शुक्रवार, जनवरी 10 2025 | 04:31:40 PM
Breaking News
Home / अन्य समाचार / 55ನೇ ಐ ಎಫ್ ಎಫ್ ಐ ಅದ್ದೂರಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು

55ನೇ ಐ ಎಫ್ ಎಫ್ ಐ ಅದ್ದೂರಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು

Follow us on:

ಪ್ರತಿಯೊಂದು ಒಳ್ಳೆಯದಕ್ಕೂ ಅಂತ್ಯವಿದೆ, ಈ ತತ್ವದ ಪ್ರಕಾರ,  2024ರ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು (IFFI) ನವೆಂಬರ್ 28, 2024 ರಂದು ಗೋವಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಸ್ಟೇಡಿಯಂನಲ್ಲಿ ಅಧಿಕೃತವಾಗಿ ಸಮಾರೋಪಗೊಂಡಿತು. ಚಲನಚಿತ್ರ ಮಾಧ್ಯಮದ ಮಹತ್ವವನ್ನು ಮತ್ತು ಕಥನ ಕಲೆಯನ್ನು ಉತ್ತೇಜಿಸುವಲ್ಲಿ ಈ ಚಲನಚಿತ್ರೋತ್ಸವವು ಮಹತ್ವದ ಪಾತ್ರ ವಹಿಸಿದೆ. ಭವಿಷ್ಯದ ಚಲನಚಿತ್ರ ನಿರ್ಮಾಪಕರಿಗೆ ಹೊಸ ಹಾದಿಗಳನ್ನು ತೆರೆದಿಡುವಲ್ಲಿಯೂ ಈ ಉತ್ಸವವು ಯಶಸ್ವಿಯಾಗಿದೆ. ಐ ಎಫ್ ಎಫ್ ಐ 2024ರಲ್ಲಿ 11,332 ಪ್ರತಿನಿಧಿಗಳು ಭಾಗವಹಿಸಿದ್ದು,  IFFI 2023ಕ್ಕೆ ಹೋಲಿಸಿದರೆ 12% ಹೆಚ್ಚಳವಾಗಿದೆ. ಭಾರತದ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮತ್ತು 28 ದೇಶಗಳ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಈ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ  ಇದರ  ಗೌರವವನ್ನು ಹೆಚ್ಚಿಸಿದ್ದಾರೆ.

ಫಿಲ್ಮ್ ಬಜಾರ್ ವಿಷಯದಲ್ಲಿ, ಪ್ರತಿನಿಧಿಗಳ ಸಂಖ್ಯೆ 1,876ಕ್ಕೆ ಏರಿತು, ಇದು ಕಳೆದ ವರ್ಷದ 775ರಿಂದ ಗಮನಾರ್ಹವಾಗಿ ಹೆಚ್ಚಾಗಿದೆ. ವಿದೇಶಿ ಪ್ರತಿನಿಧಿಗಳು 42 ದೇಶಗಳನ್ನು ಪ್ರತಿನಿಧಿಸಿದರು. ಈ ವರ್ಷ ಫಿಲ್ಮ್ ಬಜಾರ್ ನಲ್ಲಿ ವ್ಯಾಪಾರದ ಅಂದಾಜುಗಳು 500 ಕೋಟಿ ರೂಪಾಯಿಗಳನ್ನು ಮೀರಿದ್ದು, ಇದು ಗಮನಾರ್ಹ ಸಾಧನೆಯಾಗಿದೆ. 15 ಕೈಗಾರಿಕಾ ಪಾಲುದಾರರನ್ನು ಒಳಗೊಂಡ ಟೆಕ್ ಪೆವಿಲಿಯನ್ ಸಹ ಭಾಗವಹಿಸಿದ ಪ್ರತಿನಿಧಿಗಳಿಗೆ ಆಸಕ್ತಿದಾಯಕ ಅಂಶವಾಗಿತ್ತು.  ಉದ್ಯಮ ಪಾಲುದಾರರಿಂದ 15.36 ಕೋಟಿ ಮೌಲ್ಯದ ಪ್ರಾಯೋಜಕತ್ವವನ್ನು ಸಾಧಿಸಲಾಗಿದೆ.

ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಮುಖ ಘಟನೆಗಳ ಸಾರಾಂಶ ಇಲ್ಲಿದೆ.

ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ

IFFI 2024ರ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳು ಭಾರತೀಯ ಮತ್ತು ಅಂತಾರಾಷ್ಟ್ರೀಯ ಚಿತ್ರರಂಗದ ತಾರೆಗಳ ಉಪಸ್ಥಿತಿ ಮತ್ತು ಪ್ರದರ್ಶನಗಳಿಂದ ಕೂಡಿದ್ದು,  ಚಿತ್ರರಂಗದ ವೈಭವವನ್ನು ಆಚರಿಸಿದವು. ಉದ್ಘಾಟನಾ ಸಮಾರಂಭವು ಭಾರತೀಯ ಚಿತ್ರರಂಗದ ಶತಮಾನೋತ್ಸವ ಆಚರಣೆಗಳು ಮತ್ತು ಶ್ರೀಮಂತ ವೈವಿಧ್ಯತೆಗೆ ಗೌರವ ಸಲ್ಲಿಸಿತು. ಸಮಾರೋಪ ಸಮಾರಂಭದಲ್ಲಿ ಸಂಗೀತ ಮತ್ತು ನೃತ್ಯ ಪ್ರದರ್ಶನಗಳೊಂದಿಗೆ,  ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ಫಿಲಿಪ್ ನಾಯ್ಸ್ ಅವರಿಗೆ ಮತ್ತು  ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಯನ್ನು ವಿಕ್ರಾಂತ್ ಮ್ಯಾಸಿ ಅವರಿಗೆ ನೀಡುವ ಮೂಲಕ ಅಸಾಧಾರಣ ಸಾಧನೆಗಳನ್ನು ಗೌರವಿಸಲಾಯಿತು.

