गुरुवार, जनवरी 09 2025 | 08:21:29 AM
Breaking News
Home / अन्य समाचार / ಯಶಸ್ವಿಯಾಗಿ ಅನುಷ್ಠಾನಗೊಂಡ 3 ಹೊಸ ಕ್ರಿಮಿನಲ್ ಕಾನೂನುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಯಶಸ್ವಿಯಾಗಿ ಅನುಷ್ಠಾನಗೊಂಡ 3 ಹೊಸ ಕ್ರಿಮಿನಲ್ ಕಾನೂನುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

Follow us on:

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿಂದು 3 ಪರಿವರ್ತನೀಯ ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ 3 ಕಾನೂನುಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಸತ್ಯ ಮತ್ತು ನ್ಯಾಯ ಸ್ಥಾಪಿಸುವ ಶಕ್ತಿಯ ರೂಪವಾದ ಮಾತೆ ಚಂಡಿ ದೇವಿಗೆ ಚಂಡೀಗಢದ ಗುರುತು ಸಂಬಂಧಿಸಿದೆ, ಅದೇ ತತ್ವಶಾಸ್ತ್ರವು ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸಂಪೂರ್ಣ ಸ್ವರೂಪದ ಆಧಾರವಾಗಿದೆ. ಭಾರತ ಸಂವಿಧಾನದ ಸ್ಫೂರ್ತಿಯಿಂದ ಪ್ರೇರಿತವಾದ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬರುತ್ತಿರುವುದು ಒಂದು ಐತಿಹಾಸಿಕ ಕ್ಷಣವಾಗಿದ್ದು, ರಾಷ್ಟ್ರವು ವಿಕಸಿತ ಭಾರತ್ ಕಟ್ಟುವ ಸಂಕಲ್ಪದೊಂದಿಗೆ ಮುನ್ನಡೆಯುವ ಪ್ರಮುಖ ಘಟ್ಟದಲ್ಲಿದೆ. ಭಾರತೀಯ ಸಂವಿಧಾನ ಅಳವಡಿಸಿಕೊಂ 75 ವರ್ಷಗಳಲ್ಲಿ ನಮ್ಮ ಸಂವಿಧಾನವು ದೇಶದ ನಾಗರಿಕರಿಗೆ ಕಲ್ಪಿಸಿದ ಆದರ್ಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇದು ಸಂಕೀರ್ಣ ಪ್ರಯತ್ನವಾಗಿದೆ. ಅದರ ಲೈವ್ ಡೆಮೊ ಮೂಲಕ ಕಾನೂನುಗಳನ್ನು ಹೇಗೆ ಜಾರಿಗೊಳಿಸಬಹುದು ಎಂಬುದರ ಕುರಿತು ತನಗೆ ಒಂದು ನೋಟ ಸಿಕ್ಕಿದೆ. ಹಾಗಾಗಿ, ಕಾನೂನುಗಳ ಲೈವ್ ಡೆಮೊಗೆ ಭೇಟಿ ನೀಡುವಂತೆ ಪ್ರಧಾನಿ ಜನರನ್ನು ಒತ್ತಾಯಿಸಿದರು. 3 ಹೊಸ ಕ್ರಿಮಿನಲ್ ಕಾನೂನುಗಳ ಯಶಸ್ವಿ ಅನುಷ್ಠಾನದ ಸಂದರ್ಭದಲ್ಲಿ ಅವರು ಎಲ್ಲಾ ನಾಗರಿಕರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಚಂಡೀಗಢದ ಆಡಳಿತದ ಎಲ್ಲಾ ಪಾಲುದಾರರನ್ನು ಅವರು ಅಭಿನಂದಿಸಿದರು.

