ಮುಂದಿನ ವರ್ಷ ಜನವರಿ 11 ಮತ್ತು 12 ರಂದು ರಾಷ್ಟ್ರೀಯ ಯುವಜನೋತ್ಸವದಲ್ಲಿ ‘ವಿಕಸಿತ ಭಾರತ್ ಯುವ ನಾಯಕರ ಸಂವಾದ’ ನಡೆಯಲಿದೆ ಎಂದು ಕೇಂದ್ರ ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಈ ವಾರದ ಆರಂಭದಲ್ಲಿ ಘೋಷಿಸಿದರು. ಎರಡು ದಿನಗಳ ಕಾರ್ಯಕ್ರಮದಲ್ಲಿ, ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಧಾನಿಯ ಭಾರತ ಮಂಟಪದಲ್ಲಿ 3000 ಯುವ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಭಾರತದ ಗೌರವಾನ್ವಿತ ಪ್ರಧಾನಮಂತ್ರಿಯವರ ದೂರದೃಷ್ಟಿಯು ದೇಶದಲ್ಲಿ ಕನಿಷ್ಠ 1 ಲಕ್ಷ ಯುವ ನಾಯಕರನ್ನು ಅಭಿವೃದ್ಧಿಪಡಿಸುವುದಾಗಿದೆ. ವೇದಿಕೆಯು ನಾಯಕತ್ವದ ಪ್ರತಿಭೆ, ಯುವಕರ ಅಗತ್ಯತೆಗಳ ಒಂದು ನೋಟವನ್ನು ಒದಗಿಸುತ್ತದೆ ಮತ್ತು ‘ವಿಕಸಿತ ಭಾರತ್’ ಗುರಿಯತ್ತ ಕೊಡುಗೆ ನೀಡುವಲ್ಲಿ ಅವರ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ವ್ಯಾಖ್ಯಾನಿಸುತ್ತದೆ.
ಯುವ ನಾಯಕರ ಸಂವಾದದ ಮುಖ್ಯ ಉದ್ದೇಶಗಳನ್ನು ವಿವರಿಸಿದ ಡಾ. ಮನ್ಸುಖ್ ಮಾಂಡವಿಯಾ, “ಉತ್ಸವದ ಉದ್ದೇಶವು ಯುವ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಪೋಷಿಸುವುದು, ವಿಕಸಿತ ಭಾರತಕ್ಕಾಗಿ ಅವರ ಆಲೋಚನೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವುದು. ಪ್ರಧಾನಮಂತ್ರಿಯವರೊಂದಿಗೆ ನೇರವಾಗಿ ಸಂವಹನ ನಡೆಸಲು ಮತ್ತು ಭಾರತದ ಭವಿಷ್ಯಕ್ಕಾಗಿ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಇದು ಯುವಜನರಿಗೆ ಪ್ರಮುಖ ಆಕರ್ಷಣೆಯಾಗಿದೆ. ಇದು ರಾಜಕೀಯ ಮತ್ತು ನಾಗರಿಕ ಜೀವನದಲ್ಲಿ ಯುವಜನರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ” ಎಂದು ಹೇಳಿದರು.
ಭಾರತ ಮಂಟಪದಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುವ ವಿಕಸಿತ ಭಾರತ್ ಚಾಲೆಂಜ್ ನಲ್ಲಿ ಭಾಗವಹಿಸಲು ಭಾರತದಾದ್ಯಂತ ಕನಿಷ್ಠ 1 ಕೋಟಿ ಯುವಜನರನ್ನು (15-29 ವರ್ಷ ವಯಸ್ಸಿನವರು) ತೊಡಗಿಸಿಕೊಳ್ಳುವ ಗುರಿಯನ್ನು ಡಾ. ಮಾಂಡವೀಯ ನಿಗದಿಪಡಿಸಿದ್ದಾರೆ.
ವಿಕಸಿತ ಭಾರತ್ ಚಾಲೆಂಜ್ ಅಖಿಲ ಭಾರತ ಡಿಜಿಟಲ್ ರಸಪ್ರಶ್ನೆ ಸ್ಪರ್ಧೆಯ ಮೊದಲ ಸುತ್ತನ್ನು 25 ನವೆಂಬರ್ 2024 ಮತ್ತು 5 ಡಿಸೆಂಬರ್ 2024ರ ನಡುವೆ ನಿಗದಿಪಡಿಸಲಾಗಿದೆ. ಮೇರಾ ಯುವ ಭಾರತ್ (MY Bharat) ವೇದಿಕೆಯಲ್ಲಿ ಆಯೋಜಿಸಲಾದ ರಸಪ್ರಶ್ನೆ ಸ್ಪರ್ಧೆಯಲ್ಲಿ 15 ರಿಂದ 29 ವರ್ಷ ವಯಸ್ಸಿನ ವ್ಯಕ್ತಿಗಳು ಭಾಗವಹಿಸಬಹುದು. ಇದು ಭಾರತದ ಐತಿಹಾಸಿಕ ಸಾಧನೆಗಳ ಬಗ್ಗೆ ಭಾಗವಹಿಸುವವರ ಜ್ಞಾನ ಮತ್ತು ಅರಿವನ್ನು ಪರೀಕ್ಷಿಸುತ್ತದೆ.
