गुरुवार, दिसंबर 19 2024 | 11:40:20 AM
Breaking News
Home / अन्य समाचार / ಜನಜಾತಿಯ ಗೌರವ್ ದಿವಸ್ ಸಂದರ್ಭದಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ

ಜನಜಾತಿಯ ಗೌರವ್ ದಿವಸ್ ಸಂದರ್ಭದಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ

Follow us on:

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಿಹಾರದ ಜಮುಯಿಯಲ್ಲಿಂದು ಜನಜಾತಿಯ ಗೌರವ್ ದಿವಸ್ ಅಂಗವಾಗಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ, ಸುಮಾರು 6,640 ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

ಭಾರತದ ವಿವಿಧ ಜಿಲ್ಲೆಗಳಲ್ಲಿ ಆಯೋಜಿತವಾಗಿದ್ದ ಬುಡಕಟ್ಟು ದಿನಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರನ್ನು ಪ್ರಧಾನಮಂತ್ರಿ ಸ್ವಾಗತಿಸಿದರು. ಭಾರತದಾದ್ಯಂತ ಕಾರ್ಯಕ್ರಮಕ್ಕೆ ವಾಸ್ತವಿಕ(ವರ್ಚುವಲ್)ವಾಗಿ ಭಾಗವಹಿಸಿರುವ ಅಸಂಖ್ಯಾತ ಬುಡಕಟ್ಟು ಸಹೋದರರು ಮತ್ತು ಸಹೋದರಿಯರನ್ನು ಅವರು ಸ್ವಾಗತಿಸಿದರು. ಇಂದು ಅತ್ಯಂತ ಪವಿತ್ರ ದಿನ. ಕಾರ್ತಿಕ ಪೂರ್ಣಿಮೆ, ದೀಪಾವಳಿ ಮತ್ತು ಶ್ರೀ ಗುರುನಾನಕ್ ದೇವ್ ಜಿ ಅವರ 550ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಅದಕ್ಕಾಗಿ ಭಾರತದ ನಾಗರಿಕರಿಗೆ ಶುಭಾಶಯಗಳನ್ನು ಕೋರುತ್ತೇನೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜನಜಾತಿಯ ಗೌರವ್ ದಿವಸ್ ಎಂದು ಆಚರಿಸಲಾಗುತ್ತಿದ್ದು, ಇಂದು ನಾಗರಿಕರಿಗೆ ಐತಿಹಾಸಿಕ ದಿನವಾಗಿದೆ. ಭಾರತದ ನಾಗರಿಕರಿಗೆ ಮತ್ತು ಬುಡಕಟ್ಟು ಸಹೋದರ ಸಹೋದರಿಯರಿಗೆ ವಿಶೇಷವಾಗಿ ಶುಭಾಶಯಗಳನ್ನು ಕೋರುತ್ತೇನೆ. ಇಂದಿನ ಜನಜಾತಿಯ ಗೌರವ್ ದಿವಸ್‌ಗೆ ಪೂರ್ವಭಾವಿಯಾಗಿ ಜಮುಯಿಯಲ್ಲಿ ಕಳೆದ 3 ದಿನಗಳಿಂದ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿರುವ ಆಡಳಿತದ ವಿವಿಧ ಪಾಲುದಾರರು, ಜಮುಯಿ ನಾಗರಿಕರು ಮತ್ತು ವಿಶೇಷವಾಗಿ ಮಹಿಳಾ ಕಾರ್ಯಕರ್ತರನ್ನು ಪ್ರಧಾನಿ ಅಭಿನಂದಿಸಿದರು.

ಕಳೆದ ವರ್ಷದ ಜನಜಾತಿಯ ಗೌರವ್ ದಿವಸ್‌ ಕಾರ್ಯಕ್ರಮದಲ್ಲಿ ತಾವು ಧರ್ತಿ ಅಭಾ ಬಿರ್ಸಾ ಮುಂಡಾ ಅವರ ಜನ್ಮ ಗ್ರಾಮ ಉಲಿಹಾತುದಲ್ಲಿ ಇದ್ದುದ್ದನ್ನು ಸ್ಮರಿಸಿದ ಶ್ರೀ ಮೋದಿ, ಹುತಾತ್ಮ ಯೋಧ ತಿಲ್ಕಾ ಮಾಂಝಿ ಅವರ ಶೌರ್ಯಕ್ಕೆ ಸಾಕ್ಷಿಯಾದ ಈ ನೆಲದಲ್ಲಿ ತಾವು ಈ ವರ್ಷವೂ ಇಲ್ಲಿರುವ ಈ ಸಂದರ್ಭವು ದೇಶಕ್ಕೆ ಇನ್ನಷ್ಟು ವಿಶೇಷವಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವ ಆರಂಭವನ್ನು ಇದು ಗುರುತಿಸುತ್ತಿದೆ. ಮುಂಬರುವ ವರ್ಷವೂ ಈ ಆಚರಣೆಗಳು ನಡೆಯಲಿವೆ. ಬಿಹಾರದ ಜಮುಯಿಯಲ್ಲಿ ನಡೆದ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಗ್ರಾಮಗಳ 1 ಕೋಟಿ ಜನರನ್ನು ಪ್ರಧಾನಿ ಅಭಿನಂದಿಸಿದರು. ಬಿರ್ಸಾ ಮುಂಡಾ ಅವರ ವಂಶಸ್ಥ ಶ್ರೀ ಬುಧಾರಾಮ್ ಮುಂಡಾ ಮತ್ತು ಸಿಧು ಕನ್ಹು ಅವರ ವಂಶಸ್ಥ ಶ್ರೀ ಮಂಡಲ್ ಮುರ್ಮು ಅವರನ್ನು ಇಂದು ಸ್ವಾಗತಿಸಲು ಸಂತೋಷವಾಗಿದೆ ಎಂದು ಮೋದಿ ಹೇಳಿದರು.

