ್ಮನ್ ನಲ್ಲಿ ನಡೆದ ಉಭಯ ದೇಶಗಳ ವಿದೇಶಾಂಗ ಸಚಿವಾಲಯಗಳ ನಡುವಿನ ‘ನಾಲ್ಕನೇ ಸುತ್ತಿನ ರಾಜಕೀಯ ಸಮಾಲೋಚನೆ’ಯ ಫಲಿತಾಂಶಗಳನ್ನು ನಾಯಕರು ಶ್ಲಾಘಿಸಿದರು. ಮುಂದಿನ ಐದನೇ ಸುತ್ತಿನ ಸಭೆಯು ನವದೆಹಲಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ, ಉಭಯ ದೇಶಗಳ ನಡುವಿನ ಸಂಬಂಧಗಳ ಸಕಾರಾತ್ಮಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲು, ಉನ್ನತ ಮಟ್ಟದ ಸಂವಾದಗಳನ್ನು ಉತ್ತೇಜಿಸಲು ಹಾಗೂ ಪರಸ್ಪರ ಸಹಕಾರವನ್ನು ಮುಂದುವರಿಸಲು ನಾಯಕರು ತಮ್ಮ ದೃಢಸಂಕಲ್ಪವನ್ನು ಪುನರುಚ್ಚರಿಸಿದರು.
ಆರ್ಥಿಕ ಸಹಕಾರ
ಭಾರತ ಮತ್ತು ಜೋರ್ಡಾನ್ ನಡುವಿನ ಬಲವಾದ ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯವನ್ನು ಉಭಯ ನಾಯಕರು ಶ್ಲಾಘಿಸಿದರು. ಪ್ರಸ್ತುತ 2024ರಲ್ಲಿ ಇದರ ಮೌಲ್ಯ 2.3 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಇದು ಭಾರತವನ್ನು ಜೋರ್ಡಾನ್ ನ ಮೂರನೇ ಅತಿದೊಡ್ಡ ವಾಣಿಜ್ಯ ಪಾಲುದಾರನನ್ನಾಗಿ ಮಾಡಿದೆ. ದ್ವಿಪಕ್ಷೀಯ ವ್ಯಾಪಾರವನ್ನು ಇನ್ನಷ್ಟು ವೃದ್ಧಿಸಲು ವಾಣಿಜ್ಯ ಸರಕುಗಳಲ್ಲಿ ವೈವಿಧ್ಯತೆಯನ್ನು ತರುವ ಅಗತ್ಯವಿದೆ ಎಂದು ನಾಯಕರು ಒಪ್ಪಿಕೊಂಡರು. ಇದಲ್ಲದೆ, ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳ ಪ್ರಗತಿಯನ್ನು ಪರಿಶೀಲಿಸಲು, 2026ರ ಪ್ರಥಮಾರ್ಧದಲ್ಲಿ 11ನೇ ‘ವ್ಯಾಪಾರ ಮತ್ತು ಆರ್ಥಿಕ ಜಂಟಿ ಸಮಿತಿ’ಯ ಸಭೆಯನ್ನು ಶೀಘ್ರವಾಗಿ ಕರೆಯಲು ನಾಯಕರು ಸಮ್ಮತಿಸಿದರು.
ದಿನಾಂಕ 2025ರ ಡಿಸೆಂಬರ್ 16 ರಂದು ನಡೆದ ಭೇಟಿಯ ಸಂದರ್ಭದಲ್ಲಿ ಆಯೋಜಿಸಲಾದ ‘ಜೋರ್ಡಾನ್-ಭಾರತ ಬಿಸಿನೆಸ್ ಫೋರಂ’ ಸಭೆಯನ್ನು ನಾಯಕರು ಸ್ವಾಗತಿಸಿದರು. ಉಭಯ ದೇಶಗಳ ಉನ್ನತ ಮಟ್ಟದ ವಾಣಿಜ್ಯ ನಿಯೋಗವು, ಎರಡು ದೇಶಗಳ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಇರುವ ಮಾರ್ಗಗಳ ಬಗ್ಗೆ ಚರ್ಚಿಸಿತು.
