Tuesday, December 09 2025 | 05:17:03 AM
Breaking News

ಟೆಲಿಕಾಂ ವಂಚನೆ ತಡೆಗೆ ನಾಗರಿಕರ ದೂರು ಆಧರಿಸಿ 1.36 ಕೋಟಿ ಮೊಬೈಲ್ ಸಂಪರ್ಕ ಕಡಿತಗೊಳಿಸಲಾಗಿದೆ: ಸಂಸತ್ತಿಗೆ ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ

Connect us on:

ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಇಂದು ಲೋಕಸಭೆಯಲ್ಲಿ ಟೆಲಿಕಾಂ ವಂಚನೆಗಳಿಗೆ ಸಂಬಂಧಿಸಿದ ಪ್ರಮುಖ ಕಳವಳಗಳು ಮತ್ತು ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಗಳಾದ ಬಿ ಎಸ್ ಎನ್ ಎಲ್ (BSNL) ಮತ್ತು ಎಂ ಟಿ ಎನ್ಎಲ್ (MTNL) ನ ಪ್ರಸ್ತುತ ಸ್ಥಿತಿಗತಿಗಳ ಕುರಿತು ಮಾತನಾಡಿದರು. ಅವರು ಸಂಸತ್ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

ಸೈಬರ್ ವಂಚನೆಗಳನ್ನು ತಡೆಗಟ್ಟಲು ಸರ್ಕಾರವು ಕೈಗೊಳ್ಳುತ್ತಿರುವ ನಿರಂತರ ಪ್ರಯತ್ನಗಳನ್ನು ವಿವರಿಸಿದ ಕೇಂದ್ರ ಸಚಿವರು, “ಸೈಬರ್ ವಂಚನೆಯನ್ನು ನಿಯಂತ್ರಿಸಲು ಮತ್ತು ಡಿಜಿಟಲ್ ಬೆದರಿಕೆಗಳಿಂದ ನಾಗರಿಕರನ್ನು ರಕ್ಷಿಸಲು ದೇಶಾದ್ಯಂತ ಬೃಹತ್ ಪ್ರಯತ್ನವನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ, ಭಾರತ ಸರ್ಕಾರವು ಗೃಹ ಸಚಿವಾಲಯದೊಂದಿಗೆ ನಿಕಟ ಸಮನ್ವಯ ಸಾಧಿಸಿ, ದೂರಸಂಪರ್ಕ ಇಲಾಖೆಯ (DoT) ಅಡಿಯಲ್ಲಿ ಹಲವಾರು ನಿರ್ಣಾಯಕ ಮತ್ತು ತಂತ್ರಜ್ಞಾನ-ಆಧಾರಿತ ಕ್ರಮಗಳನ್ನು ಜಾರಿಗೆ ತಂದಿದೆ” ಎಂದು ಸದನಕ್ಕೆ ಮಾಹಿತಿ ನೀಡಿದರು.

ಈ ಉಪಕ್ರಮದ ಭಾಗವಾಗಿ, ‘ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್ಫಾರ್ಮ್’  ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ವಂಚನೆಗಳನ್ನು ನೈಜ ಸಮಯದಲ್ಲಿ ಜಂಟಿಯಾಗಿ ಎದುರಿಸಲು 570 ಬ್ಯಾಂಕ್ ಗಳು, 36 ರಾಜ್ಯ ಪೊಲೀಸ್ ಪಡೆಗಳು, ತನಿಖಾ ಸಂಸ್ಥೆಗಳು ಮತ್ತು ಟೆಲಿಕಾಂ ಸೇವಾ ಸಂಸ್ಥೆಗಳು ಸೇರಿದಂತೆ ಒಟ್ಟು 620 ಸಂಸ್ಥೆಗಳನ್ನು ಒಂದೇ ವೇದಿಕೆಯಡಿ ತರುತ್ತದೆ. ನಾಗರಿಕರನ್ನು ವಂಚಿಸಲು ದೂರಸಂಪರ್ಕ ಮೂಲಸೌಕರ್ಯವನ್ನು ದುರ್ಬಳಕೆ ಮಾಡಿಕೊಳ್ಳುವ ವಂಚಕರು ಮತ್ತು ಸೈಬರ್ ಅಪರಾಧಿಗಳ ವಿರುದ್ಧ ಸಮಗ್ರ ಕ್ರಮ ಕೈಗೊಳ್ಳಲು ಈ ವೇದಿಕೆಯು ಅನುವು ಮಾಡಿಕೊಡುತ್ತದೆ.

