Wednesday, December 24 2025 | 05:06:45 AM
Breaking News

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ಬೆಂಗಳೂರಿನ ಆದಿಚುಂಚನಗಿರಿ ವಿಶ್ವವಿದ್ಯಾಲಯ (ACU) ಕ್ಯಾಂಪಸ್ ಉದ್ಘಾಟನೆ

Connect us on:

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಬೆಂಗಳೂರಿನಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ (ಎಸಿಯು) ಬೆಂಗಳೂರು ಕ್ಯಾಂಪಸ್ ಅನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ನಮ್ಮ ಸಂಸ್ಕೃತಿಯ ಮೂಲ ತತ್ವ “ಸರ್ವ ಜನ ಹಿತಾಯ, ಸರ್ವ ಜನ ಸುಖಾಯ” ಎಂಬುದಾಗಿದೆ. ಇದರರ್ಥ ಕೇವಲ ತನ್ನ ಬಗ್ಗೆ ಮಾತ್ರವಲ್ಲದೆ ಎಲ್ಲರ ಕಲ್ಯಾಣ ಮತ್ತು ಸಂತೋಷದ ಬಗ್ಗೆ ಚಿಂತಿಸುವುದು ಎಂದು ಹೇಳಿದರು. ಶ್ರೀ ಆದಿಚುಂಚನಗಿರಿ ಮಠವು ಗ್ರಾಮಗಳಲ್ಲಿ ಆರೋಗ್ಯ ಕೇಂದ್ರಗಳನ್ನು ನಡೆಸಿ, ಬಡವರಿಗೆ ಉಚಿತ ಚಿಕಿತ್ಸೆ ನೀಡಿ, ಮಕ್ಕಳಿಗೆ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅತ್ಯುತ್ತಮ ಕಾರ್ಯ ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು.

ಶ್ರೀ ಅಮಿತ್ ಶಾ ಅವರು ಮಾತನಾಡಿ, 16 ಎಕರೆ ಜಾಗದಲ್ಲಿ ₹200 ಕೋಟಿ ವೆಚ್ಚದಲ್ಲಿ 20 ಲಕ್ಷ ಚದರ ಅಡಿ ವಿಸ್ತೀರ್ಣದ ಕ್ಯಾಂಪಸ್ ನಿರ್ಮಿಸಲಾಗಿದ್ದು, ಇದು 4,000 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಿದೆ ಎಂದರು. 1,000 ಹಾಸಿಗೆಗಳ ಸಾಮರ್ಥ್ಯದ ಈ ಆಧುನಿಕ ಆಸ್ಪತ್ರೆ ಎಲ್ಲ ಆರೋಗ್ಯ ಸೌಲಭ್ಯಗಳನ್ನು ಹೊಂದಿದ್ದು, ಬಡವರಿಗೆ ಉಚಿತ ಮತ್ತು ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವುದರ ಜೊತೆಗೆ ಶಿಕ್ಷಣವನ್ನೂ ಒದಗಿಸುವ ಮೂಲಕ ನಿಜಕ್ಕೂ ಒಂದು ದೊಡ್ಡ ಸೇವಾ ಮಾಧ್ಯಮವಾಗಲಿದೆ ಎಂದು ಅವರು ಹೇಳಿದರು. ಜೊತೆಗೆ, ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ಆದಿಚುಂಚನಗಿರಿ ಪುಣ್ಯಕ್ಷೇತ್ರದ 1,800 ವರ್ಷಗಳಷ್ಟು ಹಳೆಯ ಆಧ್ಯಾತ್ಮಿಕ ಪರಂಪರೆಯನ್ನು ಸೇವೆ, ಶಿಕ್ಷಣ ಮತ್ತು ಸಮರ್ಪಣಾ ಮನೋಭಾವದೊಂದಿಗೆ ಸಂಯೋಜಿಸುವ ಮೂಲಕ ಸಂರಕ್ಷಿಸಿ, ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ. ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರೂ ಸಹ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ರೀ ಶಾ ನುಡಿದರು.

ಈ ಮಠವು ತನ್ನ ಸೇವಾ ಕಾರ್ಯಗಳ ಮೂಲಕ ಅಸಂಖ್ಯಾತ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳನ್ನು ಆಧ್ಯಾತ್ಮಿಕತೆ ಹಾಗೂ ಕರ್ಮಯೋಗದೊಂದಿಗೆ ಬೆಸೆದಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ಅನ್ನ (ಆಹಾರ), ಅಕ್ಷರ (ಶಿಕ್ಷಣ), ಆರೋಗ್ಯ (ಸ್ವಾಸ್ಥ್ಯ), ಆಧ್ಯಾತ್ಮಿಕತೆ, ಆಶ್ರಯ (ವಸತಿ), ಅರಣ್ಯ (ಪರಿಸರ), ವಿಪತ್ತು ಪರಿಹಾರ, ಅನುಕಂಪ (ಕರುಣೆ), ಮತ್ತು ಅನುಬಂಧ (ಸಂಯೋಜನೆ) ಎಂಬ ಒಂಬತ್ತು ಆಧಾರ ಸ್ತಂಭಗಳ ಮೇಲೆ ಸಮಾಜದ ಎಲ್ಲ ಸ್ತರದ ಜನರನ್ನು ಈ ಮಠವು ಯಶಸ್ವಿಯಾಗಿ ಒಗ್ಗೂಡಿಸಿದೆ ಎಂದು ಅವರು ಶ್ಲಾಘಿಸಿದರು.