ಅಂತಾರಾಷ್ಟ್ರೀಯ ಚಲನಚಿತ್ರಗಳು

ಈ ವರ್ಷದ ಅಂತರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದಲ್ಲಿ  189 ಚಿತ್ರಗಳು IFFI ಗೆ ಆಯ್ಕೆಯಾಗಿವೆ. ಇದಕ್ಕಾಗಿ 1,800 ಕ್ಕೂ ಹೆಚ್ಚು ಪ್ರವೇಶಗಳಿಂದ ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಇದು 16 ವಿಶ್ವ ಪ್ರೀಮಿಯರ್‌ ಗಳು , 3 ಅಂತಾರಾಷ್ಟ್ರೀಯ ಪ್ರೀಮಿಯರ್‌ ಗಳು , 44 ಏಷ್ಯನ್ ಪ್ರೀಮಿಯರ್‌ ಗಳು ಮತ್ತು 109 ಭಾರತೀಯ ಪ್ರೀಮಿಯರ್‌ ಗಳನ್ನು ಒಳಗೊಂಡಿತ್ತು.

81 ದೇಶಗಳ ಚಲನಚಿತ್ರಗಳು ವೈವಿಧ್ಯಮಯ ಸಂಸ್ಕೃತಿಗಳು, ಧ್ವನಿಗಳು ಮತ್ತು ದೃಷ್ಟಿಕೋನಗಳನ್ನು ಪ್ರದರ್ಶಿಸಿದವು. ಸ್ಪರ್ಧಾತ್ಮಕ ವಿಭಾಗಗಳು ಸಹ ರೋಮಾಂಚನಕಾರಿಯಾಗಿದ್ದು, 15 ಚಲನಚಿತ್ರಗಳು ಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಪರ್ಧಾ ಪ್ರಶಸ್ತಿಗಾಗಿ, 10 ಚಲನಚಿತ್ರಗಳು ICFT UNESCO ಗಾಂಧಿ ಪದಕ ವಿಭಾಗದಲ್ಲಿ ಮತ್ತು 7 ಚಲನಚಿತ್ರಗಳು ನಿರ್ದೇಶಕರಿಂದ ಅತ್ಯುತ್ತಮ ಚೊಚ್ಚಲ ಚಲನಚಿತ್ರ ವಿಭಾಗದಲ್ಲಿ ಸ್ಪರ್ಧಿಸಿದವು.

ಈ ವರ್ಷದ ಉತ್ಸವದಲ್ಲಿ ಆಸ್ಟ್ರೇಲಿಯಾವನ್ನು ವಿಶೇಷ ಆಸಕ್ತಿಯ ದೇಶವಾಗಿ ಸೇರಿಸಲಾಯಿತು. ಆದ್ದರಿಂದ, ಈ ಉತ್ಸವದಲ್ಲಿ ಪ್ರದರ್ಶನಗೊಂಡ ಚಲನಚಿತ್ರಗಳು ವಿಭಿನ್ನವಾದ ಸಂಚಲನವನ್ನು ಪಡೆದುಕೊಂಡವು. ಸ್ಕ್ರೀನ್ ಆಸ್ಟ್ರೇಲಿಯಾದೊಂದಿಗಿನ ಪರಸ್ಪರ ಸಹಕಾರ ಒಪ್ಪಂದಕ್ಕೆ ಅನುಗುಣವಾಗಿ ಈ ವಿಭಾಗದ ಅಡಿಯಲ್ಲಿ ಅತ್ಯುತ್ತಮ ಆಸ್ಟ್ರೇಲಿಯನ್ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು. ಅದರಂತೆ, ಈ ಸಮಾರಂಭದ ಉದ್ಘಾಟನಾ ಚಲನಚಿತ್ರವಾಗಿ ಮೈಕೆಲ್ ಗ್ರೇಸಿ ನಿರ್ದೇಶಿಸಿದ ಆಸ್ಟ್ರೇಲಿಯಾದ ಬೆಟರ್ ಮ್ಯಾನ್ ಚಲನಚಿತ್ರವನ್ನು ಪ್ರದರ್ಶನ ಮಾಡಲಾಗಿತ್ತು

