ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಪ್ರತಿಷ್ಠಿತ 2029ರ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟಕ್ಕೆ ಭಾರತವನ್ನು ಆತಿಥ್ಯ ವಹಿಸುವ ದೇಶವಾಗಿ ನೇಮಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು, “ಪ್ರತಿಷ್ಠಿತ 2029ರ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟಕ್ಕೆ ಭಾರತವನ್ನು ಆತಿಥ್ಯ ದೇಶವಾಗಿ ನಿಯೋಜಿಸಿರುವುದರಿಂದ ಇದು ಪ್ರತಿಯೊಬ್ಬ ನಾಗರಿಕರಿಗೆ ಬಹಳ ಹೆಮ್ಮೆಯ ಕ್ಷಣವಾಗಿದೆ. ಈ ಕ್ರೀಡಾಕೂಟದ ಆತಿಥ್ಯ ವಹಿಸುವ ಪ್ರತಿಷ್ಠಿತ ಬಿಡ್ ಅನ್ನು ಭಾರತ ಗೆದ್ದಿರುವುದು ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿ ನಿರ್ಮಿಸಲಾದ ನಮ್ಮ ವಿಶಾಲವಾದ ಕ್ರೀಡಾ ಮೂಲಸೌಕರ್ಯಕ್ಕೆ ಜಾಗತಿಕ ಮನ್ನಣೆಯಾಗಿದೆ. ಪೊಲೀಸ್, ಅಗ್ನಿಶಾಮಕ ಮತ್ತು ವಿಪತ್ತು ಸೇವೆಗಳನ್ನು ಒಟ್ಟುಗೂಡಿಸಿ 50 ಕ್ಕೂ ಹೆಚ್ಚು ಕ್ರೀಡೆಗಳಲ್ಲಿ ಸ್ಪರ್ಧಿಸಲು ಅಹಮದಾಬಾದ್ ನಗರವನ್ನು ಕೂಟದ ಸ್ಥಳವಾಗಿ ಆಯ್ಕೆ ಮಾಡಿರುವುದು ನಗರದ ಕ್ರೀಡಾ ತಾಣವಾಗಿ ಬೆಳೆಯುತ್ತಿರುವ ಸ್ಥಾನಮಾನಕ್ಕೆ ಸಾಕ್ಷಿಯಾಗಿದೆ,” ಎಂದಿದ್ದಾರೆ.
1985 ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಕ್ರೀಡಾಕೂಟದ ಪ್ರಾರಂಭದಿಂದಲೂ 20 ಆವೃತ್ತಿಗಳು ನಡೆದಿವೆ (ಯುಎಸ್ಎ -8 ಬಾರಿ, ಕೆನಡಾ -5 ಬಾರಿ, ಯುರೋಪ್ -4 ಬಾರಿ, ಯುಕೆ -2 ಬಾರಿ ಮತ್ತು ಚೀನಾ -ಒಮ್ಮೆ). ಈ ಕ್ರೀಡಾಕೂಟಗಳು ಪೊಲೀಸ್ / ಅಗ್ನಿಶಾಮಕ / ವೈದ್ಯಕೀಯ / ತುರ್ತು / ವಿಪತ್ತು ಸೇವೆಗಳು ಮತ್ತು ಪ್ರಥಮ ಪ್ರತಿಕ್ರಿಯೆ ನೀಡುವವರು ಇತ್ಯಾದಿಗಳ ಸೇವೆಯಲ್ಲಿರುವ ಮತ್ತು ನಿವೃತ್ತ ಸಿಬ್ಬಂದಿಗೆ ಮುಕ್ತವಾಗಿವೆ. 2007ರಲ್ಲಿ ಅಡಿಲೇಡ್ ನಲ್ಲಿ ನಡೆದ ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್ಸ್ ನಲ್ಲಿ ಭಾರತೀಯ ಪೊಲೀಸ್ ತಂಡವು ಮೊದಲ ಬಾರಿಗೆ ಈ ಕ್ರೀಡಾಕೂಟದಲ್ಲಿ ಭಾಗವಹಿಸಿತ್ತು. ಕೆನಡಾದ ವಿನ್ನಿಪೆಗ್ ನಲ್ಲಿ 2023ರ ಜುಲೈ 26ರಿಂದ ಆಗಸ್ಟ್ 6ರವರೆಗೆ ನಡೆದ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟದಲ್ಲಿ 133 ಭಾರತೀಯ ಪೊಲೀಸ್ ಕ್ರೀಡಾಪಟುಗಳು ದಾಖಲೆಯ 343 ಪದಕಗಳನ್ನು (ಚಿನ್ನ-224, ಬೆಳ್ಳಿ-82, ಕಂಚು-37) ಗೆದ್ದಿದ್ದಾರೆ.
2007 ರಲ್ಲಿ ಭಾಗವಹಿಸಿದ ನಂತರ, ಭಾರತೀಯ ಪೊಲೀಸ್ ತಂಡವು ಕ್ರೀಡಾಕೂಟದ 8 ಆವೃತ್ತಿಗಳಲ್ಲಿ 1400ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದೆ. ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟಕ್ಕೆ ಭಾರತೀಯ ತಂಡವನ್ನು ಆ ವರ್ಷದಲ್ಲಿ ನಡೆದ ವಾರ್ಷಿಕ ಅಖಿಲ ಭಾರತ ಪೊಲೀಸ್ ಕ್ರೀಡಾಕೂಟದಲ್ಲಿ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್), ರಾಜ್ಯ ಪೊಲೀಸ್ ಪಡೆಗಳು ಮತ್ತು ಇತರ ಭದ್ರತಾ ಸಂಸ್ಥೆಗಳ 53 ಸದಸ್ಯ ಸಂಸ್ಥೆಗಳನ್ನು ಹೊಂದಿರುವ ದೇಶದಲ್ಲಿ ಪೊಲೀಸ್ ಕ್ರೀಡೆಗಳನ್ನು ಆಯೋಜಿಸುವ ಆಡಳಿತ ಮಂಡಳಿಯಾದ ಅಖಿಲ ಭಾರತ ಪೊಲೀಸ್ ಕ್ರೀಡಾ ನಿಯಂತ್ರಣ ಮಂಡಳಿ ಪ್ರತಿವರ್ಷ 40 ವಾರ್ಷಿಕ ಪೊಲೀಸ್ ಕ್ರೀಡಾಕೂಟಗಳನ್ನು ನಡೆಸುತ್ತದೆ. ಆ ವರ್ಷದ ಅಖಿಲ ಭಾರತ ಪೊಲೀಸ್ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಚಿನ್ನದ ಪದಕ ವಿಜೇತರನ್ನು ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟಕ್ಕಾಗಿ ಭಾರತೀಯ ತಂಡಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
Matribhumi Samachar Kannad