6,640 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಇಂದು ನೆರವೇರಿಸಲಾಗಿದೆ. ಆದಿವಾಸಿಗಳಿಗೆ ಪಕ್ಕಾ ಮನೆಗಳನ್ನು ಒದಗಿಸಲು ಸುಮಾರು 1.5 ಲಕ್ಷ ಅನುಮೋದನೆ ಪತ್ರಗಳನ್ನು ನೀಡಲಾಗಿದೆ. ಬುಡಕಟ್ಟು ಮಕ್ಕಳ ಭವಿಷ್ಯಕ್ಕಾಗಿ ಶಾಲೆಗಳು ಮತ್ತು ಹಾಸ್ಟೆಲ್‌ಗಳು, ಬುಡಕಟ್ಟು ಮಹಿಳೆಯರಿಗೆ ಆರೋಗ್ಯ ಸೌಲಭ್ಯಗಳು, ಬುಡಕಟ್ಟು ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆ ಯೋಜನೆಗಳು, ಬುಡಕಟ್ಟು ಸಂಸ್ಕೃತಿ ಸಂರಕ್ಷಿಸಲು ಬುಡಕಟ್ಟು ವಸ್ತುಸಂಗ್ರಹಾಲಯಗಳು ಮತ್ತು ಸಂಶೋಧನಾ ಕೇಂದ್ರಗಳು ಈ ಯೋಜನೆಗಳಲ್ಲಿ ಸೇರಿವೆ. ದೇವ್ ದೀಪಾವಳಿಯ ಶುಭ ಸಂದರ್ಭದಲ್ಲಿ ಆದಿವಾಸಿಗಳಿಗಾಗಿ ನಿರ್ಮಿಸಲಾದ 11,000 ಮನೆಗಳಿಗೆ ಗೃಹ ಪ್ರವೇಶ ನೆರವೇರಿಸಲಾಗಿದೆ. ಇವೆಲ್ಲಾ ಯೋಜನೆಗಳಿಗಾಗಿ ಈ ಸಂದರ್ಭದಲ್ಲಿ ಎಲ್ಲ ಬುಡಕಟ್ಟು ಸಮುದಾಯಗಳನ್ನು ಪ್ರಧಾನಿ ಅಭಿನಂದಿಸಿದರು.

ಇಂದಿನ ಜನಜಾತಿಯ ಗೌರವ್ ದಿವಸ್ ಆಚರಣೆ ಮತ್ತು ಜನಜಾತಿಯ ಗೌರವ್ ವರ್ಷಕ್ಕೆ ಚಾಲನೆ ನೀಡಿದ ಶ್ರೀ ಮೋದಿ ಅವರು, ಈ ಆಚರಣೆಗಳು ಪ್ರಮುಖ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಗುರುತಿಸಿವೆ. ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಆದಿವಾಸಿಗಳಿಗೆ ಸಮಾಜದಲ್ಲಿ ಸೂಕ್ತ ಮನ್ನಣೆ ದೊರೆತಿಲ್ಲ. ಬುಡಕಟ್ಟು ಸಮುದಾಯದ ಕೊಡುಗೆಗಳನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ, ಬುಡಕಟ್ಟು ಸಮುದಾಯವೇ ರಾಜಕುಮಾರ ರಾಮನನ್ನು ಶ್ರೀರಾಮನನ್ನಾಗಿ ಪರಿವರ್ತಿಸಿವೆ. ಭಾರತದ ಸಂಸ್ಕೃತಿ ಮತ್ತು ಸ್ವಾತಂತ್ರ್ಯ ರಕ್ಷಿಸಲು ಶತಮಾನಗಳ ಹೋರಾಟವನ್ನು ಮುನ್ನಡೆಸಿವೆ. ಆದಾಗ್ಯೂ, ಸ್ವಾತಂತ್ರ್ಯದ ನಂತರದ ದಶಕಗಳಲ್ಲಿ ಸ್ವಾರ್ಥ ರಾಜಕಾರಣದಿಂದ ಉತ್ತೇಜಿತವಾದ ಜನರು, ಬುಡಕಟ್ಟು ಸಮುದಾಯದ ಇಂತಹ ಪ್ರಮುಖ ಕೊಡುಗೆಗಳನ್ನು ಅಳಿಸಿಹಾಕುವ ಪ್ರಯತ್ನಗಳನ್ನು ಮಾಡಿದರು. ಉಲ್ಗುಲನ್ ಚಳವಳಿ, ಕೋಲ್ ಬಂಡಾಯ, ಸಂತಾಲ್ ದಂಗೆ, ಭಿಲ್ ಚಳವಳಿಯಂತಹ ಭಾರತದ ಸ್ವಾತಂತ್ರ್ಯಕ್ಕಾಗಿ ಆದಿವಾಸಿಗಳು(ಬುಡಕಟ್ಟು ಜನಾಂಗ) ನೀಡಿರುವ  ವಿವಿಧ ಕೊಡುಗೆಗಳನ್ನು ಪಟ್ಟಿ ಮಾಡಿದ ಮೋದಿ, ಆದಿವಾಸಿಗಳ ಕೊಡುಗೆ ಅಪಾರವಾಗಿದೆ. ಅಲ್ಲೂರಿ ಸೀತಾರಾಮ ರಾಜು, ತಿಲ್ಕಾ ಮಾಂಝಿ, ಸಿಧು ಕನ್ಹು, ಬುಧು ಭಗತ್, ತೆಲಂಗ್ ಖರಿಯಾ, ಗೋವಿಂದ ಗುರು, ತೆಲಂಗಾಣದ ರಾಮ್‌ಜಿ ಗೊಂಡ್, ಮಧ್ಯಪ್ರದೇಶದ ಬಾದಲ್ ಭೋಯ್, ರಾಜಾ ಶಂಕರ್ ಶಾ, ಕುವರ್ ರಘುನಾಥ್ ಷಾ, ತಾಂತ್ಯ ಭಿಲ್, ಜಾತ್ರಾ ಅವರಂತಹ ಭಾರತದ ವಿವಿಧ ಬುಡಕಟ್ಟು ನಾಯಕರು, ಭಗತ್, ಲಕ್ಷ್ಮಣ್ ನಾಯ್ಕ್, ಮಿಜೋರಾಂನ ರೊಪುಲಿಯಾನಿ, ರಾಜ್ ಮೋಹಿನಿದೇವಿ, ರಾಣಿ ಗೈಡಿನ್ಲಿಯು, ಕಾಳಿಬಾಯಿ, ಗೊಂಡ್ವಾನಾದ ರಾಣಿ ದುರ್ಗಾವತಿ ದೇವಿ ಮತ್ತು ಇತರೆ ಹಲವಾರು ನಾಯಕರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬ್ರಿಟಿಷರು ಸಾವಿರಾರು ಆದಿವಾಸಿಗಳನ್ನು ಕೊಂದ ಮಂಗರ್ ಹತ್ಯಾಕಾಂಡವನ್ನು ಮರೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.