ಸ್ಪರ್ಧಾತ್ಮಕ ಚಲನಚಿತ್ರಗಳಲ್ಲಿ, ಲಿಥುವೇನಿಯನ್ ಚಲನಚಿತ್ರ ‘ಟಾಕ್ಸಿಕ್’ ಅತ್ಯುತ್ತಮ ಚಲನಚಿತ್ರಕ್ಕಾಗಿ ಗೋಲ್ಡನ್ ಪಿಕಾಕ್ (Golden Peacock) ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ರೊಮೇನಿಯನ್ ಚಲನಚಿತ್ರ ‘ಎ ನ್ಯೂ ಇಯರ್ ದಟ್ ನೆವರ್ ಕೇಮ್’ ಅತ್ಯುತ್ತಮ ನಿರ್ದೇಶಕರಿಗಾಗಿ ಸಿಲ್ವರ್‌ ಪಿಕಾಕ್‌ (Silver peacock)  ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಐ & ಬಿ ಕಾರ್ಯದರ್ಶಿ ಸಂಜಯ್ ಜಾಜು ಮತ್ತು ಫೆಸ್ಟಿವಲ್ ಡೈರೆಕ್ಟರ್ ಶೇಖರ್ ಕಪೂರ್ ಅವರೊಂದಿಗೆ ರೆಡ್ ಕಾರ್ಪೆಟ್ ಮೇಲೆ ಬೆಟರ್ ಮ್ಯಾನ್ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿ

ಗಾಲಾ ಪ್ರೀಮಿಯರ್‌ ಗಳು ಮತ್ತು ರೆಡ್ ಕಾರ್ಪೆಟ್‌ ಗಳು

ಅಂತಾರಾಷ್ಟ್ರೀಯ ವಿಭಾಗ, ಭಾರತೀಯ ಪನೋರಮಾ, ಗೋವಾ ವಿಭಾಗ ಮತ್ತು ಬಿಯಾಂಡ್ ಇಂಡಿಯನ್ ಪನೋರಮಾದ 100ಕ್ಕೂ ಹೆಚ್ಚು ರೆಡ್ ಕಾರ್ಪೆಟ್ ಕಾರ್ಯಕ್ರಮಗಳನ್ನು ಐನಾಕ್ಸ್ ಪಂಜಿಮ್ ಸ್ಥಳದಲ್ಲಿ ಪ್ರದರ್ಶಿಸಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಮೇಲೆ ಅಂತಾರಾಷ್ಟ್ರೀಯ ಸಿನಿಮಾ ಜ್ಯೂರಿ

55ನೇ IFFI ನ ಉದ್ಘಾಟನಾ ಸಮಾರಂಭದಲ್ಲಿ ರೆಡ್ ಕಾರ್ಪೆಟ್

ಭಾರತೀಯ ಪನೋರಮಾ

ಈ ವರ್ಷದ ಭಾರತೀಯ ಪನೋರಮಾ 2024 ಭಾಗವಾಗಿ 25 ಚಲನಚಿತ್ರಗಳು ಮತ್ತು 20 ಚಿತ್ರೇತರ ಚಲನಚಿತ್ರಗಳನ್ನು ಅವುಗಳ ಸಿನಿಮೀಯ ಶ್ರೇಷ್ಠತೆಗಾಗಿ ಆಯ್ಕೆ ಮಾಡಲಾಗಿದೆ. ಭಾರತದಾದ್ಯಂತದ ಚಿತ್ರರಂಗದ ಗಣ್ಯ ವ್ಯಕ್ತಿಗಳ ಸಮಿತಿಯು ಈ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತದೆ. ಈ ಸಮಿತಿಯಲ್ಲಿ ಚಲನಚಿತ್ರಗಳಿಗೆ ಹನ್ನೆರಡು ಜ್ಯೂರಿ ಸದಸ್ಯರು ಮತ್ತು ಚಿತ್ರೇತರ ಚಲನಚಿತ್ರಗಳಿಗೆ ಆರು ಜ್ಯೂರಿ ಸದಸ್ಯರು ಇರುತ್ತಾರೆ, ಪ್ರತಿಯೊಬ್ಬರೂ ತಮ್ಮ  ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಾರೆ.’ಯುವ ಚಲನಚಿತ್ರ ನಿರ್ಮಾಪಕರು’ ಎಂಬ IFFI ಯ ವಿಷಯಕ್ಕೆ ಅನುಗುಣವಾಗಿ, ದೇಶಾದ್ಯಂತದ ಯುವ ಚಲನಚಿತ್ರ ನಿರ್ಮಾಣ ಪ್ರತಿಭೆಯನ್ನು ಗುರುತಿಸಲು ಒಂದು ಹೊಸ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ಮತ್ತು 5 ಲಕ್ಷ ರೂ.ಗಳ ನಗದು ಬಹುಮಾನಕ್ಕಾಗಿ ಸ್ಪರ್ಧಿಸಿದ ಒಟ್ಟು 102 ಚಲನಚಿತ್ರಗಳಲ್ಲಿ,  ನವಜ್ಯೋತ್ ಬಂಡಿವಾಡೇಕರ್ ಅವರ ‘ಗ್ರಹಾತ್ ಗಣಪತಿ’ ಚಿತ್ರವು ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು.

