ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ (PMFBY) ರೈತರಿಗೆ ಪ್ರಮುಖ ಸೌಲಭ್ಯವೊಂದನ್ನು ವಿಸ್ತರಿಸಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ‘ಕಾಡು ಪ್ರಾಣಿಗಳ ದಾಳಿ’ ಮತ್ತು ‘ಭತ್ತದ ಗದ್ದೆಗಳು ಜಲಾವೃತವಾಗುವಿಕೆ’ಯಿಂದ ಉಂಟಾಗುವ ಬೆಳೆ ನಷ್ಟವನ್ನು ಸರಿದೂಗಿಸುವ ವಿಧಾನಗಳನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಈಗ ಮಾನ್ಯ ಮಾಡಿದೆ.
ಪರಿಷ್ಕೃತ ಚೌಕಟ್ಟಿನ ಅಡಿಯಲ್ಲಿ, ಕಾಡು ಪ್ರಾಣಿಗಳ ದಾಳಿಯಿಂದಾಗುವ ಬೆಳೆ ನಷ್ಟವನ್ನು ಈಗ ‘ಸ್ಥಳೀಯ ಅಪಾಯ’ದ ವರ್ಗದ ಅಡಿಯಲ್ಲಿ ಐದನೇ ‘ಹೆಚ್ಚುವರಿ ರಕ್ಷಣೆ’ಯಾಗಿ ಗುರುತಿಸಲಾಗುತ್ತದೆ. ಬೆಳೆ ಹಾನಿಗೆ ಕಾರಣವಾಗುವ ಕಾಡು ಪ್ರಾಣಿಗಳ ಪಟ್ಟಿಯನ್ನು ರಾಜ್ಯಗಳು ಅಧಿಸೂಚಿಸಲಿವೆ ಮತ್ತು ಹಿಂದಿನ ದತ್ತಾಂಶದ ಆಧಾರದ ಮೇಲೆ ಹೆಚ್ಚು ಬಾಧಿತ ಜಿಲ್ಲೆಗಳು ಅಥವಾ ವಿಮಾ ಘಟಕಗಳನ್ನು ಗುರುತಿಸಲಿವೆ. ರೈತರು ನಷ್ಟ ಸಂಭವಿಸಿದ 72 ಗಂಟೆಗಳ ಒಳಗೆ ‘ಕ್ರಾಪ್ ಇನ್ಶೂರೆನ್ಸ್ ಆ್ಯಪ್’ ಮೂಲಕ ಜಿಯೋ-ಟ್ಯಾಗ್ ಮಾಡಲಾದ ಫೋಟೋಗಳನ್ನು ಅಪ್ಲೋಡ್ ಮಾಡಿ ನಷ್ಟದ ವರದಿ ಸಲ್ಲಿಸಬೇಕಾಗುತ್ತದೆ.
ಈ ನಿರ್ಧಾರಗಳು ಹಲವು ರಾಜ್ಯಗಳ ಬಹುದಿನಗಳ ಬೇಡಿಕೆಗೆ ಸ್ಪಂದನೆಯಾಗಿದ್ದು, ಹಠಾತ್, ಸ್ಥಳೀಯ ಮತ್ತು ತೀವ್ರ ಸ್ವರೂಪದ ಬೆಳೆ ಹಾನಿಯ ವಿರುದ್ಧ ರೈತರಿಗೆ ಒದಗಿಸುವ ರಕ್ಷಣೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ. PMFBY ಕಾರ್ಯಾಚರಣೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಈ ವಿಧಿವಿಧಾನಗಳನ್ನು ಸಿದ್ಧಪಡಿಸಲಾಗಿದ್ದು, ಇದು ರಾಷ್ಟ್ರವ್ಯಾಪಿ ಅನುಷ್ಠಾನಕ್ಕೆ ವೈಜ್ಞಾನಿಕ, ಪಾರದರ್ಶಕ ಮತ್ತು ಪ್ರಾಯೋಗಿಕ ಚೌಕಟ್ಟನ್ನು ಖಾತ್ರಿಪಡಿಸುತ್ತದೆ. ಈ ಹೊಸ ಕ್ರಮಗಳು 2026ರ ಖಾರಿಫ್ (ಮುಂಗಾರು) ಹಂಗಾಮಿನಿಂದ ಜಾರಿಗೆ ಬರಲಿವೆ.