ತಮ್ಮ ಸರ್ಕಾರದ ಮನಸ್ಥಿತಿಯು ಸಂಸ್ಕೃತಿ ಅಥವಾ ಸಾಮಾಜಿಕ ನ್ಯಾಯ ಕ್ಷೇತ್ರದಲ್ಲಿ ವಿಭಿನ್ನವಾಗಿದೆ. ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭಾರತದ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ್ದು ತಮ್ಮ ಅದೃಷ್ಟ. ಅವರು ಭಾರತದ ಮೊದಲ ಬುಡಕಟ್ಟು ಸಮುದಾಯ(ಆದಿವಾಸಿ)ದ ರಾಷ್ಟ್ರಪತಿ ಆಗಿದ್ದಾರೆ. ಪಿಎಂ-ಜನ್ಮನ್ ಯೋಜನೆಯಡಿ ಪ್ರಾರಂಭಿಸಿದ ಎಲ್ಲಾ ಕಾರ್ಯಗಳ ಶ್ರೇಯಸ್ಸು ರಾಷ್ಟ್ರಪತಿ ಅವರಿಗೆ ಸಲ್ಲುತ್ತದೆ. ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ(ಪಿವಿಟಿಜಿ) ಸಬಲೀಕರಣಕ್ಕಾಗಿ 24,000 ಕೋಟಿ ರೂ. ಮೊತ್ತದ ಪ್ರಧಾನಮಂತ್ರಿ ಜನ್ಮನ್ ಯೋಜನೆ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ, ದೇಶದ ಅತ್ಯಂತ ಹಿಂದುಳಿದ ಬುಡಕಟ್ಟುಗಳ ವಾಸಸ್ಥಳಗಳ ಅಭಿವೃದ್ಧಿಯನ್ನು ಖಾತ್ರಿಪಡಿಸಲಾಗುತ್ತಿದೆ. ಈ ಯೋಜನೆ ಇಂದಿಗೆ ಒಂದು ವರ್ಷ ಪೂರೈಸಿದ್ದು, ಈ ಯೋಜನೆಯಡಿ ಸಾವಿರಾರು ಪಕ್ಕಾ ಮನೆಗಳನ್ನು ಪಿವಿಟಿಜಿಗಳಿಗೆ ನೀಡಲಾಗಿದೆ. ಪಿವಿಟಿಜಿ ವಾಸಸ್ಥಲಗಳ ನಡುವೆ ಸಂಪರ್ಕ ಖಚಿತಪಡಿಸಿಕೊಳ್ಳಲು ರಸ್ತೆ ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ,  ದುರ್ಬಲ ಬುಡಕಟ್ಟು ಗುಂಪುಗಳ ಅನೇಕ ಮನೆಗಳಲ್ಲಿ ಹರ್ ಘರ್ ಜಲ್ ಯೋಜನೆಯಡಿ ಕುಡಿಯುವ ನೀರು ಖಾತ್ರಿಪಡಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.

ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟವರನ್ನು ತಾನು ಆರಾಧಿಸುತ್ತೇನೆ ಎಂದು ತಿಳಿಸಿದ ಶ್ರೀ ಮೋದಿ, ಹಿಂದಿನ ಸರ್ಕಾರಗಳ ಧೋರಣೆಗಳಿಂದಾಗಿ ಬುಡಕಟ್ಟು ಸಮುದಾಯಗಳು ದಶಕಗಳಿಂದ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ. ದೇಶದಲ್ಲಿ ಬುಡಕಟ್ಟು ಸಮುದಾಯಗಳ ಪ್ರಾಬಲ್ಯವಿರುವ ಹತ್ತಾರು ಜಿಲ್ಲೆಗಳು ಅಭಿವೃದ್ಧಿಯ ವೇಗದಲ್ಲಿ ಹಿಂದುಳಿದಿವೆ. ತಮ್ಮ ಸರ್ಕಾರವು ಚಿಂತನೆಯ ಪ್ರಕ್ರಿಯೆಯನ್ನು ಬದಲಾಯಿಸಿ, ಅವುಗಳನ್ನು ‘ಆಕಾಂಕ್ಷೆಯ ಜಿಲ್ಲೆಗಳು’ ಎಂದು ಘೋಷಿಸಿದೆ, ಅವುಗಳ ಅಭಿವೃದ್ಧಿಗಾಗಿ ದಕ್ಷ ಅಧಿಕಾರಿಗಳನ್ನು ನಿಯೋಜಿಸಿದೆ. ಇಂದು ಇಂತಹ ಅನೇಕ ಮಹತ್ವಾಕಾಂಕ್ಷೆಯ ಜಿಲ್ಲೆಗಳು ವಿವಿಧ ಅಭಿವೃದ್ಧಿಯ ಮಾನದಂಡಗಳಲ್ಲಿ ಅಭಿವೃದ್ಧಿ ಹೊಂದಿದ ಹಲವು ಜಿಲ್ಲೆಗಳಿಗಿಂತ ಉತ್ತಮವಾಗಿದೆ, ಇದರ ಲಾಭ ಆದಿವಾಸಿಗಳಿಗೆ ಲಭಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

“ಬುಡಕಟ್ಟು ಸಮುದಾಯಗಳ ಕಲ್ಯಾಣ ಯಾವಾಗಲೂ ನಮ್ಮ ಸರ್ಕಾರದ ಆದ್ಯತೆಯಾಗಿದೆ”. ಬುಡಕಟ್ಟು ವ್ಯವಹಾರಗಳಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದ್ದು ಅಟಲ್ ಜಿ ಅವರ ಸರ್ಕಾರ. ಕಳೆದ 10 ವರ್ಷಗಳಲ್ಲಿ ಬಜೆಟ್ ಹಂಚಿಕೆಯನ್ನು 25,000 ಕೋಟಿ ರೂ.ಗಳಿಂದ 1.25 ಲಕ್ಷ ಕೋಟಿ ರೂ.ಗಳಿಗೆ 5 ಪಟ್ಟು ಹೆಚ್ಚಿಸಲಾಗಿದೆ. 60,000 ಕ್ಕೂ ಹೆಚ್ಚು ಬುಡಕಟ್ಟು ಹಳ್ಳಿಗಳಿಗೆ ಅನುಕೂಲವಾಗುವಂತೆ ಧರ್ತಿ ಅಭಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನ(ಡಿಎಜೆಜಿಯುಎ) ಎಂಬ ವಿಶೇಷ ಯೋಜನೆಯನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದೆ. 80,000 ಕೋಟಿ ರೂ. ಗಳನ್ನು ಈ ಯೋಜನೆ ಮೂಲಕ ಹೂಡಿಕೆ ಮಾಡಲಾಗುತ್ತಿದೆ, ಇದು ಬುಡಕಟ್ಟು ಸಮುದಾಯಗಳಿರುವ ಹಳ್ಳಿಗಳಲ್ಲಿ ಮೂಲ ಸೌಕರ್ಯ ಲಭ್ಯತೆಯನ್ನು ಖಾತರಿಪಡಿಸುವುದರ ಜತೆಗೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಬುಡಕಟ್ಟು ಸಮುದಾಯದ ಯುವಕರಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಯೋಜನೆಯ ಭಾಗವಾಗಿ ಹೋಂಸ್ಟೇಗಳನ್ನು ರಚಿಸಲು ತರಬೇತಿ ಮತ್ತು ಬೆಂಬಲದೊಂದಿಗೆ ಬುಡಕಟ್ಟು ಮಾರುಕಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಇದು ಪ್ರವಾಸೋದ್ಯಮವನ್ನು ಬಲಪಡಿಸುತ್ತದೆ ಮತ್ತು ಬುಡಕಟ್ಟು ಸಮುದಾಯಗಳು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮವನ್ನು ಒಂದು ಸಾಧ್ಯತೆಯನ್ನಾಗಿ ಮಾಡುತ್ತದೆ, ಇದು ಆದಿವಾಸಿಗಳ ವಲಸೆಯನ್ನು ತಡೆಯುತ್ತದೆ.