IFFI ಯ ಥೀಮ್ “ಯುವ ಚಲನಚಿತ್ರ ನಿರ್ಮಾಪಕರು” – “ಭವಿಷ್ಯವು ಈಗ” ಮೇಲೆ ಕೇಂದ್ರೀಕರಿಸಿದೆ

ಮಾನ್ಯ ಮಾಹಿತಿ ಮತ್ತು ಪ್ರಸಾರ ಸಚಿವರ ದೂರದೃಷ್ಟಿಯಂತೆ, IFFI 2024 ರ ವಿಷಯವು “ಯುವ ಚಲನಚಿತ್ರ ನಿರ್ಮಾಪಕರು” ಮೇಲೆ ಕೇಂದ್ರೀಕೃತವಾಗಿತ್ತು. ಸೃಜನಶೀಲತೆಯ ಭವಿಷ್ಯವನ್ನು ರೂಪಿಸುವಲ್ಲಿ ಅವರ ಸಾಮರ್ಥ್ಯವನ್ನು ಗುರುತಿಸುವುದು ಇದರ ಉದ್ದೇಶವಾಗಿತ್ತು. ಹಿಂದಿನ ಆವೃತ್ತಿಗಳಲ್ಲಿ 75 ಯುವ ಪ್ರತಿಭೆಗಳನ್ನು ಬೆಂಬಲಿಸುತ್ತಿದ್ದ ‘ನಾಳೆಯ ಸೃಜನಶೀಲ ಮನಸ್ಸುಗಳು’ ವೇದಿಕೆಯನ್ನು ಈ ವರ್ಷ 100 ಯುವ ಪ್ರತಿಭೆಗಳನ್ನು ಬೆಂಬಲಿಸಲು  ವಿಸ್ತರಿಸಲಾಯಿತು. ದೇಶದ ವಿವಿಧ ಚಲನಚಿತ್ರ ಶಾಲೆಗಳಿಂದ ಸುಮಾರು 350 ಯುವ ಚಲನಚಿತ್ರ ವಿದ್ಯಾರ್ಥಿಗಳು IFFI ಗೆ ಹಾಜರಾಗಲು ಸಚಿವಾಲಯವು  ಸಹಾಯ ಮಾಡಿತು. ಭಾರತದಾದ್ಯಂತ ಯುವ ಚಲನಚಿತ್ರ ನಿರ್ಮಾಣ ಪ್ರತಿಭೆಯನ್ನು ಗುರುತಿಸಲು ಅತ್ಯುತ್ತಮ ಚೊಚ್ಚಲ ಭಾರತೀಯ ನಿರ್ದೇಶಕರಿಗಾಗಿ ಹೊಸ ವಿಭಾಗ ಮತ್ತು ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಯುವ ಸೃಷ್ಟಿಕರ್ತರಿಗಾಗಿ ಮಾಸ್ಟರ್‌ ಕ್ಲಾಸ್‌ಗಳು, ಪ್ಯಾನಲ್ ಚರ್ಚೆಗಳು, ಚಲನಚಿತ್ರ ಮಾರುಕಟ್ಟೆ ಮತ್ತು ಚಲನಚಿತ್ರ ಪ್ಯಾಕೇಜ್‌ ಗಳನ್ನು  ವಿನ್ಯಾಸಗೊಳಿಸಲಾಗಿದೆ. ಯುವಜನರ ಭಾಗವಹಿಸುವಿಕೆಯನ್ನು ‘IFFiesta’   ಮನರಂಜನಾ ವಲಯವನ್ನು ಪ್ರಾರಂಭಿಸಲಾಗಿದೆ.

ಐ ಎಫ್ ಎಫ್ ಐ ಇ ಎಸ್ ಟಿ ಎ

ಐ ಎಫ್ ಎಫ್ ಐ ಇ ಎಸ್ ಟಿ ಎ, ಝೊಮಾಟೊ ಸಹಯೋಗದೊಂದಿಗೆ, “ಡಿಸ್ಟ್ರಿಕ್ಟ್” ಎಂಬ ರೋಮಾಂಚಕ ಮನರಂಜನಾ ವಲಯವನ್ನು ರಚಿಸಿತು, ಇದು ವೆನ್ ಚಾಯ್ ಮೆಟ್ ಟೋಸ್ಟ್ ಮತ್ತು ಅಸೀಸ್ ಕೌರ್ ಅವರ ಕಾರ್ಯಗಳು ಸೇರಿದಂತೆ ಆಹಾರ ಮಳಿಗೆಗಳು ಮತ್ತು ವಿಶೇಷವಾಗಿ ಕ್ಯುರೇಟೆಡ್ ಪ್ರದರ್ಶನಗಳ ವಿಶಿಷ್ಟ ಮಿಶ್ರಣವನ್ನು ನೀಡುತ್ತದೆ. ಭಾರತೀಯ ಚಲನಚಿತ್ರ ನಿರ್ಮಾಣದ ಶ್ರೀಮಂತ ಇತಿಹಾಸವನ್ನು ಪ್ರದರ್ಶಿಸುವ ಸಫರ್ನಾಮಾ ಎಂಬ ಶೀರ್ಷಿಕೆಯ ಕ್ಯುರೇಟೆಡ್ ಪ್ರದರ್ಶನವು ಈ ವಲಯದ ಪ್ರಮುಖ ಆಕರ್ಷಣೆಯಾಗಿತ್ತು. ಹೆಚ್ಚುವರಿಯಾಗಿ, ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ನ ವಿಶೇಷ ಅನುಭವ ವಲಯವು ಪಾಲ್ಗೊಳ್ಳುವವರಿಗೆ ತಲ್ಲೀನಗೊಳಿಸುವ ಅನುಭವವನ್ನು ಒದಗಿಸಿತು, ಇದು ಕಾರ್ಯಕ್ರಮದ ಕೇಂದ್ರ ಆಕರ್ಷಣೆಯಾಗಿದೆ. 6000 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 18,795 ಸಂದರ್ಶಕರು IFFIestaವನ್ನು ಆನಂದಿಸಿದರು.

