Monday, December 29 2025 | 08:23:43 PM
Breaking News

ಪುಣೆ ಮೆಟ್ರೋ ರೈಲು ಯೋಜನೆ ಹಂತ-2ಕ್ಕೆ: ವನಜ್ ನಿಂದ ಚಾಂದನಿ ಚೌಕ್ (ಕಾರಿಡಾರ್ 2ಎ) ಮತ್ತು ರಾಮ್ ವಾಡಿಯಿಂದ ವಾಘೋಲಿ/ವಿಠ್ಠಲವಾಡಿ(ಕಾರಿಡಾರ್ 2ಬಿ) ಹಾಗೂ ಹಾಲಿ ಇರುವ ಪುಣೆ ಮೆಟ್ರೋ ಹಂತ-1ರ ವಿಸ್ತರಣೆಗೆ (ವನಜ್-ರಾಮ್ ವಾಡಿ) ಸಚಿವ ಸಂಪುಟದ ಅನುಮೋದನೆ

Connect us on:

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಪುಣೆ ಮೆಟ್ರೋ ರೈಲು ಯೋಜನೆಯ ಹಂತ-2ಕ್ಕೆ: ವನಜ್ ನಿಂದ ಚಂದಾನಿ ಚೌಕ್ (ಕಾರಿಡಾರ್ 2ಎ) ಮತ್ತು ರಾಮ್ ವಾಡಿಯಿಂದ ವಾಘೋಲಿ/ವಿಠ್ಠಲವಾಡಿ (ಕಾರಿಡಾರ್ 2ಬಿ) ಅನುಮೋದನೆ ನೀಡಿದೆ. ಹಂತ -1ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ವನಜ್-ರಾಮ್ ವಾಡಿ ಕಾರಿಡಾರ್ ನ ವಿಸ್ತರಣೆಯಾಗಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಈ ಎರಡು ಎತ್ತರಿಸಿದ ಮಾರ್ಗಗಳು 12.75 ಕಿ.ಮೀ. ಇರಲಿದ್ದು, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಉಪನಗರಗಳಾದ ಚಾಂದನಿ ಚೌಕ್, ಬಾವ್ಧಾನ್, ಕೊಥ್ರುಡ್, ಖರಾಡಿ ಮತ್ತು ವಾಘೋಲಿಯನ್ನು ಸಂಪರ್ಕಿಸುವ 13 ನಿಲ್ದಾಣಗಳನ್ನು ಒಳಗೊಂಡಿವೆ. ಈ ಯೋಜನೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಅಂದಾಜು ಯೋಜನಾ ವೆಚ್ಚ 3626.24 ಕೋಟಿ ರೂ.ಗಳಾಗಿದ್ದು, ಇದನ್ನು ಭಾರತ ಸರ್ಕಾರ, ಮಹಾರಾಷ್ಟ್ರ ಸರ್ಕಾರ ಮತ್ತು ಬಾಹ್ಯ ದ್ವಿಪಕ್ಷೀಯ / ಬಹುಪಕ್ಷೀಯ ಸಂಸ್ಥೆಗಳು ಸಮಾನವಾಗಿ ಹಂಚಿಕೊಳ್ಳಲಿವೆ. ಈ ಕಾರ್ಯತಂತ್ರದ ಪ್ರಸ್ತಾಪವು ಅಸ್ತಿತ್ವದಲ್ಲಿರುವ ಕಾರಿಡಾರ್ -2 ರ ತಾರ್ಕಿಕ ವಿಸ್ತರಣೆಯಾಗಿದೆ. ಪುಣೆಯಲ್ಲಿ ಪೂರ್ವ-ಪಶ್ಚಿಮ ಸಾಮೂಹಿಕ ಸಾರಿಗೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಚಾಂದನಿ ಚೌಕ್ ನಿಂದ ವಾಘೋಲಿ ಮೆಟ್ರೋ ಕಾರಿಡಾರ್ ಗೆ ನೇರ ಮೆಟ್ರೋ ಮಾರ್ಗವನ್ನು  ರೂಪಿಸುವ ‘ಸಮಗ್ರ ಸಾರಿಗೆ ಯೋಜನೆ’ಗೆ  (ಸಿಎಂಪಿ) ಇದು ಅನುಗುಣವಾಗಿದೆ.