ರಸಪ್ರಶ್ನೆ ಸ್ಪರ್ಧೆಯ ವಿಜೇತರು ತರುವಾಯ ಪ್ರಬಂಧ/ಬ್ಲಾಗ್ ಬರವಣಿಗೆ ಸ್ಪರ್ಧೆ, ರಾಜ್ಯ ಮಟ್ಟದ ‘ವಿಕಸಿತ ಭಾರತ್ ದೃಷ್ಟಿ’ ಪ್ರಸ್ತುತಿ ಮತ್ತು ಅಂತಿಮವಾಗಿ, ಭಾರತ ಮಂಟಪದಲ್ಲಿ ರಾಜ್ಯ ಮಟ್ಟದ ವಿಜೇತರ ರಾಷ್ಟ್ರೀಯ ಚಾಂಪಿಯನ್‌ಶಿಪ್ ರೂಪದಲ್ಲಿ ಇನ್ನೂ ಮೂರು ಸುತ್ತುಗಳ ಮೂಲಕ ಹೋಗುತ್ತಾರೆ.
ವಿಕಸಿತ ಭಾರತ್ ಯುವ ನಾಯಕರ ಸಂವಾದ – ರಾಷ್ಟ್ರೀಯ ಯುವಜನೋತ್ಸವ 2025 ಮೂರು ವಿಭಿನ್ನ ವಲಯಗಳಿಂದ ಆಯ್ಕೆಯಾದ ಯುವಜನರ ರೋಮಾಂಚಕ ಕೂಟವನ್ನು ಆಯೋಜಿಸುತ್ತದೆ. ಮೊದಲ ಗುಂಪಿನಲ್ಲಿ ಹೊಸದಾಗಿ ಘೋಷಿಸಲಾದ ವಿಕಸಿತ ಭಾರತ ಚಾಲೆಂಜ್ ನಲ್ಲಿ ಭಾಗವಹಿಸುವವರು ಸೇರಿದ್ದಾರೆ.
ಎರಡನೇ ಗುಂಪಿನಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಯುವಜನ ಮೇಳಗಳಿಂದ ಹೊರಬರುವ ಯುವಕರು ಚಿತ್ರಕಲೆ, ವಿಜ್ಞಾನ ಪ್ರದರ್ಶನಗಳು, ಸಾಂಸ್ಕೃತಿಕ ಪ್ರದರ್ಶನಗಳು, ಘೋಷಣೆಗಳು ಮುಂತಾದ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಾರೆ. ಮೂರನೇ ಗುಂಪು ಉದ್ಯಮ, ಕ್ರೀಡೆ, ಕೃಷಿ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಯುವ ಐಕಾನ್ ಗಳನ್ನು ಒಳಗೊಂಡಿರುತ್ತದೆ.
ಈ ನಿಟ್ಟಿನಲ್ಲಿ ದಿನಾಂಕ 22.11.20 ರಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಶ್ರೀಮತಿ ಅಶ್ವನಿ ಅಕ್ಕುಂಜಿ, ಏಕಲವ್ಯ ಪ್ರಶಸ್ತಿ ವಿಜೇತೆ ಶ್ರೀಮತಿ ರಾಧಾ ಮತ್ತು ಪ್ಯಾರಾಲಿಂಪಿಯನ್ ಶ್ರೀಮತಿ ರಕ್ಷಿತಾ ರಾಜು ಅವರು ರಾಷ್ಟ್ರೀಯ ಹಂತಕ್ಕೆ ಮುನ್ನಡೆಸುವ ರಸಪ್ರಶ್ನೆ, ಪ್ರಬಂಧ ಪ್ರಸ್ತುತಿಗಳಂತಹ ವಿವಿಧ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರ್ನಾಟಕದ ಯುವಜನರನ್ನು ಒತ್ತಾಯಿಸಿದರು. ಈ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಯಶಸ್ಸು ಸಿಗಲೆ ಎಂದು ಶುಭಾಶಯಗಳನ್ನು ಕೋರಿದರು.
ರಾಷ್ಟ್ರೀಯ ಸೇವಾ ಯೋಜನೆಯ (ಎನ್ ಎಸ್ ಎಸ್) ಪ್ರಾದೇಶಿಕ ನಿರ್ದೇಶಕ ಶ್ರೀ ಡಿ. ಕಾರ್ತಿಗೇಯನ್ ಮತ್ತು ಎನ್ ಎಸ್ ಎಸ್ ಅಧಿಕಾರಿ ಶ್ರೀ ಅಶೋಕ್ ಕುಮಾರ್ ದಾಶ್, ನೆಹರು ಯುವ ಕೇಂದ್ರದ ಕರ್ನಾಟಕ ರಾಜ್ಯ ಸಂಯೋಜಕ ಶ್ರೀ ರಾಜೇಶ್ ಕಾರ್ನಾಥ್, ಎನ್ ವೈ ಕೆ ಎಸ್ ಸಹಾಯಕ ನಿರ್ದೇಶಕರು ಮತ್ತು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ಶ್ರೀ ವಿಷ್ಣು ಸುಧಾಕರನ್ ಸಹ ಉಪಸ್ಥಿತರಿದ್ದರು. ‘ವಿಕಸಿತ ಭಾರತ’ದ ದೃಷ್ಟಿಕೋನದ ಕಡೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಈ ಅಪೂರ್ವ ಅವಕಾಶವನ್ನು ಬಳಸಿಕೊಳ್ಳುವಂತೆ ಅವರು ಯುವಜನರಿಗೆ ಕರೆ ನೀಡಿದರು.
ವಿಕಸಿತ ಭಾರತ್ ಯುವ ನಾಯಕರ ಸಂವಾದ-ರಾಷ್ಟ್ರೀಯ ಯುವಜನೋತ್ಸವ 2025 ಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಮೇರಾ ಯುವ ಭಾರತ್ ವೇದಿಕೆಯಲ್ಲಿ (https://mybharatgovini) ಲಭ್ಯವಾಗುವಂತೆ ಮಾಡಲಾಗುವುದು.