ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (ಎನ್.ಎಂ.ಎನ್.ಎಫ್.) ಅನ್ನು ಒಂದು ಸ್ವತಂತ್ರ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.
ಈ ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (ಎನ್.ಎಂ.ಎನ್.ಎಫ್.) ಯೋಜನೆಯು 15 ನೇ ಹಣಕಾಸು ಆಯೋಗದ (2025-26) ವರೆಗೆ ಒಟ್ಟು ರೂ.2481 ಕೋಟಿ (ಭಾರತ ಸರ್ಕಾರದ ಪಾಲು – ರೂ. 1584 ಕೋಟಿ; ರಾಜ್ಯ ಸರ್ಕಾರಗಳ ಪಾಲು – ರೂ. 897 ಕೋಟಿ) ವೆಚ್ಚವನ್ನು ಹೊಂದಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಸ್ವತಂತ್ರ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ದೇಶಾದ್ಯಂತ ಉದ್ದೇಶಿತ ಕಾರ್ಯಯೋಜನೆಗಳ ಪರಿಕಲ್ಪನೆಯಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಹಾಗೂ ಪ್ರೋತ್ಸಾಹಿಸಲು ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (ಎನ್.ಎಂ.ಎನ್.ಎಫ್.) ಅನ್ನು ಭಾರತ ಸರ್ಕಾರವು ಪ್ರಾರಂಭಿಸಿದೆ.
ತಮ್ಮ ಪೂರ್ವಜರಿಂದ ಪಡೆದ ಸಾಂಪ್ರದಾಯಿಕ ಜ್ಞಾನ-ಅನುಭವಗಳ ಆದಧಾರದಲ್ಲಿ ಬೇರೂರಿರುವ ಪದ್ಧತಿಯಂತೆ ರೈತರು ನೈಸರ್ಗಿಕ ಕೃಷಿ (ಎನ್.ಎಫ್.) ಅನ್ನು ರಾಸಾಯನಿಕ ಮುಕ್ತ ಕೃಷಿಯಾಗಿ ಸಾಮಾನ್ಯವಾಗಿ ಮಾಡುತ್ತಾರೆ. ಸ್ಥಳೀಯ ಜಾನುವಾರುಗಳ ಮೂಲಕ ನಡೆಯುವ ಸಮಗ್ರ ನೈಸರ್ಗಿಕ ಕೃಷಿ ವಿಧಾನಗಳು, ವೈವಿಧ್ಯಮಯ ಬೆಳೆ ವ್ಯವಸ್ಥೆಗಳು ಇತ್ಯಾದಿಗಳನ್ನು ಈ ಸಾಂಪ್ರದಾಯಿಕ ಪದ್ಧತಿ ಒಳಗೊಂಡಿರುತ್ತದೆ. ನೈಸರ್ಗಿಕ ಕೃಷಿ (ಎನ್.ಎಫ್.) ಪದ್ಧತಿಯಲ್ಲಿ ಸ್ಥಳೀಯ ಜ್ಞಾನದಲ್ಲಿ ಬೇರೂರಿರುವ ಸ್ಥಳೀಯ ಕೃಷಿ-ಪರಿಸರ ತಂತ್ರಗಾರಿಕೆ, ಅನುಭವ ಆಧಾರದ ತತ್ವಗಳನ್ನು ಅನುಸರಿಸಲಾಗುತ್ತದೆ. ಆಯಾಯ ಸ್ಥಳಗಳ ನಿರ್ದಿಷ್ಟ ತಂತ್ರಜ್ಞಾನಗಳು ಮತ್ತು ಸ್ಥಳೀಯ ಕೃಷಿ-ಪರಿಸರಶಾಸ್ತ್ರದ ಪ್ರಕಾರ ನೈಸರ್ಗಿಕ ಕೃಷಿ (ಎನ್.ಎಫ್.) ಪದ್ಧತಿ ವಿಕಸನಗೊಂಡಿವೆ.
