गुरुवार, नवंबर 21 2024 | 11:34:17 PM
Breaking News
Home / Choose Language / kannada / ಭಾರತವು ವಿವಿಧ ಸಂಸ್ಕೃತಿ, ಭಾಷೆ ಹಾಗೂ ಸಂಗೀತದ ಪರಂಪರೆಯನ್ನು ಹೊಂದಿದೆ-ನಿರ್ಮಲಾ ಸೀತಾರಾಮನ್

ಭಾರತವು ವಿವಿಧ ಸಂಸ್ಕೃತಿ, ಭಾಷೆ ಹಾಗೂ ಸಂಗೀತದ ಪರಂಪರೆಯನ್ನು ಹೊಂದಿದೆ-ನಿರ್ಮಲಾ ಸೀತಾರಾಮನ್

Follow us on:

ಭಾರತದಲ್ಲಿನ ಪ್ರತಿಯೊಂದು ರಾಜ್ಯವು ತನ್ನದೇ ಆದ ವಿಭಿನ್ನ ಸಂಸ್ಕೃತಿ, ಭಾಷೆ ಹಾಗೂ ಸಂಗೀತದ ಪರಂಪರೆಯನ್ನು ಹೊಂದಿದ್ದು, ಪ್ರತಿಯೊಂದು ದೇಶದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿವೆ ಹಾಗೂ ಸಂಗೀತ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

ಇಂದು ಪ್ರವಾಸೋದ್ಯಮ ಸಚಿವಾಲಯದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ “ಮೈಸೂರು ಸಂಗೀತ ಸುಗಂಧ ಉತ್ಸವ” ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಸಂಗೀತ ಪರಂಪರೆಗೆ ಕರ್ನಾಟಕ ಸಂಗೀತದ ಕೊಡುಗೆ ಮಹತ್ವವಾಗಿದ್ದು, ಜಾತಿ, ಧರ್ಮ ಹಾಗೂ ಭಾಷೆಯನ್ನು ಮೀರಿ ಇಂದು ಪ್ರಪಂಚದಾದ್ಯಂತ  ಪ್ರಸಿದ್ಧಿ ಪಡೆದಿದೆ ಎಂದರು.

ಇಂದು ಸಂಗೀತ ಸುಗಂಧ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಿರುವ ಮುಖ್ಯ ಉದ್ದೇಶ, ಇಲ್ಲಿನ ಮೈಸೂರು ಅರಸರು, ವಿಜಯನಗರ ಸಾಮ್ರಾಜ್ಯದಂತಹ ರಾಜ ಮನೆತನಗಳ ಒಡೆಯರು ಸಂಗೀತಕ್ಕೆ ಹಾಗೂ ಅದರ ಬೆಳವಣಿಗೆಗೆ ನೀಡುರುವ ಪ್ರೋತ್ಸಾಹವಾಗಿದೆ. ಅಲ್ಲದೆ ಮೈಸೂರು ಸಂಗೀತದ ನಾಡು ಹಾಗೆಯೇ ಚಂದನದ ನಾಡು ಆಗಿದೆ. ಹಾಗಾಗಿ ಇಂತಹ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿ ಆ ಕಾರ್ಯಕ್ರಮದಲ್ಲಿ ದಾಸ ಸಂಗೀತದ ಬಗ್ಗೆ ಮಾತಾಡವುದು ಹೆಮ್ಮೆಯ ವಿಷಯ ಎಂದು ಹೇಳಿದರು.

12 ನೇ ಮತ್ತು 16ನೇ ಶತಮಾನದ  ನಡುವೆ, ವಿಜಯನಗರ ಸಾಮ್ರಾಜ್ಯದ ಆಶ್ರಯದಲ್ಲಿ ಕರ್ನಾಟಕ ಸಂಗೀತವು ಪ್ರವರ್ಧಮಾನಕ್ಕೆ ಬಂದಿತು. ಈ ಸಮಯದಲ್ಲಿ “ಕರ್ನಾಟಿಕ್ ಸಂಗೀತದ ಪಿತಾಮಹ” ಎಂದು ಕರೆಯಲ್ಪಡುವ ಸಂತ ಪುರಂದರದಾಸರು ಲಕ್ಷಾಂತರ ಕೀರ್ತನೆಗಳು, ಭಕ್ತಿಗೀತೆಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತದ ಮೂಲಭೂತ ಪಾಠಗಳನ್ನು ಸಹ ರೂಪಿಸಿದ್ದಾರೆ ಎಂದರು.

