₹5,532 ಕೋಟಿ ಮೌಲ್ಯದ ಏಳು ಅರ್ಜಿಗಳ ಅನುಮೋದನೆಯನ್ನು ಈ ಹಿಂದೆ ಘೋಷಿಸಿದ್ದರ ಮುಂದುವರಿದ ಭಾಗವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಲೆಕ್ಟ್ರಾನಿಕ್ಸ್ ಘಟಕ ತಯಾರಿಕಾ ಯೋಜನೆ (ಇ.ಸಿ.ಎಂ.ಎಸ್) ಅಡಿಯಲ್ಲಿ ಇನ್ನೂ 17 ಪ್ರಸ್ತಾವನೆಗಳನ್ನು ಅನುಮೋದಿಸಿದೆ. ಈ ಅನುಮೋದಿತ ಯೋಜನೆಗಳು ದೇಶಾದ್ಯಂತ ವ್ಯಾಪಿಸಿದ್ದು, ಒಟ್ಟು ₹7,172 ಕೋಟಿ ಹೂಡಿಕೆಯೊಂದಿಗೆ, ₹65,111 ಕೋಟಿ ಉತ್ಪಾದನೆಯ ಅಂದಾಜು ಮಾಡಲಾಗಿದ್ದು, 11,808 ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.
ಅನುಮೋದಿತ ಘಟಕಗಳು 9 ರಾಜ್ಯಗಳಾದ ಗೋವಾ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ಹರಡಿಕೊಂಡಿವೆ, ಇದು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಮತ್ತು ಮಹಾನಗರಗಳಿಂದಾಚೆಗೆ ಉನ್ನತ ಕೌಶಲ್ಯದ ಉದ್ಯೋಗಗಳನ್ನು ಸೃಷ್ಟಿಸುವ ಸರ್ಕಾರದ ಬದ್ಧತೆಯನ್ನು ಬಲಪಡಿಸುತ್ತದೆ.
ಎರಡನೇ ಕಂತಿನಲ್ಲಿ ವ್ಯಾಪಕ ಶ್ರೇಣಿಯ ಘಟಕಗಳು ಮತ್ತು ಉಪ-ಅಸೆಂಬ್ಲಿಗಳು ಸೇರಿವೆ, ಅವುಗಳೆಂದರೆ:
ಜಬಿಲ್ ಸರ್ಕ್ಯೂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಜೆಟ್ಚೆಮ್ ಸಪ್ಲೈ ಚೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ನಿಂದ ಭಾರತದ ಮೊಟ್ಟಮೊದಲ ಆಪ್ಟಿಕಲ್ ಟ್ರಾನ್ಸ್‌ಸಿವರ್ (ಎಸ್.ಪಿ.ಎಫ್) ತಯಾರಿಕಾ ಸೌಲಭ್ಯಗಳು;
ಸಂವಹನ ಉಪಕರಣಗಳು, ಕಂಪ್ಯೂಟರ್ ಗಳು ಮತ್ತು ಕೈಗಾರಿಕಾ ಎಲೆಕ್ಟ್ರಾನಿಕ್ಸ್‌ಗಳಲ್ಲಿ ನಿಖರವಾದ ಸಮಯ ಅನ್ವಯಿಕೆಗಳಿಗಾಗಿ ರಾಕನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಂದ ಆಸಿಲೇಟರ್‌ಗಳು;
ಏಕ್ವಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ನಿಂದ ಲ್ಯಾಪ್‌ಟಾಪ್ ಗಳು ಮತ್ತು ಸ್ಮಾರ್ಟ್‌ವಾಚ್ ಗಳಿಗೆ ಎನ್ಕ್ಲೋಸರ್ಸ್;
ಎಸುಕ್ಸ್ ಸೇಫ್ಟಿ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಯುನೊ ಮಿಂಡಾ ಲಿಮಿಟೆಡ್ ಮತ್ತು ಸಿರ್ಮಾ ಮೊಬಿಲಿಟಿ ಪ್ರೈವೇಟ್
ಲಿಮಿಟೆಡ್ ನಿಂದ ಕ್ಯಾಮೆರಾ ಮಾಡ್ಯೂಲ್ ಗಳು;
ಟಿ.ಇ. ಕನೆಕ್ಟಿವಿಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಂದ ಎಲೆಕ್ಟ್ರಾನಿಕ್ ಅಪ್ಲಿಕೇಶನ್ ಗಳಿಗೆ ಕನೆಕ್ಟರ್‌ಗಳು;