ಬುಡಕಟ್ಟು ಜನಾಂಗದ ಪರಂಪರೆ ಸಂರಕ್ಷಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಮೋದಿ, ಅನೇಕ ಬುಡಕಟ್ಟು ಕಲಾವಿದರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಹೆಸರಿನಲ್ಲಿ ಬುಡಕಟ್ಟು ವಸ್ತುಸಂಗ್ರಹಾಲಯವನ್ನು ರಾಂಚಿಯಲ್ಲಿ ಪ್ರಾರಂಭಿಸಲಾಗಿದೆ. ಎಲ್ಲಾ ಶಾಲಾ ಮಕ್ಕಳು ಅಲ್ಲಿಗೆ ಭೇಟಿ ನೀಡಿ ಅಧ್ಯಯನ ಮಾಡಬೇಕು ಎಂದು ಒತ್ತಾಯಿಸಿದರು. ಮಧ್ಯಪ್ರದೇಶದ ಚಿಂದ್ವಾರದಲ್ಲಿ ಬಾದಲ್ ಭೋಯ್ ಅವರ ಹೆಸರಿನಲ್ಲಿ ಬುಡಕಟ್ಟು ವಸ್ತುಸಂಗ್ರಹಾಲಯ ಮತ್ತು ಮಧ್ಯಪ್ರದೇಶದ ಜಬಲ್‌ಪುರದಲ್ಲಿ ರಾಜಾ ಶಂಕರ್ ಶಾ ಮತ್ತು ಕುವರ್ ರಘುನಾಥ್ ಶಾ ಅವರ ಹೆಸರಿನಲ್ಲಿ ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ಇಂದು ಉದ್ಘಾಟಿಸಲಾಗಿದೆ. ಶ್ರೀನಗರ ಮತ್ತು ಸಿಕ್ಕಿಂನಲ್ಲಿ ಇಂದು ಭಗವಾನ್ ಬಿರ್ಸಾ ಮುಂಡಾ ಅವರ ಗೌರವ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿ ಅನಾವರಣಗೊಳಿಸುವುದರೊಂದಿಗೆ 2 ಬುಡಕಟ್ಟು ಸಂಶೋಧನಾ ಕೇಂದ್ರಗಳನ್ನು ಇಂದು ಉದ್ಘಾಟಿಸಲಾಗಿದೆ. ಈ ಎಲ್ಲಾ ಪ್ರಯತ್ನಗಳು ಬುಡಕಟ್ಟು ಜನಾಂಗದವರ ಶೌರ್ಯ ಮತ್ತು ಗೌರವದ ಬಗ್ಗೆ ಭಾರತದ ಜನರಿಗೆ ನಿರಂತರವಾಗಿ ನೆನಪಿಸುತ್ತವೆ ಎಂದರು.

ಭಾರತದ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯಲ್ಲಿ ಬುಡಕಟ್ಟು ಸಮಾಜದ ಮಹತ್ತರ ಕೊಡುಗೆ ಪ್ರಸ್ತಾಪಿಸಿದ ಮೋದಿ, ಮುಂದಿನ ಪೀಳಿಗೆಗೆ ಹೊಸ ಆಯಾಮಗಳನ್ನು ಸೇರಿಸುವುದರೊಂದಿಗೆ ಈ ಪರಂಪರೆಯನ್ನು ಸಹ ರಕ್ಷಿಸಲಾಗುತ್ತಿದೆ. ಸರ್ಕಾರವು ಲೇಹ್‌ನಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋವಾ-ರಿಗ್ಪಾ ಸ್ಥಾಪಿಸಿದೆ, ಅರುಣಾಚಲ ಪ್ರದೇಶದಲ್ಲಿ ಆಯುರ್ವೇದ ಮತ್ತು ಜಾನಪದ ಔಷಧ ಸಂಶೋಧನೆಯ ಈಶಾನ್ಯ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಿದೆ. ವಿಶ್ವ ಆರೋಗ್ಯ ಸಂಘಟನೆ ಆಶ್ರಯದಲ್ಲಿ ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರವನ್ನು ಸರ್ಕಾರ ಸ್ಥಾಪಿಸುತ್ತಿದೆ. ಇದು ಪ್ರಪಂಚದಾದ್ಯಂತ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಔಷಧ ವ್ಯವಸ್ಥೆಯನ್ನು ಮತ್ತಷ್ಟು ಪ್ರಚಾರ ಮಾಡಲು ಇದುಸಹಾಯ ಮಾಡುತ್ತದೆ.

“ನಮ್ಮ ಸರ್ಕಾರದ ಗಮನವು ಬುಡಕಟ್ಟು ಸಮಾಜದ ಶಿಕ್ಷಣ, ಆದಾಯ ಮತ್ತು ಔಷಧದ ಮೇಲೆ ಕೇಂದ್ರೀಕೃತವಾಗಿದೆ”. ಬುಡಕಟ್ಟು ಜನಾಂಗದ ಮಕ್ಕಳು ವೈದ್ಯಕೀಯ, ಎಂಜಿನಿಯರಿಂಗ್, ಸಶಸ್ತ್ರ ಪಡೆ ಅಥವಾ ವಾಯುಯಾನದಂತಹ ವಿವಿಧ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿದ್ದಾರೆ. ಇದು, ಬುಡಕಟ್ಟು ಪ್ರದೇಶಗಳಲ್ಲಿ ಕಳೆದ ದಶಕದಲ್ಲಿ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಉತ್ತಮ ಭವಿಷ್ಯ ಸೃಷ್ಟಿಸಿದ ಪರಿಣಾಮವಾಗಿದೆ.  ಸ್ವಾತಂತ್ರ್ಯಾನಂತರದ 6 ದಶಕಗಳ ಅವಧಿಯಲ್ಲಿ ಸ್ಥಾಪಿಸಿದ ಏಕೈಕ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯಕ್ಕೆ ಬದಲಾಗಿ, ಕಳೆದ ದಶಕದಲ್ಲಿ ತಮ್ಮ ಸರ್ಕಾರವು 2 ಹೊಸ ಬುಡಕಟ್ಟು ವಿಶ್ವವಿದ್ಯಾಲಯಗಳನ್ನು ಸೇರಿಸಿದೆ. ಕಳೆದ ದಶಕದಲ್ಲಿ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಗಳೊಂದಿಗೆ(ಐಟಿಐ) ಅನೇಕ ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಕಳೆದ ದಶಕದಲ್ಲಿ ಬಿಹಾರದ ಜಮುಯಿ ಸೇರಿದಂತೆ ಹಲವು ಹೊಸ ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಜೊತೆಗೆ ಬುಡಕಟ್ಟು ಪ್ರದೇಶಗಳಲ್ಲಿ 30 ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ದೇಶಾದ್ಯಂತ 7,000 ಏಕಲವ್ಯ ಶಾಲೆಗಳ ಪ್ರಬಲ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಭಾಷೆ ಅಡ್ಡಿಯಾಗಿರುವುದನ್ನು ಮನಗಂಡು, ನಮ್ಮ ಸರ್ಕಾರವು ಮಾತೃಭಾಷೆಯಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಒದಗಿಸಿದೆ. ಈ ನಿರ್ಧಾರಗಳು ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಲ್ಲಿ ಹೊಸ ಭರವಸೆ ಮೂಡಿಸಿವೆ ಎಂದರು.