18ನೇ ಶತಮಾನವನ್ನು ಕರ್ನಾಟಕ ಸಂಗೀತದ ಸುವರ್ಣಯುಗವೆಂದು ಪರಿಗಣಿಸಬಹುದು. ಪುರಂದರ ದಾಸರ ನಂತರ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್  ಮತ್ತು ಶ್ಯಾಮ ಶಾಸ್ತ್ರಿ ಈ ಮೂವರು ಸಂಯೋಜಕರು ಸಮಕಾಲೀನರಾಗಿದ್ದರು. ಅವರ ಸಂಯೋಜನೆಗಳಿಂದ ಕರ್ನಾಟಿಕ್ ಸಂಗೀತ ಸಂಗ್ರಹವನ್ನು ಶ್ರೀಮಂತಗೊಳಿಸಿದರು. ಅವರು ಮಧುರ ಸೌಂದರ್ಯ, ಲಯಬದ್ಧ ಮತ್ತು ಭಕ್ತಿಯ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ ಎಂದರು.

ಭಾರತವು ವಿವಿಧ ಸಂಸ್ಕೃತಿ ಭಾಷೆ ಸಂಗೀತವನ್ನು ಹೊಂದಿರುವಂತ ದೇಶವಾಗಿದ್ದು, ಅದನ್ನು ಉಳಿಸಿ ಬೆಳೆಸಬೇಕು. ಏಕ್ ಭಾರತ್ ವಿಕಸಿತ್ ಭಾರತ್ ಎಂಬ ಮಾತಿನ ಅರ್ಥ ಭಾರತದ ಪ್ರತಿಯೊಂದು ರಾಜ್ಯವು ಅದರಲ್ಲಿಯೂ ದಕ್ಷಿಣ ಭಾರತದ ರಾಜ್ಯಗಳು ತಮ್ಮದೇ ಆದ ಭಾಷೆ ಹಾಗೂ ಸಂಸ್ಕೃತಿಯನ್ನು ಹೊಂದಿದ್ದರೂ ನಾವು ಪ್ರತಿನಿಧಿಸುವ ದೇಶ ಒಂದೇ ಅದು ಭಾರತ. ಹಾಗಾಗಿ ಪ್ರತಿಯೊಬ್ಬರೂ ಬೇಧ-ಭಾವವನ್ನು ತೊರೆದು ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ಪ್ರೋತ್ಸಾಹಿಸಿ ನಾವು ಅದಕ್ಕೆ ಕೈ ಜೋಡಿಸಬೇಕು ಎಂದರು.

ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆಯು ತನ್ನದೇ ಆದ ಜಿ.ಐ. ಟ್ಯಾಗ್ ಗಳನ್ನು ಹೊಂದಿರುವ ವಿಭಿನ್ನ ಉತ್ಪನ್ನಗಳನ್ನು ಹೊಂದಿದೆ. ಇದನ್ನು ಗುರುತಿಸಿ ಸರ್ಕಾರ ಒಂದು ಜಿಲ್ಲೆ  ಒಂದು ಉತ್ಪನ್ನ  ಎಂಬ ಹೆಸರಿನಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪ್ರೋತ್ಸಾಹವನ್ನು ನೀಡಲಾಗುತ್ತಿದೆ ಎಂದರು. ಪುರಂದರ ದಾಸರು ಭಿಕ್ಷೆಗಾಗಿ ಮನೆ ಮನೆಗೆ ತೆರಳುವಾಗ ರಚಿಸಿದಂತಹ ಕೀರ್ತನೆಗಳು ಇಂದು ಎಲ್ಲರನ್ನು ತಲುಪಿ, ಅವರ ಪ್ರತಿಯೊಂದು ಕೀರ್ತನೆಯಲ್ಲಿಯೂ ಪುರಂದರ ವಿಠ್ಠಲನನ್ನು ನೆನೆಯುತ್ತಾರೆ. ಕನ್ನಡ ಸಂಗೀತ ಲೋಕದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಕರ್ನಾಟಿಕ್ ಸಂಗೀತದ ಬಗ್ಗೆ ತಿಳಿಯುವಾಗ ದಾಸ ಸಂಗೀತವು ಪ್ರಮುಖವಾದದ್ದಾಗಿದ್ದು, ಪುರಂದರರ ನಂತರ ಬಂದಂತಹ ಕನಕದಾಸರು, ಹರಿದಾಸರು ಹಾಗೂ ಇನ್ನಿತರರು ಅದನ್ನು ಬೆಳೆಸುವಲ್ಲಿ ತಮ್ಮನ್ನು ತಾವು ಅರ್ಪಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಇಂದು ಎಲ್ಲಾ ಭಾಷೆ, ಪ್ರದೇಶವನ್ನು ಮೀರಿ ಜನರನ್ನು ತಲುಪಿದೆ ಎಂದರು.

ದಾಸರ ಸಂಗೀತವನ್ನು ಅರ್ಥ ಮಾಡಿಕೊಳ್ಳಲು ಅದನ್ನು ಕನ್ನಡ ಭಾಷೆಯ ಪ್ರತಿಯೊಂದು  ವ್ಯಾಕರಣವನ್ನು ಅರಿತಿರಬೇಕು ಎಂದೇನಿಲ್ಲ. ಸಂಗೀತದ ಮೇಲೆ ಆಸಕ್ತಿ ಹಾಗೂ ಭಕ್ತಿಯಿಂದ ಕೇಳುವ ಮನಸ್ಥಿತಿ ಇದ್ದರೆ  ಕೀರ್ತನೆಗಳು ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ ಹಾಗೂ ಬಹಳ ಅರ್ಥಪೂರ್ಣತೆಯಿಂದ ಕೂಡಿರುವ ದಾಸರ ಕೀರ್ತನೆಗಳು ಪ್ರಸ್ತುತತೆಗೆ ಒಗ್ಗಿಕೊಳ್ಳುತ್ತವೆ ಎಂದು ಹೇಳಿದರು.