ಕಸ್ಟಮ್ಸ್ (ಸುಂಕ) ಕ್ಷೇತ್ರದಲ್ಲಿನ ಸಹಕಾರದ ಮಹತ್ವವನ್ನು ನಾಯಕರು ಒಪ್ಪಿಕೊಂಡರು. ‘ಕಸ್ಟಮ್ಸ್ ವಿಷಯಗಳಲ್ಲಿ ಸಹಕಾರ ಮತ್ತು ಪರಸ್ಪರ ಆಡಳಿತಾತ್ಮಕ ನೆರವು’ ಒಪ್ಪಂದವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಅವರು ಒಪ್ಪಿದರು. ಕಸ್ಟಮ್ಸ್ ಕಾನೂನುಗಳ ಸರಿಯಾದ ಅನ್ವಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಕಸ್ಟಮ್ಸ್ ಅಪರಾಧಗಳನ್ನು ತಡೆಗಟ್ಟಲು ಮಾಹಿತಿ ಹಂಚಿಕೆಗೆ ಈ ಒಪ್ಪಂದವು ಅನುವು ಮಾಡಿಕೊಡುತ್ತದೆ. ಅಲ್ಲದೆ, ಉಭಯ ದೇಶಗಳ ನಡುವೆ ಸಾಗಣೆಯಾಗುವ ಸರಕುಗಳ ದಕ್ಷ ವಿಲೇವಾರಿಗಾಗಿ ಸರಳೀಕೃತ ಕಸ್ಟಮ್ಸ್ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳುವ ಮೂಲಕ ವ್ಯಾಪಾರವನ್ನು ಸುಗಮಗೊಳಿಸಲು ಇದು ಸಹಕಾರಿಯಾಗಿದೆ.
ಜೋರ್ಡಾನ್ ನ ಆಯಕಟ್ಟಿನ ಭೌಗೋಳಿಕ ಸ್ಥಾನ ಮತ್ತು ಮುಂದುವರಿದ ಲಾಜಿಸ್ಟಿಕ್ಸ್ ಸಾಮರ್ಥ್ಯಗಳನ್ನು ಪರಿಗಣಿಸಿ, ಉಭಯ ದೇಶಗಳ ನಡುವೆ ವರ್ಧಿತ ಆರ್ಥಿಕ ಸಹಕಾರಕ್ಕೆ ಇರುವ ವಿಫುಲ ಅವಕಾಶಗಳನ್ನು ಎರಡೂ ನಾಯಕರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಹಂಚಿಕೊಂಡ ಆರ್ಥಿಕ ಹಿತಾಸಕ್ತಿಗಳು ಮತ್ತು ಖಾಸಗಿ ವಲಯದ ಸಹಯೋಗವನ್ನು ಮುನ್ನಡೆಸಲು, ಜೋರ್ಡಾನ್ ನ ಟ್ರಾನ್ಸಿಟ್ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯದ ಪ್ರಾದೇಶಿಕ ಏಕೀಕರಣವನ್ನೂ ಒಳಗೊಂಡಂತೆ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಸಂಪರ್ಕವನ್ನು ಬಲಪಡಿಸುವ ಮಹತ್ವವನ್ನು ಉಭಯ ಪಕ್ಷಗಳು ಪುನರುಚ್ಚರಿಸಿದವು.
ತಂತ್ರಜ್ಞಾನ ಮತ್ತು ಶಿಕ್ಷಣ
ಡಿಜಿಟಲ್ ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಹಕಾರವನ್ನು ಉಭಯ ಪಕ್ಷಗಳು ಪರಿಶೀಲಿಸಿದವು. ಡಿಜಿಟಲ್ ರೂಪಾಂತರದಲ್ಲಿ ಅಧಿಕಾರಿಗಳ ಸಾಮರ್ಥ್ಯ ವೃದ್ಧಿ, ಡಿಜಿಟಲ್ ರೂಪಾಂತರ ಪರಿಹಾರಗಳ ಅನುಷ್ಠಾನದ ಬಗ್ಗೆ ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ಸಾಂಸ್ಥಿಕ ಸಹಕಾರವನ್ನು ಉತ್ತೇಜಿಸುವುದು ಮತ್ತು ಇತರ ಕ್ಷೇತ್ರಗಳಲ್ಲಿ ಸಹಕರಿಸಲು ಒಪ್ಪಿದವು. ಎರಡೂ ದೇಶಗಳ ಡಿಜಿಟಲ್ ರೂಪಾಂತರದ ಉಪಕ್ರಮಗಳ ಅನುಷ್ಠಾನದಲ್ಲಿ ಸಹಕಾರದ ಹೆಚ್ಚಿನ ಮಾರ್ಗಗಳನ್ನು ಅನ್ವೇಷಿಸಲು ಅವರು ಒಪ್ಪಿದರು. ಅಲ್ ಹುಸೇನ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿರುವ ‘ಇಂಡಿಯಾ-ಜೋರ್ಡಾನ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇನ್ಫಾರ್ಮೇಶನ್ ಟೆಕ್ನಾಲಜಿ’ಯ ಮೂಲಸೌಕರ್ಯ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ವಿಸ್ತರಿಸಲು ಮತ್ತು ಉನ್ನತೀಕರಿಸಲು ಉಭಯ ಪಕ್ಷಗಳು ಆಸಕ್ತಿ ವ್ಯಕ್ತಪಡಿಸಿದವು.
ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ (DPI) ಕ್ಷೇತ್ರದಲ್ಲಿನ ಸಹಯೋಗಕ್ಕಾಗಿ ಮಾರ್ಗಸೂಚಿಯನ್ನು ಉಭಯ ಪಕ್ಷಗಳು ಚರ್ಚಿಸಿದವು. ಈ ಹಿನ್ನೆಲೆಯಲ್ಲಿ, ಡಿಪಿಐ (DPI) ಕುರಿತು ಭಾರತದ ಅನುಭವವನ್ನು ಹಂಚಿಕೊಳ್ಳುವ ಒಪ್ಪಂದಕ್ಕೆ ಪ್ರವೇಶಿಸಲು ‘ಉದ್ದೇಶ ಪತ್ರ’ಕ್ಕೆ (Letter of Intent) ಸಹಿ ಹಾಕಿರುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು. ಸುರಕ್ಷಿತ, ಭದ್ರ, ವಿಶ್ವಾಸಾರ್ಹ ಮತ್ತು ಎಲ್ಲರನ್ನೂ ಒಳಗೊಳ್ಳುವ ಡಿಜಿಟಲ್ ಪರಿಸರವನ್ನು ಖಚಿತಪಡಿಸಿಕೊಳ್ಳಲು ಸಹಕರಿಸಲು ಎರಡೂ ಕಡೆಯವರು ಒಪ್ಪಿದರು.
ಶಿಕ್ಷಣ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪ್ರಮುಖ ಪಾತ್ರವನ್ನು ಉಭಯ ಪಕ್ಷಗಳು ಗುರುತಿಸಿದವು. ಅಲ್ಲದೆ ಡಿಜಿಟಲ್ ರೂಪಾಂತರ, ಆಡಳಿತ ಮತ್ತು ಸಾಮರ್ಥ್ಯ ವೃದ್ಧಿ ಕ್ಷೇತ್ರಗಳಲ್ಲಿ ನಿರಂತರ ಸಹಕಾರಕ್ಕೆ ಸಮ್ಮತಿಸಿದವು.
ಸುಸ್ಥಿರ ಅಭಿವೃದ್ಧಿಯಲ್ಲಿ ಸಾಮರ್ಥ್ಯ ವೃದ್ಧಿಯ ಮಹತ್ವದ ಪಾತ್ರವನ್ನು ಭಾರತೀಯ ಪಕ್ಷವು ಉಲ್ಲೇಖಿಸಿತು. ಮಾಹಿತಿ ತಂತ್ರಜ್ಞಾನ, ಕೃಷಿ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ‘ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ’ (Indian Technical and Economic Cooperation – ITEC) ಕಾರ್ಯಕ್ರಮದ ಮೂಲಕ ಈ ಕ್ಷೇತ್ರದಲ್ಲಿ ಸಹಕಾರವನ್ನು ಮುಂದುವರಿಸಲು ಬದ್ಧತೆಯನ್ನು ವ್ಯಕ್ತಪಡಿಸಿತು. ಪ್ರಸಕ್ತ ಸಾಲಿನಿಂದ ಜಾರಿಗೆ ಬರುವಂತೆ ಐಟಿಇಸಿ (ITEC) ಸ್ಥಾನಗಳನ್ನು 35 ರಿಂದ 50 ಕ್ಕೆ ಹೆಚ್ಚಿಸಿರುವುದನ್ನು ಜೋರ್ಡಾನ್ ಕಡೆಯವರು ಶ್ಲಾಘಿಸಿದರು.