ದೇಶದ ಹೊಸ ನ್ಯಾಯ ಸಂಹಿತೆ ರೂಪಿಸುವ ಪ್ರಕ್ರಿಯೆಯು ದಾಖಲೆಯಂತೆಯೇ ಸಮಗ್ರವಾಗಿದೆ. ಇದು ರಾಷ್ಟ್ರದ ಅನೇಕ ಶ್ರೇಷ್ಠ ಸಂವಿಧಾನ ಮತ್ತು ಕಾನೂನು ತಜ್ಞರ ಕಠಿಣ ಪರಿಶ್ರಮವನ್ನು ಒಳಗೊಂಡಿದೆ. ಗೃಹ ವ್ಯವಹಾರಗಳ ಸಚಿವಾಲಯವು ಜನವರಿ 2020ರಲ್ಲಿ ಸಲಹೆ ಸೂಚನೆಗಳನ್ನು ಕೇಳಿತ್ತು. ದೇಶದ ಹಲವು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಬೆಂಬಲದೊಂದಿಗೆ ಸುಪ್ರೀಂ ಕೋರ್ಟ್‌ನ ಅನೇಕ ಮುಖ್ಯ ನ್ಯಾಯಮೂರ್ತಿಗಳ ಸಲಹೆಗಳನ್ನು ಇದರಲ್ಲಿ ಅಳವಡಿಸಿಲಾಗಿದೆ. ಸುಪ್ರೀಂ ಕೋರ್ಟ್, 16 ಹೈಕೋರ್ಟ್‌ಗಳು, ನ್ಯಾಯಾಂಗ ಅಕಾಡೆಮಿಗಳು, ಕಾನೂನು ಸಂಸ್ಥೆಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಅನೇಕ ಬುದ್ಧಿಜೀವಿಗಳು ಸೇರಿದಂತೆ ಅನೇಕ ಪಾಲುದಾರರು ಚರ್ಚೆಗಳು ಮತ್ತು ಸಂವಾದಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಹೊಸ ಸಂಹಿತೆಗಳಿಗೆ ತಮ್ಮ ಸಲಹೆ ಮತ್ತು ಆಲೋಚನೆಗಳನ್ನು ನೀಡಲು ವರ್ಷಗಳ ತಮ್ಮ ಅಪಾರ ಅನುಭವವನ್ನು ಬಳಸಿದ್ದಾರೆ ಎಂದರು. ಇಂದಿನ ಆಧುನಿಕ ಜಗತ್ತಿನಲ್ಲಿ ರಾಷ್ಟ್ರದ ಅಗತ್ಯತೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಸ್ವಾತಂತ್ರ್ಯ ಗಳಿಸಿದ 7 ದಶಕಗಳಲ್ಲಿ ನ್ಯಾಯಾಂಗ ವ್ಯವಸ್ಥೆಯು ಎದುರಿಸಿದ ಸವಾಲುಗಳ ಬಗ್ಗೆ ತೀವ್ರವಾದ ಚಿಂತನ-ಮಂಥನ ನಡೆದಿದೆ, ಪ್ರತಿಯೊಂದು ಕಾನೂನಿನ ಪ್ರಾಯೋಗಿಕ ಅಂಶವನ್ನು ನೋಡಲಾಗಿದೆ. ನ್ಯಾಯ ಸಂಹಿತೆಯ ಭವಿಷ್ಯದ ಅಂಶವನ್ನು ರೂಪಿಸಲು ಸಹ ಕೆಲಸ ಮಾಡಲಾಗಿದೆ. ಈ ಎಲ್ಲಾ ತೀವ್ರವಾದ ಪ್ರಯತ್ನಗಳು ನ್ಯಾಯ ಸಂಹಿತೆಯ ಪ್ರಸ್ತುತ ರೂಪವನ್ನು ನಮಗೆ ನೀಡಿವೆ. ಗೌರವಾನ್ವಿತ ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು – ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗಳು, ನಿರ್ದಿಷ್ಟವಾಗಿ ಮತ್ತು ಎಲ್ಲಾ ಗೌರವಾನ್ವಿತ ನ್ಯಾಯಾಧೀಶರು ಹೊಸ ನ್ಯಾಯ ಸಂಹಿತೆಯ ಕಡೆಗೆ ತಮ್ಮ ಸಂಘಟಿತ ಪ್ರಯತ್ನಗಳನ್ನು ನಡೆಸಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆ ಸಲ್ಲಬೇಕು. ಮುಂದೆ ಬಂದು ಅದರ ಜವಾಬ್ದಾರಿ ತೆಗೆದುಕೊಂಡ ಬಾರ್‌ ಕೌನ್ಸಿಲ್ ಗೆ ಧನ್ಯವಾದಗಳು ಸಲ್ಲಬೇಕು. ಪ್ರತಿಯೊಬ್ಬರ ಸಹಕಾರದೊಂದಿಗೆ ಭಾರತದ ಈ ನ್ಯಾಯ ಸಂಹಿತೆಯು ಭಾರತದ ನ್ಯಾಯಾಂಗ ಪಯಣದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ದಬ್ಬಾಳಿಕೆ ಮತ್ತು ಶೋಷಣೆಗಾಗಿ ಕ್ರಿಮಿನಲ್ ಕಾನೂನುಗಳನ್ನು ರೂಪಿಸಿದ್ದರು. 1857ರಲ್ಲಿ ದೇಶದ ಮೊದಲ ಪ್ರಮುಖ ಸ್ವಾತಂತ್ರ್ಯ ಹೋರಾಟದ ಪರಿಣಾಮವಾಗಿ 1860ರಲ್ಲಿ ಭಾರತೀಯ ದಂಡ ಸಂಹಿತೆ(ಐಪಿಸಿ)ಯನ್ನು ಪರಿಚಯಿಸಲಾಯಿತು. ಕೆಲವು ವರ್ಷಗಳ ನಂತರ, ಇಂಡಿಯನ್ ಎವಿಡೆನ್ಸ್ ಆಕ್ಟ್ ಪರಿಚಯಿಸಲಾಯಿತು ಮತ್ತು ನಂತರ ಸಿಆರ್ ಪಿಸಿಯ ಮೊದಲ ರಚನೆಯು ಅಸ್ತಿತ್ವಕ್ಕೆ ಬಂದಿತು. ಈ ಕಾನೂನುಗಳ ಕಲ್ಪನೆ ಮತ್ತು ಉದ್ದೇಶ ಭಾರತೀಯರನ್ನು ಶಿಕ್ಷಿಸುವುದು ಮತ್ತು ಅವರನ್ನು ಗುಲಾಮರನ್ನಾಗಿ ಮಾಡುವುದಾಗಿತ್ತು. ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ನಮ್ಮ ಕಾನೂನುಗಳು ಅದೇ ದಂಡ ಸಂಹಿತೆ ಮತ್ತು ದಂಡದ ಮನಸ್ಥಿತಿಯ ಸುತ್ತ ಸುತ್ತುತ್ತಿರುವುದು ವಿಷಾದನೀಯ. ಕಾಲ ಕಾಲಕ್ಕೆ ಕಾನೂನುಗಳಲ್ಲಿ ಬದಲಾವಣೆಗಳ ಹೊರತಾಗಿಯೂ, ಅದರ ಪಾತ್ರವು ಒಂದೇ ಆಗಿರುತ್ತದೆ. ಈ ಗುಲಾಮಗಿರಿ ಮನಸ್ಥಿತಿಯು ಭಾರತದ ಪ್ರಗತಿಯ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ದೇಶವು ಈಗ ಆ ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರಬೇಕು. ರಾಷ್ಟ್ರದ ಶಕ್ತಿಯನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಬೇಕು, ಇದು ರಾಷ್ಟ್ರೀಯ ಚಿಂತನೆಗೆ ಅಗತ್ಯವಿದೆ. ಗುಲಾಮಗಿರಿಯ ಮನಸ್ಥಿತಿ ತೊಡೆದುಹಾಕುವ ವಿಷಯ ಕುರಿತು  ಈ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಲಾಗಿತ್ತು. ಹೊಸ ನ್ಯಾಯ ಸಂಹಿತೆಗಳ ಅನುಷ್ಠಾನದೊಂದಿಗೆ, ಆ ದಿಕ್ಕಿನಲ್ಲಿ ದೇಶವು ಮತ್ತೊಂದು ಹೆಜ್ಜೆ ಮುಂದಿಟ್ಟಿದೆ ಎಂದು ಮೋದಿ ಹೇಳಿದರು. ನ್ಯಾಯ ಸಂಹಿತೆ ಪ್ರಜಾಪ್ರಭುತ್ವದ ಆಧಾರವಾಗಿರುವ ‘ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ’ ಎಂಬ ಮನೋಭಾವವನ್ನು ಬಲಪಡಿಸುತ್ತಿದೆ ಎಂದರು.

