ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ, ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಆಯೋಜಿಸಿರುವ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಇಂದು ಎಸ್.ಟಿ.ಪಿ.ಐ ಮಹಾ ನಿರ್ದೇಶಕರಾದ ಶ್ರೀ ಅರವಿಂದ ಕುಮಾರ್ ಅವರು ಎಸ್.ಟಿ.ಪಿ.ಐ. ಪೆವಿಲಿಯನ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಕೆ.ಕೆ. ಸಿಂಗ್ ಉಪಸ್ಥಿತರಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಟಿ.ಪಿ.ಐ. ಮಹಾ ನಿರ್ದೇಶಕ ಶ್ರೀ ಅರವಿಂದ ಕುಮಾರ ಅವರು, ಬೆಂಗಳೂರು ಟೆಕ್ ಶೃಂಗಸಭೆಯ ಪ್ರದರ್ಶನದಲ್ಲಿ 150 ನವೋದ್ಯಮ (ಸ್ಟಾರ್ಟ್ಅಪ್) ಕಂಪನಿಗಳು ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರದರ್ಶಿಸುತ್ತಿವೆ. ಮುಂಬರುವ 2026ರ ಫೆಬ್ರವರಿ 16 ರಿಂದ 28ರ ವರೆಗೆ ದೆಹಲಿಯಲ್ಲಿ ಎಸ್.ಟಿ.ಪಿ.ಐ. ಜಾಗತಿಕ ಕೃತಕ ಬುದ್ಧಿಮತ್ತೆ (ಎಐ) ಶೃಂಗಸಭೆ ಆಯೋಜಿಸಲಿದೆ. ಇದು ಎಐ ಸರಣಿಯಲ್ಲಿ ನಾಲ್ಕನೇ ಕಾರ್ಯಕ್ರಮವಾಗಿದ್ದು, ಮೊದಲ ಮೂರು ಕಾರ್ಯಕ್ರಮಗಳು ಯುಕೆ, ಸಿಯೋಲ್ ಮತ್ತು ಪ್ಯಾರಿಸ್ ನಲ್ಲಿ ನಡೆದಿದ್ದವು ಎಂದು ತಿಳಿಸಿದರು.

ಮಾಹಿತಿ ತಂತ್ರಜ್ಞಾನ, ತಂತ್ರಾಂಶ ಸೇವೆಗಳ ರಫ್ತು ಕುರಿತ ಮಾತನಾಡಿದ ಅವರು, ಪ್ರಸ್ತುತ ಭಾರತದ ರಫ್ತು ₹20.18 ಲಕ್ಷ ಕೋಟಿ ಮೌಲ್ಯದಷ್ಟಿದೆ. ಇದರಲ್ಲಿ ಕರ್ನಾಟಕದ ಪಾತ್ರ ₹9.21 ಲಕ್ಷ ಕೋಟಿಯಷ್ಟಿದ್ದು, ದೇಶದ ಒಟ್ಟು ರಫ್ತಿಗೆ ಶೇ. 42ರಷ್ಟು ಕೊಡುಗೆ ನೀಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಎಸ್.ಟಿ.ಪಿ.ಐ ಎಐ ಆಧಾರಿತ ಉತ್ಪನ್ನಗಳ ಮೂಲಕ 7-8% ಪ್ರಗತಿ ನಿರೀಕ್ಷಿಸುತ್ತಿದೆ ಎಂದು ವಿವರಿಸಿದರು.

ದೇಶಾದ್ಯಂತ 1500 ನವೋದ್ಯಮಗಳಿಗೆ ಎಸ್.ಟಿ.ಪಿ.ಐ ಬೆಂಬಲ ನೀಡುತ್ತಿದ್ದು, ಹೂಡಿಕೆದಾರರು, ನವೋದ್ಯಮಗಳು ಮತ್ತು ಪಾಲುದಾರರಿಗೆ ‘ಸೇಜ್’ ಎಂಬ ನೆಟ್‌ವರ್ಕಿಂಗ್ ವೇದಿಕೆ ರಚಿಸಿದೆ. ಶಿಕ್ಷಣ, ಕೃಷಿ, ಆರೋಗ್ಯ ತಂತ್ರಜ್ಞಾನ, ಹವಾಮಾನ ಬದಲಾವಣೆ, ವಿದ್ಯುತ್ ಗ್ರಿಡ್ ಮುಂತಾದ ವಲಯಗಳನ್ನು ಇನ್ನಷ್ಟು ಉತ್ತಮಗೊಳಿಸಲು ಎಐ ಪಾತ್ರವಹಿಸಲಿದೆ. ಪ್ರಸ್ತುತ ಎಸ್.ಟಿ.ಪಿ.ಐ. ದ್ವಿತೀಯ ಹಾಗೂ ತೃತೀಯ ದರ್ಜೆಯ ನಗರಗಳ ಮೇಲೆ ಗಮನ ಹರಿಸುತ್ತಿದ್ದು, ಮಹಿಳಾ ಉದ್ಯಮಿಗಳು ಈ ಕ್ಷೇತ್ರದಲ್ಲಿ ಅಧಿಕವಾಗುತ್ತಿರುವುದು ಶ್ಲಾಘನೀಯ ಎಂದು ಅವರು ಉಲ್ಲೇಖಿಸಿದರು.

ನಂತರ ನಡೆದ ಸಮಾರಂಭದಲ್ಲಿ ಐಟಿ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಕಂಪನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಟ್ಟು 15 ವಿವಿಧ ವಿಭಾಗಗಳಲ್ಲಿ 27 ಕಂಪನಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Matribhumi Samachar Kannad