ಜನರನ್ನು ಒಂದು ಗೂಡಿಸಿ ಎಲ್ಲರೂ ಒಂದೇ ಎಂದು ಸಾರುವಲ್ಲಿ ದಾಸರು, ಬಸವಣ್ಣ ಸೇರಿದಂತೆ ಇನ್ನಿತರರು ಶ್ರಮಿಸಿದ್ದಾರೆ. ಸಮ ಸಮಾಜವನ್ನು ನಿರ್ಮಿಸುವಲ್ಲಿ  ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ಇಂದು ಮೈಸೂರಿನ ಹಲವಾರು ಸಂಗೀತ ದಿಗ್ಗಜರರು ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದ್ದಾರೆ. ಇಂತಹ ಸಂಗೀತ ಪರಂಪರೆಯನ್ನು ಹೊಂದಿರುವ ಮೈಸೂರಿನಲ್ಲಿ ಸಂಗೀತ ಸುಗಂಧ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಷಯ ಈ ಕಾರ್ಯಕ್ರಮವು ಪ್ರಪಂಚದಲ್ಲಿರುವ ಎಲ್ಲಾ ಕನ್ನಡಿಗರಿಗೆ ತಲುಪಬೇಕು ಹಾಗಾಗಿ, ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದ ಮೂಲಕ ಪ್ರಪಂಚದಲ್ಲಿ ಇರುವಂತಹ ಕನ್ನಡಿಗರನ್ನು ಒಂದು ಗೂಡಿಸಿ ಎಲ್ಲರೂ ಕನ್ನಡ ಭಾಷೆಯ ಸಂಸ್ಕೃತಿಯನ್ನು ನೀಡುವ ಈ ಕಾರ್ಯಕ್ರಮವನ್ನು ಸವಿಯುವಂತೆ ಮಾಡಬೇಕು. ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಸಾರ್ವಜನಿಕರು ಹಾಗೂ ಸರ್ಕಾರ ಕೈಜೋಡಿಸಬೇಕು ಎಂದು ಸಲಹೆ ನೀಡಿದರು. ಕೇಂದ್ರ ಸರ್ಕಾರವು ಕರ್ನಾಟಕ ಭಾಗಕ್ಕೆ ಸಾಕಷ್ಟು ಯೋಜನೆಗಳನ್ನು ನೀಡಿದ್ದು ಪ್ರಸಾದ್ ಯೋಜನೆ, ಸ್ವದೇಶ್ ದರ್ಶನ್ ಯೋಜನೆಗಳಡಿಯಲ್ಲಿ ಅನುದಾನ ನೀಡಲಾಗಿದೆ ಎಂದರು. ಕರ್ನಾಟಕದ ಹಲವು ಪ್ರವಾಸಿ ತಾಣಗಳನ್ನು ಯುನೆಸ್ಕೊ ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಗುರುತಿಸಲಾಗಿದೆ. ಕನ್ನಡ ಭಾಷೆ ಬಗೆಗೂ ವಿಶೇಷ ಸಂಧರ್ಭಗಳಲ್ಲಿ ಮಾನ್ಯತೆ ನೀಡಲಾಗಿದೆ ಎಂದರು.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಗೋಪಿ ಅವರು ಮಾತನಾಡಿ, ಕಳೆದ ಬಾರಿ ಆಂಧ್ರ ಪ್ರದೇಶದಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವರ್ಷ ಕರ್ನಾಟಕದ ಮೈಸೂರಿನಲ್ಲಿ ಮಾಡಲಾಗುತ್ತಿದೆ.. ಕರ್ನಾಟಕ ತೆಲಂಗಾಣ, ಕೇರಳ ಹಾಗೂ ಇನ್ನಿತರ ರಾಜ್ಯಗಳು ತನ್ನದೇ ಆದ ಸಂಗೀತ ಪರಂಪರೆಯನ್ನು ಹೊಂದಿದ್ದು, ಕರ್ನಾಟಕದ ದಾಸ ಸಂಗೀತವು ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು. ಮೈಸೂರು ಕರ್ನಾಟಕ ಸಂಗೀತ ಪರಂಪರೆಯ ಗೂಡಾಗಿದ್ದು, ಇಲ್ಲಿನ ಸಂಗೀತ, ನೃತ್ಯ, ಜಾನಪದ , ಪರ್ಫಾರ್ಮೆಯಿಂಗ್ ಆರ್ಟ್ ಹಾಗೂ ಇನ್ನಿತರ ಕಲೆಗಳಗೆ ಪ್ರವಾಸಿಗರನ್ನು ಮನಸೋಲುವಂತೆ ಮಾಡುತ್ತದೆ. ಮೈಸೂರು ಕೇವಲ ಸಂಗೀತದ ನಗರವಾಗಿರದೆ ಇಲ್ಲಿರುವ ಹಲವಾರು ಪ್ರವಾಸಿ ತಾಣಗಳಿಂದ ಇಂದು ಪ್ರವಾಸಿಗರ ನೆಚ್ಚಿನ ಪ್ರವಾಸಿ ನಗರವಾಗಿದೆ ಎಂದರು.