ಕಳೆದ ದಶಕದಲ್ಲಿ ಬುಡಕಟ್ಟು ಸಮುದಾಯಗಳ ಯುವಕರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದ ಸಾಧನೆಗಳನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಕ್ರೀಡಾ ಮೂಲಸೌಕರ್ಯ ಸುಧಾರಿಸಲು ಸರ್ಕಾರವು ಪ್ರಯತ್ನಗಳನ್ನು ಕೈಗೊಂಡಿದೆ. ಆದಿವಾಸಿಗಳ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಖೇಲೋ ಇಂಡಿಯಾ ಅಭಿಯಾನದ ಭಾಗವಾಗಿ ಆಧುನಿಕ ಆಟದ ಮೈದಾನಗಳು, ಕ್ರೀಡಾ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತದ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯವನ್ನು ಮಣಿಪುರದಲ್ಲಿ ಪ್ರಾರಂಭಿಸಲಾಗಿದೆ ಎಂದರು.

ಸ್ವಾತಂತ್ರ್ಯದ 70 ವರ್ಷಗಳ ನಂತರವೂ ಬಿದಿರಿಗೆ ಸಂಬಂಧಿಸಿದ ಬಿಗಿ ಕಾನೂನುಗಳು ಬುಡಕಟ್ಟು ಸಮಾಜಕ್ಕೆ ಭಾರಿ ತೊಂದರೆಗಳನ್ನು ಉಂಟುಮಾಡಿದವು. ಈ ನಿಟ್ಟಿನಲ್ಲಿ ತಮ್ಮ ಸರ್ಕಾರವು ಬಿದಿರು ಕೃಷಿಗೆ ಸಂಬಂಧಿಸಿದ ಕಾನೂನುಗಳನ್ನು ಸರಾಗಗೊಳಿಸಿದೆ. ಈ ಹಿಂದೆ 8-10 ಅರಣ್ಯ ಉತ್ಪನ್ನಗಳಿಗೆ ಹೋಲಿಸಿದರೆ ಸುಮಾರು 90 ಅರಣ್ಯ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಅಡಿ ತರಲಾಗಿದೆ. ಭಾರತದಲ್ಲಿ ಇಂದು 4,000ಕ್ಕೂ ಹೆಚ್ಚು ವನ್ ಧನ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 12 ಲಕ್ಷ ಬುಡಕಟ್ಟು ರೈತರಿಗೆ ಸಹಾಯ ಮಾಡುತ್ತಿವೆ ಎಂದರು.

“ಯೋಜನೆಯ ಪ್ರಾರಂಭದಿಂದ ಸುಮಾರು 20 ಲಕ್ಷ ಬುಡಕಟ್ಟು ಮಹಿಳೆಯರು ಲಖ್ಪತಿ ದೀದಿಗಳಾಗಿದ್ದಾರೆ”. ಬುಟ್ಟಿಗಳು, ಆಟಿಕೆಗಳು ಮತ್ತು ಇತರ ಕರಕುಶಲ ವಸ್ತುಗಳಂತಹ ಬುಡಕಟ್ಟು ಉತ್ಪನ್ನಗಳ ಮಾರಾಟಕ್ಕೆ ಪ್ರಮುಖ ನಗರಗಳಲ್ಲಿ ಟ್ರೈಬಲ್ ಹಾಟ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಬುಡಕಟ್ಟು ಕರಕುಶಲ ಉತ್ಪನ್ನಗಳಿಗೆ ಅಂತರ್ಜಾಲದಲ್ಲಿ ಜಾಗತಿಕ ಮಾರುಕಟ್ಟೆ ರೂಪಿಸಲಾಗುತ್ತಿದೆ. ನಾನು ಅಂತಾರಾಷ್ಟ್ರೀಯ ನಾಯಕರು ಮತ್ತು ಗಣ್ಯರನ್ನು ಭೇಟಿಯಾದಾಗ ಸೊಹ್ರಾಯ್ ಪೇಂಟಿಂಗ್, ವಾರ್ಲಿ ಪೇಂಟಿಂಗ್, ಗೊಂಡ್ ಪೇಂಟಿಂಗ್‌ನಂತಹ ಬುಡಕಟ್ಟು ಉತ್ಪನ್ನಗಳು ಮತ್ತು ಕಲಾಕೃತಿಗಳನ್ನು ನೀಡುತ್ತೇನೆ ಎಂದು ಅವರು ಹೇಳಿದರು.

ಬುಡಕಟ್ಟು ಸಮುದಾಯಗಳಿಗೆ ಕುಡುಗೋಲು ಜೀವಕೋಶದ ರಕ್ತಹೀನತೆ(ಸಿಕಲ್ ಸೆಲ್ ಅನೀಮಿಯಾ) ದೊಡ್ಡ ಸವಾಲಾಗಿದೆ. ಇದಕ್ಕಾಗಿಸರ್ಕಾರವು ರಾಷ್ಟ್ರೀಯ ಸಿಕಲ್ ಸೆಲ್ ಅನೀಮಿಯಾ ಮಿಷನ್ ಪ್ರಾರಂಭಿಸಿದೆ. ಕಾರ್ಯಾಚರಣೆಯ ಒಂದು ವರ್ಷದಲ್ಲಿ, 4.5 ಕೋಟಿ ಬುಡಕಟ್ಟು ಜನಾಂಗದವರನ್ನು ಪರೀಕ್ಷಿಸಲಾಯಿತು. ಆಯುಷ್ಮಾನ್ ಆರೋಗ್ಯ ಮಂದಿರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದ್ದರಿಂದ ಆದಿವಾಸಿಗಳು ತಪಾಸಣೆಗೆ ಹೆಚ್ಚು ದೂರ ಹೋಗಬೇಕಾಗಿಲ್, ದುರ್ಗಮ ಬುಡಕಟ್ಟು ಪ್ರದೇಶಗಳಲ್ಲಿ ಸಂಚಾರಿ ವೈದ್ಯಕೀಯ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು.

ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ವಿಶ್ವದಲ್ಲೇ ಭಾರತದ ಪ್ರಮುಖ ಪಾತ್ರ ವಹಿಸಿದೆ. ಇದು ನಮ್ಮ ಆಲೋಚನೆಗಳ ಮೂಲವಾದ ಬುಡಕಟ್ಟು ಸಮುದಾಯಗಳು ಕಲಿಸಿದ ಮೌಲ್ಯಗಳೇ ಕಾರಣ. ಬುಡಕಟ್ಟು ಸಮಾಜಗಳು ಪ್ರಕೃತಿಯನ್ನು ಪೂಜಿಸುತ್ತವೆ. ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವ ವೀಕ್ಷಿಸಲು ಬುಡಕಟ್ಟು ಜನರು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಿರ್ಸಾ ಮುಂಡಾ ಜನಜಾತಿಯ ಉಪವನಗಳನ್ನು ಬೆಳೆಸುವುದಾಗಿ ಮೋದಿ ಘೋಷಿಸಿದರು. ಉಪವನಗಳಲ್ಲಿ 500 ಸಾವಿರ ಗಿಡಗಳನ್ನು ನೆಡಲಾಗುವುದು ಎಂದರು.

ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವು ದೊಡ್ಡ ಸಂಕಲ್ಪಗಳನ್ನು ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ. ನವ ಭಾರತ ನಿರ್ಮಾಣಕ್ಕೆ ಬುಡಕಟ್ಟು ಸಮುದಾಯಗಳ ವಿಚಾರಗಳನ್ನು ಆಧಾರವಾಗಿಸಲು, ಬುಡಕಟ್ಟು ಪರಂಪರೆ ಸಂರಕ್ಷಿಸಲು, ಬುಡಕಟ್ಟು ಸಮಾಜವು ಶತಮಾನಗಳಿಂದ ಸಂರಕ್ಷಿಸಲ್ಪಟ್ಟಿರುವುದನ್ನು ಕಲಿಯಲು, ಬಲಿಷ್ಠ, ಸಮೃದ್ಧ ಮತ್ತು ಶಕ್ತಿಯುತ ಭಾರತದ ನಿರ್ಮಾಣವನ್ನು ಖಚಿತಪಡಿಸಿಕೊಳ್ಳಲು ಜನರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಬಿಹಾರದ ರಾಜ್ಯಪಾಲ ಶ್ರೀ ರಾಜೇಂದ್ರ ಅರ್ಲೇಕರ್, ಬಿಹಾರದ ಮುಖ್ಯಮಂತ್ರಿ, ಶ್ರೀ ನಿತೀಶ್ ಕುಮಾರ್, ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವ ಶ್ರೀ ಜುಯಲ್ ಓರಂ, ಕೇಂದ್ರ ಎಂಎಸ್ಎಂಇ ಸಚಿವ ಶ್ರೀ ಜಿತನ್ ರಾಮ್ ಮಾಂಝಿ, ಕೇಂದ್ರ ಜವಳಿ ಸಚಿವ ಶ್ರೀ ಗಿರಿರಾಜ್ ಸಿಂಗ್, ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳು ಸಚಿವ ಶ್ರೀ ದುರ್ಗಾ ದಾಸ್ ಉಯಿಕೆ, ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಶ್ರೀ ಚಿರಾಗ್ ಪಾಸ್ವಾನ್ ಮತ್ತು ಇತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವ ಆಚರಿಸಲು ಜನಜಾತಿಯ ಗೌರವ್ ದಿವಸ್ ಸ್ಮರಣಾರ್ಥ ಬಿಹಾರದ ಜಮುಯಿಗೆ ಭೇಟಿ ನೀಡಿದರು. ಭಗವಾನ್ ಬಿರ್ಸಾ ಮುಂಡಾ ಅವರ ಗೌರವ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿ ಅನಾವರಣಗೊಳಿಸಿದರು. ಬುಡಕಟ್ಟು ಸಮುದಾಯಗಳನ್ನು ಉನ್ನತೀಕರಿಸುವ ಮತ್ತು ಆ ಪ್ರದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವ ಗುರಿ ಹೊಂದಿರುವ 6,640 ಕೋಟಿ ರೂಪಾಯಿ ಮೊತ್ತದ ಬಹುವಿಧದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾಅಭಿಯಾನ(ಪಿಎಂ-ಜನ್ಮನ್) ಅಡಿ ನಿರ್ಮಿಸಲಾದ 11,000 ಪಕ್ಕಾ ಮನೆಗಳ ಗೃಹ ಪ್ರವೇಶದಲ್ಲಿ ಪ್ರಧಾನ ಮಂತ್ರಿ ಭಾಗವಹಿಸಿದರು. ಅವರು ಪಿಎಂ-ಜನ್ಮನ್ ಅಡಿ ಪ್ರಾರಂಭಿಸಲಾದ 23 ಮೊಬೈಲ್ ವೈದ್ಯಕೀಯ ಘಟಕ(ಎಂಎಂಯುಗಳು)ಗಳನ್ನು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಸೇವೆ ಹೆಚ್ಚಿಸಲು ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನ(ಡಿಎಜೆಜಿಯುಎ) ಅಡಿ, ಹೆಚ್ಚುವರಿ 30 ಎಂಎಂಯುಗಳನ್ನು ಉದ್ಘಾಟಿಸಿದರು.