ಸಮಾನತೆ, ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗಳೊಂದಿಗೆ ನ್ಯಾಯ ಸಂಹಿತೆಯನ್ನು ಹೆಣೆಯಲಾಗಿದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದರೂ, ಪ್ರಾಯೋಗಿಕ ವಾಸ್ತವ ವಿಭಿನ್ನವಾಗಿದೆ. ಬಡವರು ಕಾನೂನುಗಳಿಗೆ ಹೆದರುತ್ತಾರೆ, ನ್ಯಾಯಾಲಯ ಅಥವಾ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಹೊಸ ನ್ಯಾಯ ಸಂಹಿತೆ ಸಮಾಜದ ಮನೋವಿಜ್ಞಾನವನ್ನು ಬದಲಾಯಿಸುವ ಕೆಲಸ ಮಾಡುತ್ತದೆ. ದೇಶದ ಕಾನೂನು ಸಮಾನತೆಯ ಭರವಸೆ ಎಂಬ ನಂಬಿಕೆ ಪ್ರತಿಯೊಬ್ಬ ಬಡವರಿಗೂ ಇರುತ್ತದೆ. ಇದು ನಮ್ಮ ಸಂವಿಧಾನದಲ್ಲಿ ಭರವಸೆ ನೀಡಿರುವ ನಿಜವಾದ ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸಿದೆ ಎಂದರು.

ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಪ್ರತಿ ಬಲಿಪಶುವಿನ ಬಗ್ಗೆ ಸಂವೇದನಾಶೀಲತೆ ಹೊಂದಿದೆ. ದೇಶದ ನಾಗರಿಕರು ಅದರ ವಿವರಗಳನ್ನು ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ. ಅದರ ಲೈವ್ ಡೆಮೊವನ್ನು ನೋಡುವಂತೆ  ಸಭೆಯನ್ನು ಒತ್ತಾಯಿಸಿದ ಮೋದಿ ಅವರು, ಇಂದು ಚಂಡೀಗಢದಲ್ಲಿ ತೋರಿಸಿರುವ ಲೈವ್ ಡೆಮೊವನ್ನು ಪ್ರತಿ ರಾಜ್ಯದ ಪೊಲೀಸರು ಪ್ರಚಾರ ಮಾಡಬೇಕು ಮತ್ತು ಪ್ರಸಾರ ಮಾಡಬೇಕು. ದೂರು ನೀಡಿದ 90 ದಿನಗಳ ಒಳಗಾಗಿ ಸಂತ್ರಸ್ತರಿಗೆ ಪ್ರಕರಣದ ಪ್ರಗತಿಯ ಬಗ್ಗೆ ಮಾಹಿತಿ ನೀಡಬೇಕಾದ ಕಾನೂನುಗಳು ಮತ್ತು ಈ ಮಾಹಿತಿಯು ನೇರವಾಗಿ ಅವರಿಗೆ ಎಸ್ಎಂಎಸ್  ನಂತಹ ಡಿಜಿಟಲ್ ಸೇವೆಗಳ ಮೂಲಕ ತಲುಪುತ್ತದೆ. ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ವ್ಯವಸ್ಥೆಯನ್ನು ರಚಿಸಲಾಗಿದೆ. ಕೆಲಸದ ಸ್ಥಳ, ಮನೆ ಮತ್ತು ಸಮಾಜದಲ್ಲಿ ಅವರ ಹಕ್ಕುಗಳು ಮತ್ತು ಸುರಕ್ಷತೆ ಸೇರಿದಂತೆ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರತ್ಯೇಕ ಅಧ್ಯಾಯವನ್ನು ಪರಿಚಯಿಸಲಾಗಿದೆ. ನ್ಯಾಯ ಸಂಹಿತೆಗಳು ಕಾನೂನು ಸಂತ್ರಸ್ತರ ಜೊತೆ ನಿಲ್ಲುವುದನ್ನು ಖಚಿತಪಡಿಸಲಾಗಿದೆ. ಮಹಿಳೆಯರ ವಿರುದ್ಧದ ಅತ್ಯಾಚಾರದಂತಹ ಘೋರ ಅಪರಾಧಗಳಲ್ಲಿ, ಮೊದಲ ವಿಚಾರಣೆಯಿಂದ 60 ದಿನಗಳಲ್ಲಿ ಆರೋಪಗಳನ್ನು ರೂಪಿಸಲಾಗುವುದು, ವಿಚಾರಣೆ ಮುಗಿದ 45 ದಿನಗಳಲ್ಲಿ ತೀರ್ಪು ಪ್ರಕಟಿಸುವುದನ್ನು ಕಡ್ಡಾಯಗೊಳಿಸಲಾಗಿದೆ, ಯಾವುದೇ ಸಂದರ್ಭದಲ್ಲಿ 2 ಬಾರಿ ಮುಂದೂಡಿಕೆಗೆ ಅವಕಾಶ ಇಲ್ಲ  ಎಂದು ಅವರು ಹೇಳಿದರು.

