ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು ಒಂದು ಲಕ್ಷ ಮಹಿಳಾ ಸದಸ್ಯರಿಗೆ ಕಾಫಿ ತಯಾರಿಕೆ ತಂತ್ರಜ್ಞಾನ ಮತ್ತು ಕೌಶಲ್ಯವನ್ನು ಕಲ್ಪಿಸುವ ಸಲುವಾಗಿ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶೇಷ ಫಿಲ್ಟರ್ ಕಾಫಿ ಕೆಫೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವ ಕುರಿತು ದಿನಾಂಕ: 17-1-2025 ರಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಮತ್ತು ಭಾರತೀಯ ಕಾಫಿ ಮಂಡಳಿಯ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಒಪ್ಪಂದವನ್ನು ಡಾ. ಜಿ.ಕೆ ಜಗದೀಶ್, ಐ.ಎ.ಎಸ್ ಭಾರತೀಯ ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ಮತ್ತು ಶ್ರೀಮತಿ ಪಿ.ಐ ಶ್ರೀವಿದ್ಯಾ, ಐ.ಎ.ಎಸ್, ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಅಭಿಯಾನ- ಕರ್ನಾಟಕ ಅವರು ದಿನಾಂಕ:17-01-2025 ಒಡಂಬಡಿಕೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಸದರಿ ಕಾರ್ಯಕ್ರಮದಲ್ಲಿ ಶ್ರೀ ಅರ್ಜುನ್ ಒಡೆಯರ್, ಕೆ.ಎ.ಎಸ್., ಅಪರ ಅಭಿಯಾನ ನಿರ್ದೇಶಕರು, ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್, ಶ್ರೀ ಶ್ರೀನಿವಾಸಲು, ಕೆಎಸ್‌ಎಎಸ್., ಮುಖ್ಯ ಹಣಕಾಸು ಅಧಿಕಾರಿಗಳು, ಸಂಜೀವಿನಿ-ಕೆಎಸ್‌ಆರ್‌ಎಲ್‌ಪಿಎಸ್, ಶ್ರೀಮತಿ ರಾಘವಿ ನಾಯ್ಕ, ಕೆ.ಎ.ಎಸ್., ಎನ್.ಯು.ಎಲ್.ಎಂ ಮತ್ತು ಭಾರತೀಯ ಕಾಫಿ ಮಂಡಳಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಒಪ್ಪಂದದ ಸಹಿ ಕಾರ್ಯಕ್ರಮದಲ್ಲಿ, ಡಾ. ಜಿ.ಕೆ ಜಗದೀಶ್, ಐ.ಎ.ಎಸ್ ಭಾರತೀಯ ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ಅವರು ಈ ಮಹತ್ವದ ಯೋಜನೆ ನಮ್ಮ ರಾಜ್ಯಾದ್ಯಂತ ಕಾಫಿ ನವೋದ್ಯಮವನ್ನು ಉತ್ತೇಜಿಸಲು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು
ಶ್ರೀಮತಿ ಪಿ.ಐ ಶ್ರೀವಿದ್ಯಾ, ಐ.ಎ.ಎಸ್, ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಅಭಿಯಾನ- ಕರ್ನಾಟಕ ಅವರು ಮಾತನಾಡುತ್ತಾ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಅಡಿಯಲ್ಲಿ ಮಹಿಳೆಯರಿಗೆ ಹಲವು ಉದ್ಯಮಶೀಲ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು. ಈ ಕಾಫಿ ನವೋದ್ಯಮ ಉತ್ತೇಜಿಸುವ ಯೋಜನೆಯು ಹೊಸ ಅವಕಾಶಗಳ ಮೂಲಕ ರಾಜ್ಯದಲ್ಲಿ ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ಭಾರತೀಯ ಕಾಫಿ ಮಂಡಳಿ ಮತ್ತು ರಾಷ್ಟ್ರೀಯ ಜೀವನೋಪಾಯ ಅಭಿಯಾನ-ಕರ್ನಾಟಕ ಒಟ್ಟಾಗಿ ಈ ಮಹತ್ವದ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರುವುದಕ್ಕೆ ಮುಂದಾಗಿವೆ. ಈ ಯೋಜನೆಯು ಕಾಫಿ ಮಂಡಳಿಯ ವಿಷಯ ತಜ್ಞರನ್ನು ಒಳಗೊಂಡಿರುತ್ತದೆ, ಯೋಜನೆ ಯಶಸ್ವಿ ಅನುಷ್ಠಾನ ಮತ್ತು ಫಲಿತಾಂಶಗಳ ಪರಿಶೀಲನೆಗಾಗಿ ಕಾಫಿ ಮಂಡಳಿಯ ಅಟಲ್ ನವೋದ್ಯಮ ಪೋಷಣೆ ಕೇಂದ್ರ ಪ್ರಮುಖ ಪಾತ್ರ ವಹಿಸಲಿದೆ.