IFFIesta ನಲ್ಲಿ ಸಾಂಸ್ಕೃತಿಕ ಪ್ರದರ್ಶನ

ಚಲನಚಿತ್ರ ಐಕಾನ್‌ ಗಳ ಆಚರಣೆ: IFFI 2024ರಲ್ಲಿ ಶತಮಾನೋತ್ಸವದ ಗೌರವ

ನವೆಂಬರ್ 2024ರಲ್ಲಿ ನಡೆದ 55 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI), ಭಾರತೀಯ ಚಿತ್ರರಂಗದ ನಾಲ್ಕು ದಿಗ್ಗಜರಾದ ಅಕ್ಕಿನೇನಿ ನಾಗೇಶ್ವರ ರಾವ್ (ANR), ರಾಜ್ ಕಪೂರ್, ಮೊಹಮ್ಮದ್ ರಫಿ ಮತ್ತು ತಪನ್ ಸಿನ್ಹಾ ಅವರಿಗೆ  ಅರ್ಪಣೆಯಾಗಿತ್ತು. ಈ ಮಹಾನ್  ವ್ಯಕ್ತಿಗಳ  ಶತಮಾನೋತ್ಸವವನ್ನು ಗುರುತಿಸಿ, ಉತ್ಸವವು ಅವರ  ಅನುಪಮ ಕೊಡುಗೆಗಳನ್ನು  ಸ್ಮರಿಸಿತು. ಅವರ  ಜೀವನ ಮತ್ತು ಸಾಧನೆಗಳನ್ನು  ಗೌರವಿಸಲು  ವಿಶೇಷ ಕಾರ್ಯಕ್ರಮಗಳನ್ನು  ಏರ್ಪಡಿಸಲಾಗಿತ್ತು. ಅವರ  ಚಿತ್ರಗಳ  ಪ್ರದರ್ಶನ, ಅವರ  ಬಗ್ಗೆ  ವಿಶೇಷ  ಪುಸ್ತಕ  ಬಿಡುಗಡೆ,  ಅವರ  ಗೌರವಾರ್ಥ  ಅಂಚೆಚೀಟಿಗಳನ್ನು  ಬಿಡುಗಡೆ ಮಾಡಲಾಯಿತು.

ರಿಸ್ಟೋರ್ಡ್ ಕ್ಲಾಸಿಕ್ಸ್

IFFI 2024ರಲ್ಲಿ NFDC – ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ  ಪ್ರಸ್ತುತಪಡಿಸಿದ   ರಿಸ್ಟೋರ್ಡ್ ಕ್ಲಾಸಿಕ್ಸ್ ವಿಭಾಗವು,  ಮಾಹಿತಿ ಮತ್ತು ಪ್ರಸಾರ ಸಚಿವಾಲಯದ  ಕಾರ್ಯಕ್ರಮವಾದ  ನ್ಯಾಷನಲ್ ಫಿಲ್ಮ್ ಹೆರಿಟೇಜ್ ಮಿಷನ್‌ ನ  ಭಾಗವಾಗಿ NFDC-NFAI  ನಡೆಸಿದ  ಚಲನಚಿತ್ರಗಳ  ಡಿಜಿಟಲ್  ಮರುಸ್ಥಾಪನೆಯನ್ನು  ಒಳಗೊಂಡಿತ್ತು. ಈ  ವಿಭಾಗವು  ಭಾರತೀಯ  ಚಿತ್ರರಂಗವನ್ನು  ಸಂರಕ್ಷಿಸುವಲ್ಲಿ NFDC-NFAI ನ  ನಿರಂತರ  ಪ್ರಯತ್ನಗಳನ್ನು  ಎತ್ತಿ  ತೋರಿಸುತ್ತದೆ.  ಅದರ  ಡಿಜಿಟಲೀಕರಣ ಮತ್ತು  ಪುನಃಸ್ಥಾಪನೆ  ಕಾರ್ಯದ  ಮೇಲೆ  ಕೇಂದ್ರೀಕರಿಸುತ್ತದೆ.  ಪ್ರದರ್ಶಿಸಲಾದ  ಗಮನಾರ್ಹ  ಚಲನಚಿತ್ರಗಳು  ಇಲ್ಲಿವೆ:

1. ಕಾಳಿಯ ಮರ್ದನ (1919) – ದಾದಾ ಸಾಹೇಬ್ ಫಾಲ್ಕೆ ಅವರ ಮೂಕ ಚಲನಚಿತ್ರವನ್ನು ವಿಶೇಷ ಲೈವ್ ಧ್ವನಿಯೊಂದಿಗೆ ಪ್ರದರ್ಶಿಸಲಾಯಿತು, ಇದು ಪ್ರೇಕ್ಷಕರಿಗೆ ಇಷ್ಟವಾಯಿತು.
2. ಶತಮಾನೋತ್ಸವಗಳಿಗಾಗಿ:
a.ರಾಜ್ ಕಪೂರ್ ಅವರ ಆವಾರಾ (1951)
b.ANR ಅವರ ದೇವದಾಸು (1953)
c. ರಫಿ ಅವರ ಹಾಡುಗಳನ್ನು ಒಳಗೊಂಡ ಹಮ್ ದೋನೋ (1961)
d. ತಪನ್ ಸಿನ್ಹಾ ಅವರ ಹಾರ್ಮೋನಿಯಂ (1975)