ಈ ವಿಸ್ತರಣೆಗಳು ಪ್ರಮುಖ ಐಟಿ ಕೇಂದ್ರಗಳು, ವಾಣಿಜ್ಯ ಪ್ರದೇಶಗಳು, ಶಿಕ್ಷಣ ಸಂಸ್ಥೆಗಳು ಮತ್ತು ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಮೆಟ್ರೋ ಜಾಲದಾದ್ಯಂತ, ಸಾರ್ವಜನಿಕ ಸಾರಿಗೆ ಮತ್ತು ಪ್ರಯಾಣಿಕರ ಪಾಲನ್ನು ಹೆಚ್ಚಿಸುತ್ತವೆ. ಹೊಸ ಕಾರಿಡಾರ್ ಗಳು ಜಿಲ್ಲಾ ನ್ಯಾಯಾಲಯ ಇಂಟರ್ ಚೇಂಜ್ ನಿಲ್ದಾಣದಲ್ಲಿ ಲೈನ್ -1 (ನಿಗ್ಡಿ-ಕತ್ರಾಜ್) ಮತ್ತು ಲೈನ್ -3 (ಹಿಂಜೇವಾಡಿ-ಜಿಲ್ಲಾ ನ್ಯಾಯಾಲಯ) ನೊಂದಿಗೆ ಸಂಯೋಜನೆಯಾಗುತ್ತವೆ.

ದೀರ್ಘಕಾಲೀನ ಸಾರಿಗೆ ಯೋಜನೆಯಡಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಿಂದ ಬರುವ ಇಂಟರ್ಸಿಟಿ ಬಸ್ ಗಳನ್ನು ಚಾಂದನಿ ಚೌಕ್ ಗೆ ಸಂಪರ್ಕಿಸಲಾಗುವುದು. ಅಹಲ್ಯಾ ನಗರ ಮತ್ತು ಛತ್ರಪತಿ ಸಂಭಾಜಿ ನಗರದಿಂದ ಬರುವ ಬಸ್ ಗಳನ್ನು ವಾಘೋಲಿಯಲ್ಲಿ ಸಂಪರ್ಕಿಸಲಾಗುವುದು, ಇದು ಪ್ರಯಾಣಿಕರಿಗೆ ಪುಣೆಯ ಮೆಟ್ರೋ ವ್ಯವಸ್ಥೆಯನ್ನು ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಈ ವಿಸ್ತರಣೆಗಳು ಪೌಡ್ ರಸ್ತೆ ಮತ್ತು ನಗರ್ ರಸ್ತೆಯಂತಹ ಒಳಾಂಗಣ ಮಾರ್ಗಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಸುರಕ್ಷಿತ, ವೇಗದ ಮತ್ತು ಪರಿಸರ ಸ್ನೇಹಿ ಸಾರಿಗೆ ಆಯ್ಕೆಗಳನ್ನು ನೀಡುತ್ತದೆ.

ಈ ಕಾರಿಡಾರ್ ಗಳು ಪೂರ್ಣಗೊಂಡ ನಂತರ, ಇಡೀ ಲೈನ್ 2ರಲ್ಲಿ ಯೋಜಿತ ದೈನಂದಿನ ಪ್ರಯಾಣಿಕರ ಸಂಖ್ಯೆಯನ್ನು 2027 ರಲ್ಲಿ 0.96 ಲಕ್ಷ, 2037 ರಲ್ಲಿ 2.01 ಲಕ್ಷ, 2047 ರಲ್ಲಿ 2.87 ಲಕ್ಷ ಮತ್ತು 2057 ರಲ್ಲಿ 3.49 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಯೋಜನೆಯನ್ನು ಮಹಾರಾಷ್ಟ್ರ ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಮಹಾ-ಮೆಟ್ರೋ) ಜಾರಿಗೆ ತರಲಿದ್ದು, ಇದು ಎಲ್ಲಾ ಸಿವಿಲ್, ಎಲೆಕ್ಟ್ರೋ-ಮೆಕ್ಯಾನಿಕಲ್ ಮತ್ತು ಸಂಬಂಧಿತ ಕಾರ್ಯಗಳನ್ನು ನಿರ್ವಹಿಸುತ್ತದೆ. ಸ್ಥಳ ಸಮೀಕ್ಷೆ ಮತ್ತು ವಿವರವಾದ ವಿನ್ಯಾಸ ಸಲಹೆಯಂತಹ ನಿರ್ಮಾಣ ಪೂರ್ವ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿವೆ.

ಈ ಕಾರ್ಯತಂತ್ರದ ವಿಸ್ತರಣೆಯು ಪುಣೆಯ ಆರ್ಥಿಕ ಸಾಮರ್ಥ್ಯವನ್ನು ಅನಾವರಣ ಮಾಡಲು, ನಗರ ಸಾರಿಗೆ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಮೆಟ್ರೋಪಾಲಿಟನ್ ಪ್ರದೇಶದಾದ್ಯಂತ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡಲಿದೆ.

image.jpeg

About Matribhumi Samachar

Check Also

ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದಲ್ಲಿ ರೈತರ ದಿನಾಚರಣೆ

ಡಿಸೆಂಬರ್ 23, 2025 ರಂದು ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದ ಯಲಹಂಕ ಆವರಣದಲ್ಲಿ ರೈತರ ದಿನಾಚರಣೆಯನ್ನು ಆಚರಿಸಿಲಾಯಿತು. ಕಾರ್ಯಕ್ರಮಕ್ಕೆ …