ಈ ಕಾರ್ಯಾಚರಣೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲು, ಸರ್ಕಾರವು ಮೇ 16, 2023 ರಂದು ‘ಸಂಚಾರ್ ಸಾಥಿ’ ಪೋರ್ಟಲ್ ಗೆ ಚಾಲನೆ ನೀಡಿತು. ಅಂದಿನಿಂದೀಚೆಗೆ, ಈ ಪೋರ್ಟಲ್ 15.5 ಕೋಟಿಗೂ ಹೆಚ್ಚು ಭೇಟಿಗಳನ್ನು (hits) ದಾಖಲಿಸಿದ್ದು, ಇದು ಸಾರ್ವಜನಿಕರಲ್ಲಿನ ಬಲವಾದ ಜಾಗೃತಿ ಮತ್ತು ಪಾಲ್ಗೊಳ್ಳುವಿಕೆಯನ್ನು ಸಾಬೀತುಪಡಿಸುತ್ತದೆ. ಈ ಯಶಸ್ಸಿನ ಮುಂದುವರಿದ ಭಾಗವಾಗಿ, ‘ಸಂಚಾರ್ ಸಾಥಿ’ ಮೊಬೈಲ್ ಆ್ಯಪ್ ಅನ್ನು ಜನವರಿ 17, 2025 ರಂದು ಆಂಡ್ರಾಯ್ಡ್ ಮತ್ತು ಐಓಎಸ್ (iOS) ಎರಡಕ್ಕೂ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ 44 ಲಕ್ಷಕ್ಕೂ ಹೆಚ್ಚು ಡೌನ್ಲೋಡ್ ಗಳನ್ನು ಕಂಡಿದೆ.

ಈ ವೇದಿಕೆಗಳ ಸಂಯೋಜಿತ ಮಾಹಿತಿಯ ಆಧಾರದ ಮೇಲೆ, ದೂರಸಂಪರ್ಕ ಇಲಾಖೆಯು (DoT) 5.5 ಲಕ್ಷ ಹ್ಯಾಂಡ್ಸೆಟ್ ಗಳನ್ನು ಬ್ಲಾಕ್ ಮಾಡಿದ್ದು, 20,000 ಬೃಹತ್ SMS ಕಳುಹಿಸುವವರನ್ನು ನಿಷ್ಕ್ರಿಯಗೊಳಿಸಿದೆ. ಇದಲ್ಲದೆ, ಸಂಶಯಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಸುಮಾರು 24 ಲಕ್ಷ ವಾಟ್ಸಾಪ್ ಖಾತೆಗಳನ್ನೂ ಸಹ ಸ್ಥಗಿತಗೊಳಿಸಲಾಗಿದೆ.

ಪರಿಚಯಿಸಲಾದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ‘ನಿಮ್ಮ ಮೊಬೈಲ್ ಸಂಪರ್ಕಗಳನ್ನು ತಿಳಿಯಿರಿ’ (Know Your Mobile Connections) ಸೇವೆ. ಇದು ಬಳಕೆದಾರರಿಗೆ ತಮ್ಮ ಹೆಸರಿನಲ್ಲಿ ನೋಂದಣಿಯಾಗಿರುವ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಲು ಮತ್ತು ಅವುಗಳಲ್ಲಿ ಯಾವುದಾದರೂ ಅನಧಿಕೃತವಾಗಿದ್ದರೆ, ಅದರ ಬಗ್ಗೆ ದೂರು ನೀಡಲು ಅವಕಾಶ ಕಲ್ಪಿಸುತ್ತದೆ. ಈ ಸೌಲಭ್ಯದ ಮೂಲಕ, ಈವರೆಗೆ 1.36 ಕೋಟಿ ಅನಧಿಕೃತ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.