ಹೈ-ಕ್ಯೂ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ಸೆಕ್ಯೂರ್ ಸರ್ಕ್ಯೂಟ್ಸ್ ಲಿಮಿಟೆಡ್, ಜೆಟ್‌ಫ್ಯಾಬ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಎಹೂಮ್ ಐಒಟಿ ಪ್ರೈವೇಟ್ ಲಿಮಿಟೆಡ್, ಸಿಯೆರಾ ಸರ್ಕ್ಯೂಟ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಮೀನಾ ಎಲೆಕ್ಟ್ರೋಟೆಕ್ ಪ್ರೈವೇಟ್ ಲಿಮಿಟೆಡ್, ಎಟಿ & ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮೈಕ್ರೋಪ್ಯಾಕ್ ಪ್ರೈವೇಟ್ ಲಿಮಿಟೆಡ್ ಮತ್ತು ಇನ್ಫೋಪವರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ – ಈ ಒಂಬತ್ತು ಕಂಪನಿಗಳಿಂದ ಬಹು-ಪದರದ ಪಿಸಿಬಿಗಳು.
ಈ ಘಟಕಗಳು ಸ್ಮಾರ್ಟ್‌ಫೋನ್ ಗಳು, ಐ.ಟಿ. ಹಾರ್ಡ್‌ವೇರ್, ಧರಿಸಬಹುದಾದ ವಸ್ತುಗಳು, ಟೆಲಿಕಾಂ, ವಿದ್ಯುತ್ ಚಾಲಿತ ವಾಹನಗಳು, ಕೈಗಾರಿಕಾ ಎಲೆಕ್ಟ್ರಾನಿಕ್ಸ್, ರಕ್ಷಣೆ, ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಸೇವೆ ಸಲ್ಲಿಸುತ್ತವೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಇ.ಸಿ.ಎಂ.ಎಸ್ ಸಾಧನಗಳಿಂದ ಘಟಕಗಳು ಮತ್ತು ಉಪ-ಅಸೆಂಬ್ಲಿಗಳವರೆಗಿನ ಮೌಲ್ಯ ಸರಪಳಿಯು ಏಕೀಕರಣದ ಮುಂದಿನ ಹಂತವನ್ನು ಪ್ರವೇಶಿಸುತ್ತಿದ್ದು, 2030-31ರ ವೇಳೆಗೆ ಭಾರತದ ಎಲೆಕ್ಟ್ರಾನಿಕ್ಸ್ ವಲಯವು ಉತ್ಪಾದನಾ ಮೌಲ್ಯದಲ್ಲಿ 500 ಬಿಲಿಯನ್ ಡಾಲರ್ ತಲುಪುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
ಇ.ಸಿ.ಎಂ.ಎಸ್ ಅಡಿಯಲ್ಲಿ ಸರ್ಕಾರದ ನಿರ್ಣಾಯಕ ಬೆಂಬಲಕ್ಕಾಗಿ ಅನುಮೋದಿತ ಅರ್ಜಿದಾರರು ಬಲವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಕ್ರಿಯ ತೊಡಗಿಸಿಕೊಳ್ಳುವಿಕೆ, ಪಾರದರ್ಶಕ ಪ್ರಕ್ರಿಯೆಗಳು ಮತ್ತು ತ್ವರಿತ ಅನುಮೋದನೆಗಳು ತಮ್ಮ ಯೋಜನೆಗಳನ್ನು ಮುಂದುವರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಹೇಳಿದರು. ಸಚಿವಾಲಯದ ಸ್ಪಂದಿಸುವ, ಪರಿಹಾರ-ಆಧಾರಿತ ವಿಧಾನವು ಉದ್ಯಮದ ವಿಶ್ವಾಸವನ್ನು ಹೆಚ್ಚಿಸಿದೆ ಮತ್ತು ವಿಶ್ವಾಸಾರ್ಹ ಜಾಗತಿಕ ತಯಾರಿಕಾ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಿದೆ ಎಂದು ಉದ್ಯಮದ ಮುಖಂಡರು ಒತ್ತಿ ಹೇಳಿದರು.