ಹಲವು ವರ್ಷಗಳಿಂದ, ಭಾರತದಾದ್ಯಂತ ರೈತರು ಆನೆಗಳು, ಕಾಡುಹಂದಿಗಳು, ನೀಲ್ಗಾಯ್, ಜಿಂಕೆ ಮತ್ತು ಮಂಗಗಳಂತಹ ಕಾಡು ಪ್ರಾಣಿಗಳ ದಾಳಿಯಿಂದ ಭಾರಿ ಬೆಳೆ ನಷ್ಟವನ್ನು ಅನುಭವಿಸುತ್ತಿದ್ದಾರೆ. ಅರಣ್ಯಗಳು, ವನ್ಯಜೀವಿ ಕಾರಿಡಾರ್ ಗಳು ಮತ್ತು ಗುಡ್ಡಗಾಡು ಪ್ರದೇಶಗಳ ಸಮೀಪವಿರುವ ಪ್ರದೇಶಗಳಲ್ಲಿ ಈ ಘಟನೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಇಲ್ಲಿಯವರೆಗೂ, ಇಂತಹ ನಷ್ಟಗಳು ಬೆಳೆ ವಿಮೆಯ ವ್ಯಾಪ್ತಿಗೆ ಬರದೇ ಇದ್ದುದರಿಂದ ರೈತರಿಗೆ ಯಾವುದೇ ಪರಿಹಾರ ದೊರೆಯುತ್ತಿರಲಿಲ್ಲ. ಅದೇ ಸಮಯದಲ್ಲಿ, ಪ್ರವಾಹ ಪೀಡಿತ ಮತ್ತು ಕರಾವಳಿ ರಾಜ್ಯಗಳಲ್ಲಿನ ಭತ್ತ ಬೆಳೆಯುವ ರೈತರು ಭಾರಿ ಮಳೆ ಮತ್ತು ಉಕ್ಕಿ ಹರಿಯುವ ಜಲಮೂಲಗಳಿಂದ ಗದ್ದೆಗಳು ಜಲಾವೃತವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಮುಳುಗಡೆಯಾದ ಬೆಳೆಗಳನ್ನು ಮೌಲ್ಯಮಾಪನ ಮಾಡುವಲ್ಲಿನ ತೊಂದರೆ ಮತ್ತು ‘ನೈತಿಕ ಅಪಾಯ’ದ ಕಾಳಜಿಯಿಂದಾಗಿ, 2018 ರಲ್ಲಿ ಭತ್ತದ ಗದ್ದೆ ಜಲಾವೃತವಾಗುವುದನ್ನು ‘ಸ್ಥಳೀಯ ವಿಪತ್ತು’ ವರ್ಗದಿಂದ ತೆಗೆದುಹಾಕಲಾಗಿತ್ತು. ಆದರೆ, ಇದನ್ನು ವಿಮೆಯಿಂದ ಹೊರಗಿಟ್ಟಿದ್ದರಿಂದ ಋತುಮಾನದ ಪ್ರವಾಹಕ್ಕೆ ತುತ್ತಾಗುವ ಜಿಲ್ಲೆಗಳ ರೈತರಿಗೆ ರಕ್ಷಣೆಯ ಕೊರತೆ ಉಂಟಾಗಿತ್ತು.
ಈ ಹೊಸದಾಗಿ ಎದುರಾಗುತ್ತಿರುವ ಅಪಾಯಗಳು ಮತ್ತು ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯ ಶಿಫಾರಸುಗಳಿಗೆ ಈಗ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಅನುಮೋದನೆ ನೀಡಿದ್ದಾರೆ. ಈ ಪ್ರಮುಖ ನಿರ್ಧಾರದೊಂದಿಗೆ, ಸ್ಥಳೀಯವಾಗಿ ಬೆಳೆ ಹಾನಿ ಅನುಭವಿಸುವ ರೈತರು, ಇನ್ನು ಮುಂದೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ತಂತ್ರಜ್ಞಾನ ಆಧಾರಿತ ಮತ್ತು ಸಕಾಲಿಕ ವಿಮಾ ಕ್ಲೇಮ್ ಇತ್ಯರ್ಥವನ್ನು ಪಡೆಯಲಿದ್ದಾರೆ.
ಕಾಡು ಪ್ರಾಣಿಗಳ ಹಾವಳಿ ವ್ಯಾಪಕವಾಗಿರುವ ಮತ್ತು ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ರಾಜ್ಯಗಳ ರೈತರಿಗೆ ಈ ವಿಮಾ ರಕ್ಷಣೆಯು ಗಮನಾರ್ಹವಾಗಿ ಪ್ರಯೋಜನ ನೀಡುವ ನಿರೀಕ್ಷೆಯಿದೆ. ಒಡಿಶಾ, ಛತ್ತೀಸ್ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಉತ್ತರಾಖಂಡ ಮಾತ್ರವಲ್ಲದೆ; ಹಿಮಾಲಯ ಮತ್ತು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ತ್ರಿಪುರಾ, ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶಗಳಲ್ಲಿಯೂ ಈ ಹೊಸ ಕ್ರಮವು ರೈತರಿಗೆ ಹೆಚ್ಚು ಲಾಭದಾಯಕವಾಗಲಿದೆ.
ಪಿ.ಎಂ.ಎಫ್.ಬಿ.ವೈ ಅಡಿಯಲ್ಲಿ ಭತ್ತದ ಗದ್ದೆ ಜಲಾವೃತವಾಗುವುದನ್ನು ‘ಸ್ಥಳೀಯ ವಿಪತ್ತು ರಕ್ಷಣೆ’ಯಾಗಿ ಮರುಪರಿಚಯಿಸುತ್ತಿರುವುದು, ಭತ್ತದ ಬೆಳೆ ಮುಳುಗಡೆಯಾಗುವುದು ನಿರಂತರ ಸವಾಲಾಗಿರುವ ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರಾಖಂಡದಂತಹ ಕರಾವಳಿ ಮತ್ತು ಪ್ರವಾಹ ಪೀಡಿತ ರಾಜ್ಯಗಳ ರೈತರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಲಿದೆ. ಕಾಡು ಪ್ರಾಣಿಗಳ ದಾಳಿಯ ಸೇರ್ಪಡೆಯೊಂದಿಗೆ, ಈ ಹೊಸ ಕ್ರಮಗಳು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು (PMFBY) ಹೆಚ್ಚು ಸಮಗ್ರ, ಸ್ಪಂದನಾಶೀಲ ಮತ್ತು ರೈತಸ್ನೇಹಿಯನ್ನಾಗಿ ಮಾಡುತ್ತವೆ. ಜೊತೆಗೆ, ಇದು ಭಾರತದ ಬೆಳೆ ವಿಮಾ ವ್ಯವಸ್ಥೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.
Matribhumi Samachar Kannad