“ಸಿಟಿಜನ್ ಫಸ್ಟ್ ಎಂಬುದು ನ್ಯಾಯ ಸಂಹಿತೆಯ ಮೂಲ ಮಂತ್ರ” ಎಂದ ಮೋದಿ, ಈ ಕಾನೂನುಗಳು ನಾಗರಿಕ ಹಕ್ಕುಗಳ ರಕ್ಷಕ ಮತ್ತು ‘ಸುಲಭ ನ್ಯಾಯ’ದ ಆಧಾರವಾಗುತ್ತಿವೆ. ಈ ಹಿಂದೆ ಎಫ್‌ಐಆರ್ ದಾಖಲಿಸುವುದು ತುಂಬಾ ಕಷ್ಟಕರವಾಗಿತ್ತು, ಈಗ ಶೂನ್ಯ ಎಫ್‌ಐಆರ್ ಅನ್ನು ಕಾನೂನುಬದ್ಧಗೊಳಿಸಲಾಗಿದೆ, ಈಗ ಎಲ್ಲಿಂದಲಾದರೂ ಪ್ರಕರಣ ದಾಖಲಿಸಬಹುದು. ಸಂತ್ರಸ್ತೆಗೆ ಎಫ್‌ಐಆರ್ ಪ್ರತಿ ನೀಡುವ ಹಕ್ಕು ನೀಡಲಾಗಿದೆ, ಸಂತ್ರಸ್ತೆ ಒಪ್ಪಿಕೊಂಡಾಗ ಮಾತ್ರ ಆರೋಪಿಗಳ ವಿರುದ್ಧದ ಯಾವುದೇ ಪ್ರಕರಣ ಹಿಂಪಡೆಯಬಹುದಾಗಿದೆ. ಈಗ ಪೊಲೀಸರು ಯಾವುದೇ ವ್ಯಕ್ತಿಯನ್ನು ಸ್ವತಂತ್ರವಾಗಿ ಬಂಧಿಸಲು ಸಾಧ್ಯವಾಗುವುದಿಲ್ಲ ಮತ್ತು ಅವರ / ಅವಳ ಕುಟುಂಬ ಸದಸ್ಯರಿಗೆ ತಿಳಿಸುವುದನ್ನು ನ್ಯಾಯ ಸಂಹಿತೆಯಲ್ಲಿ ಕಡ್ಡಾಯಗೊಳಿಸಲಾಗಿದೆ. ಹೊಸ ನ್ಯಾಯ ಸಂಹಿತೆಯ ಇತರ ಪ್ರಮುಖ ಅಂಶಗಳಾದ ಮಾನವೀಯತೆ ಮತ್ತು ಸೂಕ್ಷ್ಮತೆಯನ್ನು ಎತ್ತಿ ಹಿಡಿದ ಮೋದಿ, ಈಗ ಆರೋಪಿಗಳನ್ನು ಶಿಕ್ಷೆಯಿಲ್ಲದೆ ಬಹಳ ದಿನ ಜೈಲಿನಲ್ಲಿ ಇಡಲು ಸಾಧ್ಯವಿಲ್ಲ, ಈಗ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗುವ ಅಪರಾಧ ಪ್ರಕರಣದಲ್ಲಿ ಬಂಧನವನ್ನು  ಉನ್ನತ ಅಧಿಕಾರದ ಒಪ್ಪಿಗೆಯೊಂದಿಗೆ ಮಾತ್ರ ಮಾಡಬಹುದು. ಸಣ್ಣ ಅಪರಾಧಗಳಿಗೂ ಕಡ್ಡಾಯ ಜಾಮೀನು ಒದಗಿಸಲಾಗಿದೆ. ಸಾಮಾನ್ಯ ಅಪರಾಧಗಳಲ್ಲಿ, ಶಿಕ್ಷೆಯ ಸ್ಥಳದಲ್ಲಿ ಸಮುದಾಯ ಸೇವೆಯ ಆಯ್ಕೆಯನ್ನು ಸಹ ಇರಿಸಲಾಗಿದೆ. ಇದರಿಂದ ಆರೋಪಿಗಳಿಗೆ ಸಮಾಜದ ಹಿತದೃಷ್ಟಿಯಿಂದ ಸಕಾರಾತ್ಮಕವಾಗಿ ಮುನ್ನಡೆಯಲು ಹೊಸ ಅವಕಾಶಗಳು ಸಿಗಲಿವೆ ಎಂದರು. ಹೊಸ ನ್ಯಾಯ ಸಂಹಿತೆಯು ಮೊದಲ ಬಾರಿ ಅಪರಾಧಿಗಳ ಬಗ್ಗೆ ಬಹಳ ಸಂವೇದನಾಶೀಲವಾಗಿದೆ ಮತ್ತು ನ್ಯಾಯ ಸಂಹಿತೆಯ ಅನುಷ್ಠಾನದ ನಂತರ, ಅಂತಹ ಸಾವಿರಾರು ಕೈದಿಗಳನ್ನು ಜೈಲುಗಳಿಂದ ಬಿಡುಗಡೆ ಮಾಡಲಾಗಿದೆ, ಅವರು ಹಳೆಯ ಕಾನೂನುಗಳಿಂದ ಜೈಲುವಾಸ ಅನುಭವಿಸಿದ್ದರು. ಹೊಸ ನ್ಯಾಯ ಸಂಹಿತೆಗಳು ನಾಗರಿಕ ಹಕ್ಕುಗಳ ಸಬಲೀಕರಣವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಮೋದಿ ಹೇಳಿದರು.

ನ್ಯಾಯದ ಮೊದಲ ಮಾನದಂಡವೆಂದರೆ, ಸಕಾಲಿಕ ನ್ಯಾಯವಾಗಿದೆ. ಹೊಸ ನ್ಯಾಯ ಸಂಹಿತೆ ಪರಿಚಯಿಸುವ ಮೂಲಕ ದೇಶವು ತ್ವರಿತ ನ್ಯಾಯದತ್ತ ದೊಡ್ಡ ಜಿಗಿತ ಕಂಡಿದೆ. ಯಾವುದೇ ಪ್ರಕರಣದಲ್ಲಿ ಪ್ರತಿ ಹಂತವನ್ನು ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಿ ನ್ಯಾಯ ಸಂಹಿತೆಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಮತ್ತು ತ್ವರಿತವಾಗಿ ತೀರ್ಪು ನೀಡಲು ಆದ್ಯತೆ ನೀಡಲಾಗಿದೆ. ಹೊಸದಾಗಿ ಜಾರಿಗೆ ತಂದಿರುವ ನ್ಯಾಯ ಸಂಹಿತೆ ಪ್ರಬುದ್ಧವಾಗಲು ಸಮಯ ಬೇಕಾಗುತ್ತದೆ. ಇಷ್ಟು ಕಡಿಮೆ ಅವಧಿಯಲ್ಲಿ ದೇಶದ ವಿವಿಧ ಭಾಗಗಳಿಂದ ಪಡೆದ ಫಲಿತಾಂಶಗಳು ಹೆಚ್ಚು ತೃಪ್ತಿದಾಯಕವಾಗಿವೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ವಾಹನ ಕಳವು ಪ್ರಕರಣವನ್ನು ಕೇವಲ 2 ತಿಂಗಳು ಮತ್ತು 11 ದಿನಗಳಲ್ಲಿ ಪೂರ್ಣಗೊಳಿಸಿದ ಚಂಡೀಗಢದ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಒಂದು ಪ್ರದೇಶದಲ್ಲಿ ಅಶಾಂತಿ ಹರಡಿದ ಪ್ರಕರಣದಲ್ಲಿ ಆರೋಪಿಗೆ ಕೇವಲ 20 ದಿನಗಳಲ್ಲಿ ಸಂಪೂರ್ಣ ವಿಚಾರಣೆಯ ನಂತರ ನ್ಯಾಯಾಲಯವು ಶಿಕ್ಷೆ ವಿಧಿಸಿತು. ದೆಹಲಿ ಮತ್ತು ಬಿಹಾರದಲ್ಲಿ ತ್ವರಿತ ನ್ಯಾಯದ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಈ ತ್ವರಿತ ತೀರ್ಪುಗಳು ಭಾರತೀಯ ನ್ಯಾಯ ಸಂಹಿತೆಯ ಶಕ್ತಿ ಮತ್ತು ಪರಿಣಾಮವನ್ನು ತೋರಿಸುತ್ತವೆ. ಸಾಮಾನ್ಯ ನಾಗರಿಕರ ಹಿತಾಸಕ್ತಿಗಳಿಗೆ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಮೀಸಲಾದ ಸರ್ಕಾರವಿದ್ದಾಗ ಬದಲಾವಣೆಗಳು ಮತ್ತು ಫಲಿತಾಂಶಗಳನ್ನು ಪಡೆಯಬಹುದು ಎಂಬುದನ್ನು ಈ ಬದಲಾವಣೆಯು ತೋರಿಸಿದೆ. ಈ ತೀರ್ಪುಗಳನ್ನು ದೇಶದಲ್ಲಿ ಸಾಧ್ಯವಾದಷ್ಟು ಚರ್ಚಿಸಬೇಕು. ಇದರಿಂದಾಗಿ ಪ್ರತಿಯೊಬ್ಬ ಭಾರತೀಯನು ನ್ಯಾಯಕ್ಕಾಗಿ ತನ್ನ ಶಕ್ತಿ ಹೇಗೆ ಹೆಚ್ಚಿದೆ ಎಂಬುದನ್ನು ತಿಳಿದುಕೊಳ್ಳುತ್ತಾನೆ. ಇದು ಹಳೆಯ ಮತ್ತು ಅಸ್ತಿತ್ವದಲ್ಲಿಲ್ಲದ ವಿಳಂಬ ನ್ಯಾಯ ವ್ಯವಸ್ಥೆಯ ಬಗ್ಗೆ ಅಪರಾಧಿಗಳಿಗೆ ಎಚ್ಚರಿಕೆ ನೀಡುತ್ತದೆ ಎಂದರು.