ಬುಡಕಟ್ಟು ಉದ್ಯಮಶೀಲತೆ ಉತ್ತೇಜಿಸಲು ಮತ್ತು ಜೀವನೋಪಾಯಕ್ಕೆ ಬೆಂಬಲ ನೀಡಲು 300 ವನ್ ಧನ್ ವಿಕಾಸ ಕೇಂದ್ರ (ವಿಡಿವಿಕೆ)ಗಳನ್ನು ಪ್ರಧಾನ ಮಂತ್ರಿ ಉದ್ಘಾಟಿಸಿದರು. ಬುಡಕಟ್ಟು ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಸುಮಾರು 450 ಕೋಟಿ ರೂ. ಮೌಲ್ಯದ 10 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಉದ್ಘಾಟಿಸಿದರು. ಬುಡಕಟ್ಟು ಸಮುದಾಯಗಳ ಶ್ರೀಮಂತ ಇತಿಹಾಸ ಮತ್ತು ಪರಂಪರೆ ದಾಖಲಿಸಲು ಮತ್ತು ಸಂರಕ್ಷಿಸಲು ಮಧ್ಯಪ್ರದೇಶದ ಚಿಂದ್ವಾರ ಮತ್ತು ಜಬಲ್ಪುರದಲ್ಲಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ 2 ವಸ್ತುಸಂಗ್ರಹಾಲಯ, ಜಮ್ಮು-ಕಾಶ್ಮೀರದ ಶ್ರೀನಗರ ಮತ್ತು ಸಿಕ್ಕಿಂನ ಗ್ಯಾಂಗ್ಟಾಕ್ ನಲ್ಲಿ 2 ಬುಡಕಟ್ಟು ಸಂಶೋಧನಾ ಸಂಸ್ಥೆಗಳನ್ನು ಉದ್ಘಾಟಿಸಿದರು.

ಪ್ರಧಾನ ಮಂತ್ರಿ ಅವರು ಬುಡಕಟ್ಟು ಪ್ರದೇಶಗಳಲ್ಲಿ ಸಂಪರ್ಕ ಸುಧಾರಿಸಲು 500 ಕಿಲೋಮೀಟರ್ ಹೊಸ ರಸ್ತೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಪಿಎಂ-ಜನ್ಮನ್ ಅಡಿ, ಸಮುದಾಯ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲು 100 ಬಹುಪಯೋಗಿ ಕೇಂದ್ರಗಳು(ಎಂಪಿಸಿಗಳು), 1,110 ಕೋಟಿ ರೂ. ಮೌಲ್ಯದ 25 ಹೆಚ್ಚುವರಿ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇವು ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಿವೆ.

ಪ್ರಧಾನ ಮಂತ್ರಿ ಅವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮಂಜೂರಾತಿ ನೀಡಿದರು. ಇದರಲ್ಲಿ ಪಿಎಂ-ಜನ್ಮನ್ ಅಡಿ, ಸುಮಾರು 500 ಕೋಟಿ ರೂಪಾಯಿ ಮೌಲ್ಯದ 25,000 ಹೊಸ ಮನೆಗಳು ಮತ್ತು ಧರ್ತಿ ಆಬಾ ಜನಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನ (ಡಿಎಜೆಜಿಯುಎ) ಅಡಿ 1960 ಕೋಟಿ ರೂ. ಮೌಲ್ಯದ 1.16 ಲಕ್ಷ ಮನೆಗಳು, 1100 ಕೋಟಿ ರೂ. ಮೌಲ್ಯದಲ್ಲಿ ಪಿಎಂ ಜನ್ಮನ್ ಅಡಿ 66 ಹಾಸ್ಟೆಲ್‌ಗಳು ಮತ್ತು ಡಿಎಜೆಜಿಯುಎ ಅಡಿ, 304 ಹಾಸ್ಟೆಲ್‌ಗಳು, ಪಿಎಂ-ಜನ್ಮನ್ ಅಡಿ 50 ಹೊಸ ಬಹುಪಯೋಗಿ ಕೇಂದ್ರಗಳು, 55 ಮೊಬೈಲ್ ವೈದ್ಯಕೀಯ ಘಟಕಗಳು ಮತ್ತು 65 ಅಂಗನವಾಡಿ ಕೇಂದ್ರಗಳು, ಕುಡುಗೋಲು ಜೀವಕೋಶ ರಕ್ತಹೀನತೆ ನಿರ್ಮೂಲನೆಗೆ 6 ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ, ಡಿಎಜೆಜಿಯುಎ ಅಡಿ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಆಶ್ರಮ ಶಾಲೆಗಳು, ಹಾಸ್ಟೆಲ್ ಗಳು, ಸರಕಾರಿ ವಸತಿ ಶಾಲೆಗಳ 330 ಯೋಜನೆಗಳ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗಳು ಸೇರಿವೆ.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …