ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಇಂದು ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದ ಕೆಂಗೇರಿ-ಹೆಜ್ಜಾಲ ಭಾಗದಲ್ಲಿ ಬರುವ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 16 (ರಾಮೋಹಳ್ಳಿ ಗೇಟ್)ಕ್ಕೆ ಬದಲಾಗಿ ರಸ್ತೆ ಕೆಳ ಸೇತುವೆಯ (RUB) ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದರು ಮತ್ತು ಲೆವೆಲ್ ಕ್ರಾಸಿಂಗ್ ಸಂಖ್ಯೆ ಗೇಟ್ ಸಂಖ್ಯೆ 15ರ (ಚಲ್ಲಘಟ್ಟ ಗೇಟ್) ಬದಲಾಗಿ ನಿರ್ಮಿಸಲಾದ ರಸ್ತೆ ಕೆಳ ಸೇತುವೆಯನ್ನು ಉದ್ಘಾಟಿಸಿದರು. ಈ ಯೋಜನೆಗಳಿಂದ ಈ ಪ್ರದೇಶದಲ್ಲಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆ ಸುಧಾರಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವಿ. ಸೋಮಣ್ಣ ಅವರು ದೇಶಾದ್ಯಂತ ರಸ್ತೆ ಮೇಲ್ಸೇತುವೆಗಳು/ರಸ್ತೆ ಕೆಳಸೇತುವೆ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಭಾರತೀಯ ರೈಲ್ವೆಯೇ ಭರಿಸುತ್ತಿದೆ ಎಂದರು. ಕಳೆದ 10 ವರ್ಷಗಳಲ್ಲಿ 640 ಕ್ಕೂ ಹೆಚ್ಚು ರಸ್ತೆ ಕೆಳಸೇತುವೆಗಳು ಮತ್ತು ರಸ್ತೆ ಮೇಲ್ಸೇತುವೆಗಳು ಪೂರ್ಣಗೊಂಡಿವೆ. ಹೊಸದಾಗಿ ನಿರ್ಮಾಣವಾಗಿರುವ ಚಲ್ಲಘಟ್ಟ ರಸ್ತೆ ಕೆಳ ಸೇತುವೆ ಮತ್ತು ಈಗ ಕಾಮಗಾರಿ ಪ್ರಾರಂಭವಾಗಲಿರುವ ರಾಮೋಹಳ್ಳಿ ರಸ್ತೆ ಕೆಳ ಸೇತುವೆಗಳಿಂದ, ಲೆವೆಲ್ ಕ್ರಾಸಿಂಗ್‌ಗಳಲ್ಲಿ ವಾಹನ ಸಂಚಾರಕ್ಕೆ ಉಂಟಾಗುವ ವಿಳಂಬವು ಕಡಿಮೆಯಾಗಲಿದೆ. ಮೈಸೂರು ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಮೂಲಕ ಸ್ಥಳೀಯರಿಗೆ ಹೆಚ್ಚು ಉಪಯೋಗವಾಗಲಿದೆ ಎಂದರು.

ಬೆಂಗಳೂರಿನ ಸುತ್ತಮುತ್ತ 100 ಕಿಲೋಮೀಟರ್ ವ್ಯಾಪ್ತಿಯೊಳಗಿನ ಎಲ್ಲಾ ಲೆವೆಲ್ ಕ್ರಾಸಿಂಗ್‌ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ತೆಗೆದುಹಾಕಲು ಕ್ರಮಕೈಗೊಳ್ಳಲಾಗುವುದು ಎಂದು ಶ್ರೀ ವಿ. ಸೋಮಣ್ಣ ಹೇಳಿದರು. ಸ್ಟೇಷನ್ ಪುನರಾಭಿವೃದ್ಧಿ ಯೋಜನೆಯಡಿಯಲ್ಲಿ ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ಪುನರಾಭಿವೃದ್ಧಿ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣವನ್ನು ವಿಶ್ವ ದರ್ಜೆಗೆ ಅನುಗುಣವಾಗಿ ಪುನರಾಭಿವೃದ್ಧಿಗೊಳಿಸುವುದೂ ಸೇರಿದಂತೆ ನಗರದಲ್ಲಿ ಪ್ರಸ್ತುತ ನಡೆಯುತ್ತಿರುವ ಮತ್ತು ಮುಂಬರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು. ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಎರಡು ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುವುದು, ಬೆಂಗಳೂರು ಉಪನಗರ ರೈಲು ಯೋಜನೆ ಪ್ರಗತಿಯಲ್ಲಿದೆ, ಬೈಯಪ್ಪನಹಳ್ಳಿ-ಹೊಸೂರು ಮಾರ್ಗದ ಡಬ್ಲಿಂಗ್ ಪ್ರಗತಿಯಲ್ಲಿದೆ ಮತ್ತು ಬೆಂಗಳೂರು ಬಳಿ ಮೆಗಾ ಕೋಚಿಂಗ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಸುಶ್ರೀ ಶೋಭಾ ಕರಂದ್ಲಾಜೆ, ಸನ್ಮಾನ್ಯ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರು ಮಾತನಾಡಿ ಈ ರಸ್ತೆ ಕೆಳ ಸೇತುವೆಯ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳ ದೀರ್ಘಕಾಲದ ಬೇಡಿಕೆ ಈಡೇರಿಸಿದಂತಾಗಿದೆ. ಲೆವೆಲ್ ಕ್ರಾಸಿಂಗ್ ಗಳ ಬಳಿ ವಾಹನಗಳು ಕಾಯುವ ಸಮಯವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕುವುದು ಅತ್ಯಗತ್ಯ ಎಂದು ಸಚಿವರು ಹೇಳಿದರು. ದೇಶಾದ್ಯಂತ ಇಂತಹ ಮೂಲಸೌಕರ್ಯ ಅಭಿವೃಧ್ದಿಗಳನ್ನು ತ್ವರಿತವಾಗಿ ಹೆಚ್ಚಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ ಎಂದು ತಿಳಿಸಿದರು.
ಶ್ರೀ ಟಿ.ಎನ್. ಜವರಾಯಿ ಗೌಡ, ಸನ್ಮಾನ್ಯ ವಿಧಾನ ಪರಿಷತ್ ಸದಸ್ಯರು; ಶ್ರೀ ಆಶುತೋಷ್ ಮಾಥುರ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಬೆಂಗಳೂರು ವಿಭಾಗ; ಶ್ರೀ ರಾಜೀವ್ ಶರ್ಮಾ ಹಿರಿಯ ವಿಭಾಗೀಯ ಎಂಜಿನಿಯರ್ (ಸಮನ್ವಯ) ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 15ಕ್ಕೆ ಬದಲಾಗಿ ನಿರ್ಮಿಸಲಾಗಿರುವ ರಸ್ತೆ ಕೆಳಸೇತುವೆಯು ಚಲ್ಲಘಟ್ಟವನ್ನು ಮೈಸೂರು ರಸ್ತೆಗೆ ಸಂಪರ್ಕಿಸುತ್ತದೆ. ಇದನ್ನು ಸುಮಾರು ₹5.52 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಾಮೋಹಳ್ಳಿ ಗೇಟ್‌ನಲ್ಲಿ (ಎಲ್‌ಸಿ ಸಂಖ್ಯೆ 16) ರಸ್ತೆ ಕೆಳ ಸೇತುವೆ ಕಾಮಗಾರಿಯನ್ನು ₹7.74 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
Matribhumi Samachar Kannad