ಇದರಿಂದ ಸಮಾಜದಲ್ಲಿ ಕೇವಲ ಆಧ್ಯಾತ್ಮಿಕತೆ, ಧರ್ಮ ಮತ್ತು ಸಂಸ್ಕೃತಿ ಬಲಗೊಂಡಿದ್ದಲ್ಲದೆ, ಸಾಮಾಜಿಕ ಐಕ್ಯತೆಯೂ ಗಟ್ಟಿಗೊಂಡಿದೆ. ಆ ಮೂಲಕ, ಈ ಮಠವು ಇತರ ಧಾರ್ಮಿಕ ಸಂಸ್ಥೆಗಳಿಗೆ ಒಂದು ಅನುಕರಣೀಯ ಮಾದರಿಯನ್ನು ಒದಗಿಸಿದೆ” ಎಂದು ಅವರು ಹೇಳಿದರು. “ಈ ಮಠವು ಸಂಪ್ರದಾಯದೊಂದಿಗೆ ನಾವೀನ್ಯತೆ ಮೇಳೈಸಿಕೊಂಡು ಮುನ್ನಡೆಯುತ್ತಿದೆ. ಒಂದೆಡೆ, ಇದು ಮಕ್ಕಳು ಮತ್ತು ಯುವಕರನ್ನು ನಮ್ಮ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆಯುತ್ತದೆ. ಮತ್ತೊಂದೆಡೆ, ಅವರಿಗೆ ಅತ್ಯಾಧುನಿಕ ಶಿಕ್ಷಣ ಒದಗಿಸಿ, ಅವರು ಸಮಾಜದಲ್ಲಿ ಗೌರವಯುತ ಸ್ಥಾನಮಾನ ಪಡೆಯಲು ನೆರವಾಗುತ್ತಿದೆ,” ಎಂದು ಶ್ರೀ ಶಾ ಹೇಳಿದರು.

ಶ್ರೀ ಅಮಿತ್ ಶಾ ಅವರು, ಶ್ರೀ ಆದಿಚುಂಚನಗಿರಿ ಮಠವು ಕೇವಲ ವ್ಯಕ್ತಿಯ ಆತ್ಮೋನ್ನತಿಗೆ ಮಾತ್ರವಲ್ಲದೆ ಸಮಾಜದ ಆತ್ಮವನ್ನು ಜಾಗೃತಗೊಳಿಸಲು ಸಮರ್ಪಿತವಾಗಿದೆ ಎಂದು ಹೇಳಿದರು. ಮಹಾಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಉಚಿತ ವಸತಿಯೊಂದಿಗೆ ಶಿಕ್ಷಣ ನೀಡಿ, ಅವರು ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು. ಇದರ ಜೊತೆಗೆ, ಅನಾಥರು, ಹಿರಿಯ ನಾಗರಿಕರು ಮತ್ತು ಮಾನಸಿಕ ಅಸ್ವಸ್ಥರ ಕಲ್ಯಾಣಕ್ಕಾಗಿ ಮಹಾಸ್ವಾಮೀಜಿಯವರು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಈ ಪರಂಪರೆಯನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದರು. ಈ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಹೊಸ ದಿಕ್ಕನ್ನು ನೀಡುವುದರ ಜೊತೆಗೆ, ಭಾರತದ  ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ ಎಂದು ಶ್ರೀ ಶಾ ಹೇಳಿದರು. ಇಲ್ಲಿರುವ 1,500 ಹಾಸಿಗೆಗಳ ಆಸ್ಪತ್ರೆಯು ಸಂಶೋಧನಾ ಕೇಂದ್ರಗಳು, ಹೃದ್ರೋಗ, ನರಶಸ್ತ್ರಚಿಕಿತ್ಸೆ, ಆಂಕೊಲಾಜಿ, ಮತ್ತು ಮೂತ್ರಪಿಂಡ, ಯಕೃತ್ ಹಾಗೂ ಕಾರ್ನಿಯಾ ಕಸಿ ಸೇರಿದಂತೆ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮತ್ತು ಬಡವರಿಗೆ ಉಚಿತವಾಗಿ ನೀಡುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರ ಗೃಹ ಸಚಿವರು ಮಾತನಾಡುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಮ್ಮೆ “ಬಡತನಕ್ಕೆ ದೊಡ್ಡ ಸಮಸ್ಯೆಯೆಂದರೆ ಅನಾರೋಗ್ಯ, ಮತ್ತು ಅನಾರೋಗ್ಯ ಮುಂದುವರಿಯಲು ಪ್ರಮುಖ ಕಾರಣ ಚಿಕಿತ್ಸೆಯ ವೆಚ್ಚ” ಎಂದು ಹೇಳಿದ್ದರು. ಬಡವರ ಚಿಕಿತ್ಸೆಗೆ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದ್ದರು ಎಂದರು. ಪ್ರಧಾನಮಂತ್ರಿಯಾದ ನಂತರ ಶ್ರೀ ನರೇಂದ್ರ ಮೋದಿ ಜಿ ಆ ಬದ್ಧತೆಯನ್ನು ಈಡೇರಿಸಿದ್ದಾರೆ ಮತ್ತು ಇಂದು ಭಾರತ ಸರ್ಕಾರ 60 ಕೋಟಿ ಬಡ ಮತ್ತು ಅಗತ್ಯವುಳ್ಳ ಜನರಿಗೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ಒದಗಿಸುತ್ತಿದೆ ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಮೋದಿ ಅವರು ದೇಶದ ಆರೋಗ್ಯ ಸಮಸ್ಯೆಗಳನ್ನು ಸಮಗ್ರ ದೃಷ್ಟಿಕೋನದಿಂದ ಪರಿಹರಿಸಿದ್ದಾರೆ ಎಂದು ಅವರು ತಿಳಿಸಿದರು. ಸುಮಾರು 12 ಕೋಟಿ ಶೌಚಾಲಯಗಳನ್ನು ಮನೆಗಳಲ್ಲಿ ನಿರ್ಮಿಸಲಾಗಿದೆ, ಫಿಟ್ ಇಂಡಿಯಾ ಆಂದೋಲನ ಪ್ರಾರಂಭಿಸಲಾಯಿತು, ಅಂತಾರಾಷ್ಟ್ರೀಯ ಯೋಗ ದಿನವನ್ನು ಆರಂಭಿಸಲಾಯಿತು ಮತ್ತು ಮಿಷನ್ ಇಂದ್ರಧನುಷ್ ಅಡಿಯಲ್ಲಿ ಹುಟ್ಟಿನಿಂದ 15 ವರ್ಷದೊಳಗಿನ ಮಕ್ಕಳಿಗೆ ಉಚಿತ ಲಸಿಕೆ ವ್ಯವಸ್ಥೆ ಮಾಡಲಾಗಿದೆ. ಪೋಷಣ್ ಅಭಿಯಾನದ ಮೂಲಕ ತಾಯಂದಿರ ಮತ್ತು ಮಕ್ಕಳ ಪೋಷಣೆಯ ಬಗ್ಗೆ ಕಾಳಜಿ ವಹಿಸಿ, ಆರೋಗ್ಯವಂತ ನಾಗರಿಕರನ್ನು ನಿರ್ಮಿಸಲು ದಾರಿ ಮಾಡಿಕೊಡಲಾಗಿದೆ ಎಂದು ಹೇಳಿದರು.