ಮೈಸೂರಿಗೆ ಸಂಗೀತ ಸುಗಂಧದ ಜೊತೆಗೆ ಚಂದನ ಸುಗಂಧ ಎಂಬ ಹೆಸರಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೋಡುವುದಾದರೆ, ಪ್ರೇಕ್ಷಣಿಯ ಸ್ಥಳಗಳ ಜೊತೆಗೆ ಸಂಗೀತವೂ  ಪ್ರವಾಸಿಗರನ್ನು  ಭಾರತಕ್ಕೆ ಮರಳಿ ಮರಳಿ ಬರುವಂತೆ ಮಾಡುತ್ತದೆ. ಇದರಿಂದ ಸಂಗೀತಕ್ಕೆ ಇರುವ ಮಹತ್ವವನ್ನು ತಿಳಿಯಬಹುದಾಗಿದೆ ಎಂದು ತಿಳಿಸಿದರು. ಅರುಣಾಚಾಲ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ವಿಶೇಷ ಹಾಗೂ ವಿಭಿನ್ನವಾದ ಸಂಗೀತಕ್ಕೆ ಸಂಬಂಧಿಸಿದ ಹಬ್ಬಗಳನ್ನು ಮಾಡಲಾಗುತ್ತದೆ. ಅವು ಅಲ್ಲಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ತಿಳಿಸುವಂತಹವಾಗಿರುತ್ತವೆ ಎಂದರು.

ಇನ್ನು ಭಾರತೀಯ ಚಿತ್ರರಂಗದಲ್ಲಿ ಕರ್ನಾಟಿಕ್ ಸಂಗೀತದ ಪ್ರಭಾವವನ್ನು ನೋಡುವುದಾದರೆ ಶಂಕರನ್, ಜೇಸುದಾಸ್ ಅವರ ಕೊಡುಗೆ ಅಪಾರವಾಗಿದ್ದು, ಕರ್ನಾಟಿಕ್ ಸಂಗೀತದ ಬಗ್ಗೆ ಅರಿವೇ ಇಲ್ಲದ ಎಸ್ ಪಿ ಬಿ ಅವರು ಕರ್ನಾಟಿಕ್ ಸಂಗೀತದ ಲೋಕದಲ್ಲಿ ಮಾಡಿದ ಸಾಧನೆ ಅವಿಸ್ಮರಣೀಯ. ಎಸ್ ಜಾನಕಿ, ಸುಶೀಲ, ಕೆ ಎಸ್ ಚಿತ್ರ,  ಜಯಚಂದ್ರನ್ ಸೇರಿದಂತೆ ಹಲವಾರು ಸಂಗೀತಾ ದಿಗ್ಗಜರರು ಕರ್ನಾಟಿಕ್ ಸಂಗೀತದಲ್ಲಿ ಪರಿಣಿತರಾಗಿದ್ದು, ಅವರು ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಇನ್ನು ಮಲಯಾಳಂ ಸಿನೆಮಾದಲ್ಲಿ ಕರ್ನಾಟಿಕ್ ಸಂಗೀತವು ಒಂದು ಅಲೆಯನ್ನೇ ಸೃಷ್ಟಿ ಮಾಡಿತ್ತು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್ ಸಿ ಮಹದೇವಪ್ಪ ನವರು ಮಾತನಾಡಿ, ಸಂಗೀತ ಸುಗಂಧ ಎಂಬುದು ಅವಿಸ್ಮರಣೀಯ  ಕಾರ್ಯಕ್ರಮವಾಗಿದ್ದು, ಧರ್ಮ ಮತ್ತು ಜಾತಿಯನ್ನು ಮೀರಿದ ಸಂಗೀತವು ಜನರ ಮನಸ್ಸನ್ನು ಸೇರಬೇಕು ಎಂದರು.