“ನಿಯಮಗಳು ಮತ್ತು ಕಾನೂನುಗಳು ಸಮಯಕ್ಕೆ ಪ್ರಸ್ತುತವಾದಾಗ ಮಾತ್ರ ಅವು ಪರಿಣಾಮಕಾರಿಯಾಗುತ್ತವೆ”. ಇಂದು ಅಪರಾಧ ಮತ್ತು ಅಪರಾಧಿಗಳ ವಿಧಾನಗಳು ಬದಲಾಗಿವೆ, ಹಾಗಾಗಿ, ಆಧುನಿಕವಾದ ಹೊಸ ಕಾನೂನುಗಳನ್ನು ಪರಿಚಯಿಸುವ ಅವಶ್ಯಕತೆಯಿದೆ. ಡಿಜಿಟಲ್ ಸಾಕ್ಷ್ಯವನ್ನು ಪ್ರಮುಖ ಪುರಾವೆಯಾಗಿ ಇರಿಸಬಹುದು ಮತ್ತು ತನಿಖೆಯ ಸಮಯದಲ್ಲಿ ಸಾಕ್ಷ್ಯವನ್ನು ಹಾಳು ಮಾಡದಂತೆ ಖಚಿತಪಡಿಸಿಕೊಳ್ಳಲು ಸಂಪೂರ್ಣ ಪ್ರಕ್ರಿಯೆಯ ವೀಡಿಯೊಗ್ರಫಿ ಕಡ್ಡಾಯಗೊಳಿಸಲಾಗಿದೆ. ಇ-ಸಕ್ಷಾ,ನ್ಯಾಯ ಶ್ರುತಿ, ಇ-ನ್ಯಾಯ್ ಸೇತು  ಮುಂತಾದ ಉಪಯುಕ್ತ ಸಾಧನಗಳನ್ನು ಪ್ರಸ್ತಾಪಿಸಿದರು. ಹೊಸ ಕಾನೂನುಗಳನ್ನು ಜಾರಿಗೆ ತರಲು ಸಮ್ಮನ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಈಗ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನ್ಯಾಯಾಲಯ ಮತ್ತು ಪೊಲೀಸರು ನೇರವಾಗಿ ಫೋನ್‌ನಲ್ಲಿ ಸಮನ್ಸ್ ಗಳನ್ನು ಸಲ್ಲಿಸಬಹುದು. ಸಾಕ್ಷಿ ಹೇಳಿಕೆಗಳ ಆಡಿಯೊ-ವಿಡಿಯೊ ರೆಕಾರ್ಡಿಂಗ್ ಕೂಡ ಮಾಡಬಹುದು. ಡಿಜಿಟಲ್ ಸಾಕ್ಷ್ಯಗಳು ಈಗ ನ್ಯಾಯಾಲಯದಲ್ಲಿ ಮಾನ್ಯವಾಗಿರುತ್ತವೆ ಎಂದ ಮೋದಿ, ಇದು ನ್ಯಾಯದ ಆಧಾರವಾಗುತ್ತದೆ ಮತ್ತು ಅಪರಾಧಿಯನ್ನು ಹಿಡಿಯುವವರೆಗೆ ಅನಗತ್ಯ ಸಮಯ ವ್ಯರ್ಥವನ್ನು ತಡೆಯುತ್ತದೆ. ಈ ಎಲ್ಲಾ ಬದಲಾವಣೆಗಳು ದೇಶದ ಭದ್ರತೆಗೆ ಸಮಾನವಾಗಿ ಪ್ರಮುಖವಾಗಿವೆ. ಡಿಜಿಟಲ್ ಸಾಕ್ಷ್ಯ ಮತ್ತು ತಂತ್ರಜ್ಞಾನದ ಏಕೀಕರಣವು ಭಯೋತ್ಪಾದನೆಯ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ. ಹೊಸ ಕಾನೂನುಗಳ ಅಡಿ, ಕಾನೂನಿನ ಸಂಕೀರ್ಣತೆಯ ಲಾಭವನ್ನು ಭಯೋತ್ಪಾದಕರು ಅಥವಾ ಭಯೋತ್ಪಾದಕ ಸಂಘಟನೆಗಳು ಪಡೆಯಲು ಸಾಧ್ಯವಾಗುವುದಿಲ್ಲ ಎಂದರು.

ಹೊಸ ನ್ಯಾಯ ಸಂಹಿತೆಗಳು ಪ್ರತಿಯೊಂದು ಇಲಾಖೆಯ ಉತ್ಪಾದಕತೆ ಹೆಚ್ಚಿಸುತ್ತವೆ, ದೇಶದ ಪ್ರಗತಿಯನ್ನು ವೇಗಗೊಳಿಸುತ್ತವೆ. ಕಾನೂನು ಅಡಚಣೆಗಳಿಂದ ಉಲ್ಬಣಗೊಂಡ ಭ್ರಷ್ಟಾಚಾರವನ್ನು ನಿಗ್ರಹಿಸಲು ಇದು ಸಹಾಯ ಮಾಡುತ್ತದೆ. ದೀರ್ಘ ಮತ್ತು ವಿಳಂಬ ನ್ಯಾಯದ ಭಯದಿಂದಾಗಿ ಹೆಚ್ಚಿನ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ. ಈ ಭಯ ಕೊನೆಗೊಂಡಾಗ ಹೂಡಿಕೆಗಳು ಹೆಚ್ಚಾಗುತ್ತವೆ, ಆ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದರು.

ದೇಶದ ಕಾನೂನು ಇರುವುದು ನಾಗರಿಕರಿಗಾಗಿ. ಆದ್ದರಿಂದ ಕಾನೂನು ಪ್ರಕ್ರಿಯೆಗಳು ಸಾರ್ವಜನಿಕರ ಅನುಕೂಲಕ್ಕಾಗಿಯೂ ಇರಬೇಕು. ಪ್ರಾಮಾಣಿಕ ಜನರ ವಿರುದ್ಧ ಅಪರಾಧಿಗಳಿಗೆ ಕಾನೂನಿನ ಭಯ ಇರಬೇಕು ಎಂದ ಮೋದಿ, ಹೊಸ ನ್ಯಾಯ ಸಂಹಿತೆಗಳು ಜನರನ್ನು ಅಂತಹ ತೊಂದರೆಗಳಿಂದ ಮುಕ್ತಗೊಳಿಸಿವೆ. ಬ್ರಿಟಿಷ್ ಆಳ್ವಿಕೆಯ 1500ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ಸರ್ಕಾರ ರದ್ದುಗೊಳಿಸಿದೆ ಎಂದರು.