3. ಸತ್ಯಜಿತ್ ರೇ ಅವರ ಸೀಮಾಬದ್ಧ (1971)

ನಾಳೆಯ ಸೃಜನಶೀಲ ಮನಸ್ಸುಗಳು

IFFI 2024 ರಲ್ಲಿ ಭಾಗವಹಿಸುವವರ ಆಯ್ಕೆಯು  ಅತ್ಯಂತ  ಪ್ರಭಾವಶಾಲಿಯಾಗಿತ್ತು. ಚಲನಚಿತ್ರ  ನಿರ್ಮಾಣದ 13 ವಿಭಾಗಗಳಲ್ಲಿ  ಭಾರತದ 35 ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳಿಂದ  1,070 ಅರ್ಜಿಗಳನ್ನು  ಸ್ವೀಕರಿಸಲಾಗಿದೆ. ಒಟ್ಟು 100  ಭಾಗವಹಿಸುವವರನ್ನು  ಆಯ್ಕೆ ಮಾಡಲಾಗಿದ್ದು, ಅದರಲ್ಲಿ 71  ಪುರುಷರು ಮತ್ತು 29  ಮಹಿಳೆಯರು  ಸೇರಿದ್ದಾರೆ (2023 ರಲ್ಲಿ 16  ಮಹಿಳಾ  ಭಾಗವಹಿಸುವವರಿಂದ ಗಮನಾರ್ಹ  ಹೆಚ್ಚಳ). ಈ ಭಾಗವಹಿಸುವವರು 22  ರಾಜ್ಯಗಳು ಮತ್ತು  ಕೇಂದ್ರಾಡಳಿತ  ಪ್ರದೇಶಗಳನ್ನು  ಪ್ರತಿನಿಧಿಸುತ್ತಿದ್ದು,  ಕಾರ್ಯಕ್ರಮಕ್ಕೆ ವೈವಿಧ್ಯಮಯ  ಧ್ವನಿಗಳು ಮತ್ತು  ಅನುಭವಗಳನ್ನು  ತಂದರು.

ಫೆಸ್ಟಿವಲ್‌ ಸಮಯದಲ್ಲಿ, ತಲಾ 10 ಸ್ಪರ್ಧಿಗಳ ತಂಡಗಳಿಂದ 48 ಗಂಟೆಗಳೊಳಗೆ ಐದು ಕಿರುಚಿತ್ರಗಳನ್ನು ನಿರ್ಮಿಸಲಾಯಿತು. ಇವುಗಳು ಹಿಂದಿಯಲ್ಲಿ ಗುಲ್ಲು (ನಿರ್ದೇಶಕ: ಅರ್ಶಾಲಿ ಜೋಸ್), ಕೊಂಕಣಿ ಮತ್ತು ಇಂಗ್ಲಿಷ್‌ನಲ್ಲಿ ದಿ ವಿಂಡೋ (ನಿರ್ದೇಶಕ: ಪಿಯೂಷ್ ಶರ್ಮಾ), ಇಂಗ್ಲಿಷ್‌ನಲ್ಲಿ ವೀ ಕ್ಯಾನ್ ಹಿಯರ್ ದಿ ಸೇಮ್ ಮ್ಯೂಸಿಕ್ (ನಿರ್ದೇಶಕಿ: ಬೋನಿತಾ ರಾಜ್‌ಪುರೋಹಿತ್), ಇಂಗ್ಲಿಷ್‌ನಲ್ಲಿ ಲವ್‌ ಫಿಕ್ಸ್ ಸಬ್‌ ಸ್ಕ್ರಿಪ್ಶನ್ (ನಿರ್ದೇಶಕಿ: ಮಲ್ಲಿಕಾ ಜುನೇಜಾ) ಮತ್ತು ಹಿಂದಿ/ಇಂಗ್ಲಿಷ್‌ನಲ್ಲಿ ಹೇ ಮಾಯಾ (ನಿರ್ದೇಶಕ: ಸೂರ್ಯಾಂಶ್ ದೇವ್ ಶ್ರೀವಾಸ್ತವ) ಒಳಗೊಂಡಿತ್ತು. ಈ ಚಿತ್ರಗಳನ್ನು ಪರಿಶೀಲಿಸಿದ ಗ್ರ್ಯಾಂಡ್ ಜ್ಯೂರಿ ವಿಜೇತರನ್ನು ಈ ಕೆಳಗಿನಂತೆ ಘೋಷಿಸಿತು: ಅತ್ಯುತ್ತಮ ಚಿತ್ರ – ಗುಲ್ಲು (ಅರ್ಶಾಲಿ ಜೋಸ್), ಮೊದಲ ರನ್ನರ್-ಅಪ್ – ವೀ ಕ್ಯಾನ್ ಹಿಯರ್ ದಿ ಸೇಮ್ ಮ್ಯೂಸಿಕ್ (ಬೋನಿತಾ ರಾಜ್‌ ಪುರೋಹಿತ್), ಅತ್ಯುತ್ತಮ ನಿರ್ದೇಶಕ – ಅರ್ಶಾಲಿ ಜೋಸ್ (ಗುಲ್ಲು), ಅತ್ಯುತ್ತಮ ಚಿತ್ರಕಥೆ – ಆಧಿರಾಜ್ ಬೋಸ್ (ಲವ್‌ಫಿಕ್ಸ್ ಸಬ್‌ಸ್ಕ್ರಿಪ್ಶನ್), ಅತ್ಯುತ್ತಮ ನಟಿ – ವಿಶಾಖಾ ನಾಯ್ಕ್ (ಲವ್‌ ಫಿಕ್ಸ್ ಸಬ್‌ ಸ್ಕ್ರಿಪ್ಶನ್), ಮತ್ತು ಅತ್ಯುತ್ತಮ ನಟ – ಪುಷ್ಪೇಂದ್ರ ಕುಮಾರ್ (ಗುಲ್ಲು).

