Thursday, December 18 2025 | 12:38:26 PM
Breaking News

“ಮಹಿಳಾ ಸ್ವಸಹಾಯ ಗುಂಪು (ಎಸ್ ಹೆಚ್ ಜಿ) ಗಳಿಗೆ ಬ್ಯಾಂಕುಗಳಿಂದ ₹11 ಲಕ್ಷ ಕೋಟಿಗೂ ಹೆಚ್ಚು ಸಾಲ ವಿತರಣೆ” – ಶ್ರೀ ಶಿವರಾಜ್ ಸಿಂಗ್

Connect us on:

ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಅಡಿಯಲ್ಲಿ ಔಪಚಾರಿಕ ಹಣಕಾಸು ಸಂಸ್ಥೆಗಳ ಮೂಲಕ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ (SHGs) ₹11 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಸಾಲವನ್ನು ವಿತರಿಸಲಾಗಿದೆ ಎಂದು ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಹೇಳಿದ್ದಾರೆ. ಈ ಮೈಲಿಗಲ್ಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಮಗ್ರ ಗ್ರಾಮೀಣಾಭಿವೃದ್ಧಿ, ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಗ್ರಾಮ ಮಟ್ಟದಲ್ಲಿ ಸ್ವಾವಲಂಬನೆಯನ್ನು ಪೋಷಿಸುವೆಡೆಗೆ ಕೇಂದ್ರ ಸರ್ಕಾರದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯದ DAY-NRLM ಅಡಿಯಲ್ಲಿ, ದೇಶಾದ್ಯಂತ ಗ್ರಾಮೀಣ ಬಡ ಮಹಿಳೆಯರು ಸದೃಢ ಸಮುದಾಯ ಸಂಸ್ಥೆಗಳ ಮೂಲಕ ತಮ್ಮ ಜೀವನೋಪಾಯವನ್ನು ಬಲಪಡಿಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವರು ವಿವರಿಸಿದ್ದಾರೆ. ಸ್ವಸಹಾಯ ಸಂಘಗಳ ಮೂಲಕ ಅವರಿಗೆ ಅಡಮಾನವಿಲ್ಲದೇ / ಆಧಾರ ರಹಿತ ಸಾಲ, ಬಡ್ಡಿ ಸಬ್ಸಿಡಿ ಮತ್ತು ಇತರ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಇದರಿಂದಾಗಿ ಅವರು ತಮ್ಮದೇ ಆದ ವ್ಯಾಪಾರ ಪ್ರಾರಂಭಿಸಲು ಮತ್ತು ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಸಾಲದ ಮರುಪಾವತಿ ಪ್ರಮಾಣ ಶೇಕಡ 98 ಕ್ಕಿಂತ ಹೆಚ್ಚಿದ್ದು, ಇದು ಈ ಉಪಕ್ರಮದ ವಿಶ್ವಾಸಾರ್ಹತೆ, ಶಿಸ್ತು ಮತ್ತು ಪರಿಣಾಮಕಾರಿ ನಿರ್ವಹಣೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ.

ಲಕ್ಷಾಂತರ ಗ್ರಾಮೀಣ ಮಹಿಳೆಯರ ಕನಸುಗಳನ್ನು ನನಸಾಗಿಸುವಲ್ಲಿ ಬ್ಯಾಂಕಿಂಗ್ ಪಾಲುದಾರರು ಗಮನಾರ್ಹ ಪಾತ್ರ ವಹಿಸಿದ್ದಾರೆ ಎಂದು ಶ್ರೀ ಶಿವರಾಜ್ ಸಿಂಗ್ ಅವರು ಬ್ಯಾಂಕಿಂಗ್ ಸಮುದಾಯದ ಬೆಂಬಲವನ್ನು ಶ್ಲಾಘಿಸಿದ್ದಾರೆ. ಈ ನಿಟ್ಟಿನಲ್ಲಿ ‘ಬ್ಯಾಂಕ್ ಸಖಿ’ಯರ ಅವಿಶ್ರಾಂತ ಪ್ರಯತ್ನಗಳು ಸ್ವಸಹಾಯ ಗುಂಪು-ಬ್ಯಾಂಕ್ ಸಂಪರ್ಕವನ್ನು ಸುಗಮಗೊಳಿಸಿವೆ ಮತ್ತು ಸಕಾಲಿಕ ಸಾಲ ಮರುಪಾವತಿಯನ್ನು ಖಾತರಿಪಡಿಸಿವೆ ಎಂದು ಅವರು ಹೇಳಿದ್ದಾರೆ.