ಈ ಯೋಜನೆ ಎರಡು ಹಂತದಲ್ಲಿ ಜಾರಿಯಾಗಲಿದ್ದು, ಮೊದಲ ಹಂತದಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನ-ಕರ್ನಾಟಕವು ಗುರುತಿಸಲ್ಪಟ್ಟ 400 ಮಹಿಳಾ ಸದಸ್ಯರು ಬೆಂಗಳೂರಿನ ಕಾಫಿ ಮಂಡಳಿಯ ಮುಖ್ಯ ಕಚೇರಿಯಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುವುದು. ಇವರು ಮಾಸ್ಟರ್ ಟ್ರೈನರ್‌ಗಳಾಗಿ ಪರಿಣಿತಿ ಹೊಂದಿದ ನಂತರ, ದ್ವಿತೀಯ ಹಂತದಲ್ಲಿ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ 1,00,000 ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಕಾಫಿ ತಯಾರಿಕೆ ಮತ್ತು ಕೆಫೆ ನಿರ್ವಹಣೆ ಸಂಬಂಧಿತ ಕೌಶಲ್ಯಗಳನ್ನು ನೀಡಲಾಗುವುದು. ಈ ಯೋಜನೆ ರಾಜ್ಯದಲ್ಲಿ 2500 ಕಾಫಿ ಕಿಯೋಸ್ಕ್‌ಗಳನ್ನು ಸ್ಥಾಪಿಸುವ ಮತ್ತು ಸ್ವ ಸಹಾಯ ಗುಂಪುಗಳ 1,00,000 ಮಹಿಳೆಯರನ್ನು ಕಾಫಿ ನವೋದ್ಯಮದಲ್ಲಿ ಸಬಲೀಕರಿಸುವ ಉದ್ದೇಶವನ್ನು ಹೊಂದಿದೆ.
2024-25ರ ರಾಜ್ಯ ಬಜೆಟ್ ನ ಅನ್ವಯ ಕರ್ನಾಟಕ ಸರ್ಕಾರ, ರಾಷ್ಟ್ರೀಯ ಜೀವನೋಪಾಯ ಅಭಿಯಾನ-ಕರ್ನಾಟಕದ ಸ್ವ-ಸಹಾಯ ಗುಂಪುಗಳ 1,00,000 ಮಹಿಳಾ ಸದಸ್ಯರನ್ನು ಕಾಫಿ ಬೋರ್ಡ್ ನ ಸಹಯೋಗದಲ್ಲಿ ಕಾಫಿ ನವೋದ್ಯಮಿಗಳಾಗಿ ತರಬೇತಿ ನೀಡಲು ರೂ 25 ಕೋಟಿ ಅನುದಾನವನ್ನು ಮೀಸಲಿರಿಸಿದೆ. ಕೌಶಲ್ಯಗಳನ್ನು ಹೆಚ್ಚಿಸಿ, ನವೋಧ್ಯಮಿಗಳಾಗಿ ರೂಪುಗೊಂಡು, ಜೀವನೋಪಾಯ ಹಾಗೂ ಮಹಿಳಾ ಸಶಕ್ತಿಕರಣ /ಸಬಲೀಕರಣ ಧ್ಯೇಯಗಳಿಗೆ ಈ ಯೋಜನೆ ಬಹಳ ಸಹಕಾರಿಯಾಗಿದೆ.
Matribhumi Samachar Kannad