ಕ್ರಿಯೇಟಿವ್ ಮೈಂಡ್ಸ್‌ ನಲ್ಲಿ ಭಾಗವಹಿಸಿದವರು ಒಂದು ಪ್ರತಿಭಾ ಶಿಬಿರದಲ್ಲಿಯೂ ಭಾಗವಹಿಸಿದರು, ಇದರ ಪರಿಣಾಮವಾಗಿ ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ 62 ಕೊಡುಗೆಗಳನ್ನು ನೀಡಲಾಯಿತು. ಈ ಉಪಕ್ರಮವು ಅಮೂಲ್ಯವಾದ ಮಾನ್ಯತೆ ಮತ್ತು ಅವಕಾಶಗಳನ್ನು ಒದಗಿಸಿತು, ಭಾರತೀಯ ಸಿನೆಮಾದಲ್ಲಿ ಹೊಸ ಪ್ರತಿಭೆಯನ್ನು ಬೆಳೆಸುವ ವೇದಿಕೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿತು.

ಮಾಸ್ಟರ್ ತರಗತಿಗಳು

7 ದಿನಗಳ ಅವಧಿಯಲ್ಲಿ, IFFI 30 ಮಾಸ್ಟರ್‌ ಕ್ಲಾಸ್‌ ಗಳು, ಸಂವಾದಗಳು ಮತ್ತು ಪ್ಯಾನಲ್‌ ಚರ್ಚೆಗಳನ್ನು ಆಯೋಜಿಸಿತು. ಇದರಲ್ಲಿ ಸಿನಿಮಾ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದರು. ಫಿಲಿಪ್ ನಾಯ್ಸ್, ಜಾನ್ ಸೀಲ್, ರಣಬೀರ್ ಕಪೂರ್, ಎ.ಆರ್. ರೆಹಮಾನ್, ಕ್ರಿಸ್ ಕಿರ್ಶ್ಬಾಮ್, ಇಮ್ತಿಯಾಜ್ ಅಲಿ, ಮಣಿ ರತ್ನಂ, ಸುಹಾಸಿನಿ ಮಣಿ ರತ್ನಂ, ನಾಗಾರ್ಜುನ, ಫರೂಖ್ ಧೋಂಡಿ,, ಶಿವಕಾರ್ತಿಕೇಯನ್, ಅಮಿಶ್ ತ್ರಿಪಾಠಿ ಮತ್ತು ಇತರರು.

ನವೆಂಬರ್ 22 ರಂದು ನಡೆದ ಮಣಿ ರತ್ನಂ ಅವರ ಅಧಿವೇಶನವು 89% ಭರ್ತಿಯೊಂದಿಗೆ ಅತಿ ಹೆಚ್ಚು ಹಾಜರಾತಿಯನ್ನು ದಾಖಲಿಸಿತು, ಆದರೆ ರಣಬೀರ್ ಕಪೂರ್ ಅವರ ಅಧಿವೇಶನವು 83% ಹಾಜರಾತಿಯನ್ನು ದಾಖಲಿಸಿತು.

ವಿದ್ಯಾರ್ಥಿ ಚಲನಚಿತ್ರ ನಿರ್ಮಾಪಕ ಕಾರ್ಯಕ್ರಮ

ಯಂಗ್ ಫಿಲ್ಮ್‌ಮೇಕರ್ ಪ್ರೋಗ್ರಾಂನಲ್ಲಿ ಒಟ್ಟು 345 ವಿದ್ಯಾರ್ಥಿಗಳು ಭಾಗವಹಿಸಿದ್ದರು, ಇದರಲ್ಲಿ FTII, SRFTI, SRFTI ಅರುಣಾಚಲ ಪ್ರದೇಶ, IIMC ಮತ್ತು ಇತರ ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಂತಹ 13 ಪ್ರಸಿದ್ಧ ಚಲನಚಿತ್ರ ಶಾಲೆಗಳ 279 ವಿದ್ಯಾರ್ಥಿಗಳು ಸೇರಿದ್ದಾರೆ. ಹೆಚ್ಚುವರಿಯಾಗಿ, ಈಶಾನ್ಯ ರಾಜ್ಯಗಳ 66 ವಿದ್ಯಾರ್ಥಿಗಳು ಮತ್ತು ಯುವ ಚಲನಚಿತ್ರ ನಿರ್ಮಾಪಕರನ್ನು ಕಾರ್ಯಕ್ರಮದ ಭಾಗವಾಗಿ ಆಯ್ಕೆ ಮಾಡಲಾಯಿತು.