ಸರ್ಕಾರವು ಕೃತಕ ಬುದ್ಧಿಮತ್ತೆ ಆಧಾರಿತ ಸಾಧನಗಳನ್ನೂ ಸಹ ಬಳಸಿಕೊಂಡಿದೆ. ವಿಶೇಷವಾಗಿ, ‘ASTR’ ಎಂಬ ತಂತ್ರಜ್ಞಾನವನ್ನು ಬಳಸಿ ನಕಲಿ ಮೊಬೈಲ್ ಸಂಖ್ಯೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಿ ರದ್ದುಗೊಳಿಸಲಾಗುತ್ತಿದ್ದು, ಈ ಮೂಲಕ ಹೆಚ್ಚುವರಿಯಾಗಿ 82 ಲಕ್ಷ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ವಿದೇಶಿ ಸಂಖ್ಯೆಗಳು ಭಾರತೀಯ ಕರೆಗಳಂತೆ ಕಾಣಿಸಿಕೊಳ್ಳುವ ಅಂತಾರಾಷ್ಟ್ರೀಯ ಸ್ಪೂಫ್ ಕರೆಗಳ ಗಂಭೀರ ಸಮಸ್ಯೆಯನ್ನು ನಿಭಾಯಿಸಲು, ದೂರಸಂಪರ್ಕ ಇಲಾಖೆಯು ‘ಅಂತರಾಷ್ಟ್ರೀಯ ಒಳಬರುವ ಸ್ಪೂಫ್ ಕರೆಗಳ ತಡೆಗಟ್ಟುವಿಕೆ’ ಉಪಕ್ರಮದ ಅಡಿಯಲ್ಲಿ ಕೇಂದ್ರೀಕೃತ ಸಾಫ್ಟ್ವೇರ್ ಪರಿಹಾರವನ್ನು ಜಾರಿಗೆ ತಂದಿದೆ. ಇದನ್ನು ಜಾರಿಗೊಳಿಸಿದ ಮೊದಲ ದಿನವೇ 1.35 ಕೋಟಿ ಸ್ಪೂಫ್ ಕರೆಗಳನ್ನು ನಿರ್ಬಂಧಿಸಲಾಯಿತು ಮತ್ತು ನಿರಂತರ ಪ್ರಯತ್ನಗಳ ಫಲವಾಗಿ ಇಂತಹ ಪ್ರಕರಣಗಳು ಶೇ. 97 ರಷ್ಟು ಕಡಿಮೆಯಾಗಿವೆ. ಹಿಂದೆ ಅಗಾಧ ಪ್ರಮಾಣದಲ್ಲಿದ್ದ ಈ ಕರೆಗಳು, ಇಂದು ದಿನಕ್ಕೆ ಸುಮಾರು ಮೂರು ಲಕ್ಷದಷ್ಟು ಮಾತ್ರ ಪತ್ತೆಯಾಗುತ್ತಿವೆ. ಬಳಕೆದಾರರಿಗೆ ಹೆಚ್ಚಿನ ಪಾರದರ್ಶಕತೆ ಒದಗಿಸುವ ಸಲುವಾಗಿ, ಇಂತಹ ಎಲ್ಲಾ ಒಳಬರುವ ಕರೆಗಳಿಗೆ ‘International Call’ ಎಂಬ ಎಚ್ಚರಿಕೆಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಟೆಲಿಕಾಂ ಸಂಸ್ಥೆಗಳಿಗೆ ಆದೇಶಿಸಲಾಗಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿ, ‘ವಂಚನೆ ಅಪಾಯ ಸೂಚಕ’ (Fraud Risk Indicator – FRI) ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಬಳಕೆದಾರರ ಬ್ಯಾಂಕಿಂಗ್ ಮತ್ತು ವಹಿವಾಟುಗಳ ಶೈಲಿಯನ್ನು ಆಧರಿಸಿ, ಅವರ ಅಪಾಯದ ಮಟ್ಟವನ್ನು ‘ಅತಿ ಹೆಚ್ಚು’, ‘ಹೆಚ್ಚು’, ಮತ್ತು ‘ಮಧ್ಯಮ’ ಎಂದು ವರ್ಗೀಕರಿಸಲು ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ಅಪಾಯದ ಮಾಹಿತಿಯನ್ನು ರಿಯಲ್‌ ಟೈಮ್‌ ನಲ್ಲಿ ಬ್ಯಾಂಕ್ ಗಳಿಗೆ ರವಾನಿಸುವುದರಿಂದ, ಸಂಶಯಾಸ್ಪದ ವಹಿವಾಟುಗಳಿಗೆ ತಡೆ ಒಡ್ಡಲು ಇದು ನೆರವಾಗುತ್ತದೆ. ಈ ವ್ಯವಸ್ಥೆಯ ಮೂಲಕ, 3.7 ಲಕ್ಷಕ್ಕೂ ಅಧಿಕ ಜನರನ್ನು ಅಪಾಯಕಾರಿ ಎಂದು ಗುರುತಿಸಲಾಗಿದೆ. ಇದರ ಪರಿಣಾಮವಾಗಿ, 3.04 ಲಕ್ಷಕ್ಕೂ ಹೆಚ್ಚಿನ ಡೆಬಿಟ್/ಕ್ರೆಡಿಟ್ ವಹಿವಾಟುಗಳನ್ನು ಯಶಸ್ವಿಯಾಗಿ ತಡೆಯಲಾಗಿದ್ದು, 1.55 ಲಕ್ಷ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ವ್ಯವಸ್ಥೆಯ ಯಶಸ್ಸನ್ನು ಪರಿಗಣಿಸಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಲ್ಲಾ ಬ್ಯಾಂಕ್ ಗಳು ತಮ್ಮ ಕಾರ್ಯವ್ಯವಸ್ಥೆಯಲ್ಲಿ FRI ಅನ್ನು ಅಳವಡಿಸಿಕೊಳ್ಳಬೇಕೆಂದು ಕಡ್ಡಾಯಗೊಳಿಸಿದೆ.