ಎಲ್ಲರಿಗೂ ಸುರಕ್ಷಿತ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸಲು ನೈಸರ್ಗಿಕ ಕೃಷಿ (ಎನ್.ಎಫ್.) ಪದ್ಧತಿ/ ಅಭ್ಯಾಸಕ್ರಮಗಳನ್ನು ಉತ್ತೇಜಿಸುವ ಗುರಿಯನ್ನು ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (ಎನ್.ಎಂ.ಎನ್.ಎಫ್.) ಹೊಂದಿದೆ. ಕೃಷಿಯ ಮೂಲ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಬಾಹ್ಯವಾಗಿ ಖರೀದಿಸಬೇಕಾದ ವಸ್ತುಗಳ ಒಳಹರಿವಿನ ಅವಲಂಬನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ರೈತರಿಗೆ ಪೂರಕವಾಗಿ ಬೆಂಬಲಿಸಲು ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (ಎನ್.ಎಂ.ಎನ್.ಎಫ್.) ಅನ್ನು ವಿನ್ಯಾಸಗೊಳಿಸಲಾಗಿದೆ.
ನೈಸರ್ಗಿಕ ಕೃಷಿಯು ಆರೋಗ್ಯಕರ ಮಣ್ಣಿನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ, ಜೀವವೈವಿಧ್ಯವನ್ನು ಉತ್ತೇಜಿಸುತ್ತದೆ ಮತ್ತು ಸ್ಥಳೀಯ ಕೃಷಿವಿಜ್ಞಾನಕ್ಕೆ ಸೂಕ್ತವಾದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ವೈವಿಧ್ಯಮಯ ಬೆಳೆ ಪದ್ಧತಿಗಳನ್ನು ಪ್ರೋತ್ಸಾಹಿಸುತ್ತದೆ ನೈಸರ್ಗಿಕ ಕೃಷಿಯ ಪ್ರಯೋಜನಗಳು. ರೈತರು , ರೈತರ ಕುಟುಂಬಗಳು ಮತ್ತು ಗ್ರಾಹಕರಿಗೆ ಸುಸ್ಥಿರತೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಆರೋಗ್ಯಕರ ಆಹಾರದ ಕಡೆಗೆ ಕೃಷಿ ಪದ್ಧತಿಗಳನ್ನು ವೈಜ್ಞಾನಿಕವಾಗಿ ಪುನರುಜ್ಜೀವನಗೊಳಿಸಲು ಮತ್ತು ಬಲಪಡಿಸಲು ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (ಎನ್.ಎಂ.ಎನ್.ಎಫ್.) ಅನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಲಾಗಿದೆ.
ಮುಂದಿನ ಎರಡು ವರ್ಷಗಳಲ್ಲಿ, ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (ಎನ್.ಎಂ.ಎನ್.ಎಫ್.) ಅನ್ನು ಗ್ರಾಮ ಪಂಚಾಯತ್ ಗಳಲ್ಲಿ 15,000 ಕ್ಲಸ್ಟರ್ ಗಳಲ್ಲಿ ಜಾರಿಗೊಳಿಸಲಾಗುವುದು. ಹಾಗೂ 1 ಕೋಟಿ ರೈತರನ್ನು ತಲುಪಲಿದೆ ಮತ್ತು 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿ (ಎನ್.ಎಫ್) ಯನ್ನು ನೈಸರ್ಗಿಕ ರೈತರು ಪ್ರಾರಂಭಿಸಲಿದ್ದಾರೆ.
ನೈಸರ್ಗಿಕ ಕೃಷಿ ಅಭ್ಯಾಸ ಕ್ರಮದ ಕೃಷಿ ಪ್ರದೇಶಗಳಿಗೆ ಪರಿಣಿತ ನೈಸರ್ಗಿಕ ಕೃಷಿಯ ರೈತರು/ ಎಸ್.ಆರ್.ಎಲ್.ಎಂ/ ಪಿ.ಎಂ.ಸಿ.ಎಸ್ / ಎಫ್.ಪಿ.ಒ.ಗಳನ್ನು ಆದ್ಯತೆ ಮೇಲೆ ಕಳುಹಿಸಿ ಕೊಡಲಾಗುವುದು. ಇದಲ್ಲದೆ, ಸುಲಭವಾಗಿ ಲಭ್ಯತೆ ಮತ್ತು ಸಿದ್ಧ-ಸಾಧ್ಯತೆಯನ್ನು ಒದಗಿಸಲು ಅಗತ್ಯತೆ-ಆಧಾರಿತ 10,000 ಜೈವಿಕ-ಇನ್‌ಪುಟ್ ಸಂಪನ್ಮೂಲ ಕೇಂದ್ರಗಳನ್ನು (ಬಿ.ಆರ್.ಸಿ) ಕೂಡ ಸ್ಥಾಪಿಸಲಾಗುವುದು.
ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (ಎನ್.ಎಂ.ಎನ್.ಎಫ್.) ಅಡಿಯಲ್ಲಿ, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು), ಕೃಷಿ ವಿಶ್ವವಿದ್ಯಾನಿಲಯಗಳು (ಎಯುಗಳು) ಮತ್ತು ರೈತರ ಕ್ಷೇತ್ರಗಳಲ್ಲಿ ಅನುಭವಿ ಮತ್ತು ತರಬೇತಿ ಪಡೆದ ರೈತ ಮಾಸ್ಟರ್ ಟ್ರೇನರ್ ಗಳಿಂದ ಬೆಂಬಲಿತ ಸುಮಾರು 2000 ನೈಸರ್ಗಿಕ ಕೃಷಿ ಮಾದರಿ ಪ್ರಾತ್ಯಕ್ಷಿಕೆ ಫಾರ್ಮ್ ಗಳನ್ನು ಕೂಡ ಸ್ಥಾಪಿಸಲಾಗುವುದು.
ಆಸಕ್ತ ರೈತರಿಗೆ ಕೆವಿಕೆ, ಎಯು ಗಳಲ್ಲಿ ಮತ್ತು ನೈಸರ್ಗಿಕ ಕೃಷಿಯ ರೈತರ ಹೊಲಗಳಲ್ಲಿ ಅವರ ಹಳ್ಳಿಗಳ ಬಳಿ ಅಭ್ಯಾಸಕ್ರಮಗಳ ನೈಸರ್ಗಿಕ ಕೃಷಿ ಪ್ಯಾಕೇಜ್, ನೈಸರ್ಗಿಕ ಕೃಷಿ ಅನುಭವಗಳ ಒಳಹರಿವಿನ ತಯಾರಿಕಾ ವ್ಯವಸ್ಥೆ ಇತ್ಯಾದಿಗಳ ಕುರಿತು ಮಾದರಿ ಪ್ರಾತ್ಯಕ್ಷಿಕೆ ಫಾರ್ಮ್ ಗಳಲ್ಲಿ ತರಬೇತಿ ನೀಡಲಾಗುತ್ತದೆ. ಈಗಾಗಲೇ ಸುಮಾರು 18.75 ಲಕ್ಷ ತರಬೇತಿ ಪಡೆದ ಆಸಕ್ತ ರೈತರು ತಮ್ಮ ಜಾನುವಾರುಗಳನ್ನು ಬಳಸಿಕೊಂಡು ಜೀವಾಮೃತ, ಬೀಜಾಮೃತ ಇತ್ಯಾದಿಗಳನ್ನು ತಯಾರಿಸುತ್ತಿದ್ದಾರೆ ಅಥವಾ ಬಿ.ಆರ್.ಸಿ ಗಳಿಂದ ಸಂಗ್ರಹಿಸುತ್ತಿದ್ದಾರೆ. ಕ್ಲಸ್ಟರ್‌ಗಳಲ್ಲಿ ಅರಿವು ಮೂಡಿಸಲು, ಸಜ್ಜುಗೊಳಿಸಲು ಮತ್ತು ಇಚ್ಛಿಸುವ ರೈತರ ಮಾಹಿತಿ ಹಂಚಲು ಸುಮಾರು 30,000 ಕೃಷಿ ಸಖಿ/ಸಿಆರ್‌ಪಿಗಳನ್ನು ನಿಯೋಜಿಸಲಾಗುವುದು.
ನೈಸರ್ಗಿಕ ಬೇಸಾಯ ಪದ್ಧತಿಗಳು ರೈತರಿಗೆ ಕೃಷಿಯ ಒಳಹರಿವಿನ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಮಣ್ಣಿನ ಆರೋಗ್ಯ, ಫಲವತ್ತತೆ ಮತ್ತು ಗುಣಮಟ್ಟವನ್ನು ಪುನಶ್ಚೇತನ ಗೊಳಿಸುವುದರ ಜೊತೆಗೆ ಬಾಹ್ಯವಾಗಿ ಖರೀದಿಸಬೇಕಾದ ವಸ್ತುಗಳ (ರಸಗೊಬ್ಬರಗಳು, ಕೀಟನಾಶಕಗಳು ಇತ್ಯಾದಿಗಳು ) ಒಳಹರಿವಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರೈತರ ಕುಟುಂಬಕ್ಕೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸುತ್ತವೆ. ಇದಲ್ಲದೆ, ನೈಸರ್ಗಿಕ ಕೃಷಿಯ ಮೂಲಕ, ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಭೂಮಿ ತಾಯಿಯನ್ನು ಕೊಡಲಾಗುತ್ತದೆ. ಮಣ್ಣಿನ ಇಂಗಾಲದ ಅಂಶ ಮತ್ತು ನೀರಿನ ಬಳಕೆಯ ದಕ್ಷತೆಯ ಸುಧಾರಣೆಯ ಮೂಲಕ, ನೈಸರ್ಗಿಕ ಕೃಷಿಯಲ್ಲಿ ಮಣ್ಣಿನ ಸೂಕ್ಷ್ಮಾಣುಜೀವಿಗಳು ಮತ್ತು ಜೀವವೈವಿಧ್ಯದಲ್ಲಿ ಕೂಡ ಹೆಚ್ಚಳ ಕಾಣಬಹುದು .