PIB ದೇಶಾದ್ಯಂತ ಮಾಧ್ಯಮ ಮಾನ್ಯತೆಗಾಗಿ ಸುಮಾರು 1,000 ಅರ್ಜಿಗಳನ್ನು ಸ್ವೀಕರಿಸಿತು ಮತ್ತು IFFI ಯ ವರದಿಗಾಗಿ 700 ಕ್ಕೂ ಹೆಚ್ಚು ಪತ್ರಕರ್ತರಿಗೆ ಮಾನ್ಯತೆ ನೀಡಿತು. ಆಸಕ್ತಿ ವ್ಯಕ್ತಪಡಿಸಿದ ಕೆಲವು ಪತ್ರಕರ್ತರಿಗೆ FTII ಸಹಯೋಗದೊಂದಿಗೆ ಫಿಲ್ಮ್ ಅಪ್ರಿಸಿಯೇಷನ್ ನಲ್ಲಿ ಒಂದು ದಿನದ ಕೋರ್ಸ್  ನೀಡಲಾಯಿತು.

IFFI 2024 ವಿವಿಧ ಮಾಧ್ಯಮ ಪ್ಲಾಟ್‌ ಫಾರ್ಮ್‌ಗಳಲ್ಲಿ ವ್ಯಾಪಕ ಮಾಧ್ಯಮ ವರದಿಯನ್ನು ಪಡೆದಿತ್ತು, ಈ ಕಾರ್ಯಕ್ರಮಕ್ಕೆ ವ್ಯಾಪಕ ಗಮನ ಸೆಳೆಯಿತು. ಮುದ್ರಣ ಮಾಧ್ಯಮದಲ್ಲಿ ಮಾತ್ರ, ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ಮಿಡ್‌ಡೇ, ಇಂಡಿಯನ್ ಎಕ್ಸ್‌ಪ್ರೆಸ್, ದಿ ಹಿಂದೂ ಮತ್ತು ಇನ್ನೂ ಅನೇಕ ಪ್ರಮುಖ ರಾಷ್ಟ್ರೀಯ ಪ್ರಕಟಣೆಗಳಲ್ಲಿ 500 ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಲಾಯಿತು. ಇದು ಫೆಸ್ಟಿವಲ್‌ ನ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಡಿಜಿಟಲ್ ಪ್ಲಾಟ್‌ ಫಾರ್ಮ್‌ ಗಳಲ್ಲಿ, ಬಾಲಿವುಡ್ ಹಂಗಾಮ, ಪಿಂಕ್‌ ವಿಲ್ಲಾ ಮತ್ತು ಲೈವ್‌ ಮಿಂಟ್ ಮತ್ತು ಎಕನಾಮಿಕ್ ಟೈಮ್ಸ್‌ ನಂತಹ ವ್ಯಾಪಾರ-ಕೇಂದ್ರಿತ ವೇದಿಕೆಗಳಂತಹ ಪ್ರಮುಖ ಮನರಂಜನಾ ವೆಬ್‌ ಸೈಟ್‌ ಗಳಲ್ಲಿ 600 ಕ್ಕೂ ಹೆಚ್ಚು ಆನ್‌ ಲೈನ್ ಲೇಖನಗಳನ್ನು ಪ್ರದರ್ಶಿಸಲಾಯಿತು. ಇದಲ್ಲದೆ, MyGov ಮೂಲಕ 45 ಸೋಷಿಯಲ್‌ ಮೀಡಿಯಾ ಪ್ರಭಾವಿಗಳನ್ನು ಸಂಪರ್ಕಿಸಿ, IFFI ನ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಇದರಿಂದ ವಿವಿಧ ಡಿಜಿಟಲ್ ಪ್ಲಾಟ್‌ ಫಾರ್ಮ್‌ ಗಳಲ್ಲಿ ಚಲನಚಿತ್ರೋತ್ಸವದ ಸುಂದರ ಕಂಪನವನ್ನು ಸೃಷ್ಟಿಸಲಾಯಿತು.

PIB ಔಟ್ರೀಚ್ 26 ವಿದೇಶಿ ದೇಶಗಳಿಗೆ ಇಂಗ್ಲಿಷ್ ಮತ್ತು ಆರು ವಿದೇಶಿ ಭಾಷೆಗಳಲ್ಲಿ ಅಧಿಕೃತ ಹ್ಯಾಂಡಲ್‌ ಗಳಿಂದ ವಿಷಯ ವಿತರಣೆಯನ್ನು ಸುಗಮಗೊಳಿಸಿದೆ. ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಮಾಡಲಾಯಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ, IFFI ಯು ವೈರೈಟಿ ಮತ್ತು ಸ್ಕ್ರೀನ್ ಇಂಟರ್ನ್ಯಾಷನಲ್ ನೊಂದಿಗೆ ಸಹಭಾಗಿಯಾಯಿತು, ಅವರ ಜಾಗತಿಕ ಚಂದಾದಾರರಿಗೆ ಮೂರು ಇ-ದೈನಿಕಗಳನ್ನು ಕಳುಹಿಸಿ, ಚಲನಚಿತ್ರೋತ್ಸವದ ಜಾಗತಿಕ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಿತು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …