ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಭೆಯು, ಅರುಣಾಚಲ ಪ್ರದೇಶದ ಶಿ ಯೋಮಿ ಜಿಲ್ಲೆಯಲ್ಲಿ ಟಾಟೊ-1 ಜಲವಿದ್ಯುತ್ ಯೋಜನೆ (ಎಚ್ ಇಪಿ) ನಿರ್ಮಾಣಕ್ಕಾಗಿ 1750 ಕೋಟಿ ರೂ.ಗಳ ಹೂಡಿಕೆಗೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಯನ್ನು ಅಂದಾಜು 50 ತಿಂಗಳುಗಳಲ್ಲಿ ಪೂರ್ಣಗೊಳಿಸುವ ಪ್ರಸ್ಥಾಪವನ್ನು ಇದು ಹೊಂದಿದೆ.
186 ಮೆಗಾವ್ಯಾಟ್ (3 x 62 ಮೆಗಾವ್ಯಾಟ್) ಸ್ಥಾಪಿತ ಸಾಮರ್ಥ್ಯದ ಈ ಯೋಜನೆಯು 802 ಮಿಲಿಯನ್ ಯೂನಿಟ್ (ಎಂಯು) ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಯೋಜನೆಯಿಂದ ಉತ್ಪತ್ತಿಯಾಗುವ ವಿದ್ಯುತ್ ಅರುಣಾಚಲ ಪ್ರದೇಶ ರಾಜ್ಯದಲ್ಲಿ ವಿದ್ಯುತ್ ಸರಬರಾಜು ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡಲಿದೆ. ಇದು ರಾಷ್ಟ್ರೀಯ ಗ್ರಿಡ್ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುವ ಸಾಧ್ಯತೆ ಇದೆ.
ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ನೀಪ್ಕೊ) ಮತ್ತು ಅರುಣಾಚಲ ಪ್ರದೇಶ ಸರ್ಕಾರದ ನಡುವಿನ ಜಂಟಿ ಉದ್ಯಮ ಕಂಪನಿಯ ಮೂಲಕ ಈ ಯೋಜನೆಯನ್ನು ಜಾರಿಗೆ ತರಲಾಗುವುದು. ಮೂಲಸೌಕರ್ಯಗಳ ಅಡಿಯಲ್ಲಿ ರಸ್ತೆ, ಸೇತುವೆಗಳು ಮತ್ತು ಸಂಬಂಧಿತ ಪ್ರಸರಣ ಮಾರ್ಗಗಳ ನಿರ್ಮಾಣಕ್ಕಾಗಿ ಭಾರತ ಸರ್ಕಾರವು 77.37 ಕೋಟಿ ರೂ.ಗಳನ್ನು ಆಯವ್ಯಯ ಬೆಂಬಲವಾಗಿ ನೀಡಲಿದ್ದು, ರಾಜ್ಯದ ಈಕ್ವಿಟಿ ಪಾಲಿಗಾಗಿ 120.43 ಕೋಟಿ ರೂ.ಗಳ ಕೇಂದ್ರ ಹಣಕಾಸು ನೆರವನ್ನು ಕೂಡಾ ನೀಡಲಿದೆ.
ಈ ಪ್ರದೇಶದ ಗಮನಾರ್ಹ ಮೂಲಸೌಕರ್ಯ ಸುಧಾರಣೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಜೊತೆಗೆ 12% ಉಚಿತ ವಿದ್ಯುತ್ ಮತ್ತು 1% ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ (ಎಲ್ಎಡಿಎಫ್) ರಾಜ್ಯಕ್ಕೆ ಪ್ರಯೋಜನವಾಗಲಿದೆ.
ಈ ಯೋಜನೆಗಾಗಿ ಸುಮಾರು 10 ಕಿಲೋಮೀಟರ್ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯದಲ್ಲಿ ಗಮನಾರ್ಹ ಸುಧಾರಣೆಯಾಗಲಿದ್ದು, ಇದು ಹೆಚ್ಚಾಗಿ ಸ್ಥಳೀಯ ಬಳಕೆಗೆ ಲಭ್ಯವಿರುತ್ತದೆ. ಆಸ್ಪತ್ರೆಗಳು, ಶಾಲೆಗಳು, ಐಟಿಐಗಳಂತಹ ವೃತ್ತಿಪರ ತರಬೇತಿ ಸಂಸ್ಥೆಗಳು, ಮಾರುಕಟ್ಟೆಗಳು, ಮತ್ತು ಆಟದ ಮೈದಾನಗಳು ಮುಂತಾದ ಅಗತ್ಯ ಮೂಲಸೌಕರ್ಯಗಳ ನಿರ್ಮಾಣದಿಂದ ಜಿಲ್ಲೆಗೆ 15 ಕೋಟಿ ರೂ.ಗಳ ಮೀಸಲಾತಿ ಯೋಜನಾ ನಿಧಿಯಿಂದ ಹಣಕಾಸು ಒದಗಿಸಲಾಗುವುದು. ಈ ಯೋಜನೆಯಿಂದ ಸ್ಥಳೀಯ ಜನರು ಅನೇಕ ರೀತಿಯ ಪರಿಹಾರಗಳು, ಉದ್ಯೋಗ ಮತ್ತು ಸಿಎಸ್ಆರ್ ಚಟುವಟಿಕೆಗಳಿಂದ ಪ್ರಯೋಜನ ಪಡೆಯಲಿದ್ದಾರೆ.