ರೈತರಿಗೆ ಅವರ ನೈಸರ್ಗಿಕ ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಪ್ರವೇಶವನ್ನು ಒದಗಿಸಲು ಸುಲಭವಾದ ಸರಳ ಪ್ರಮಾಣೀಕರಣ ವ್ಯವಸ್ಥೆ ಮತ್ತು ಮೀಸಲಾದ ಸಾಮಾನ್ಯ ಬ್ರ್ಯಾಂಡಿಂಗ್ ಅನ್ನು ಒದಗಿಸಲಾಗುತ್ತದೆ. ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (ಎನ್.ಎಂ.ಎನ್.ಎಫ್.) ಅಡಿಯಲ್ಲಿ ನೈಸರ್ಗಿಕ ಕೃಷಿಯನ್ನು ಅನುಷ್ಠಾನಗೊಳಿಸುವ ನೈಜ-ಸಮಯದ ಜಿಯೋ-ಟ್ಯಾಗ್ ಮತ್ತು ಉಲ್ಲೇಖಿತ ಮೇಲ್ವಿಚಾರಣೆಯನ್ನು ಆನ್‌ಲೈನ್ ಪೋರ್ಟಲ್ ಮೂಲಕ ಮಾಡಲಾಗುತ್ತದೆ.
ಸ್ಥಳೀಯ ಜಾನುವಾರುಗಳ ಜನಸಂಖ್ಯೆಯನ್ನು ಹೆಚ್ಚಿಸಲು ವ್ಯವಸ್ಥೆ ಮಾಡಲಾಗುವುದು, ಕೇಂದ್ರೀಯ ಜಾನುವಾರು ಸಾಕಣೆ ಕೇಂದ್ರಗಳಲ್ಲಿ/ಪ್ರಾದೇಶಿಕ ಮೇವು ಕೇಂದ್ರಗಳಲ್ಲಿ ನೈಸರ್ಗಿಕ ಕೃಷಿ ಮಾದರಿ ಪ್ರಾತ್ಯಕ್ಷಿಕೆಗಳನ್ನು ಮಾಡಲಾಗುವುದು, ಸಾಕಣೆ ಕೇಂದ್ರಗಳ ಅಭಿವೃದ್ಧಿ, ಜಿಲ್ಲೆ/ ಸ್ಥಳೀಯ ರೈತರ ಮಾರುಕಟ್ಟೆಗಳಿಗೆ ಕನ್ವರ್ಜೆನ್ಸ್ ಮೂಲಕ ಬ್ಲಾಕ್/ಜಿಪಿ ಮಟ್ಟಗಳು, ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ಮಂಡಿಗಳು, ಹಾಟ್ಸ್, ಡಿಪೋಗಳು, ಇತ್ಯಾದಿ ಸೇರಿದಂತೆ ಎಲ್ಲಾ ಕಡೆಗಳಲ್ಲಿ ನೈಸರ್ಗಿಕ ಕೃಷಿ ವಸ್ತು ಮಾರಾಟ/ಪ್ರದರ್ಶನ ಮಾಡಲಾಗುವುದು.
ಹೆಚ್ಚುವರಿಯಾಗಿ, ಆರ್.ಎ.ಡಬ್ಲ್ಯೂಇ ಕಾರ್ಯಕ್ರಮದ ಮೂಲಕ ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ (ಎನ್.ಎಂ.ಎನ್.ಎಫ್.) ನಲ್ಲಿ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾಗುವುದು ಮತ್ತು ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಶಿಕ್ಷಣಗಳಲ್ಲಿ ನೈಸರ್ಗಿಕ ಕೃಷಿಯ ಪಠ್ಯ ವ್ಯವಸ್ಥೆಯನ್ನು ಕೂಡ ಪ್ರಾರಂಭಿಸಲಾಗುವುದು.