ಆದ್ಯತಾ ವಲಯದ ಸಾಲದ ಅಡಿಯಲ್ಲಿ ಸ್ವಸಹಾಯ ಸಂಘಗಳಿಗೆ ಸುಲಭ ಸಾಲಗಳನ್ನು ಒದಗಿಸುವ ಜೊತೆಗೆ ಸರಳೀಕೃತ ಪ್ರಕ್ರಿಯೆಗಳ ಮೂಲಕ ಸ್ವಸಹಾಯ ಸಂಘ ಸದಸ್ಯರು ಬ್ಯಾಂಕಿಂಗ್ ಸೇವೆಗಳ ಪ್ರವೇಶಾವಕಾಶವನ್ನು ಪಡೆಯಲು ಸಾಧ್ಯವಾಗಿಸಿರುವುದು ಈ ಬ್ಯಾಂಕಿಂಗ್ ಪಾಲುದಾರಿಕೆಯ ಪ್ರಮುಖ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಉಪಕ್ರಮವು ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆಗಳ ಜೋಡಣೆಯನ್ನು ಉತ್ತೇಜಿಸುತ್ತದೆ ಹಾಗೂ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುತ್ತದೆ.

ದೇಶದಲ್ಲಿ ಸಾಲ ಮರುಪಾವತಿ ವ್ಯವಸ್ಥೆಗಳನ್ನು ಬಲಪಡಿಸಲಾಗುತ್ತಿದೆ ಎಂದು ತಿಳಿಸಿದ ಸಚಿವರು, ‘ಬ್ಯಾಂಕ್ ಸಖಿಯರು’ ವಹಿವಾಟುಗಳು, ಸಾಲ ಅರ್ಜಿಗಳು ಮತ್ತು ದಾಖಲೀಕರಣ ಪ್ರಕ್ರಿಯೆಗಳಲ್ಲಿ ಹೆಚ್ಚಾಗಿ ನೆರವಾಗುತ್ತಿದ್ದಾರೆ ಎಂದರು. ಜೊತೆಗೆ ವಿಮೆ, ಪಿಂಚಣಿಗಳು ಮತ್ತು ಇತರ ಹಣಕಾಸು ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇದಲ್ಲದೆ, ಈ ಮಹತ್ವದ ಕಾರ್ಯಕ್ರಮದಡಿಯಲ್ಲಿ ಸಕಾಲಿಕ ಸಾಲ ವಸೂಲಾತಿಯನ್ನು ಖಚಿತಪಡಿಸಿಕೊಳ್ಳಲು ಸಮುದಾಯ ಆಧಾರಿತ ಮರುಪಾವತಿ ಕಾರ್ಯವಿಧಾನ (CBRM) ಅನ್ನು ಸಹ ಬಲಪಡಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ಉಪಕ್ರಮಗಳಾದ DAY-NRLM, ‘ಲಖ್ಪತಿ ದೀದಿ’ ಮೊದಲಾದವು ಗ್ರಾಮೀಣ ಭಾರತದ ಲಕ್ಷಾಂತರ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ರೂಪಾಂತರಿಸುತ್ತಿವೆ ಎಂದು ತಿಳಿಸುತ್ತಾ ಶ್ರೀ ಶಿವರಾಜ್ ಸಿಂಗ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಈ ಸಾಧನೆಯು ಕೇವಲ ಅಂಕಿಅಂಶವಲ್ಲ, ಬದಲಾಗಿ ಮಹಿಳೆಯರಿಗೆ ಅವಕಾಶಗಳು, ವಿಶ್ವಾಸ ಮತ್ತು ಸಂಪನ್ಮೂಲಗಳನ್ನು ನೀಡಿದಾಗ ಅವರ ಸಾಮೂಹಿಕ ಶಕ್ತಿಯು ದೇಶವನ್ನು ಸ್ವಾವಲಂಬನೆಯ ಹೊಸ ಎತ್ತರಕ್ಕೆ ಕೊಂಡೊಯ್ಯಬಹುದು ಎಂಬುದರ ಸಂಕೇತವಾಗಿದೆ.

About Matribhumi Samachar

Check Also

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ(ಎಂ.ಎಸ್.ಎಂ.ಇ. ಗಳ) ಬೆಳವಣಿಗೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ

ಸರ್ಕಾರವು 01.07.2020 ರಂದು ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಉದ್ಯಮ ನೋಂದಣಿ ಪೋರ್ಟಲ್ ಅನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ 7.28 ಕೋಟಿಗೂ ಹೆಚ್ಚು …