ಭಾರತೀಯ ಆರ್ಥಿಕತೆಯ ನಿರ್ಣಾಯಕ ಆಧಾರಸ್ತಂಭವಾಗಿರುವ ರಫ್ತುಗಳು, ಜಿ.ಡಿ.ಪಿ. ಯ ಸುಮಾರು 21% ಮತ್ತು ಬಲವಾದ ವಿದೇಶಿ ವಿನಿಮಯ ಒಳಹರಿವುಗಳನ್ನು ಹೊಂದಿವೆ. ರಫ್ತು ಆಧಾರಿತ ಕೈಗಾರಿಕೆಗಳ ಅಡಿಯಲ್ಲಿ 45 ಮಿಲಿಯನ್‌ಗಿಂತಲೂ ಹೆಚ್ಚು ಜನರು ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗದಲ್ಲಿದ್ದಾರೆ, ಎಂ.ಎಸ್.ಎಂ.ಇ..ಗಳು ಒಟ್ಟು ರಫ್ತಿನ ಸುಮಾರು 45% ಕೊಡುಗೆ ನೀಡುತ್ತವೆ. ಇಂತಹ ನಿರಂತರ ರಫ್ತು ಬೆಳವಣಿಗೆಯು ಭಾರತದ ಚಾಲ್ತಿ ಖಾತೆ ಸಮತೋಲನ ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಹಣಕಾಸು ಸೇವೆಗಳ ಇಲಾಖೆಯಿಂದ ಜಾರಿಗೆ ತರಲಾಗುತ್ತಿರುವ ರಫ್ತುದಾರರಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ (ಸಿ.ಜಿ.ಎಸ್.ಇ) ಯನ್ನು 01.12.2025 ರಿಂದ ಕಾರ್ಯಗತಗೊಳಿಸಲಾಗಿದ್ದು, ಅನಿಶ್ಚಿತ ಅಡೆತಡೆಗಳ ಅವಧಿಯಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು (ಸದಸ್ಯ ಸಾಲ ಸಂಸ್ಥೆಗಳು – ಎಂ.ಎಲ್.ಐ. ಗಳು) ಭಾರತೀಯ ರಫ್ತುದಾರರಿಗೆ ಹೆಚ್ಚುವರಿ ಹಣಕಾಸಿನ ಸಹಾಯವನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಈ ಕ್ರಮವು ರಫ್ತು ಮಾರುಕಟ್ಟೆಗಳನ್ನು ವೈವಿಧ್ಯಗೊಳಿಸುತ್ತದೆ ಮತ್ತು ಅವರ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ ಪೂರ್ವಭಾವಿ ಮಧ್ಯಪ್ರವೇಶದ ಉದ್ದೇಶವು ರಫ್ತುದಾರರು ಮತ್ತು ಎಂ.ಎಸ್.ಎಂ.ಇ. ಗಳಿಗೆ ದ್ರವ್ಯತೆಯನ್ನು ಒದಗಿಸುತ್ತದೆ, ವ್ಯವಹಾರ ನಿರಂತರತೆಯನ್ನು ಖಚಿತಪಡಿಸುತ್ತದೆ ಮತ್ತು ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸಲು ಅವಕಾಶಗಳನ್ನು ಸೃಷ್ಟಿಸುತ್ತದೆ.
ಈ ಯೋಜನೆಯು ಅರ್ಹ ಎಂ.ಎಲ್.ಐ. ಗಳ ಮೂಲಕ ನೇರ ಮತ್ತು ಪರೋಕ್ಷ ರಫ್ತುದಾರ ಎಂ.ಎಸ್.ಎಂ.ಇ.ಗಳಿಗೆ ₹20,000 ಕೋಟಿಗಳವರೆಗೆ ಹೆಚ್ಚುವರಿ ಮೇಲಾಧಾರ-ಮುಕ್ತ ಸಾಲ ಬೆಂಬಲವನ್ನು ಕಲ್ಪಿಸುತ್ತದೆ. 31.12.2025ರ ಹೊತ್ತಿಗೆ, ₹8,599 ಕೋಟಿಗಳ ಮೊತ್ತದ 1,788 ಅರ್ಜಿಗಳನ್ನು ಸ್ವೀಕರಿಸಲಾಗಿದೆ, ಅದರಲ್ಲಿ ₹3,141 ಕೋಟಿಗಳ ಮೊತ್ತದ ಒಟ್ಟು 716 ಅರ್ಜಿಗಳನ್ನು ಮಂಜೂರು ಮಾಡಲಾಗಿದೆ, ಇದು ನಮ್ಮ ರಫ್ತುದಾರರು ಮತ್ತು ಎಂ.ಎಸ್.ಎಂ.ಇ. ಗಳಲ್ಲಿ ಬಲವಾದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ.
ಅವರ ಚಾಲ್ತಿಯಲ್ಲಿರುವ ರಫ್ತು ಸಾಲ / ಕಾರ್ಯನಿರತ ಬಂಡವಾಳ ಮಿತಿಗಳ 20% ವರೆಗೆ ಸಮಾನವಾದ ಕಾರ್ಯನಿರತ ಬಂಡವಾಳ ಸಾಲದ ಮೊತ್ತದೊಂದಿಗೆ, ಈ ಯೋಜನೆಯು ರಫ್ತುದಾರರು ಮತ್ತು ಎಂ.ಎಸ್.ಎಂ.ಇ. ಗಳು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವರ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಹಾಗೂ ಹೊಸ ಮತ್ತು ಉದಯೋನ್ಮುಖ ಮಾರುಕಟ್ಟೆಗಳಿಗೆ ವೈವಿಧ್ಯೀಕರಣದತ್ತ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಈ ಘಟಕಗಳ ದ್ರವ್ಯತೆಯನ್ನು ಸುಗಮಗೊಳಿಸುವ ಮೂಲಕ, ಯೋಜನೆಯು ವ್ಯವಹಾರ ಕಾರ್ಯಾಚರಣೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಉದ್ಯೋಗವನ್ನು ಉಳಿಸಿಕೊಳ್ಳಲು ನೆರವಾಗುವುದೆಂದು ನಿರೀಕ್ಷಿಸಲಾಗುತ್ತದೆ.
ಸಿ.ಜಿ.ಎಸ್.ಇ. ಯೋಜನೆಯು 31.03.2026 ರವರೆಗೆ ಅಥವಾ ₹20,000 ಕೋಟಿಗಳವರೆಗಿನ ಮೌಲ್ಯದ ಖಾತರಿಗಳನ್ನು ನೀಡುವವರೆಗೆ ತೆರೆದಿರುತ್ತದೆ. ಈ ಯೋಜನೆಯನ್ನು ಹಣಕಾಸು ಸೇವೆಗಳ ಇಲಾಖೆ (ಡಿ.ಎಫ್.ಎಸ್.) ರಾಷ್ಟ್ರೀಯ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿಮಿಟೆಡ್ (ಎನ್.ಸಿ.ಜಿ.ಟಿ.ಸಿ.) ಮೂಲಕ ಜಾರಿಗೊಳಿಸುತ್ತಿದೆ.
Matribhumi Samachar Kannad