ಆರೋಗ್ಯ
ಆರೋಗ್ಯ ಕ್ಷೇತ್ರದಲ್ಲಿ, ವಿಶೇಷವಾಗಿ ಟೆಲಿ-ಮೆಡಿಸಿನ್ ಅನ್ನು ಮುಂದುವರಿಸುವಲ್ಲಿ ಮತ್ತು ಆರೋಗ್ಯ ಕಾರ್ಯಪಡೆಯ ತರಬೇತಿಯಲ್ಲಿ ಸಾಮರ್ಥ್ಯ ವೃದ್ಧಿಗೊಳಿಸುವಲ್ಲಿ ಪರಿಣತಿಯನ್ನು ಹಂಚಿಕೊಳ್ಳುವ ಮೂಲಕ, ಒಗ್ಗೂಡಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ನಾಯಕರು ಒತ್ತಿ ಹೇಳಿದರು. ಜನರ ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಮತ್ತು ‘ಸುಸ್ಥಿರ ಅಭಿವೃದ್ಧಿ ಗುರಿಗಳನ್ನು’ (SDGs) ಮುನ್ನಡೆಸುವಲ್ಲಿ ಆರೋಗ್ಯ ಮತ್ತು ಔಷಧೀಯ ಕ್ಷೇತ್ರದ ಪಾತ್ರವನ್ನು ಒತ್ತಿ ಹೇಳುತ್ತಾ, ಇದನ್ನು ದ್ವಿಪಕ್ಷೀಯ ಸಹಕಾರದ ಪ್ರಮುಖ ಆಧಾರಸ್ತಂಭವೆಂದು ನಾಯಕರು ಒಪ್ಪಿಕೊಂಡರು.
ಕೃಷಿ
ಆಹಾರ ಭದ್ರತೆ ಮತ್ತು ಪೋಷಣೆಯನ್ನು ಹೆಚ್ಚಿಸುವಲ್ಲಿ ಕೃಷಿ ವಲಯದ ನಿರ್ಣಾಯಕ ಪಾತ್ರವನ್ನು ನಾಯಕರು ಒಪ್ಪಿಕೊಂಡರು ಮತ್ತು ಈ ವಲಯದಲ್ಲಿ ಸಹಯೋಗವನ್ನು ಬಲಪಡಿಸಲು ಹಂಚಿಕೊಂಡ ಬದ್ಧತೆಯನ್ನು ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ, ರಸಗೊಬ್ಬರ, ವಿಶೇಷವಾಗಿ ಫಾಸ್ಫೇಟ್ಗಳ ಕ್ಷೇತ್ರದಲ್ಲಿ ಉಭಯ ಪಕ್ಷಗಳ ನಡುವಿನ ಪ್ರಸ್ತುತ ಸಹಕಾರವನ್ನು ಅವರು ಪರಿಶೀಲಿಸಿದರು. ಕೃಷಿ ಮತ್ತು ಸಂಬಂಧಿತ ವಲಯಗಳ ದಕ್ಷತೆಯನ್ನು ಹೆಚ್ಚಿಸಲು, ತಂತ್ರಜ್ಞಾನ ಮತ್ತು ಪರಿಣತಿಯ ವಿನಿಮಯದಲ್ಲಿ ಸಹಯೋಗವನ್ನು ಹೆಚ್ಚಿಸಲು ಸಹ ಅವರು ಒಪ್ಪಿದರು.
ಜಲ ಸಹಕಾರ
‘ಜಲ ಸಂಪನ್ಮೂಲ ನಿರ್ವಹಣೆ ಮತ್ತು ಅಭಿವೃದ್ಧಿ’ (Water Resources Management & Development) ಕ್ಷೇತ್ರದಲ್ಲಿನ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು. ನೀರು ಉಳಿಸುವ ಕೃಷಿ ತಂತ್ರಜ್ಞಾನಗಳು, ಸಾಮರ್ಥ್ಯ ವೃದ್ಧಿ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವಿಕೆ ಮತ್ತು ಯೋಜನೆ ಹಾಗೂ ಅಂತರ್ಜಲ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಉಭಯ ಪಕ್ಷಗಳ ನಡುವಿನ ಸಹಕಾರದ ಮಹತ್ವವನ್ನು ಅವರು ಒಪ್ಪಿಕೊಂಡರು.
ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ
ಹವಾಮಾನ ಬದಲಾವಣೆ, ಪರಿಸರ, ಸುಸ್ಥಿರ ಅಭಿವೃದ್ಧಿ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನದ ಬಳಕೆಯನ್ನು ಪ್ರೋತ್ಸಾಹಿಸುವ ಕ್ಷೇತ್ರದಲ್ಲಿ ಸಹಯೋಗವನ್ನು ಹೆಚ್ಚಿಸುವ ಮಹತ್ವವನ್ನು ನಾಯಕರು ಚರ್ಚಿಸಿದರು. ಈ ಹಿನ್ನೆಲೆಯಲ್ಲಿ, ‘ಹೊಸ ಮತ್ತು ನವೀಕರಿಸಬಹುದಾದ ಇಂಧನ’ ಕ್ಷೇತ್ರದಲ್ಲಿನ ತಾಂತ್ರಿಕ ಸಹಕಾರದ ಕುರಿತಾದ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು. ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ, ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ವಿನಿಮಯ ಮತ್ತು ತರಬೇತಿ, ಕಾರ್ಯಾಗಾರಗಳು, ವಿಚಾರಗೋಷ್ಠಿಗಳು ಮತ್ತು ಕಾರ್ಯ ಗುಂಪುಗಳ ಆಯೋಜನೆ, ವಾಣಿಜ್ಯೇತರ ಆಧಾರದ ಮೇಲೆ ಉಪಕರಣಗಳು, ತಾಂತ್ರಿಕ ಪರಿಣತಿ ಮತ್ತು ತಂತ್ರಜ್ಞಾನದ ವರ್ಗಾವಣೆ ಹಾಗೂ ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ಜಂಟಿ ಸಂಶೋಧನೆ ಅಥವಾ ತಾಂತ್ರಿಕ ಯೋಜನೆಗಳ ಅಭಿವೃದ್ಧಿಗೆ ಅವರು ಒಪ್ಪಿದರು.
ಸಾಂಸ್ಕೃತಿಕ ಸಹಕಾರ
ಭಾರತ ಮತ್ತು ಜೋರ್ಡಾನ್ ನಡುವೆ ಬೆಳೆಯುತ್ತಿರುವ ಸಾಂಸ್ಕೃತಿಕ ವಿನಿಮಯದ ಬಗ್ಗೆ ಉಭಯ ಪಕ್ಷಗಳು ಮೆಚ್ಚುಗೆ ವ್ಯಕ್ತಪಡಿಸಿದವು ಮತ್ತು 2025–2029ರ ಅವಧಿಯ ‘ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ’ಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದವು. ಸಂಗೀತ, ನೃತ್ಯ, ರಂಗಭೂಮಿ, ಕಲೆ, ಆರ್ಕೈವ್ ಗಳು, ಗ್ರಂಥಾಲಯಗಳು ಮತ್ತು ಸಾಹಿತ್ಯ ಹಾಗೂ ಉತ್ಸವಗಳ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಆಲೋಚನೆಯನ್ನು ಅವರು ಬೆಂಬಲಿಸಿದರು. ಇದಲ್ಲದೆ, ಪೆಟ್ರಾ ನಗರ ಮತ್ತು ಎಲ್ಲೋರಾ ಗುಹೆಗಳ ತಾಣದ ನಡುವಿನ ‘ಟ್ವಿನ್ನಿಂಗ್ ಒಪ್ಪಂದಕ್ಕೆ’ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು. ಈ ಒಪ್ಪಂದವು ಪುರಾತತ್ವ ತಾಣಗಳ ಅಭಿವೃದ್ಧಿ ಮತ್ತು ಸಾಮಾಜಿಕ ಸಂಬಂಧಗಳ ಉತ್ತೇಜನದ ಮೇಲೆ ಕೇಂದ್ರೀಕರಿಸಿದೆ.
