ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 20-21ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಡಿಸೆಂಬರ್ 20ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಪ್ರಧಾನಮಂತ್ರಿ ಅವರು ಗುವಾಹಟಿಯನ್ನು ತಲುಪಲಿದ್ದು, ಅಲ್ಲಿ ಲೋಕಪ್ರಿಯ ಗೋಪಿನಾಥ್ ಬೊರ್ಡೊಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ವೀಕ್ಷಿಸಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಡಿಸೆಂಬರ್ 21ರಂದು ಬೆಳಿಗ್ಗೆ ಸುಮಾರು 9:45ಕ್ಕೆ ಪ್ರಧಾನಮಂತ್ರಿ ಅವರು ಗುವಾಹಟಿಯ ಬೊರಗಾಂನಲ್ಲಿರುವ ಸ್ವಾಹಿದ್ ಸ್ಮಾರಕ ಕ್ಷೇತ್ರಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಿದ್ದಾರೆ. ತದನಂತರ, ಅವರು ಅಸ್ಸಾಂನ ದಿಬ್ರುಗಢ ಜಿಲ್ಲೆಯ ನಮ್ರೂಪ್ ಗೆ ಪ್ರಯಾಣಿಸಲಿದ್ದು, ಅಲ್ಲಿ ‘ಅಸ್ಸಾಂ ವ್ಯಾಲಿ ಫರ್ಟಿಲೈಸರ್ ಅಂಡ್ ಕೆಮಿಕಲ್ ಕಂಪನಿ ಲಿಮಿಟೆಡ್’ನ ಅಮೋನಿಯಾ-ಯೂರಿಯಾ ಯೋಜನೆಯ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿಯೂ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಮಂತ್ರಿ ಅವರು ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದು, ಇದು ಅಸ್ಸಾಂನ ಸಂಪರ್ಕ ವ್ಯವಸ್ಥೆ, ಆರ್ಥಿಕ ವಿಸ್ತರಣೆ ಮತ್ತು ಜಾಗತಿಕ ಸಹಭಾಗಿತ್ವದಲ್ಲಿ ಒಂದು ಪರಿವರ್ತನಾಕಾರಿ ಮೈಲಿಗಲ್ಲಾಗಲಿದೆ.
ಸುಮಾರು 1.4 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ವಿಸ್ತಾರಗೊಂಡಿರುವ, ಹೊಸದಾಗಿ ಪೂರ್ಣಗೊಂಡಿರುವ ಈ ಸಮಗ್ರ ಟರ್ಮಿನಲ್ ಕಟ್ಟಡವನ್ನು ವಾರ್ಷಿಕವಾಗಿ 1.3 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ರನ್ ವೇ, ಏರ್ಫೀಲ್ಡ್ ವ್ಯವಸ್ಥೆಗಳು, ಏಪ್ರನ್ ಗಳು ಮತ್ತು ಟ್ಯಾಕ್ಸಿವೇಗಳಲ್ಲಿ ಮಾಡಲಾದ ಪ್ರಮುಖ ಮೇಲ್ದರ್ಜೆಯ ಸುಧಾರಣೆಗಳು ಈ ಯೋಜನೆಗೆ ಹೆಚ್ಚಿನ ಬಲ ನೀಡಿವೆ.
ಭಾರತದ ಮೊದಲ ಪ್ರಕೃತಿ-ಆಧಾರಿತ (nature-themed) ವಿಮಾನ ನಿಲ್ದಾಣದ ಟರ್ಮಿನಲ್ ಇದಾಗಿದ್ದು, ಇದರ ವಿನ್ಯಾಸವು “ಬ್ಯಾಂಬೂ ಆರ್ಕಿಡ್ಸ್” (Bamboo Orchids) ಎಂಬ ಪರಿಕಲ್ಪನೆಯ ಅಡಿಯಲ್ಲಿ ಅಸ್ಸಾಂನ ಜೀವವೈವಿಧ್ಯ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಸ್ಫೂರ್ತಿ ಪಡೆದಿದೆ. ಈ ಟರ್ಮಿನಲ್ ನಲ್ಲಿ ಈಶಾನ್ಯ ಭಾರತದ ಸ್ಥಳೀಯ ಸುಮಾರು 140 ಮೆಟ್ರಿಕ್ ಟನ್ ಬಿದಿರನ್ನು ಪ್ರಥಮ ಬಾರಿಗೆ ಬಳಸಲಾಗಿದೆ. ಇದರೊಂದಿಗೆ ಕಾಜಿರಂಗದಿಂದ ಸ್ಫೂರ್ತಿ ಪಡೆದ ಹಸಿರು ಭೂದೃಶ್ಯಗಳು, ಅಸ್ಸಾಂನ ಸಾಂಪ್ರದಾಯಿಕ ‘ಜಾಪಿ’ (japi) ಕಲೆಗಳು, ಪ್ರಖ್ಯಾತ ಖಡ್ಗಮೃಗದ ಚಿಹ್ನೆ ಹಾಗೂ ‘ಕೊಪೌ’ (Kopou) ಹೂವನ್ನು ಪ್ರತಿಬಿಂಬಿಸುವ 57 ಆರ್ಕಿಡ್ ಮಾದರಿಯ ಸ್ತಂಭಗಳು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿವೆ. ಇಲ್ಲಿನ ವಿಶಿಷ್ಟ ಆಕರ್ಷಣೆಯಾದ “ಸ್ಕೈ ಫಾರೆಸ್ಟ್” (Sky Forest) ಸುಮಾರು ಒಂದು ಲಕ್ಷ ಸ್ಥಳೀಯ ತಳಿಗಳ ಸಸ್ಯಗಳನ್ನು ಹೊಂದಿದ್ದು, ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ದಟ್ಟವಾದ ಕಾಡಿನ ಒಳಗಿರುವಂತಹ ಅದ್ಭುತ ಅನುಭವವನ್ನು ನೀಡುತ್ತದೆ.