ವಿಜಯನಗರ ಸಾಮ್ರಾಜ್ಯ ಆಳ್ವಿಕೆ ಕಾಲದಲ್ಲಿ ಸಂಗೀತ ಮನ್ನಣೆ ಪಡೆಯಿತು. ಕರ್ನಾಟಕದಲ್ಲಿ ಪುರಂದರ ದಾಸರು ಕೀರ್ತನೆಗಳ ಮೂಲಕ ಸಂಗೀತವನ್ನ ಪಸರಿಸಿದರು. ಈ ದಸರಾದಲ್ಲಿ ಸಂಗೀತದ ಜೊತೆ ಪ್ರತಿಯೊಂದಕ್ಕೂ ಮನ್ನಣೆ ನೀಡಿದ್ದೇವೆ. ಗಣತಂತ್ರ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವವನ್ನ ಗೌರವಿಸುವ ಮೂಲಕ ಸಂವಿಧಾನದ ಆಶಯಗಳನ್ನ ಎತ್ತಿ ಹಿಡಿಯೋಣ ಎಂದು ಹೇಳಿದರು. ಕ್ರಿಸ್ತಶಕ 12 ಮತ್ತು 14ನೆೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಆಳ್ವಿಕೆಯ ಸಮಯದಲ್ಲಿ ಸಂಗೀತಾ ಕಲೆ ಉಕೃಷ್ಟವಾಗಿತ್ತು. ಕೀರ್ತನೆ ಮತ್ತು ಭಜನೆಗಳ ಮೂಲಕ ಪುರಂದರದಾಸರು ಕರ್ನಾಟಕದಲ್ಲಿ ದಾಸ ಸಾಹಿತ್ಯವನ್ನು ಬೆಳಕಿಗೆ ತಂದರು. ಇವರ ನಂತರದಲ್ಲಿ ಕನಕದಾಸರ ಕೀರ್ತನೆಗಳು ದಾಸಸಾಹಿತ್ಯದಲ್ಲಿ ಕರ್ನಾಟಕ ಸಂಗೀತದಲ್ಲಿ ಪ್ರಖ್ಯಾತಿ ಪಡೆಯಿತು ಎಂದರು.

ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಕ್ರೀಡೆ, ಸಾಹಿತ್ಯ, ಕಲೆ, ಮನೋರಂಜನೆ, ಕೃಷಿ, ಆಹಾರ  ವಿವಿಧ ಕಲೆಗಳ ಸಂಯೋಗದೊಂದಿಗೆ 414ನೆೇ ದಸರಾ ಆಚರಣೆ ನಡೆದಿದ್ದು, ಈ ಬಾರಿ ಉತ್ತಮ ದಸರ ಆಚರಣೆಯಾಗಿದ್ದು, ವೈವಿಧ್ಯತೆಯಲ್ಲಿ ಏಕತೆಯನ್ನು ತೋರಿಸುತ್ತದೆ ಎಂದರು. ಮೈಸೂರು – ಕೊಡಗು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ, ಮೈಸೂರಿನಲ್ಲಿ ಸಂಗೀತ ಸುಗಂಧ ಉತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ಮೈಸೂರಿನ ಸಂಗೀತ ಪರಂಪರೆ ಗುರುತಿಸಿ ಈ ಕಾರ್ಯಕ್ರಮವನ್ನು ಮಾಡಲಾಗಿದ್ದು, ಕನ್ನಡ ನಾಡು-ನುಡಿ,  ಸಂಗೀತ, ಕಲೆ, ಭಾಷೆ, ಏಕೀಕರಣ  ಚಳವಳಿ, ಕರ್ನಾಟಕ ಇತಿಹಾಸ, ಪರಂಪತೆಯಿಂದ ಇಂದು ನವೆಂಬರ್ 1 ರಂದು  ಆಚರಣೆ ಮಾಡಿ, ತಿಂಗಳಿನಾದ್ಯಂತ  ಕನ್ನಡ ನಾಡು-ನುಡಿ ಪರಂಪರೆ ಸಂಗೀತದ ಬಗ್ಗೆ  ಕಾರ್ಯಕ್ರಮಗಳನ್ನು ಆಚರಿಸುತ್ತೇವೆ ಎಂದು ಹೇಳಿದರು.