ಸಂಪರ್ಕ
ದ್ವಿಪಕ್ಷೀಯ ಸಂಬಂಧಗಳನ್ನು ಪೋಷಿಸುವಲ್ಲಿ ನೇರ ಸಂಪರ್ಕದ ಮಹತ್ವವನ್ನು ಉಭಯ ಪಕ್ಷಗಳು ಒಪ್ಪಿಕೊಂಡವು. ವ್ಯಾಪಾರ, ಹೂಡಿಕೆ, ಪ್ರವಾಸೋದ್ಯಮ ಮತ್ತು ಜನರ ನಡುವಿನ ವಿನಿಮಯವನ್ನು ಉತ್ತೇಜಿಸಲು ಇದು ಪ್ರಮುಖ ಮೂಲಾಧಾರವಾಗಿದೆ ಮತ್ತು ಪರಸ್ಪರ ಆಳವಾದ ತಿಳುವಳಿಕೆಯನ್ನು ಬೆಳೆಸಲು ಇದು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ, ಉಭಯ ದೇಶಗಳ ನಡುವೆ ನೇರ ಸಂಪರ್ಕವನ್ನು ಹೆಚ್ಚಿಸುವ ಸಾಧ್ಯತೆಯನ್ನು ಪರಿಶೀಲಿಸಲು ಅವರು ಒಪ್ಪಿದರು.
ಬಹುಪಕ್ಷೀಯ ಸಹಕಾರ
ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ (ISA), ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟ (CDRI) ಮತ್ತು ಜಾಗತಿಕ ಜೈವಿಕ ಇಂಧನ ಮೈತ್ರಿಕೂಟದಲ್ಲಿ (GBA) ಭಾರತದ ನಾಯಕತ್ವವನ್ನು ಘನತೆವೆತ್ತ ದೊರೆ ಎರಡನೇ ಅಬ್ದುಲ್ಲಾ ಅವರು ಶ್ಲಾಘಿಸಿದರು. ಐ ಎಸ್ ಎ (ISA), ಸಿ ಡಿ ಆರ್ ಐ (CDRI) ಮತ್ತು ಜಿಬಿಎ (GBA) ಗಳಿಗೆ ಸೇರಲು ಜೋರ್ಡಾನ್ ವ್ಯಕ್ತಪಡಿಸಿದ ಇಚ್ಛೆಯನ್ನು ಭಾರತವು ಸ್ವಾಗತಿಸಿತು. ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವ ಬದ್ಧತೆಗಳನ್ನು ಸಾಧಿಸಲು ಮತ್ತು ಉಭಯ ದೇಶಗಳ ಜನರಿಗೆ ಹೆಚ್ಚಿನ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಒದಗಿಸಲು, ಜೈವಿಕ ಇಂಧನಗಳನ್ನು ಸುಸ್ಥಿರ ಮತ್ತು ಕಡಿಮೆ ಇಂಗಾಲದ ಆಯ್ಕೆಯಾಗಿ ಉಭಯ ಪಕ್ಷಗಳು ಗುರುತಿಸಿದವು.
ಭೇಟಿಯ ಕೊನೆಯಲ್ಲಿ, ತಮಗೆ ಹಾಗೂ ತಮ್ಮ ಜೊತೆಗಿದ್ದ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತ ಮತ್ತು ಉದಾರ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಘನವೆತ್ತ ರಾಜ ಅಬ್ದುಲ್ಲಾ II ಅವರಿಗೆ ತಮ್ಮ ಹೃತ್ಪೂರ್ವಕ ಧನ್ಯವಾದ ಹಾಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಅಲ್ಲದೆ, ಜೋರ್ಡಾನ್ನ ಹ್ಯಾಶೆಮೈಟ್ ಸಾಮ್ರಾಜ್ಯದ ಸ್ನೇಹಪರ ಜನರ ನಿರಂತರ ಪ್ರಗತಿ ಮತ್ತು ಸಮೃದ್ಧಿಗಾಗಿ ಅವರು ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು. ಇದೇ ವೇಳೆ, ಘನವೆತ್ತ ರಾಜರು ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಭಾರತದ ಸ್ನೇಹಪರ ಜನರಿಗೆ ಮತ್ತಷ್ಟು ಪ್ರಗತಿ ಮತ್ತು ಸಮೃದ್ಧಿ ಸಿಗಲಿ ಎಂದು ತಮ್ಮ ಪ್ರಾಮಾಣಿಕ ಶುಭ ಹಾರೈಕೆಗಳನ್ನು ತಿಳಿಸಿದರು.
Matribhumi Samachar Kannad