ಇಷ್ಟೇ ಅಲ್ಲದೆ, ಆಗ್ನೇಯ ಏಷ್ಯಾ ರಾಷ್ಟ್ರಗಳಿಂದ ಭಾರತೀಯ ಸಿಮ್ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಜಾಲದ ವಿರುದ್ಧ ದೂರಸಂಪರ್ಕ ಇಲಾಖೆಯು ಸಮರ ಸಾರಿದೆ. ಇದರ ಭಾಗವಾಗಿ, 26 ಲಕ್ಷಕ್ಕೂ ಅಧಿಕ ರೋಮಿಂಗ್ ಮೊಬೈಲ್ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಹಾಗೂ ಈ ವಂಚನೆ ಕೃತ್ಯಗಳಿಗೆ ಬಳಕೆಯಾಗುತ್ತಿದ್ದ ಸುಮಾರು 1.3 ಲಕ್ಷ ಮೊಬೈಲ್ ಸಾಧನಗಳನ್ನು ನಿರ್ಬಂಧಿಸಲಾಗಿದೆ.

ಈ ನಿರಂತರ ಪ್ರಯತ್ನಗಳು, ನಾಗರಿಕರನ್ನು ರಕ್ಷಿಸಲು, ಟೆಲಿಕಾಂ ಜಾಲಗಳನ್ನು ಸುರಕ್ಷಿತಗೊಳಿಸಲು ಮತ್ತು ಡಿಜಿಟಲ್ ಸುರಕ್ಷಿತ ಭಾರತವನ್ನು ನಿರ್ಮಿಸಲು ಸರ್ಕಾರದ ದೃಢವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ನಾಗರಿಕರು ಜಾಗರೂಕರಾಗಿರಬೇಕು ಮತ್ತು ಸಂಶಯಾಸ್ಪದ ಚಟುವಟಿಕೆಗಳನ್ನು ವರದಿ ಮಾಡಲು, ತಮ್ಮ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸಲು ಹಾಗೂ ವಂಚನೆ-ಮುಕ್ತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ‘ಸಂಚಾರ್ ಸಾಥಿ’ ಪೋರ್ಟಲ್ ಮತ್ತು ಆ್ಯಪ್ ನಂತಹ ಸಾಧನಗಳ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆಗಳ ಕಾರ್ಯಕ್ಷಮತೆಯ ಕುರಿತು ಮಾತನಾಡಿದ ಸಚಿವರು, ಕಳೆದ ಹಣಕಾಸು ವರ್ಷದಲ್ಲಿ ಬಿ ಎಸ್ ಎನ್ ಎಲ್ ನ (BSNL) ಚಂದಾದಾರರ ಸಂಖ್ಯೆ 8.55 ಕೋಟಿಯಿಂದ 9.1 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದರು. ಕಳೆದ ಮೂರು ವರ್ಷಗಳಲ್ಲಿ ಮಂಜೂರು ಮಾಡಲಾದ ₹3.22 ಲಕ್ಷ ಕೋಟಿ ರೂಪಾಯಿಗಳ ಪುನಶ್ಚೇತನ ಪ್ಯಾಕೇಜ್ ಈ ಚೇತರಿಕೆಗೆ ಬಲ ನೀಡಿದೆ. ಜವಾಬ್ದಾರಿ ಮತ್ತು ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು, ವಿಕೇಂದ್ರೀಕೃತ ಕಾರ್ಯತಂತ್ರದ ಅಡಿಯಲ್ಲಿ ಬಿ ಎಸ್ ಎನ್ ಎ ನ 32 ಟೆಲಿಕಾಂ ಸರ್ಕಲ್ಗಳು ಇದೀಗ ತಮ್ಮದೇ ಆದ ವ್ಯವಹಾರ ಯೋಜನೆಯನ್ನು ರೂಪಿಸುತ್ತಿವೆ. ಇದಲ್ಲದೆ, ವಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಸಚಿವಾಲಯವು ಎಲ್ಲಾ ಮುಖ್ಯ ಮಹಾಪ್ರಬಂಧಕರೊಂದಿಗೆ 12 ಗಂಟೆಗಳ ‘ಕಾರ್ಯತಂತ್ರ ಮತ್ತು ವ್ಯವಹಾರ ಅಭಿವೃದ್ಧಿ ಅಧಿವೇಶನ 2025-26’ ಅನ್ನು ಯಶಸ್ವಿಯಾಗಿ ನಡೆಸಿದೆ.