ಇದರ ಜೊತೆಗೆ, ಪ್ರಧಾನಮಂತ್ರಿ ಜನೌಷಧಿ ಯೋಜನೆಯಡಿ, ಎಲ್ಲಾ ಔಷಧಿಗಳನ್ನು 15,000 ಸ್ಥಳಗಳಲ್ಲಿ ಮಾರುಕಟ್ಟೆ ಬೆಲೆಯ 20% ರಷ್ಟು ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ದೇಶದಲ್ಲಿ ವೈದ್ಯರ ಸಂಖ್ಯೆಯನ್ನು ಹೆಚ್ಚಿಸಲು ಪ್ರಧಾನಮಂತ್ರಿ ಮೋದಿ ಅವರು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಶ್ರೀ ಶಾ ಹೇಳಿದರು. 2014 ರಲ್ಲಿ ದೇಶದಲ್ಲಿ 7 ಏಮ್ಸ್ (AIIMS) ಇದ್ದವು – ಇಂದು 23 ಏಮ್ಸ್ ಇವೆ ಎಂದು ಅವರು ಉಲ್ಲೇಖಿಸಿದರು. ವೈದ್ಯಕೀಯ ಕಾಲೇಜುಗಳ ಸಂಖ್ಯೆ 387 ರಿಂದ 780 ಕ್ಕೆ ಏರಿದೆ; ಎಂಬಿಬಿಎಸ್ ಸೀಟುಗಳು 51,000 ರಿಂದ 1,18,000 ಕ್ಕೆ ಹೆಚ್ಚಾಗಿವೆ; ಮತ್ತು ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆ 31,000 ರಿಂದ 74,000 ಕ್ಕೆ ಏರಿದೆ ಎಂದು ಅವರು ತಿಳಿಸಿದರು.

About Matribhumi Samachar

Check Also

ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕರ್ನಾಟಕದ ಮೊದಲ ಜನರೇಷನ್ ಝಡ್ ಅಂಚೆ ಕಚೇರಿ ಉದ್ಘಾಟನೆ

ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿರುವ ಅಚಿತ್ ನಗರ ಅಂಚೆ ಕಚೇರಿಯನ್ನು ಕರ್ನಾಟಕದ ಮೊದಲ ಜನರೇಷನ್ ಝಡ್- ನವೀಕರಿಸಿದ ಅಂಚೆ …