ನಮ್ಮ ದೇಶದಲ್ಲಿ ಕಾನೂನು ನಾಗರಿಕರ ಸಬಲೀಕರಣದ ಮಾಧ್ಯಮವಾಗಲು ನಮ್ಮ ದೃಷ್ಟಿಕೋನವನ್ನು ವಿಸ್ತರಿಸುವ ಅವಶ್ಯಕತೆಯಿದೆ. ಚರ್ಚೆಗಳು ಮತ್ತು ಸಂವಾದಗಳ ಕೊರತೆಯಿರುವ ಅನೇಕ ಕಾನೂನುಗಳಿವೆ. ಸಂವಿಧಾನ ವಿಧಿ 370 ರದ್ದತಿ ಮತ್ತು ತ್ರಿವಳಿ ತಲಾಖ್‌ನ ಉದಾಹರಣೆ ಉಲ್ಲೇಖಿಸಿದ ಮೋದಿ, ಅದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಈ ದಿನಗಳಲ್ಲಿ ವಕ್ಫ್ ಮಂಡಳಿಗೆ ಸಂಬಂಧಿಸಿದ ಕಾನೂನು ಕೂಡ ಚರ್ಚೆಯಾಗುತ್ತಿದೆ. ನಾಗರಿಕರ ಘನತೆ ಮತ್ತು ಆತ್ಮಗೌರವ ಹೆಚ್ಚಿಸುವ ಉದ್ದೇಶದಿಂದ ರಚಿಸಲಾದ ಕಾನೂನುಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡುವ ಅವಶ್ಯಕತೆಯಿದೆ. ವಿಕಲಚೇತನರ ಹಕ್ಕುಗಳ ಕಾಯಿದೆ, 2016ರ ಅನುಷ್ಠಾನದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಇದು ದಿವ್ಯಾಂಗರನ್ನು ಸಬಲೀಕರಣಗೊಳಿಸುವುದಲ್ಲದೆ, ಸಮಾಜವನ್ನು ಹೆಚ್ಚು ಒಳಗೊಳ್ಳುವ ಮತ್ತು ಸಂವೇದನಾಶೀಲವಾಗಿಸುವ ಅಭಿಯಾನವಾಗಿದೆ. ನಾರಿ ಶಕ್ತಿ ವಂದನ್ ಕಾಯ್ದೆಯು ಇದೇ ರೀತಿಯ ದೊಡ್ಡ ಬದಲಾವಣೆಗೆ ಅಡಿಪಾಯ ಹಾಕಲಿದೆ. ಅದೇ ರೀತಿ ತೃತೀಯ ಲಿಂಗಿಗಳಿಗೆ ಸಂಬಂಧಿಸಿದ ಕಾನೂನುಗಳು, ಮಧ್ಯಸ್ಥಿಕೆ ಕಾಯಿದೆ, ಜಿಎಸ್‌ಟಿ ಕಾಯ್ದೆಗಳನ್ನು ರೂಪಿಸಲಾಗಿದ್ದು, ಇವುಗಳ ಬಗ್ಗೆ ಸಕಾರಾತ್ಮಕ ಚರ್ಚೆಗಳು ಅಗತ್ಯವಾಗಿವೆ ಎಂದರು.

“ಯಾವುದೇ ದೇಶದ ಶಕ್ತಿ ಅದರ ಪ್ರಜೆಗಳಾಗಿರುತ್ತಾರೆ, ಮತ್ತು ದೇಶದ ಕಾನೂನು ನಾಗರಿಕರ ಶಕ್ತಿ”. ಇದು ಜನರನ್ನು ಕಾನೂನು ಪಾಲಿಸುವಂತೆ ಉತ್ತೇಜಿಸುತ್ತದೆ ಮತ್ತು ಕಾನೂನಿನ ಬಗ್ಗೆ ನಾಗರಿಕರ ಈ ನಿಷ್ಠೆಯು ರಾಷ್ಟ್ರದ ದೊಡ್ಡ ಆಸ್ತಿಯಾಗಿದೆ. ನಾಗರಿಕರ ನಂಬಿಕೆಗೆ ಚ್ಯುತಿ ಬರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನ್ಯಾಯ ಸಂಹಿತೆಯ ಹೊಸ ನಿಬಂಧನೆಗಳನ್ನು ತಿಳಿದುಕೊಳ್ಳಲು ಮತ್ತು ಅವರ ಆತ್ಮವನ್ನು ಅರ್ಥ ಮಾಡಿಕೊಳ್ಳುವಂತೆ ಪ್ರತಿ ಇಲಾಖೆ, ಪ್ರತಿ ಏಜೆನ್ಸಿ, ಪ್ರತಿ ಅಧಿಕಾರಿ ಮತ್ತು ಪ್ರತಿ ಪೋಲೀಸರನ್ನು ಮೋದಿ ಒತ್ತಾಯಿಸಿದರು. ನ್ಯಾಯ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು ಸಕ್ರಿಯವಾಗಿ ಕೆಲಸ ಮಾಡಬೇಕು. ಇದರಿಂದಾಗಿ ಅವುಗಳ ಪರಿಣಾಮವು ನೆಲದ ಮೇಲೆ ಗೋಚರಿಸುತ್ತದೆ. ಈ ಹೊಸ ಹಕ್ಕುಗಳ ಬಗ್ಗೆ ನಾಗರಿಕರು ಸಾಧ್ಯವಾದಷ್ಟು ಜಾಗೃತರಾಗಬೇಕು. ಇದಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆಯಿದೆ. ನ್ಯಾಯ ಸಂಹಿತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ, ನಾವು ದೇಶಕ್ಕೆ ಉತ್ತಮ ಮತ್ತು ಉಜ್ವಲ ಭವಿಷ್ಯ ನೀಡಲು ಸಾಧ್ಯವಾಗುತ್ತದೆ, ಅದು ನಮ್ಮ ಮಕ್ಕಳ ಜೀವನವನ್ನು ನಿರ್ಧರಿಸುತ್ತದೆ, ನಮ್ಮ ಸೇವೆಯ ತೃಪ್ತಿಯನ್ನು ನಿರ್ಧರಿಸುತ್ತದೆ. ನಾವೆಲ್ಲರೂ ಈ ದಿಶೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಪಾತ್ರವನ್ನು ಹೆಚ್ಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಪಂಜಾಬ್‌ ರಾಜ್ಯಪಾಲ ಮತ್ತು ಚಂಡೀಗಢದ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಶ್ರೀ ಗುಲಾಬ್ ಚಂದ್ ಕಟಾರಿಯಾ, ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಮತ್ತು ರಾಜ್ಯಸಭಾ ಸಂಸದ ಶ್ರೀ ಸತ್ನಾಮ್ ಸಿಂಗ್ ಸಂಧು ಹಾಗೂ ಇತರೆ ಗಣ್ಯರು  ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ನರೇಂದ್ರ ಅವರು ಇಂದು ಚಂಡೀಗಢದಲ್ಲಿ 3 ಪರಿವರ್ತನೀಯ ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ 3 ಕಾನೂನುಗಳು ಯಶಸ್ವೀ ಅನುಷ್ಠಾನವಾಗಿವೆ.