ಈ ಟರ್ಮಿನಲ್ ಪ್ರಯಾಣಿಕರ ಸೌಕರ್ಯ ಮತ್ತು ಡಿಜಿಟಲ್ ಆವಿಷ್ಕಾರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ. ವೇಗವಾದ ಮತ್ತು ಅಡೆತಡೆಯಿಲ್ಲದ ಭದ್ರತಾ ತಪಾಸಣೆಗಾಗಿ ಪೂರ್ಣ ದೇಹದ ಸ್ಕ್ಯಾನರ್ ಗಳು (full-body scanners), ಡಿಜಿಯಾತ್ರೆ-ಆಧಾರಿತ ಸಂಪರ್ಕ ರಹಿತ ಪ್ರಯಾಣ, ಸ್ವಯಂಚಾಲಿತ ಲಗೇಜ್ ನಿರ್ವಹಣೆ, ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ವಿಮಾನ ನಿಲ್ದಾಣದ ಕಾರ್ಯಾಚರಣೆಗಳಂತಹ ವೈಶಿಷ್ಟ್ಯಗಳು ಪ್ರಯಾಣಿಕರಿಗೆ ಸುಗಮ, ಸುರಕ್ಷಿತ ಹಾಗೂ ದಕ್ಷ ಪ್ರಯಾಣವನ್ನು ಖಚಿತಪಡಿಸುತ್ತವೆ.
ಐತಿಹಾಸಿಕ ಅಸ್ಸಾಂ ಚಳವಳಿಯ ಹುತಾತ್ಮರಿಗೆ ಗೌರವ ಸಲ್ಲಿಸಲು ಪ್ರಧಾನಮಂತ್ರಿ ಅವರು ‘ಸ್ವಾಹಿದ್ ಸ್ಮಾರಕ ಕ್ಷೇತ್ರ’ಕ್ಕೆ ಭೇಟಿ ನೀಡಲಿದ್ದಾರೆ. ವಿದೇಶಿ ಮುಕ್ತ ಅಸ್ಸಾಂ ಮತ್ತು ರಾಜ್ಯದ ಅಸ್ಮಿತೆಯ ರಕ್ಷಣೆಗಾಗಿ ನಡೆದ ಈ ಆರು ವರ್ಷಗಳ ಸುದೀರ್ಘ ಜನ ಚಳವಳಿಯು ಜನರ ಸಾಮೂಹಿಕ ಸಂಕಲ್ಪದ ಪ್ರತೀಕವಾಗಿತ್ತು.
ಅಂದು ಮಧ್ಯಾಹ್ನ, ಪ್ರಧಾನಮಂತ್ರಿಯವರು ಅಸ್ಸಾಂನ ದಿಬ್ರುಗಢ ಜಿಲ್ಲೆಯ ನಮ್ರೂಪ್ ನಲ್ಲಿರುವ ‘ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್ ಕಾರ್ಪೊರೇಷನ್ ಲಿಮಿಟೆಡ್’ (BVFCL) ನ ಅಸ್ತಿತ್ವದಲ್ಲಿರುವ ಆವರಣದಲ್ಲಿ, ಹೊಸ ಬ್ರೌನ್ ಫೀಲ್ಡ್ ಅಮೋನಿಯಾ-ಯೂರಿಯಾ ರಸಗೊಬ್ಬರ ಯೋಜನೆಯ ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ.
ರೈತರ ಕಲ್ಯಾಣದ ಕುರಿತಾದ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಮತ್ತಷ್ಟು ಬಲಪಡಿಸುವ ಈ ಯೋಜನೆಯು, 10,600 ಕೋಟಿ ರೂಪಾಯಿಗೂ ಹೆಚ್ಚಿನ ಅಂದಾಜು ಹೂಡಿಕೆಯೊಂದಿಗೆ ಅಸ್ಸಾಂ ಮತ್ತು ನೆರೆಯ ರಾಜ್ಯಗಳ ರಸಗೊಬ್ಬರ ಅಗತ್ಯಗಳನ್ನು ಪೂರೈಸಲಿದೆ. ಅಲ್ಲದೆ, ಇದು ಆಮದು ಅವಲಂಬನೆಯನ್ನು ತಗ್ಗಿಸುವುದರ ಜೊತೆಗೆ, ಗಣನೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಮತ್ತು ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸಲಿದೆ. ಈ ಯೋಜನೆಯು ಕೈಗಾರಿಕಾ ಪುನಶ್ಚೇತನ ಮತ್ತು ರೈತ ಕಲ್ಯಾಣದ ಪ್ರಮುಖ ಮೈಲಿಗಲ್ಲಾಗಿ ನಿಲ್ಲಲಿದೆ.
Matribhumi Samachar Kannad

