ಡಿಸೆಂಬರ್ 23, 2025 ರಂದು ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದ ಯಲಹಂಕ ಆವರಣದಲ್ಲಿ ರೈತರ ದಿನಾಚರಣೆಯನ್ನು ಆಚರಿಸಿಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಚಿಕ್ಕಬಳ್ಳಾಪುರ ಸಂಸದರಾದ ಡಾ. ಕೆ. ಸುಧಾಕರ್ ಅವರು ಪಾಲ್ಗೊಂಡಿದ್ದರು. ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದ ನಿರ್ದೇಶಕರಾದ ಡಾ. ಎಸ್. ಎನ್. ಸುಶೀಲ್, ತಮ್ಮ ಭಾಷಣದಲ್ಲಿ ಜೀವನೋಪಾಯವನ್ನು ಬೆಂಬಲಿಸಲು ಸಂಸ್ಥೆಯ ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೀಟ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ರೈತರಿಗೆ ಕರೆ ಕೊಟ್ಟರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಡಾ. ಕೆ. ಸುಧಾಕರ್ ಅವರು, ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ) ವಿಧೇಯಕದ ಬಗ್ಗೆ ವಿವರಿಸಿದರು. ಗ್ರಾಮೀಣ ಜೀವನೋಪಾಯ ಸುಧಾರಿಸುವ, ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಪ್ರಮುಖ ರೈತ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮಣ್ಣಿನ ಪರೀಕ್ಷೆ, ಸೂಕ್ಷ್ಮ ನೀರಾವರಿ, ಮಿಶ್ರ ಬೆಳೆಗಳ ಅಗತ್ಯತೆಯನ್ನು ಅವರು ತಿಳಿಸಿದರು. ಸುರಕ್ಷಿತ ಆಹಾರ, ಮೇವು ಮತ್ತು ನಾರು ಉತ್ಪಾದಿಸಲು ನೈಸರ್ಗಿಕ ಕೃಷಿ, ಜೈವಿಕ ನಿಯಂತ್ರಣ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಉತ್ತೇಜಿಸುವಲ್ಲಿ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದ ಕಾರ್ಯವನ್ನು ಅವರು ಶ್ಲಾಘಿಸಿದರು.
ಶ್ರೀನಿವಾಸಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮತ್ತು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಭಾಷಣವನ್ನು ನೇರ ಪ್ರಸಾರದಲ್ಲಿ ಆಲಿಸಿದರು. ಕಾರ್ಯಕ್ರಮದ ಭಾಗವಾಗಿ, ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಕ್ರಿಯಾ ಯೋಜನೆ (ಡಿಎಪಿಎಸ್‌ಸಿ) ಅಡಿಯಲ್ಲಿ ಸುಮಾರು 150 ರೈತರಿಗೆ ಜೈವಿಕ ಕೀಟ ನಿಯಂತ್ರಣದ ಪರಿಕರಗಳನ್ನು ವಿತರಿಸಲಾಯಿತು. ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದ ಜೈವಿಕ ನಿಯಂತ್ರಣ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಮಳಿಗೆಗಳಿಗೆ ರೈತರು ಭೇಟಿಕೊಟ್ಟು ತಜ್ಞರಿಂದ ಮಾಹಿತಿ ಪಡೆದುಕೊಂಡರು. ಹೆಚ್ಚುವರಿಯಾಗಿ, ಡ್ರೋನ್ ಆಧಾರಿತ ಕೀಟ ನಾಶಕಗಳ ಸಿಂಪರಣೆಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
Matribhumi Samachar Kannad