ಸೈಯಂಟ್ ಸೆಮಿಕಂಡಕ್ಟರ್ಸ್ ಪ್ರೈ. ಲಿಮಿಟೆಡ್ ಮತ್ತು ಅಜಿಮುತ್ ಎ ಜಂಟಿಯಾಗಿ ಅಭಿವೃದ್ಧಿಪಡಿಸಿದ ಮೊದಲ ತಲೆಮಾರಿನ ಇಂಧನ-ಸಮರ್ಥ ಎಡ್ಜ್ ಸಿಲಿಕಾನ್ ಚಿಪ್ (ಎಸ್.ಒ.ಸಿ) (ARKA-GKT1) ಅನ್ನು ಶ್ರೀ ವೈಷ್ಣವ್ ಬಿಡುಗಡೆ ಮಾಡಿದರು. ಪ್ಲಾಟ್‌ಫಾರ್ಮ್-ಆನ್-ಎ-ಚಿಪ್ ಎಸ್.ಒ.ಸಿ ಸುಧಾರಿತ ಕಂಪ್ಯೂಟಿಂಗ್ ಕೋರ್, ಹಾರ್ಡ್‌ವೇರ್ ವೇಗವರ್ಧಕಗಳು, ಇಂಧನ-ಸಮರ್ಥ ವಿನ್ಯಾಸ ಮತ್ತು ಸುರಕ್ಷಿತ ಸಂವೇದನೆಯನ್ನು ಒಂದೇ ಚಿಪ್ ನಲ್ಲಿ ಸಂಯೋಜಿಸುತ್ತದೆ, ವೆಚ್ಚ ಮತ್ತು ಸಂಕೀರ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು 10x ಉತ್ತಮ ಕಾರ್ಯಕ್ಷಮತೆಯನ್ನು ಸಾಧಿಸುತ್ತದೆ. ಇದು ಸ್ಮಾರ್ಟ್ ಉಪಯುಕ್ತತೆಗಳು, ನಗರಗಳು, ಬ್ಯಾಟರಿಗಳು ಮತ್ತು ಕೈಗಾರಿಕಾ ಐಒಟಿಯನ್ನು ಬೆಂಬಲಿಸುತ್ತದೆ, ಇದು ಉತ್ಪನ್ನ-ಚಾಲಿತ, ಉನ್ನತ-ಕಾರ್ಯಕ್ಷಮತೆಯ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯತ್ತ ಭಾರತದ ಪರಿವರ್ತನೆಯನ್ನು ಪ್ರತಿಬಿಂಬಿಸುತ್ತದೆ.
ಇದಲ್ಲದೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರು “ಇ.ಸಿ.ಎಂ.ಎಸ್ ಜಾಗತಿಕ ತಯಾರಿಕಾ ಶಕ್ತಿ ಕೇಂದ್ರಗಳೊಂದಿಗೆ ಸ್ಪರ್ಧಿಸಲು ಭಾರತದ ಸಿದ್ಧತೆ ಮತ್ತು ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ದೇಶದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಒತ್ತಿ ಹೇಳಿದರು.
ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐ.ಸಿ.ಇ.ಎ) ಆಯೋಜಿಸಿದ್ದ “ಜಾಗತಿಕವಾಗಿ ಸ್ಪರ್ಧಾತ್ಮಕ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಗೆ ಅಡಿಪಾಯ” ಎಂಬ ಎಲೆಕ್ಟ್ರಾನಿಕ್ಸ್ ಘಟಕ ಉತ್ಪಾದನಾ ಯೋಜನೆ ಕಾರ್ಯಕ್ರಮದಲ್ಲಿ ಈ ಘೋಷಣೆಗಳನ್ನು ಮಾಡಲಾಯಿತು.
Matribhumi Samachar Kannad