3 ಕಾನೂನುಗಳ ಪರಿಕಲ್ಪನೆಯು ಸ್ವಾತಂತ್ರ್ಯದ ನಂತರ ಅಸ್ತಿತ್ವದಲ್ಲಿದ್ದ ವಸಾಹತುಶಾಹಿ ಯುಗದ ಕಾನೂನುಗಳನ್ನು ತೆಗೆದುಹಾಕುವ ಮತ್ತು ಶಿಕ್ಷೆಯಿಂದ ನ್ಯಾಯದ ಕಡೆಗೆ ಗಮನ ಬದಲಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಪರಿವರ್ತಿಸುವ ಪ್ರಧಾನ ಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು, ಈ ಕಾರ್ಯಕ್ರಮದ ವಸ್ತು ವಿಷಯ(ಥೀಮ್) “ಸುರಕ್ಷಿತ ಸಮಾಜ, ಅಭಿವೃದ್ಧಿ ಹೊಂದಿದ ಭಾರತ – ಶಿಕ್ಷೆಯಿಂದ ನ್ಯಾಯದ ಕಡೆಗೆ” ಎಂಬುದಾಗಿದೆ.

ಜುಲೈ 1, 2024ರಂದು ರಾಷ್ಟ್ರವ್ಯಾಪಿ ಜಾರಿಗೆ ತಂದ ಹೊಸ ಕ್ರಿಮಿನಲ್ ಕಾನೂನುಗಳು, ಭಾರತದ ಕಾನೂನು ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ಪರಿಣಾಮಕಾರಿ ಮತ್ತು ಸಮಕಾಲೀನ ಸಮಾಜದ ಅಗತ್ಯಗಳಿಗೆ ಹೊಂದಿಕೊಳ್ಳುವ ಗುರಿ ಹೊಂದಿದೆ. ಈ ಮಹತ್ವಾಕಾಂಕ್ಷಿ ಸುಧಾರಣೆಗಳು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಐತಿಹಾಸಿಕ ಕೂಲಂಕುಷ ಪರೀಕ್ಷೆಯನ್ನು ಗುರುತಿಸುತ್ತವೆ. ಸೈಬರ್ ಅಪರಾಧ, ಸಂಘಟಿತ ಅಪರಾಧ ಮತ್ತು ವಿವಿಧ ಅಪರಾಧಗಳ ಸಂತ್ರಸ್ಥರಿಗೆ ನ್ಯಾಯ ಖಾತ್ರಿಪಡಿಸುವಂತಹ ಆಧುನಿಕ-ದಿನದ ಸವಾಲುಗಳನ್ನು ನಿಭಾಯಿಸಲು ಹೊಸ ಮಾರ್ಗಸೂಚಿಗಳನ್ನು ತರುತ್ತವೆ.

ಕಾರ್ಯಕ್ರಮವು ಈ ಕಾನೂನುಗಳ ಪ್ರಾಯೋಗಿಕ ಅನ್ವಯವನ್ನು ಪ್ರದರ್ಶಿಸಿತು. ಅವು ಈಗಾಗಲೇ ಅಪರಾಧ ನ್ಯಾಯದ ಭೂದೃಶ್ಯವನ್ನು ಹೇಗೆ ಮರುರೂಪಿಸುತ್ತಿವೆ ಎಂಬುದನ್ನು ತೋರಿಸುತ್ತವೆ. ಹೊಸ ಕಾನೂನುಗಳನ್ನು ಜಾರಿಗೆ ತಂದ ಅಪರಾಧದ ದೃಶ್ಯ ತನಿಖೆಯನ್ನು ಅನುಕರಿಸುವ ಲೈವ್ ಡೆಮೊ(ನೇರ ಪ್ರದರ್ಶನ)ವನ್ನು ಸಹ ನಡೆಸಲಾಯಿತು.

मित्रों,
मातृभूमि समाचार का उद्देश्य मीडिया जगत का ऐसा उपकरण बनाना है, जिसके माध्यम से हम व्यवसायिक मीडिया जगत और पत्रकारिता के सिद्धांतों में समन्वय स्थापित कर सकें। इस उद्देश्य की पूर्ति के लिए हमें आपका सहयोग चाहिए है। कृपया इस हेतु हमें दान देकर सहयोग प्रदान करने की कृपा करें। हमें दान करने के लिए निम्न लिंक पर क्लिक करें -- Click Here


* 1 माह के लिए Rs 1000.00 / 1 वर्ष के लिए Rs 10,000.00

Contact us

Check Also

ઇન્સ્ટિટ્યૂટ ઓફ એરોસ્પેસ મેડિસિન ઇન્ડિયન સોસાયટી ઓફ એરોસ્પેસ મેડિસિન (આઇએસએએમ)ની 63મી વાર્ષિક પરિષદનું આયોજન કરશે

ઇન્ડિયન સોસાયટી ઓફ એરોસ્પેસ મેડિસિન (આઇએસએએમ) 05થી 07 ડિસેમ્બર 2024 દરમિયાન ઇન્સ્ટિટ્યૂટ ઓફ એરોસ્પેસ મેડિસિન (આઇએએમ), …