ಇಂದಿಗೂ ಮೈಸೂರಿನಲ್ಲಿ ಸಂಗೀತ ಪರಂಪರೆ ಮುಂದುವರೆಯುತ್ತಿದೆ. ರಾಜರ ಕಾಲದಿಂದಲೂ ಕರ್ನಾಟಿಕ್ ಸಂಗೀತ ಪ್ರವರ್ಧಮಾನದಲ್ಲಿದ್ದು, ದಾಸರ ಸಂಗೀತ ಪ್ರಮುಖವಾಗಿದೆ. ವಿಜಯ ನಗರ ಸಾಮ್ರಾಜ್ಯದ ಕಾಲದಿಂದಲೂ ಮುಂದುವರೆಯುತ್ತಾ ಬಂದಿದೆ. ಕರ್ನಾಟಿಕ್ ಸಂಗೀತ ಲೋಕಕ್ಕೆ ಪುರಂದರ ದಾಸರು ನೀಡಿದ ಕೊಡುಗೆ ಗಣನೀಯ. ಅದನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದರು. ದಾಸ ಸಾಹಿತ್ಯದ ದಿಗ್ಗಜರಾದ ಪುರಂದರ ದಾಸರು ಸುಮಾರು 4 ಲಕ್ಷದ 75 ಸಾವಿರ ಕೀರ್ತನೆಗಳನ್ನು ರಚಿಸಿ, ಕರ್ನಾಟಿಕ್ ಸಂಗೀತದ ಪಿತಾಮಹ ಎಂಬ ಖ್ಯಾತಿ ಪಡೆದಿದ್ದಾರೆ. ಒಂದು ವೇಳೆ ಪುರಂದರದಾಸರು ಇಲ್ಲದಿದ್ದರೆ ಇಂದು ಕರ್ನಾಟಿಕ್ ಸಂಗೀತ ಇರುತ್ತಿರಲಿಲ್ಲ. ಅವರ ನಂತರ ಬಂದಂತಹ ಕನಕದಾಸರು, ಹರಿದಾಸ, ಗೋಪಾಲದಾಸರು ಹಾಗೂ ಇನ್ನಿತರರು  ದಾಸ ಸಾಹಿತ್ಯದ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ.  ಇಂದು ಮೈಸೂರಿಗೆ ಸಂಗೀತಾ ನೆಲೆಸಿರುವ ನಗರ ಎಂದು ಕರೆಯಲಾಗುತ್ತಿದೆ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗೋಣ ಎಂದರು.

ದಾಸರ ಜನಪ್ರಿಯ ಕೀರ್ತನೆಯನ್ನು ಹಾಡಿದ ನಿರ್ಮಲಾ ಸೀತಾರಾಮನ್ : ಸುಗಂಧ ಸಂಗೀತ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತದ ಪಿತಾಮಹರಾದ ಪುರಂದರದಾಸರ  ಜನಪ್ರಿಯ ಕೀರ್ತನೆಯಾದ ರಾಗಿ ತನ್ನಿರಿ ಭಿಕ್ಷೆಗೆ ರಾಗಿ ತನ್ನಿರಿ, ಭೋಗ್ಯರಾಗಿ, ಯೋಗ್ಯರಾಗಿ, ಭಾಗ್ಯವಂತರಾಗಿ, ನೀವು ಭಿಕ್ಷೆಗೆ ರಾಗಿ ತನ್ನಿರಿ. ಕೀರ್ತನೆಯನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಸುಮನ್ ಬಿಲ್ಲಾ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಬಳಿಕ ಮೈಸೂರಿನ ತಾವರೆಕಟ್ಟೆಯಲ್ಲಿ ದೇಶದಲ್ಲಿ ವಿನೂತನ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಪ್ಲಾನಿಟೋರಿಯಂ ಕಟ್ಟಡಕ್ಕೆ ಭೇಟಿನೀಡಿದ ಸಚಿವರು ಕಾಮಗಾರಿ ಪರಿಶೀಲಿಸಿದರು. ಮುಂದಿನ ಸೆಪ್ಟೆಂಬರ್ ನಲ್ಲಿ ಉದ್ಘಾಟನೆ ನೆರವೇರಲಿದ್ದು ಸಾಕಷ್ಟು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂದರು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ಕರ್ಟೈನ್ ರೈಸರ್ – ಐ ಎಫ್‌ ಎಫ್‌ ಐ 2024 ಕುರಿತ ಮಾಧ್ಯಮ ಪ್ರಕಟಣೆ

ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್‌ ಎಫ್‌ ಐ) 55ನೇ ಆವೃತ್ತಿಯು 2024ರ ನವೆಂಬರ್ 20 ರಿಂದ 28 ರವರೆಗೆ …