ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಬಡವರು, ಸೌಲಭ್ಯ ವಂಚಿತರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಒದಗಿಸುವ ಗುರಿಯೊಂದಿಗೆ ಅಟಲ್ ಪಿಂಚಣಿ ಯೋಜನೆ (ಎ.ಪಿ.ವೈ) ಅನ್ನು 09.05.2015 ರಂದು ಪ್ರಾರಂಭಿಸಲಾಯಿತು. ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವ 18-40 ವರ್ಷ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರಿಗೆ ಇದು ಮುಕ್ತವಾಗಿದೆ. ಯೋಜನೆಯ ಪ್ರಕಾರ, ಚಂದಾದಾರರು 60 ವರ್ಷ ತಲುಪಿದ ನಂತರ ಪಿಂಚಣಿ ಪ್ರಯೋಜನಗಳನ್ನು ಪಡೆಯುತ್ತಾರೆ. ಆದ್ದರಿಂದ, ಎ.ಪಿ.ವೈ ಅಡಿಯಲ್ಲಿ ಪಿಂಚಣಿ ಪ್ರಯೋಜನಗಳು 2035 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಆದಾಗ್ಯೂ, 31.10.2025ರ ಹೊತ್ತಿಗೆ ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಒಟ್ಟು ದಾಖಲಾತಿ 8,34,13,738 ಆಗಿದೆ.
ಸರ್ಕಾರ ಮತ್ತು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿ.ಎಫ್.ಆರ್.ಡಿ.ಎ) ಗ್ರಾಮೀಣ ಮತ್ತು ದೂರದ ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಎ.ಪಿ.ವೈ ಬಗ್ಗೆ ಜಾಗೃತಿ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ಈ ಕೆಳಗಿನ ಕ್ರಮಗಳನ್ನು ಕೈಗೊಂಡಿವೆ:
- ಜಾಗೃತಿ ಮೂಡಿಸಲು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಿಯತವಾಗಿ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತದೆ.
- 13 ಸ್ಥಳೀಯ ಭಾಷೆಗಳಲ್ಲಿ ಎ.ಪಿ.ವೈ ಚಂದಾದಾರರ ಮಾಹಿತಿ ಕರಪತ್ರ.
- ಅರ್ಹ ಫಲಾನುಭವಿಗಳಲ್ಲಿ ಎ.ಪಿ.ವೈ ಅನ್ನು ಪ್ರಚಾರ ಮಾಡಲು ಬ್ಯಾಂಕಿಂಗ್ ವರದಿಗಾರರು (ಬಿ.ಸಿ.) ಮತ್ತು ಬ್ಯಾಂಕುಗಳ ಕ್ಷೇತ್ರ ಸಿಬ್ಬಂದಿ, ಸ್ವಸಹಾಯ ಗುಂಪು (ಎಸ್.ಹೆಚ್.ಜಿ) ಸದಸ್ಯರು, ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ ಗಳ (ಎಸ್.ಆರ್.ಎಲ್.ಎಂ) ಬ್ಯಾಂಕ್ ಸಖಿಗಳಿಗೆ ವರ್ಚುವಲ್ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
- ರಾಷ್ಟ್ರೀಯ ಹಣಕಾಸು ಶಿಕ್ಷಣ ಕೇಂದ್ರ (ಎನ್.ಸಿ.ಎಫ್.ಇ), ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಂ), ಮತ್ತು ಎಸ್.ಆರ್.ಎಲ್.ಎಂ ಸೇರಿದಂತೆ ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಎ.ಪಿ.ವೈ ಬಗ್ಗೆ ಜಾಗೃತಿ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ತೊಡಗಿಕೊಂಡಿವೆ.
- ಸುಲಭವಾದ ಆನ್‌ಲೈನ್ ಆನ್ ಬೋರ್ಡಿಂಗ್ ಗಾಗಿ e-ಎ.ಪಿ.ವೈ, ನೆಟ್-ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಶನ್ ಮತ್ತು ಬ್ಯಾಂಕ್ ವೆಬ್ ಪೋರ್ಟಲ್ ಗಳಂತಹ ಆನ್‌ಲೈನ್ ಚಾನೆಲ್‌ಗಳನ್ನು ಸಕ್ರಿಯಗೊಳಿಸಲಾಗಿದೆ.
- ಎ.ಪಿ.ವೈ ಔಟ್ರೀಚ್ ಕಾರ್ಯಕ್ರಮಗಳನ್ನು ಬ್ಯಾಂಕುಗಳು ಮತ್ತು ಎಸ್.ಎಲ್.ಬಿ.ಸಿ ಗಳು/ಎಲ್.ಡಿ.ಎಂ ಗಳ ಸಹಯೋಗದೊಂದಿಗೆ ಭಾರತದಾದ್ಯಂತ ನಿಯಮಿತವಾಗಿ ನಡೆಸಲಾಗುತ್ತದೆ.
- ಇತ್ತೀಚೆಗೆ, ಪಿಂಚಣಿ ಸಂಪೂರ್ಣತೆಯನ್ನು ಸಾಧಿಸಲು ಭಾರತದಾದ್ಯಂತ ಹಣಕಾಸು ಸೇರ್ಪಡೆ ಅಭಿಯಾನಗಳನ್ನು ನಡೆಸಲಾಯಿತು.
31.10.2025ರ ಹೊತ್ತಿಗೆ, ಎ.ಪಿ.ವೈ ಅಡಿಯಲ್ಲಿ ಒಟ್ಟು ಮಹಿಳಾ ದಾಖಲಾತಿ 4,04,41,135 ಆಗಿದ್ದು, ಇದು ಒಟ್ಟು ದಾಖಲಾತಿಯ ಶೇ.48 ರಷ್ಟಾಗಿದೆ. ಎ.ಪಿ.ವೈ ಅನ್ನು ಅಂಚೆ ಇಲಾಖೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಪಾವತಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಸೇರಿದಂತೆ ಬ್ಯಾಂಕಿಂಗ್ ಸಂಸ್ಥೆಗಳ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ. ಈ ಸಂಸ್ಥೆಗಳು ಪಿ.ಎಫ್.ಆರ್.ಡಿ.ಎ ಯಲ್ಲಿ ಪಾಯಿಂಟ್ ಆಫ್ ಪ್ರೆಸೆನ್ಸ್ – ಎ.ಪಿ.ವೈ (ಪಿ.ಒ.ಪಿ-ಎ.ಪಿ.ವೈ) ಆಗಿ ನೋಂದಾಯಿಸಲ್ಪಟ್ಟಿವೆ ಮತ್ತು ಎ.ಪಿ.ವೈ ವಿತರಣೆ ಮತ್ತು ಎ.ಪಿ.ವೈ ಚಂದಾದಾರರ ಸೇವೆಗೆ ಜವಾಬ್ದಾರರಾಗಿವೆ.
ಈ ಮಾಹಿತಿಯನ್ನು ಇಂದು ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಒದಗಿಸಿದ್ದಾರೆ.
Matribhumi Samachar Kannad