ಭಾರತವು ‘ಸ್ವದೇಶಿ 4G ತಂತ್ರಜ್ಞಾನ ಸ್ಟಾಕ್’ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿರುವುದನ್ನು ಕೇಂದ್ರ ಸಚಿವರು ವಿಶೇಷವಾಗಿ ಉಲ್ಲೇಖಿಸಿದರು. ಈ ವ್ಯವಸ್ಥೆಯ ‘ಕೋರ್ ಸಾಫ್ಟ್‌ವೇರ್’ ಅನ್ನು ಸಾರ್ವಜನಿಕ ವಲಯದ ಸಂಸ್ಥೆಯಾದ ಸಿ-ಡಾಟ್ (C-DoT) ಅಭಿವೃದ್ಧಿಪಡಿಸಿದ್ದು, ‘ರೇಡಿಯೋ ಆಕ್ಸೆಸ್ ನೆಟ್ವರ್ಕ್’ ಹಾರ್ಡ್ವೇರ್ ಅನ್ನು ತೇಜಸ್ ನೆಟ್ವರ್ಕ್ಸ್ ತಯಾರಿಸುತ್ತಿದೆ. ಸಂಪೂರ್ಣ ‘ಸಿಸ್ಟಮ್ ಇಂಟಿಗ್ರೇಷನ್’ ಅನ್ನು ಟಿಸಿಎಸ್ ನಿರ್ವಹಿಸುತ್ತಿದೆ. 4G ಸೇವೆಗಳಿಗಾಗಿ ಅನುಮೋದನೆಗೊಂಡ 95,000 ಟವರ್ಗಳ ಪೈಕಿ 75,000 ಟವರ್ ಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಈ ಯೋಜನೆಗೆ ಈವರೆಗೆ ₹20,000 ಕೋಟಿ ರೂಪಾಯಿಗಳ ಬಂಡವಾಳವನ್ನು ಹೂಡಿಕೆ ಮಾಡಲಾಗಿದೆ. ಪ್ರಸ್ತುತ, ಬಿ ಎಸ್ ಎನ್ ಎಲ್ ನ 4G ಸೇವೆಗಳು ಚಾಲ್ತಿಯಲ್ಲಿದ್ದು, ಅವುಗಳನ್ನು ಮತ್ತಷ್ಟು ಉತ್ತಮಗೊಳಿಸಲಾಗುತ್ತಿದೆ. ಮುಂಬರುವ ಹಂತದಲ್ಲಿ ಇದನ್ನು 5G ತಂತ್ರಜ್ಞಾನಕ್ಕೆ ಮೇಲ್ದರ್ಜೆಗೇರಿಸಲು ಯೋಜಿಸಲಾಗಿದೆ.

About Matribhumi Samachar

Check Also

ರಫ್ತು ಸ್ಪರ್ಧಾತ್ಮಕತೆ ಹೆಚ್ಚಿಸಲು ಮತ್ತು ಜಾಗತಿಕ ಮೌಲ್ಯ ಸರಪಳಿಯಲ್ಲಿ ಎಂ ಎಸ್ ಎಂ ಇಗಳಿಗೆ ಬೆಂಬಲ ನೀಡಲು ಅನೇಕ ಉಪಕ್ರಮಗಳನ್ನು ಕೈಗೊಂಡ ಸರ್ಕಾರ

ಎಂ ಎಸ್ ಎಂ ಇ ವಲಯದ ರಫ್ತಿನ ಇತ್ತೀಚಿನ ಪ್ರವೃತ್ತಿಗಳಲ್ಲಿ ಕಂಡುಬರುವ ಅಂಶವೇನೆಂದೆರೆ, ಒಟ್ಟಾರೆ ಸರಕು ರಫ್ತಿನಲ್ಲಿ ಎಂ ಎಸ್ …